ಆಧುನಿಕ ಅನುಭವ ಮಂಟಪದೊಳ್ ಸನಾತನತೆ

0
182
-ಸೋಮಪ್ರಕಾಶ್ ಆರ್ಯ, ಬೆಂಗಳೂರು

ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ ೬/೧/೨೦೨೧ ರಂದು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ‘ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ’ ಅನ್ನುವ ಕಾರ್ಯಕ್ರಮಕ್ಕೆ ಕೊಟ್ಟ ಜಾಹಿರಾತಿನಲ್ಲಿ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಅನ್ನುವ ತಲೆಬರಹ ಕೊಟ್ಟಿರುವುದು ಪರ ಮತ್ತು ವಿರೋಧಗಳ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದು ಜಾತಿ, ಧರ್ಮದ ಮೇಲಾಟಗಳಿಗೆ ವೇದಿಕೆ ಸಜ್ಜುಮಾಡಿ ರಾಜಕೀಯ ರಂಗನ್ನೂ ಪಡೆದುಕೊಂಡಿದೆ.

ಇತ್ತೀಚೆಗೆ ಇಲ್ಲದ ವಿವಾದಗಳನ್ನು ಸೃಷ್ಟಿಮಾಡುವುದು ಸರ್ಕಾರಗಳ ಮತ್ತು ರಾಜಕೀಯ ಮುಖಂಡರುಗಳ ಚಾಳಿಯಾಗಿಬಿಟ್ಟಿದೆ. ಇಂತಹ ಕೆಟ್ಟ ಚಾಳಿ ಒಂದು ಕಡೆ ಸಮಾಜದ ನೆಮ್ಮದಿಯನ್ನು ಹಾಳುಗೆಡವುತ್ತಿದ್ದರೆ ಇನ್ನೊಂದು ಕಡೆ ರಾಜಕೀಯದಲ್ಲಿ ಪಕ್ಷಗಳು ಏಕಸ್ವಾಮ್ಯ ಸ್ಥಾಪಿಸುವ ಅಪಾಯಕ್ಕೆ ಮುನ್ನುಡಿ ಬರೆಯುತ್ತಿದೆ.
ಈಗ ಅನುಭವ ಮಂಟಪ ನಿರ್ಮಾಣದ ಭೂಮಿ ಪೂಜೆ ಜಾಹೀರಾತಿನ ವಿಚಾರಕ್ಕೇ ಬಂದರೂ, ಇಲ್ಲಿ ಪ್ರಸ್ತಾವನೆ ಇದ್ದದ್ದು ಅನುಭವ ಮಂಟಪದ ನಿರ್ಮಾಣಕ್ಕಷ್ಟೇ. ಅಷ್ಟನ್ನು ಮಾತ್ರ ನೆರವೇರಿಸುವುದು ಬಿಟ್ಟು ಸರ್ಕಾರವು ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಅನ್ನುವ ತಲೆಬುಡವಿಲ್ಲದ ತಲೆಬರಹ ಕೊಟ್ಟು ಬಲವಂತವಾಗಿ ಒಂದು ವಿವಾದವನ್ನು ಸಮಾಜದ ಮಧ್ಯೆ ತುರುಕಿದೆ.

