ಆರೋಗ್ಯದ ಬಗ್ಗೆ ಊಹಾಪೋಹ: ಖಾರವಾಗಿ ತಿರುಗೇಟು ನೀಡಿದ ಶಾಸಕ ಯತ್ನಾಳ

Yatnal Health Update Basanagouda Patil Yatnal Vijayapura MLA

ವಿಜಯಪುರ: Yatnal Health Update ವಿಚಾರವಾಗಿ ಹರಿದಾಡುತ್ತಿದ್ದ ಆರೋಗ್ಯ ಸಂಬಂಧಿತ ಊಹಾಪೋಹಗಳಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ತಮಗೆ ಹೃದಯಾಘಾತವಾಗಿಲ್ಲ, ಪಾರ್ಶ್ವವಾಯುವೂ ಆಗಿಲ್ಲ. ಟೈಫಾಯ್ಡ್ ಜ್ವರ ಕಾಣಿಸಿಕೊಂಡಿದ್ದರಿಂದ ನಾಲ್ಕೈದು ದಿನ ವಿಶ್ರಾಂತಿ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಆರಾಮಾಗಿಯೇ ಇದ್ದೇನೆ. ನನಗೇನೂ ಹಾರ್ಟ್ ಅಟ್ಯಾಕ್ ಆಗಿಲ್ಲ, ಕೈಕಾಲುಗಳಿಗೂ ಯಾವುದೇ ತೊಂದರೆಯಾಗಿಲ್ಲ. ಆರೋಗ್ಯ ತಪಾಸಣೆ ವೇಳೆ ಟೈಫಾಯ್ಡ್ ಎಂದು ತಿಳಿದುಬಂದಿತ್ತು. ಮತ್ತೊಂದೆಡೆ ಜ್ವರ ಕಾಣಿಸಿಕೊಂಡಿದ್ದರಿಂದ ಕೆಲವು ದಿನ ವಿಶ್ರಾಂತಿ ಪಡೆದಿದ್ದೇನೆ. ಬಿಟ್ಟು ಬಿಟ್ಟು ಜ್ವರ ಬರುತ್ತಿದ್ದ ಕಾರಣ ಸಂಪೂರ್ಣವಾಗಿ ವಿಶ್ರಾಂತಿ ತೆಗೆದುಕೊಂಡಿದ್ದೇನೆ ಅಷ್ಟೇ” ಎಂದು ಹೇಳಿದರು.

ತಮ್ಮ ಆರೋಗ್ಯದ ಕುರಿತು ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ, ಕೆಲವರು ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ತೋರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

“ನಾನು ಯಾವಾಗ ಸಾಯುತ್ತೇನೆ, ನಾವು ಯಾವಾಗ ಶಾಸಕರಾಗಬೇಕು ಎಂದು ವಿರೋಧಿಗಳು ಕಾಯುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆ” ಎಂದು ಕಟುವಾಗಿ ಟೀಕಿಸಿದರು.

ವಿಜಯಪುರದ ಜನರು ತಮ್ಮ ಮೇಲೆ ಅಪಾರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ಹೊಂದಿದ್ದಾರೆ. ಜನರ ಪ್ರೀತಿಯೇ ನನಗೆ ಶ್ರೀರಕ್ಷೆ. ವಿರೋಧಿಗಳ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಯತ್ನಾಳ ಹೇಳಿದರು.

ಸಂಸದರು ಬರ ಪರಿಹಾರದ ವಿಚಾರವಾಗಿ ಧ್ವನಿ ಎತ್ತಬೇಕು

ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದಕ್ಕಿಂತ ರಾಜ್ಯದ ಜನರ ಹಿತ ಮುಖ್ಯ ಎಂದು ಯತ್ನಾಳ ಅಭಿಪ್ರಾಯಪಟ್ಟರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ರಾಜ್ಯದ ಬಿಜೆಪಿ ಸಂಸದರು ಬರ ಪರಿಹಾರದ ವಿಚಾರವಾಗಿ ಸಮರ್ಪಕವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸಂಸದರು ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ರೈತರ ಸಮಸ್ಯೆಗಳನ್ನು ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಬರ ಪರಿಹಾರ ವಿಚಾರವಾಗಿ ಕಾನೂನು ಹೋರಾಟ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಬಿಜೆಪಿ ಸಂಸದರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಬಿಜೆಪಿ ಸಂಸದರ ನಿಯೋಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕು ಎಂದು ಸಲಹೆ ನೀಡಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದ ಅವಧಿಯಲ್ಲಿ ರಾಜ್ಯದ ಸಮಸ್ಯೆಗಳ ಕುರಿತು ಸಂಸದರ ನಿಯೋಗದೊಂದಿಗೆ ತೆರಳಿ ಪ್ರಧಾನಮಂತ್ರಿಗಳನ್ನು ಭೇಟಿಯಾಗುತ್ತಿದ್ದೆವು. ಅದೇ ರೀತಿಯ ಪ್ರಯತ್ನವನ್ನು ಈಗಿನ ಬಿಜೆಪಿ ಸಂಸದರು ಮಾಡಬೇಕು ಎಂದು ಹೇಳಿದರು.

ಡಿ.ಕೆ. ಶಿವಕುಮಾರ ನೇತೃತ್ವದ ತಂಡ ಪ್ರಧಾನಮಂತ್ರಿಗಳನ್ನು ಭೇಟಿಯಾಗುವ ಮೊದಲೇ ರಾಜ್ಯಕ್ಕೆ ಬರ ಪರಿಹಾರ ದೊರಕಿಸಿಕೊಟ್ಟರೆ ಬಿಜೆಪಿಗೆ ಗೌರವ ಹೆಚ್ಚಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.

Share the Post:

ಇತ್ತೀಚಿನ ಸುದ್ದಿಗಳು

error: Content is protected !!