ಅಮೀತ್ ಷಾ ಅವರಿಂದ ವಿಜಯೇಂದ್ರ ಪಾಠ ಕಲಿಯಲಿ: ಬಸವದಳ ಮುಖಂಡರ ಆಗ್ರಹ

Lingayat Separate Religion – ವಿಜಯಪುರದಲ್ಲಿ ಬಸವದಳ ಸುದ್ದಿಗೋಷ್ಠಿ

ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮೀತ್ ಷಾ ಅವರ ನಿಲುವನ್ನು ಗಮನಿಸಿ ನಡೆದುಕೊಳ್ಳಬೇಕು. ಜೈನ ಧರ್ಮಕ್ಕೆ ಮಾನ್ಯತೆ ದೊರಕುವ ಸಂದರ್ಭದಲ್ಲಿ ಅಮೀತ್ ಷಾ ಅವರು ವಿರೋಧ ವ್ಯಕ್ತಪಡಿಸಿರಲಿಲ್ಲ. ಅದೇ ರೀತಿಯ ಮನೋಭಾವವನ್ನು ವಿಜಯೇಂದ್ರ ಬೆಳೆಸಿಕೊಳ್ಳಲಿ ಎಂದು ಬಸವದಳ ರಾಜ್ಯ ಗೌರವಾಧ್ಯಕ್ಷ ಬಸವರಾಜ ಕೊಂಡಗೂಳಿ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ ಧರ್ಮಕ್ಕೆ ಮಾನ್ಯತೆ ನೀಡುವ ಸಂದರ್ಭದಲ್ಲಿ ಎಲ್ಲರೂ ಹಿಂದೂಗಳೇ ಎಂಬ ವಾದವನ್ನು ಮುಂದಿಟ್ಟುಕೊಂಡು ಅಮೀತ್ ಷಾ ಅವರು ಅಪಸ್ವರ ಎತ್ತಿರಲಿಲ್ಲ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರದಲ್ಲಿ ವಿಜಯೇಂದ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಬಸವದಳ ಒತ್ತಾಯ

ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ ಮಾತನಾಡಿ, ಯಾರದ್ದೋ ಪಿತೂರಿ, ಮಾನಸಿಕ ಗುಲಾಮಗಿರಿ ಹಾಗೂ ರಾಜಕೀಯ ಹಿತಾಸಕ್ತಿಗೆ ಒಳಗಾಗಿ ಬಿ.ವೈ. ವಿಜಯೇಂದ್ರ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ವಿರೋಧಾಭಾಸದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬಂಗಾರದ ಚಮಚ ಇಟ್ಟುಕೊಂಡು ಜನಿಸಿದವರು ಬಡವರ ಸಮಸ್ಯೆಗಳ ಬಗ್ಗೆಯೂ ಯೋಚಿಸಬೇಕು. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ದೊರೆತರೆ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ. ಈ ವಿಚಾರವನ್ನು ವಿಜಯೇಂದ್ರ ಅವರು ಅರ್ಥಮಾಡಿಕೊಳ್ಳಬೇಕು. ತಮ್ಮ ಹೇಳಿಕೆಯಿಂದ ಆಗಿರುವ ತಪ್ಪಿಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಜೈನ, ಇಸ್ಲಾಂ ಸೇರಿದಂತೆ ಹಲವು ಧರ್ಮಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ದೊರೆತಿದೆ. ಹಾಗಾದರೆ ಈ ನೆಲದಲ್ಲೇ ಉದಯಿಸಿದ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ದೊರೆಯಬಾರದೇ? ಲಿಂಗಾಯತ ಧರ್ಮದ ಅಸ್ಮಿತೆಯ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಹೊಂದಬೇಕು ಎಂದು ಹೇಳಿದರು.

ವಿಜಯೇಂದ್ರ ಅವರು ಬಸವಭಕ್ತರು ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಈ ರೀತಿಯ ಹೇಳಿಕೆ ನೀಡಲು ಯಾರಾದರೂ ಒತ್ತಡ ಹೇರುತ್ತಿದ್ದರೆ ಅದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ತಿಳಿಸಿದರು.

ಬ್ರಾಹ್ಮಣ್ಯತ್ವ, ಶೈವ ಹಾಗೂ ವೈದಿಕ ಪರಂಪರೆ ಕುರಿತು ಮಾತನಾಡಿದ ಅವರು, ಅಣ್ಣ ಬಸವಣ್ಣನವರು ಸಮಾನತೆಯ ತತ್ವದ ಮೂಲಕ ಸಮಾಜವನ್ನು ಒಂದುಗೂಡಿಸುವ ಕಾರ್ಯ ಮಾಡಿದ್ದಾರೆ. ಶೈವ ಮತ್ತು ವೈದಿಕ ಧರ್ಮಗಳ ನಡುವಿನ ಭಿನ್ನತೆಗಳನ್ನು ಸಮಾನತೆಯ ನೆಲೆಯಲ್ಲಿ ಬೆಸೆಯಲು ಶ್ರಮಿಸಿದ್ದಾರೆ ಎಂದು ಹೇಳಿದರು.