ಅತ್ತ ಸನಾತನ ಧರ್ಮದ ಬೆಂಬಲಿಗರು ಇತ್ತ ಶರಣ ಪಂಥದ ಅನುಯಾಯಿಗಳು ಪರಸ್ಪರ ಬೈದಾಡಿಕೊಂಡು ವೈಮನಸ್ಸು ಹೆಚ್ಚಿಸಿಕೊಂಡು ಸಮಾಜದಲ್ಲಿ ಅಪನಂಬಿಕೆ ಮತ್ತು ಅಸಹನೆ ಹೆಚ್ಚಲು ಸರ್ಕಾರವೇ ಕಾರಣವಾಗಿದೆ. ಜನರು ಕೇಳದೆಯೇ, ಜನರಿಗೆ ಬೇಡವಾದ ನೀತಿಗಳನ್ನು ಜಾರಿಮಾಡಿ ಜನರ ನೆಮ್ಮದಿ ಹಾಳುಮಾಡುವುದೆಂದರೆ ಸರ್ಕಾರಗಳಿಗೆ ಅದೇನು ಸಂತೋಷವೋ ಯಾರಿಗೂ ತಿಳಿಯದಾಗಿದೆ. ಮರಾಠರು ಕೇಳದೆಯೇ ‘ಮರಾಠ ಅಭಿವೃದ್ಧಿ ಪ್ರಾಧಿಕಾರ’ ಮಾಡಿದರು, ರೈತರು ಕೇಳದೆಯೇ ‘ಭೂ ಸುಧಾರಣೆ ತಿದ್ದುಪಡಿ ಮಸೂದೆ’ ತಂದರು. ಈಗ ಸನಾತನ ಧರ್ಮದ ಬೆಂಬಲಿಗರಾಗಲೀ, ಶರಣ ಪಂಥದವರಾಗಲೀ ಇವರ ಈ ಹೊಸ ಪರಿಕಲ್ಪನೆಗೆ ಬೇಡಿಕೆ ಇಡದಿದ್ದರೂ ಇವರೇ ಈ ವಿವಾದವನ್ನು ಸೃಷ್ಟಿ ಮಾಡಿಬಿಟ್ಟಿದ್ದಾರೆ. ಇಂತಹ ಅಡ್ಡಗೋಡೆ ಮೇಲೆ ದೀಪ ಇಡುವ ಸಣ್ಣತನದ ಕೆಲಸಗಳಿಂದ ರಾಜಕೀಯ ಪಕ್ಷಗಳು ತಮ್ಮ ಭವಿಷ್ಯದ ರಾಜಕೀಯ ಹಿಡಿತವನ್ನು ಖಾತ್ರಿಪಡಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಸಾಮಾಜಿಕ ಮೌಲ್ಯಗಳು ಕುಸಿದು ಸಮಾಜದೊಳಗಿನ ಜನರು ಪರಸ್ಪರ ಹಗೆ ಸಾಧಿಸುವಂತಾಗಿದೆ.

ಜಾಹೀರಾತಿನಲ್ಲೇ ಸರ್ಕಾರ ತನ್ನ ಉದ್ಧೇಶವನ್ನು ಸ್ಪಷ್ಟಪಡಿಸಿಬಿಟ್ಟಿದೆ. ಅನುಭವ ಮಂಟಪ ನಿರ್ಮಾಣಕ್ಕೆ ‘ಶಿಲಾನ್ಯಾಸ’ ಅಥವಾ ‘ಚಾಲನೆ’ ಎಂದು ಹೇಳುವ ಮೂಲಕ ಬಸವಾದಿ ಶರಣರ ಆಶಯಕ್ಕೆ ಬದ್ಧರಾಗಿ ನಡೆದುಕೊಳ್ಳದೇ, ‘ಭೂಮಿ ಪೂಜೆ’ ಅನ್ನುವ ವೈದಿಕ ಸಾಂಪ್ರದಾಯಿಕ ಪರಿಭಾಷೆಯನ್ನು ಬಳಸಿ ಶರಣರ ಆಶಯಕ್ಕೆ ಆರಂಭದಲ್ಲೇ ದ್ರೋಹ ಬಗೆಯುವ ಕೆಲಸ ಮಾಡುತ್ತಿರುವ ಇಚ್ಛಾಶಕ್ತಿಗಳು ಅದ್ಹೇಗೆ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಮಾಡಲಿದ್ದಾರೆ ಅನ್ನುವುದು ತಿಳಿಯದ ವಿಷಯವೇನಲ್ಲ. ಇದರ ಹಿಂದಿನ ಉದ್ದೇಶ ಸ್ಪಷ್ಟ., ಬ್ರಿಟಿಷರ ‘ಒಡೆದು ಆಳುವ’ ನೀತಿ ಅನುಸರಿಸುವುದಷ್ಟೇ.

ಇಷ್ಟಾಗಿಯೂ ಇಂತಹ ಈ ಸಂದರ್ಭದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಸಾಧ್ಯವಿದೆಯೇ ಮತ್ತು ಅಂತಹ ಹೇಳಿಕೆಗೆ ಅರ್ಥವಿದೆಯೇ ಹಾಗೂ ಸನಾತನ ಪ್ರಗತಿಪರತೆಗೂ ಅನುಭವ ಮಂಟಪಕ್ಕೂ ಒಂದಕ್ಕೊಂದು ಸಂಬಂಧವಿದೆಯೇ ಅನ್ನುವ ನಿಟ್ಟಿನಲ್ಲಿ ಚಿಂತಿಸಬೇಕಾಗುತ್ತದೆ.

