ವಿಜಯಪುರ: ಸಂವಿಧಾನ ದಿನಾಚರಣೆ ನಮ್ಮೆಲ್ಲರ ಸಂತೋಷದ ದಿನವಾಗಿದ್ದು, ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ಒದಗಿಸಿದೆ. ಆದ್ದರಿಂದ ಸಂವಿಧಾನ ದಿನವನ್ನು ನಾವೆಲ್ಲರೂ ದೊಡ್ಡ ಹಬ್ಬದಂತೆ ಆಚರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್. ಹಾಗರಗಿ ಹೇಳಿದರು.
ನಗರದ ಬಾರಾಕಮಾನ ಉದ್ಯಾನವನದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ (ರಿ.), ವಿಜಯಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ (ರಿ.), ವಿಜಯಪುರ ಹಾಗೂ ವಿವಿಧ ಸಹ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಉತ್ಸವ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ವಿವಿಧ ಜಾತಿ, ಧರ್ಮ ಮತ್ತು ಸಂಸ್ಕೃತಿಗಳ ಜನರು ಸಹಬಾಳ್ವೆಯಿಂದ ಬದುಕುವ ದೇಶವಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳ ಜನರು ತಮ್ಮ ತಮ್ಮ ಧಾರ್ಮಿಕ ಹಬ್ಬಗಳನ್ನು ಆಚರಿಸುತ್ತಾರೆ. ಅದೇ ರೀತಿ ನಾವೆಲ್ಲರೂ ಭಾರತೀಯರಾಗಿರುವುದರಿಂದ ಸಂವಿಧಾನ ದಿನವೂ ಪ್ರತಿಯೊಬ್ಬ ಭಾರತೀಯನ ಹಬ್ಬವಾಗಬೇಕು ಎಂದು ಹೇಳಿದರು.
ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ನ್ಯಾಯ ಮತ್ತು ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಕಲ್ಪಿಸಿದೆ. ಸಂವಿಧಾನದ ಆಶಯಗಳನ್ನು ಅರಿತುಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಾತಿ, ಧರ್ಮದ ಭೇದ ಮರೆತು ಒಂದಾಗಿ ಊಟ ಮಾಡುವುದು ಸಂವಿಧಾನದ ಆಶಯ: ಸ್ವಾಮಿ ಸುನೀಲ ಫರ್ನಾಂಡೀಸ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಾಪುರ ಜೆಸ್ವಿಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಸೊಸೈಟಿಯ ಮುಖ್ಯಸ್ಥರಾದ ವಂದನೀಯ ಸ್ವಾಮಿ ಸುನೀಲ ಫರ್ನಾಂಡೀಸ್ ಮಾತನಾಡಿ, ಸಂವಿಧಾನ ದಿನದ ಆಚರಣೆಯಲ್ಲಿ ನಗರದ ವಿವಿಧ ಸ್ಲಂ ನಿವಾಸಿಗಳು ಜಾತಿ, ಧರ್ಮದ ಭೇದಭಾವ ಮರೆತು ಒಂದಾಗಿ ಭಾಗವಹಿಸಿರುವುದು ಸಂತೋಷದ ಸಂಗತಿ ಎಂದರು.
ವಿವಿಧ ಸ್ಲಂ ಪ್ರದೇಶಗಳಿಂದ ಆಗಮಿಸಿದ ಜನರು ತಮ್ಮ ತಮ್ಮ ಮನೆಗಳಿಂದ ಮಧ್ಯಾಹ್ನದ ಊಟಕ್ಕಾಗಿ ಬುತ್ತಿಗಳನ್ನು ತಂದಿದ್ದಾರೆ. ಅವರ ಆಹಾರ ಪದ್ಧತಿಗಳು ಬೇರೆ ಬೇರೆಯಾಗಿದ್ದರೂ, ಪರಸ್ಪರ ಹಂಚಿಕೊಂಡು ಒಂದಾಗಿ ಊಟ ಮಾಡುತ್ತಿರುವುದು ಏಕತೆ ಮತ್ತು ಸಹಬಾಳ್ವೆಯ ಸಂಕೇತವಾಗಿದೆ. ಇಂತಹ ಒಗ್ಗಟ್ಟಿನ ಭಾವನೆಯೇ ಸಂವಿಧಾನದ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾನೂನು ಸಮಸ್ಯೆಗಳಿದ್ದರೆ ನ್ಯಾಯವಾದಿಗಳ ಸಲಹೆ ಪಡೆಯಿರಿ: ತುಳಸಿರಾಮ ಸೂರ್ಯವಂಶಿ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ ಮಾತನಾಡಿ, ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್. ಹಾಗರಗಿ ಅವರು ಆಗಮಿಸಿರುವುದು ಸಂತೋಷದ ವಿಚಾರವಾಗಿದೆ. ಸಾರ್ವಜನಿಕರಿಗೆ ಯಾವುದೇ ಕಾನೂನಾತ್ಮಕ ಸಮಸ್ಯೆಗಳಿದ್ದರೆ ಅಥವಾ ನ್ಯಾಯವಾದಿಗಳ ಸಲಹೆ ಮತ್ತು ಮಾರ್ಗದರ್ಶನದ ಅಗತ್ಯವಿದ್ದರೆ ಅವರನ್ನು ಭೇಟಿಯಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನ್ಯಾಯವಾದಿಗಳನ್ನು ಭೇಟಿಯಾಗಲು ಅಗತ್ಯವಾದ ಸಹಾಯ ಮತ್ತು ಸಹಕಾರವನ್ನೂ ಒದಗಿಸಲಾಗುವುದು ಎಂದು ತಿಳಿಸಿದರು.
258ಕ್ಕೂ ಹೆಚ್ಚು ಸದಸ್ಯರು ಭಾಗಿ
ಕಾರ್ಯಕ್ರಮದಲ್ಲಿ ರಾಜ್ಯ ಸಮುದಾಯ ವ್ಯವಸ್ಥೆ ಬಲವರ್ಧನೆ ಅಧಿಕಾರಿಗಳಾದ ಶಾನ್ ಸಿಹಿಮೊಗ್ಗೆ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವಂದನೀಯ ಸ್ವಾಮಿ ಕೆವಿನ್ ಸಿಕ್ವೇರಾ ಹಾಗೂ ಸಹನಿರ್ದೇಶಕರಾದ ವಂದನೀಯ ಸ್ವಾಮಿ ಸುಮನಬಾಲು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ವಿಜಯಪುರ ನಗರದ ವಿವಿಧ ಸ್ಲಂ ಪ್ರದೇಶಗಳು ಹಾಗೂ ಸಹ ಸಂಘಟನೆಗಳಿಂದ ಒಟ್ಟು 258 ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಪಾರಿವಾಳಗಳನ್ನು ಸ್ವತಂತ್ರವಾಗಿ ಹಾರಿಬಿಡುವ ಮೂಲಕ ಚಾಲನೆ ನೀಡಲಾಯಿತು. ಗೀತಾ ಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೀನಾಕ್ಷಿ ಸಿಂಗೆ ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು. ಸಂವಿಧಾನದ ಮಹತ್ವ, ಸಮಾನತೆ, ಸಹಬಾಳ್ವೆ ಮತ್ತು ಸಹೋದರತ್ವದ ಸಂದೇಶವನ್ನು ಸಾರುವ ಮೂಲಕ ಸಂವಿಧಾನ ಉತ್ಸವ-2026 ಅರ್ಥಪೂರ್ಣವಾಗಿ ನಡೆಯಿತು.