ಹಿಂದೂ ಎಂಬುದು ಒಂದು ಸಂಸ್ಕೃತಿಯಾಗಿದೆ. ಭೌಗೋಳಿಕವಾಗಿ ನಾವೆಲ್ಲರೂ ಹಿಂದೂಗಳಾಗಿದ್ದರೂ, ಈ ನೆಲದಲ್ಲಿ ಉದಯಿಸಿದ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಗೌರವಿಸಬೇಕು. ರಾಜಕೀಯ ಹಿತಾಸಕ್ತಿಗಾಗಿ ಧರ್ಮದ ವಿಚಾರದಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನೀಡಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಮಹಾಸಭೆಯ ವತಿಯಿಂದ ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹಿ ಹಾಕಿದ್ದಾರೆ. ಹಾಗಿದ್ದಾಗ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರದಲ್ಲಿ ವಿರೋಧ ಏಕೆ? ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಲಿಂಗಾಯತ ಧರ್ಮದ ಅಸ್ಮಿತೆಗೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ. ಈ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ: ಕೋರನಹಳ್ಳಿ ವೀರಣ್ಣ

ರಾಷ್ಟ್ರೀಯ ಬಸವ ದಳದ ಕೋರನಹಳ್ಳಿ ವೀರಣ್ಣ ಮಾತನಾಡಿ, ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದ್ದು, ಅದಕ್ಕೆ ಅಗತ್ಯವಾದ ಮಾನ್ಯತೆ ದೊರೆಯಬೇಕಿದೆ. ಆದರೆ ಕೆಲವು ಶಕ್ತಿಗಳು ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ದೊರೆಯದಂತೆ ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ವಿಜಯೇಂದ್ರ ಅವರಿಗೆ ಲಿಂಗಾಯತ ಧರ್ಮದ ಬಗ್ಗೆ ನಿಜವಾದ ಕಾಳಜಿ ಇದ್ದರೆ ಧರ್ಮದ ಅಸ್ಮಿತೆಯನ್ನು ಗೌರವಿಸಬೇಕು. ರಾಜಕೀಯವಾಗಿ ಲಿಂಗಾಯತ ಸಮುದಾಯದ ಬೆಂಬಲ ಬೇಕು ಎನ್ನುವವರು ಧರ್ಮದ ವಿಚಾರದಲ್ಲಿಯೂ ಸ್ಪಷ್ಟ ನಿಲುವು ಹೊಂದಿರಬೇಕು ಎಂದು ಹೇಳಿದರು.

ಲಿಂಗಾಯತ ಧರ್ಮವನ್ನು ಬಸವಣ್ಣನವರು ಪ್ರತಿಪಾದಿಸಿದ್ದಾರೆಯೇ ಹೊರತು ಯಾವುದೇ ಒಂದು ಜಾತಿಯನ್ನು ಸೃಷ್ಟಿಸಿಲ್ಲ. ಲಿಂಗಾಯತ ಧರ್ಮದಲ್ಲಿ ಜಾತಿಗಿಂತ ಸಮಾನತೆ, ಇಷ್ಟಲಿಂಗ ಧಾರಣೆ ಮತ್ತು ವಿಭೂತಿ ಧಾರಣೆಗೆ ಮಹತ್ವವಿದೆ. ಇವು ಧರ್ಮದ ಪ್ರಮುಖ ತತ್ವಗಳಾಗಿವೆ ಎಂದು ವಿವರಿಸಿದರು.

ಹಿಂದೂ ಎಂದು ಹೇಳಿಕೊಳ್ಳುವುದಾದರೆ ಲಿಂಗಾಯತ ಧರ್ಮವನ್ನು ತೊರೆಯಿರಿ: ಪ್ರೊ. ಜೆ.ಎಸ್. ಪಾಟೀಲ

ಚಿಂತಕ ಪ್ರೊ. ಜೆ.ಎಸ್. ಪಾಟೀಲ ಮಾತನಾಡಿ, ಹಿಂದೂ ಎಂದು ಗುರುತಿಸಿಕೊಳ್ಳುವವರು ಲಿಂಗಾಯತ ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಲಿಂಗಾಯತ ಧರ್ಮದ ಆಶ್ರಯ ಪಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ. ಲಿಂಗಾಯತ ಧರ್ಮದ ಅಸ್ಮಿತೆಯನ್ನು ಕಡೆಗಣಿಸುವವರಿಗೆ ಸಮುದಾಯದ ಜನರು ರಾಜಕೀಯವಾಗಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಈಶ್ವರ ಖಂಡ್ರೆ ಅವರ ಜಿಲ್ಲೆಯಲ್ಲಿಯೇ ಲಿಂಗಾಯತ ಧರ್ಮದ ಅಸ್ಮಿತೆಯ ಪ್ರಶ್ನೆ ಎದುರಾದಾಗ ಮಹಾಸಭೆ ಮೌನ ವಹಿಸಿರುವುದು ಏಕೆ? ಈ ವಿಚಾರದಲ್ಲಿ ಈಶ್ವರ ಖಂಡ್ರೆ ಅವರು ತಮ್ಮ ನಿಲುವನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರವಾಗಿ ಬಸವದಳದ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಧರ್ಮದ ಅಸ್ಮಿತೆ ಮತ್ತು ಹಕ್ಕುಗಳ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ನಡೆಸುವುದಾಗಿ ತಿಳಿಸಿದರು.

Share the Post:

ಇತ್ತೀಚಿನ ಸುದ್ದಿಗಳು

error: Content is protected !!