ಈ ಒಟ್ಟೂ ಜಾಹೀರಾತಿನಲ್ಲಿ ‘ಸನಾತನ’, ‘ಪ್ರಗತಿಪರ’, ‘ಅನುಭವ ಮಂಟಪ’ ಎಂಬ ಪದಗಳ ಶಬ್ಧಾರ್ಥ ಮತ್ತು ಭಾವಾರ್ಥಗಳು ಜನರಿಗೆ ವಿವಿಧ ಬಗೆಯಾಗಿ ತಲುಪಿರಬಹುದಾದದ್ದರ ಕಾರಣದಿಂದ ಈ ಪರ ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ. ಸನಾತನ ಎಂದರೆ ಪುರಾತನವಾದದ್ದು ಮತ್ತು ಪ್ರಗತಿಪರ ಎಂದರೆ ಅಭಿವೃದ್ಧಿಯೆಡೆಗೆ ನಡೆವುದು ಎಂದು ಸಾಮಾನ್ಯವಾಗಿ ಗ್ರಹಿಕೆಯಾಗುವ ಈ ಪದಗಳಿಂದಲೇ ‘ಈ ಹಿಂದೆಯೇ ಧರ್ಮ ಉದಾರವಾಗಿತ್ತು, ಅದನ್ನು ಶರಣರು ಪುನರುಚ್ಚರಿಸಿದ್ದಾರಷ್ಟೇ, ಹಾಗಾಗಿ ಶರಣರು ಕಂಡುಕೊಂಡ ಅನುಭವ ಮತ್ತು ಸನಾತನ ಧರ್ಮದ ವಿಚಾರಗಳು ಒಂದೇ ಆಗಿರುವುದರಿಂದ ‘ಅನುಭವ ಮಂಟಪ’ ನಿರ್ಮಾಣದ ಮೂಲಕ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿಯೂ ಸಾಧ್ಯವಿದೆ’ ಅನ್ನುವುದು ಪರವಿರುವವರ ನಂಬಿಕೆಯಾಗಿರಬೇಕು.

ಇನ್ನು ಈ ಅನಿಸಿಕೆಗೆ ವಿರೋಧವಿರುವವರು ‘ಬಸವಾದಿ ಶರಣರು ಧರ್ಮ, ಧರ್ಮಗ್ರಂಥಗಳು ಮತ್ತು ಧರ್ಮಾಚರಣೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿಯೇ ಶರಣ ಚಳುವಳಿ ಆರಂಭಿಸಿ ವಚನ ಕ್ರಾಂತಿಗೆ ನಾಂದಿಯಾಡಿದ್ದಾರೆ, ಹಾಗಾಗಿ ಈ ಹೊಸ ಪರಿಕಲ್ಪನೆಗೆ ಅರ್ಥವೇ ಇಲ್ಲ, ಇದು ‘ಲಿಂಗಾಯತ ಪ್ರತ್ಯೇಕ ಧರ್ಮ’ದ ಕೂಗನ್ನು ಅಡಗಿಸುವ ಕೃತ್ಯವಾಗಿದೆ’ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಮೊದಲಿಗೆ ‘ಅನುಭವ ಮಂಟಪ’ದ ಅರ್ಥವನ್ನು ನಾವು ಸರಿಯಾಗಿ ಗ್ರಹಿಸಬೇಕಾಗುತ್ತದೆ. ಶರಣ ಚಳುವಳಿಯ ಕಾಲಕ್ಕೆ ಶರಣ ಶರಣೆಯರ ಅನುಭವಗಳನ್ನು ಸಂಗ್ರಿಹಿಸುವ ಕೆಲಸವಾಗಿಲ್ಲ. ಅಲ್ಲಾಗಿರುವುದು ಶರಣ ಶರಣೆಯರ ಅನುಭಾವ ಸಂಗ್ರಹ. ಅನುಭವಕ್ಕೂ ಅನುಭಾವಕ್ಕೂ ತುಂಬಾ ವ್ಯತ್ಯಾಸವಿದೆ. ಅನುಭವ ‘ಉಂಟಾಗುವುದಾಗಿದ್ದು’ ಅನುಭಾವವು ‘ಉಂಟುಮಾಡಬೇಕಾದದ್ದಾಗಿದೆ’. ಅನುಭಾವವೆಂದರೆ ಒಂದು ವಿಚಾರಕ್ಕಾಗಿ ಹಲವು ಚಿಂತನೆಗಳನ್ನು ಒದಗಿಸುವುದು ಮತ್ತು ಒಂದು ಚಿಂತನೆಯನ್ನು ಹಲವು ಬಗೆಯಲ್ಲಿ ವಿಚಾರ ಮಾಡುವುದಾಗಿದೆ. ಹಾಗಾಗಿ ಇಲ್ಲಿ ಶರಣ ಶರಣೆಯರು ಸಮಾಜದಲ್ಲಿ ಜಡ್ಡುಗಟ್ಟಿದ್ದ ಕಂದಾಚಾರ, ಮೂಢನಂಬಿಕೆಗಳು, ದುರಾಚಾರಗಳನೆಲ್ಲಾ ತಿರಸ್ಕರಿಸಿ ಹೊಸ ಅರಿವಿನ ಮಾರ್ಗದಲ್ಲಿ ನಡೆಯಲಿಚ್ಚಿಸಿ ತಮ್ಮನ್ನು ಅನುಸರಿಸುವವರಿಗಾಗಿ ಮಾರ್ಗದರ್ಶನ ತೋರಬೇಕಾಗಿದ್ದರಿಂದ ಅವರು ಹೊಸ ವಿಚಾರ ಕ್ರಾಂತಿಗೆ ನಾಂದಿಯಾಡಿ ಹೊಸ ರೀತಿಯಲ್ಲಿ ಎಲ್ಲರನ್ನೊಳಗೊಳ್ಳುವ ‘ಎಲ್ಲರೂ, ಎಲ್ಲರಿಂದ, ಎಲ್ಲರಿಗಾಗಿ’ ಅನ್ನುವ ಪ್ರಜಾಪ್ರಭುತ್ವ ಮಾದರಿಯ ಆಲೋಚನೆಗಳನ್ನು ಹೊಸ ರೀತಿಯಲ್ಲಿ ಮಾಡಿ ಅವನ್ನು ವಚನ ರೂಪಕ್ಕಿಳಿಸಿದ್ದೇ ಅನುಭಾವವಾಗಿದೆ.

