ವಿಜಯಪುರ: ಸತ್ಯಶುದ್ಧ ಕಾಯಕದಿಂದ ದಾಸೋಹ, (Ayidakki Lakkamma Kayaka)’ ಪ್ರಸಾದ ಹಾಗೂ ಅನುಭವಗಳು ಅರಳುತ್ತವೆ. ಇವು ಆತ್ಮಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಡಾ. ಸುಮಾ ಬೋಳರಡ್ಡಿ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಶ್ರೀಮತಿ ವಿದ್ಯಾ ಕೋಟೆಣ್ಣವರ ಅವರ ಮನೆಯಲ್ಲಿ ಆಯೋಜಿಸಿದ್ದ ದತ್ತಿ ಸಮಾರಂಭದಲ್ಲಿ ‘ಶರಣೆ ಆಯ್ದಕ್ಕಿ ಲಕ್ಕಮ್ಮ ಕುರಿತು ಉಪನ್ಯಾಸ ನೀಡಿದ ಅವರು, ಕಾಯಕದ ಮಹತ್ವವನ್ನು ವಿವರಿಸಿದರು.
ಕಾಯಕದ ಕುರಿತು ವಚನಗಳನ್ನು ರಚಿಸಿ, ಅವುಗಳನ್ನು ಆಚರಣೆಯಲ್ಲಿ ತರುವ ಮೂಲಕ ಕಾಯಕದ ಅರ್ಥವೈಶಾಲ್ಯತೆ ಮತ್ತು ಪಾವಿತ್ರ್ಯತೆಯನ್ನು ಲೋಕಕ್ಕೆ ತೋರಿಸಿಕೊಟ್ಟವರು ಶರಣೆ ಆಯ್ದಕ್ಕಿ ಲಕ್ಕಮ್ಮನವರು.
“ಕಾಯಕ ನಿಂದಿತ್ತು ಏಳಯ್ಯ ಎನ್ನಾಳ್ದನೆ” ಎಂದು ಪತಿ ಮಾರಯ್ಯನವರನ್ನು ಎಚ್ಚರಿಸಿ, ಕಾಯಕ ಮಾಡಲು ಪ್ರೇರೇಪಿಸಿದ ಲಕ್ಕಮ್ಮನವರು ಕಾಯಕದ ಮಹತ್ವವನ್ನು ಸಾರಿದ್ದಾರೆ ಎಂದು ಹೇಳಿದರು.
ಸತ್ಯಶುದ್ಧ ಕಾಯಕದಿಂದ ದಾಸೋಹ, ಪ್ರಸಾದ ಹಾಗೂ ಅನುಭವಗಳು ಮೈಗೂಡುತ್ತವೆ. ಇವು ಮನುಷ್ಯನನ್ನು ಆತ್ಮಸಾಕ್ಷಾತ್ಕಾರದತ್ತ ಕೊಂಡೊಯ್ಯುತ್ತವೆ ಎಂದು ಅವರು ತಿಳಿಸಿದರು.
ಜನಪದ ಸಾಹಿತ್ಯದಲ್ಲಿ ಶರಣರು
ಶ್ರೀಮತಿ ಶಿವಲೀಲಾ ಮುರಾಳ ಅವರು “ಜನಪದ ಸಾಹಿತ್ಯದಲ್ಲಿ ಶರಣರು” ಎಂಬ ವಿಷಯ ಕುರಿತು ಮಾತನಾಡಿದರು. (Ayidakki Lakkamma Kayaka) ಶಿವಶರಣರನ್ನು ಸ್ಮರಿಸಿಕೊಂಡರೆ ಬದುಕು ಬಂಗಾರವಾಗುತ್ತದೆ. ಮಹಿಳೆಯರು ಬಂಗಾರದ ಸರ ಹಾಗೂ ಮಲ್ಲಿಗೆ ಮಾಲೆ ಧರಿಸಿದಾಗ ಸಂತೋಷ ಅನುಭವಿಸುವಂತೆ, ಶರಣರ ವಚನಗಳನ್ನು ಓದಿ ಅರಗಿಸಿಕೊಂಡಾಗ ಅಂತರಂಗದಲ್ಲಿ ಅರಿವು ಮೂಡಿ ಪರಮಾನಂದ ಪ್ರಾಪ್ತವಾಗುತ್ತದೆ ಎಂದು ಹೇಳಿದರು.
ಲಿಂ. ಕೋರವಾರದ ಶಂಕರಗೌಡರು, ಲಿಂ. ಗುರುಸಂಗವ್ವ ಇಂಗಳೇಶ್ವರ ಹಾಗೂ ಲಿಂ. ಶರಣಪ್ಪ ಮಂಗಾನವರ ಅವರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಸಮಾರಂಭದ ಅಧ್ಯಕ್ಷತೆಯನ್ನು ಡಾ. ರೇಣುಕಾ ಬಸವಪ್ರಭು ವಹಿಸಿದ್ದರು.
ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆ ಶಾರದಾ ಐಹೊಳ್ಳಿ ಸ್ವಾಗತಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತ ಸಕ್ರಿ ವಂದಿಸಿದರು.
ಸಭೆಯಲ್ಲಿ ಮ.ಗು. ಯಾದವಾಡ, ಶೈಲಿ ಪಾಟೀಲ, ಈರಣ್ಣ ತೊಂಡಿಕಟ್ಟಿ, ಎನ್.ಆರ್. ಕುಲಕರ್ಣಿ, ಪುಷ್ಪಾ ಮಹಾಂತಮಠ, ಶೈಲಜಾ ಮೋದಿ, ಮಹಾಂತೇಶ ಬಿರಾದಾರ, ಮದಭಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






