ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಆಗ್ರಹ: ಮನಗೂಳಿಯಲ್ಲಿ ಜನಜಾಗೃತಿ ಸಭೆ ಯಶಸ್ವಿ

Vijayapura 371J Reservation awareness meeting at Manguli

ವಿಜಯಪುರ: Vijayapura 371J Reservation ಹೋರಾಟಕ್ಕೆ ಬೆಂಬಲ ಸಂಗ್ರಹಿಸುವ ಉದ್ದೇಶದಿಂದ ಮನಗೂಳಿಯಲ್ಲಿ ನಡೆದ ಜನಜಾಗೃತಿ ಸಭೆ ಯಶಸ್ವಿಯಾಯಿತು. ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ಮೀಸಲಾತಿ ವ್ಯಾಪ್ತಿಗೆ ಸೇರಿಸುವ ಅಗತ್ಯ, ಇದರಿಂದ ಜಿಲ್ಲೆಯ ಜನರಿಗೆ ದೊರೆಯುವ ಶೈಕ್ಷಣಿಕ, ಉದ್ಯೋಗ ಹಾಗೂ ಅಭಿವೃದ್ಧಿ ಸೌಲಭ್ಯಗಳ ಕುರಿತು ಸಭೆಯಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಾಯಿತು. ಕರಪತ್ರಗಳನ್ನು ವಿತರಿಸಿ ಡಿಸೆಂಬರ್ 1ರಿಂದ ಆರಂಭವಾಗಲಿರುವ ಹೋರಾಟದ ಕುರಿತು ಮಾಹಿತಿ ನೀಡಲಾಯಿತು.

ಹೋರಾಟಗಾರ ಲಾಯಪ್ಪ ಇಂಗಳೆ ಮಾತನಾಡಿ, ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 371(ಜೆ) ಮೀಸಲಾತಿ ಜಾರಿಗೊಳಿಸುವ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯನ್ನು ಕೈಬಿಡಲಾಗಿದೆ. ಇದರಿಂದ ಜಿಲ್ಲೆಯ ಜನರಿಗೆ ದೊಡ್ಡ ಅನ್ಯಾಯವಾಗಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಗೂ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಡೆಯುತ್ತಿರುವ ಹೋರಾಟಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ, ಯುವಕರಿಗೆ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊರೆಯುವ ವಿಶೇಷ ಅನುದಾನದ ಪ್ರಯೋಜನಗಳು ವಿಜಯಪುರ ಜಿಲ್ಲೆಗೂ ಸಿಗಬೇಕು ಎಂದರು.

ಜಿಲ್ಲೆಯ ಸುಮಾರು 25 ಲಕ್ಷ ಜನರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸಂವಿಧಾನದ 371(ಜೆ) ವಿಧಿಗೆ ತಿದ್ದುಪಡಿ ಮಾಡಿ ವಿಜಯಪುರ ಜಿಲ್ಲೆಯನ್ನು ಮೀಸಲಾತಿ ವ್ಯಾಪ್ತಿಗೆ ಸೇರಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿದರು. ಜಿಲ್ಲೆಯ ಸಮಸ್ತ ಜನರ ಪರವಾಗಿ ನಡೆಯುತ್ತಿರುವ ಈ ನ್ಯಾಯಯುತ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಏಕೆ ಅಗತ್ಯ?

ಗ್ರಾಮದ ಹಿರಿಯ ಮುಖಂಡ ಅರವಿಂದ ಕಟಾವಿ ಮಾತನಾಡಿ, ವಿಜಯಪುರ ಜಿಲ್ಲೆಯು ಹಿಂದೆ ಹೈದರಾಬಾದ್ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿತ್ತು. ಡಾ. ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅತ್ಯಂತ ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿದೆ ಎಂದು ಹೇಳಿದರು.

ಇಷ್ಟಿದ್ದರೂ ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿಯಿಂದ ಹೊರಗಿಟ್ಟಿರುವುದು ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 371(ಜೆ) ಮೀಸಲಾತಿ ಅತ್ಯಂತ ಅವಶ್ಯಕವಾಗಿದೆ ಎಂದರು.

ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ನಡೆಸುತ್ತಿರುವ ಜನಪರ ಹೋರಾಟಕ್ಕೆ ಜಿಲ್ಲೆಯ ಸಮಸ್ತ ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮನಗೂಳಿ ಸಂಘ-ಸಂಸ್ಥೆಗಳಿಂದ ಹೋರಾಟಕ್ಕೆ ಬೆಂಬಲ

ಹಿರಿಯ ಮುಖಂಡ ವಿಶ್ವನಾಥಗೌಡ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿಯು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಜಿಲ್ಲೆಯ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಹೋರಾಟಕ್ಕೆ ಮನಗೂಳಿ ಪಟ್ಟಣದ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಸಾಹಿತಿ ಸಿದ್ರಾಮ ಬಿರಾದಾರ, ವಿನೋದ ಖೇಡ, ಅನಿಲ ಇಕ್ಕಡೆ, ಗುರುಲಿಂಗಪ್ಪಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಲಕ್ಷ್ಮಣ ಹಡಪದ, ಬಸಪ್ಪ ಹಾವಣ್ಣವರ, ಸಿದ್ದಣ್ಣ ಸಜ್ಜನ, ಮುದಕಣ್ಣ ಹುಲಗಬಾಳ, ಹಣಮಂತ ಚಿಮ್ಮಲಗಿ, ಹಣಮಂತ ಹತ್ತರಕಿ, ಮಹಾಂತಪ್ಪ ಜಮಖಂಡಿ, ಶಿವಾನಂದ ನುಚ್ಚಿ, ರಫೀಕ್ ಕರಜಗಿ, ಶಿವಪ್ಪ ದಡ್ಡಿ ಹಾಗೂ ಮಚೇಂದ್ರ ನಿಂಬಾಳಕರ ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು

error: Content is protected !!