ಇದೊಂದು ರೀತಿ ಭಾರತದ ಮಟ್ಟಿಗೆ ನಡೆದ ಪುನರುಜ್ಜೀವನ ಚಳುವಳಿ ಎಂದೇ ಹೇಳಬಹುದು. ಆದರಿದು ನಿರ್ದಿಷ್ಟ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದು ಖೇದಕರ. ಅಂತಹ ಆ ಶರಣರ ಅನುಭಾವವು ಇಂದಿನ ನಮಗೆ ಅನುಭವವಾಗಿದೆ. ಹಾಗಾಗಿ ಅನುಭವ ಮಂಟಪದ ಧ್ಯೇಯೋದ್ಧೇಶವೆಲ್ಲಾ ಶರಣರ ಅನುಭಾವಗಳನ್ನು ಕಾರ್ಯರೂಪಕ್ಕೆ ತರಬೇಕಾದದ್ದಷ್ಟೇ ಆಗಿದೆ. ಬೇರಾವ ಚಿಂತನೆಗಳ ಮರುಸೃಷ್ಟಿಯಲ್ಲ.

ಇನ್ನು ‘ಪ್ರಗತಿಪರ’ ಅಂದರೆ ಎಲ್ಲರಿಗೂ ಸರ್ವೇಸಾಧಾರಣವಾಗಿ ತಿಳಿದಿರುವುದೇ ಆಗಿದೆ. ಪ್ರಗತಿಪರವೆಂದರೆ ಅಭಿವೃದ್ಧಿಯ ಪರ ಅಷ್ಟೇ. ಆದರೆ ಇಲ್ಲಿ ‘ಪರ’ ಅನ್ನುವುದಕ್ಕೆ ಬಹಳ ಮಹತ್ವವಿದೆ. ಪ್ರಗತಿಪರ ಅನ್ನುವಾಗ ಸಕಾರಾತ್ಮಕ ಪ್ರಗತಿಯ ಪರವೋ ಅಥವಾ ನಕಾರಾತ್ಮಕ ಪ್ರಗತಿಯ ಪರವೋ ಅನ್ನುವುದು ಮುಖ್ಯವಾಗುತ್ತದೆ. ಶರಣ ಚಳುವಳಿಯು ಸಕಾರಾತ್ಮಕ ಪ್ರಗತಿಪರವೇ ಅನ್ನುವುದು ನಿಸ್ಸಂದೇಹ. ಅಂತಹ ಶರಣ ಚಳುವಳಿಯನ್ನೂ ವಿರೋಧಿಸುವ ಅಥವಾ ಅನುಮಾನಿಸುವ ಗುಂಪುಗಳಿರುವುದರಿಂದ ಅಂತಹ ಗುಂಪುಗಳು ನಕಾರಾತ್ಮಕ ಪ್ರಗತಿಪರವಿವೆ ಅನ್ನುವುದನ್ನು ಖಡಾಖಂಡಿತವಾಗಿ ಹೇಳಬಹುದು.

