ವಿಜಯಪುರ: Siddeshwara Poetry Book ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ಲ, ಸಿದ್ಧೇಶ್ವರ ಅಪ್ಪಗಳು ದೇವಲೋಕದ ಹಕ್ಕಿಯಂತೆ ಭೌತಿಕ ಜಗತ್ತಿಗೆ ಬಂದು ಜನರಿಗೆ ಹಿತವಚನ ನೀಡಿದರು. ಜ್ಞಾನ ಹಂಚಿದರು. ಜನರಿಗೆ ಬೇಕಾದುದನ್ನು ಧಾರಾಳವಾಗಿ ನೀಡಿ ಮತ್ತೆ ದೇವಲೋಕಕ್ಕೆ ಮರಳಿದ್ದಾರೆ ಎಂದು ಹೇಳಿದರು.
ನಗರದ ಪ್ರಗತಿ ಪ್ರೌಢಶಾಲೆಯಲ್ಲಿ ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ ಹಾಗೂ ಪ್ರಗತಿ ಶಾಲೆಯ ಸಹಯೋಗದಲ್ಲಿ ಸಾಹಿತಿ ಶ್ರೀನಿವಾಸ ಜಾಲವಾದಿ ಮತ್ತು ರಮೇಶ ಕೋಟ್ಯಾಳ ಅವರ ‘ಸಂತರೆಂದರೆ ಯಾರು’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಾಸುದೇವ ಹೆರಕಲ್ಲ, ಶ್ರೀ ಸಿದ್ಧೇಶ್ವರ ಅಪ್ಪಗಳು ಬಯಲಲ್ಲಿ ಬಯಲಾದ ಸಂತರು. ಅವರಿಗೆ ಅವರೇ ಸಾಟಿ. ಅವರ ಕುರಿತು ರಚನೆಯಾಗಿರುವ ‘ಸಂತರೆಂದರೆ ಯಾರು’ ಕವನ ಸಂಕಲನ ಅತ್ಯದ್ಭುತವಾಗಿದೆ. 161 ಕವಿಗಳು ಒಗ್ಗೂಡಿ ಭಕ್ತಿಯಿಂದ ರಚಿಸಿರುವ ಈ ಕವನ ಸಂಕಲನ ಅತ್ಯಮೂಲ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾಸ್ಕರಾಚಾರ್ಯರ ಕೊಡುಗೆಯನ್ನು ಪರಿಚಯಿಸಿದ ಸಿದ್ಧೇಶ್ವರ ಅಪ್ಪಗಳು
ಶ್ರೀ ಸಿದ್ಧೇಶ್ವರ ಅಪ್ಪಗಳು ಮಾಡಿದ ಕಾರ್ಯಗಳು ನಿಜಕ್ಕೂ ಸ್ಮರಣೀಯವಾಗಿವೆ. ನಮ್ಮ ಜಿಲ್ಲೆಯವರೇ ಆದ ಗಣಿತ ಹಾಗೂ ಖಗೋಳ ವಿಜ್ಞಾನಿ ಭಾಸ್ಕರಾಚಾರ್ಯರನ್ನು ಪರಿಚಯಿಸುವ ಕಾರ್ಯದಲ್ಲಿ ಅವರು ನಮ್ಮನ್ನು ಪ್ರೇರೇಪಿಸಿದರು. ದೊಡ್ಡ ಕಾರ್ಯಕ್ರಮದ ಮೂಲಕ ಭಾಸ್ಕರಾಚಾರ್ಯರ ಕೊಡುಗೆಯನ್ನು ಹೊರಜಗತ್ತಿಗೆ ಪರಿಚಯಿಸಿದರು ಎಂದು ವಾಸುದೇವ ಹೆರಕಲ್ಲ ಹೇಳಿದರು.