ಭಾರತದ ಮಟ್ಟಿಗಂತೂ ಪ್ರಗತಿಪರರು ಅನ್ನುವವರು ವ್ಯವಸ್ಥೆಯಿಂದ ಪ್ರತ್ಯೇಕಿಸಲ್ಪಟ್ಟವರಾಗಿ ಗುರುತಿಸಲ್ಪಡುತ್ತಿದ್ದಾರೆ. ಅವರನ್ನು ಧರ್ಮ ನಿಂದಕರು, ಸಮಾಜ ಪೀಡಕರು, ದೇಶ ದ್ರೋಹಿಗಳೆಂದೆಲ್ಲಾ ಬಿಂಬಿಸಲಾಗಿದೆ. ಆದರೆ ಪ್ರಗತಿಪರರು ವಿಚಾರವಂತಿಕೆಯ ಮುಮ್ಮುಖ ಚಲನೆಗೆ ಅತ್ಯಂತ ಅವಶ್ಯಕವಾಗಿದ್ದಾರೆ. ಹಾಗೂ ವಿಚಾರವಂತಿಕೆಯ ಮುಮ್ಮುಖ ಚಲನೆ ಧರ್ಮದ ವಿಚಾರದಲ್ಲೂ ಬೇಕಿದೆ. ಹಾಗಾಗಿ ಧರ್ಮ ಮತ್ತು ಪ್ರಗತಿಪರರ ಸಂಬಂಧ ಎತ್ತಿನ ಬಂಡಿ ಮತ್ತು ಎತ್ತಿನ ಸಂಬಂಧದಂತಿದೆ. ಪ್ರಗತಿಪರರೆನ್ನುವ ಎತ್ತುಗಳು ಬಂಡಿಯನ್ನು ಎಳೆದೆಳೆದು ಕೈಸೋತು ಸ್ವಲ್ಪ ವಿಶ್ರಮಿಸಿದರೂ ಧರ್ಮವೆಂಬ ಗಾಡಿಗೆ ಕಂದಾಚಾರ, ದುರಾಚಾರ, ವಾಮಾಚಾರ, ಬೂಟಾಟಿಕೆ, ಮೂಢನಂಬಿಕೆಗಳೆಲ್ಲದರ ಹಿಂಬಾರ ಹೆಚ್ಚಾಗಿ ಬಂಡಿಯು ಹಿಮ್ಮುಖವಾಗಿ ಚಲಿಸುತ್ತಿರುತ್ತದೆ, ಅಥವಾ ಮಗುಚಿ ಬೀಳುತ್ತದೆ. ಇಂತಹ ಸಾಧ್ಯತೆಗಳನ್ನು ತಪ್ಪಿಸಲು ಪ್ರಗತಿಪರತೆ ಎಲ್ಲಾ ಕಾಲಕ್ಕೂ ಎಲ್ಲಾ ಪ್ರದೇಶಕ್ಕೂ ಮತ್ತು ಎಲ್ಲಾ ವಿಚಾರಕ್ಕೊ ಅತ್ಯಗತ್ಯವಾದದ್ದು.

ಅನುಭಾವ ಮತ್ತು ಪ್ರಗತಿಪರತೆಯ ಮಹತ್ವವನ್ನು ಅರಿತುಕೊಂಡಾದಮೇಲೆ ‘ಅನುಭಾವ ಮಂಟಪ’ದ ನಿರ್ಮಾಣದ ಮೂಲಕ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಸಾಧ್ಯವಿದೆಯೇ ಎಂದು ಅರಿಯಬೇಕಾದರೆ ಸನಾತನ ಪ್ರಗತಿಪರತೆ ಎಂದರೇನು ಎಂದು ಅರಿತುಕೊಳ್ಳಬೇಕಾಗುತ್ತದೆ. ರಾಜ್ಯ ಸರ್ಕಾದ ಮುಖ್ಯಸ್ಥರಾದ ಮುಖ್ಯಮಂತ್ರಿಗಳು ಅಥವಾ ಅನುಭವ ಮಂಟಪ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ಸಂಘಟಕರ ಪ್ರಕಾರ ‘ಸನಾತನ ಪ್ರಗತಿಪರತೆ’ ಅಂದರೆ ‘ಸನಾತನ ಧರ್ಮದೊಳಗಿದ್ದ ಪ್ರಗತಿಪರತೆ’ ಎಂದು ಅರ್ಥವಿರಬೇಕು. ಇದು ನಿಜವೇ ಎಂದು ತಿಳಿಯಬೇಕಾದರೆ ನಾವು ಸನಾತನ ಧರ್ಮದ ಅರ್ಥ, ವ್ಯಾಪ್ತಿ ಮತ್ತು ಪ್ರಭಾವವನ್ನು ಅರಿತುಕೊಳ್ಳಬೇಕಾಗತ್ತದೆ.

ಸಾಮಾನ್ಯವಾಗಿ ಸನಾತನ ಧರ್ಮವನ್ನು ಹಿಂದೂ ಧರ್ಮವೆಂದೇ ಗ್ರಹಿಸಲಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ಪ್ರಕಾರವೇ ಹಿಂದೂ ಅನ್ನುವುದು ಒಂದು ಧರ್ಮವಲ್ಲ ಅದೂಂದು ಸಂಸ್ಕೃತಿ. ಹಾಗಾಗಿ ಸನಾತನ ಧರ್ಮ ಅಂದರೇನು? ಸನಾತನ ಧರ್ಮ ಮತ್ತು ಹಿಂದೂ ಧರ್ಮ ಎರಡೂ ಒಂದೆಯೇ? ಸನಾತನ ಧರ್ಮವು ಹಿಂದೂ ಧರ್ಮದ ಭಾಗವೇ? ಅಥವಾ, ಹಿಂದೂ ಧರ್ಮವು ಸನಾತನ ಧರ್ಮದ ಭಾಗವೇ? ಅನ್ನುವ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ಯಾವ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ಸಿಗಲಾರದು.

ಹಿಂದೂ ಸಂಸ್ಕೃತಿಗೆ ಒಂದು ನಿರ್ದಿಷ್ಟ ಚೌಕಟ್ಟು ಇಲ್ಲ. ಇತರ ಸೆಮೆಟಿಕ್ ಮತ ಧರ್ಮಗಳಂತೆ ಹಿಂದೂ ಸಂಸ್ಕೃತಿಗೆ ಒಂದು ಚೌಕಟ್ಟು ಕೊಡಲು ಸಾಧ್ಯವಾಗಿಲ್ಲ. ಈ ಸಂಸ್ಕೃತಿಯು ಸ್ವಭಾವದಲ್ಲಿ ಸಾಮ್ರಾಜ್ಯಶಾಹಿಯಂತೆ ವರ್ತಿಸುತ್ತದೆ. ಅಥವಾ ಅದು ಉದಾರವಾದಿತ್ವವೋ ಎಂಬ ಜಿಜ್ಞಾಸೆ ಇದೆ. ಯಾವುದೇ ಆದರೂ ಅದು ತನ್ನ ವ್ಯಾಪ್ತಿಗೆ ಬರುವ ಎಲ್ಲವನ್ನೂ ತನ್ನೊಳಗೆ ಸೆಳೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗೇ ಇಲ್ಲಿ ಬುದ್ಧ ಗುರುವೂ ವಿಷ್ಣುವಿನ ವತಾರವಾಗಿ ಬಿಂಬಿಸಲ್ಪಡುತ್ತಾರೆ, ಮಹಾವೀರ ಶಿವನ ಅಂಶವಾಗಿ ಬಿಂಬಿಸಲ್ಪಡುತ್ತಾರೆ. ಗುರು ರಾಘವೇಂದ್ರ ಮತ್ತು ಶಿರಡಿ ಸಾಯಿಬಾಬಾರೂ ದೇವರಾಗುತ್ತಾರೆ. ನಾರಾಯಣ ಗುರು, ಭಗವತಿ ಭಗವಾನ್ ಸ್ವಾಮೀಜಿ., ಹೀಗೇ ದೇವರಾಗುತ್ತಿರುವವರ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇದೆಲ್ಲ ಹಿಂದೂ ಸಂಸ್ಕೃತಿಯ ಒಳಗೊಳ್ಳುವ ಅಥವಾ ಆಪೋಷನ ಮಾಡಿಕೊಳ್ಳುವ ಗುಣ.