ಅಂದಿನಿಂದ ಭಾಸ್ಕರಾಚಾರ್ಯರ ಹೆಸರಿನಲ್ಲಿ ಪ್ರತಿವರ್ಷ ಸಾವಿರಾರು ಕ್ಯಾಲೆಂಡರ್ಗಳನ್ನು ಮುದ್ರಿಸಿ ಉಚಿತವಾಗಿ ಹಂಚುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಡಿ. 13ರಂದು ಭಾಸ್ಕರ ನಮನ ಕಾರ್ಯಕ್ರಮ ನಡೆಯಲಿದ್ದು, ಅಂದು ಭಾಸ್ಕರಾಚಾರ್ಯರ ಕುರಿತ ನಾಟಕ ಪ್ರದರ್ಶನಗೊಳ್ಳಲಿದೆ. ಜಿಲ್ಲೆಯ ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಿದ್ಧೇಶ್ವರ ಸ್ವಾಮೀಜಿಗಳು ಆರಂಭಿಸಿದ ಜ್ಞಾನ ಪ್ರಸಾರದ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
161 ಕವಿಗಳಿಂದ ಸಿದ್ಧೇಶ್ವರ ಅಪ್ಪಗಳ ಕುರಿತು ಕವನ ರಚನೆ
ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಂತಹ ಶ್ರೇಷ್ಠ ಸಂತರು ಮತ್ತೊಬ್ಬರಿಲ್ಲ. ಅವರು ಜ್ಞಾನವನ್ನು ಹಂಚಿದಷ್ಟು ಬೇರೆ ಯಾರೂ ಹಂಚಿಲ್ಲ. ಅಂತಹ ಮಹಾನ್ ಸಂತರ ಕುರಿತು 161 ಕವಿಗಳು ಸೇರಿ ರಚಿಸಿರುವ ‘ಸಂತರೆಂದರೆ ಯಾರು’ ಕೃತಿ ಬಿಡುಗಡೆಯಾಗುತ್ತಿರುವುದು ಸಂತಸದ ಸಂಗತಿ ಎಂದರು.
ಸ್ವಾಮೀಜಿಗಳು ಎಂದಿಗೂ ನಮ್ಮೊಂದಿಗೆ ಇರುತ್ತಾರೆ. ನಮ್ಮ ಸುತ್ತಮುತ್ತಲಿನ ನಿಸರ್ಗದಲ್ಲಿಯೇ ಅವರನ್ನು ಕಾಣಬಹುದು ಎಂದು ಹೇಳಿದರು.
ಲೇಖಕಿ ಭಾರತಿ ಪಾಟೀಲ ಮಾತನಾಡಿ, ಸಿದ್ಧೇಶ್ವರ ಸ್ವಾಮೀಜಿಗಳ ಹೆಸರು ಹೇಳಿದರೆ ಸಾಕು, ಕವಿಗಳ ಮನಸ್ಸು ಬಯಲು ಬಯಲಾಗುತ್ತದೆ. ಅವರ ಕುರಿತು ಏನು ಬರೆಯಬೇಕು ಎಂಬ ಶೂನ್ಯಭಾವ ಕವಿಗಳನ್ನು ಆವರಿಸುತ್ತದೆ ಎಂದರು.
ಕಾವ್ಯ ಸಮಾಜದ ಅಜ್ಞಾನವನ್ನು ದೂರ ಮಾಡಬೇಕು
ಜ್ಞಾನಯೋಗಾಶ್ರಮದ ಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಕಾವ್ಯದಲ್ಲಿ ಕೇವಲ ಶಬ್ದಗಳಿದ್ದರೆ ಸಾಲದು. ಶಬ್ದಾಲಂಕಾರ ಹಾಗೂ ಅರ್ಥಾಲಂಕಾರವೂ ಇರಬೇಕು. ನಾವು ಬರೆಯುವ ಕವನ ಓದುಗರ ಬುದ್ಧಿಗೆ ಮೆತ್ತಿರುವ ಅಜ್ಞಾನವನ್ನು ಕಳೆಯುವಂತಿರಬೇಕು. ಸುಳ್ಳು ಮಾತನಾಡುವವರೂ ಸತ್ಯವಂತರಾಗುವಂತೆ ಕಾವ್ಯ ಪ್ರೇರಣೆ ನೀಡಬೇಕು ಎಂದರು.
ಹೊಟ್ಟೆಪಾಡಿಗಾಗಿ ಸ್ವಾಮೀಜಿಗಳಾಗುವವರು ಬೇರೆ, ನಿಜವಾದ ಸಂತರು ಬೇರೆ. ಕಾವಿ ಧರಿಸುವುದು ಸುಲಭದ ಮಾತಲ್ಲ. ಅದಕ್ಕೆ ವಿಶೇಷವಾದ ಅರ್ಹತೆ ಮತ್ತು ತ್ಯಾಗದ ಮನೋಭಾವ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಶೋಧಕ ಲಾಯಪ್ಪ ಇಂಗಳೆ, ಸಿದ್ದಲಿಂಗ ಮನಹಳ್ಳಿ, ಮಕ್ಕಳ ಸಾಹಿತಿ ಜಂಬುನಾಥ ಕಂಚ್ಯಾಣಿ, ಮುರುಗೇಶ ಸಂಗಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.