ಇದನ್ನು ಪ್ರಗತಿಪರತೆಯ ಲಕ್ಷಣವನ್ನಾಗಿ ಕಾಣಲಾಗುವುದಿಲ್ಲ. ಇದೊಂದು ಮೂಲಭೂತವಾದದ ಲಕ್ಷಣ ಮತ್ತು ಪಟ್ಟಭದ್ರ ಹಿತಾಶಕ್ತಿಯನ್ನು ಕಾಯ್ದುಕೊಳ್ಳುವ ತಂತ್ರ ಎಂದಷ್ಟೇ ಅರ್ಥೈಸಬಹುದು. ಸಂಸ್ಕೃತಿಯೊಂದು ಸ್ವಯಂಚಾಲಿತವಲ್ಲ. ಅದು ಸಂಚಾಲಕರ ನಿಯಂತ್ರಣದಲ್ಲಿರುತ್ತದೆ. ಈ ಸಂಸ್ಕೃತಿಯ ಸಂಚಾಲಕರ ಮುಂದಾಳತ್ವ ವಹಿಸಿಕೊಂಡು ಬಂದಿರುವವರು ವೈದಿಕರಾಗಿದ್ದಾರೆ. ಹಾಗಾಗಿ ಈ ಸಂಸ್ಕೃತಿಯನ್ನು ವೈದಿಕ ಸಂಸ್ಕೃತಿ ಎಂತಲೂ ಕರೆಯಲಾಗುತ್ತದೆ. ಮತ್ತು ಈ ಸಂಸ್ಕೃತಿಯ ಈ ಗುಣಕ್ಕೆ ವೈದಿಕರೇ ಪ್ರಮುಖ ಕಾರಣರಾಗಿದ್ದಾರೆ. ಈ ಸಂಸ್ಕೃತಿಯು ಎಲ್ಲವನ್ನೂ ಒಳಗೊಂಡರೂ ಎಲ್ಲವಕ್ಕೂ ಮಹತ್ವ ಕೊಡುವುದಿಲ್ಲ. ಮುಂದಾಳುಗಳ ಇಚ್ಛೆ ಯಾವುದರ ಮೇಲಿದೆಯೋ ಅದಕ್ಕೆ ಮಾತ್ರ ಇಲ್ಲಿ ಮಹತ್ವ ಬರುತ್ತದೆ. ಇದಕ್ಕೆ ಉದಾಹರಣೆ, ತಳ ಸಮುದಾಯಗಳ ದೇವರುಗಳು ಸಾರ್ವತ್ರಿಕವಾಗದೇ ಸಣ್ಣ ಗ್ರಾಮಗಳಿಗಷ್ಟೇ ಸೀಮಿತವಾಗಿಬಿಟ್ಟಿರುವುದು.

ಅಂತೆಯೇ ಈ ಹಿಂದೂ ಸಂಸ್ಕೃತಿ ಸನಾತನ ಸಂಸ್ಕೃತಿಯನ್ನೂ ಒಳಗೊಂಡೂ ಅದಕ್ಕೆ ಮಹತ್ವ ಕೊಡದೇ ಹೋಗಿದೆ. ಏಕೆಂದರೆ ಸನಾತನ ಧರ್ಮಕ್ಕೆ ಮಹತ್ವ ಕೊಟ್ಟರೆ ವೈದಿಕಶಾಹಿ ಮನೋಧರ್ಮಕ್ಕೆ ಮಹತ್ವವೇ ಬರುವುದಿಲ್ಲ. ಸನಾತನ ಧರ್ಮಕ್ಕೂ ಒಂದು ನಿರ್ದಿಷ್ಟ ಚೌಕಟ್ಟು ಇಲ್ಲದಿದ್ದರೂ, ಧರ್ಮಕ್ಕೆ ಚೌಕಟ್ಟು ಹಾಕುವ ಪ್ರಯತ್ನಗಳು ಆರಂಭವಾದ ಹಂತದಲ್ಲಿ ಹಾಕಲ್ಪಟ್ಟ ಬುನಾದಿಯೇ ಸನಾತನ ಧರ್ಮವಾಗಿದೆ ಅನ್ನುವುದು ನನ್ನ ನಂಬಿಕೆ.

ಈ ಸನಾತನ ಧರ್ಮದ ಆಶಯವೆಲ್ಲಾ ತಂದೆ ತಾಯಿಯರನ್ನು, ಗುರು ಹಿರಿಯರನ್ನು ಗೌರವಿಸುವುದು, ಕಿರಿಯರನ್ನು ಪ್ರೀತಿಸುವುದು, ಸಹಜನರನ್ನು ಆದರದಿಂದ ಕಾಣುವುದು, ಸನ್ನಡತೆ ಹೊಂದುವುದು ಅನ್ನುವಂತಹ ಸುಸಂಸ್ಕೃತ ನಾಗರೀಕನಿಗಿರಬೇಕಾದ ಮೂಲಭೂತ ಲಕ್ಷಣಗಳನ್ನು ಹೇಳುವುದಾಗಿದೆ. ಸನ್ನಡತೆಗಳಾವುವು, ಪಾಪ ಯಾವುದು, ಪುಣ್ಯ ಯಾವುದು, ಪಾಪಕ್ಕೆ ಶಿಕ್ಷೆ, ಪುಣ್ಯಕ್ಕೆ ಉತ್ತಮ ಫಲ, ಸಜ್ಜನಿಕೆಗೆ ವರ, ಗೌರವ ಮತ್ತು ಪುರಸ್ಕಾರ., ದುರ್ನಡತೆಗೆ ಶಾಪ, ನಿಂದನೆ ಮತ್ತು ತಿರಸ್ಕಾರ.. ಹೀಗೆ ಉತ್ತಮ ಸಮಾಜವನ್ನು ಕಟ್ಟಲು ಜನರು ಜ್ಞಾನಿಗಳ ಮುಂದಾಳತ್ವದಲ್ಲಿ ಸಮಾಜದ ಮೇಲೆ ಸ್ವಯಂ ನಿಯಂತ್ರಣ ಹೇರಿಕೊಂಡ ಆದಿಮ ಕಟ್ಟುಪಾಡನ್ನು ಸನಾತನ ಧರ್ಮವೆಂದು ಕರೆಯಬಹುದು.

ಹಾಗಾಗಿ ಇಂತಹ ಸನಾತನ ಧರ್ಮದಲ್ಲಿ ಪ್ರಗತಿಪರತೆ ಇರಲು ಸಾಧ್ಯವಿಲ್ಲ. ಅಸಲಿಗೆ ಸನಾತನವು ಪ್ರಗತಿಪರತೆಯನ್ನು ಪ್ರತಿಪಾದಿಸುವುದೇ ಇಲ್ಲ. ಅಲ್ಲಿರುವುದೆಲ್ಲ ಮನುಷ್ಯನನ್ನು ಉತ್ತಮ ನಾಗರೀಕನನ್ನಾಗಿ ರೂಪಿಸುವ ಉದ್ಧೇಶವಷ್ಟೇ. ಆ ಉದ್ಧೇಶಕ್ಕೆ ಒಂದು ಪ್ರಾಂತೀಯ ಮಾದರಿಯನ್ನು ಸನಾತನ ರೂಪಿಸಿಕೊಂಡಿದೆ. ಮತ್ತು ಅದಕ್ಕೆ ಮಿತಿಯನ್ನೂ ವಿಧಿಸಿಕೊಂಡಿದೆ. ಇಲ್ಲಿ ಪಿತೃ ಪ್ರಧಾನ ಕುಟುಂಬ ಮತ್ತು ಪುರುಷ ಪ್ರಧಾನ ಸಮಾಜದ ಮಾದರಿಯನ್ನು ಹಾಕಿಕೊಳ್ಳಲಾಗಿದೆ. ಇಂತಹ ಈ ಸನಾತನ ಧರ್ಮವು ಮಾತೃಪ್ರಧಾನ ವ್ಯವಸ್ಥೆಯನ್ನು ಒಪ್ಪದಿದ್ದರೂ ತಟಸ್ಥವಾಗಂತೂ ಇದೆ. ಆದರೆ ಸ್ವೀಕರಿಸುವ ಕೆಲಸ ಮಾಡುವುದಿಲ್ಲ. ಯಾವ ವ್ಯವಸ್ಥೆ ತನಗಿಂತ ಭಿನ್ನವಾದ ಅನುಕರಣೀಯವಾಗಬಲ್ಲ ವ್ಯವಸ್ಥೆಯನ್ನು ಸ್ವೀಕರಿಸಲು, ಒಳಗೊಳ್ಳಲು ತಯಾರಿಲ್ಲವೋ ಅದು ಪ್ರಗತಿಪರ ಹೇಗಾಗುತ್ತದೆ? ಪ್ರಗತಿಪರ ಎಂದರೆ ಎಲ್ಲೆಡೆಯ ಎಲ್ಲಾ ಉತ್ತಮಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳುವುದಲ್ಲವೇ? ಅಂತಹ ಉತ್ತಮಗಳು ಕಾಲಕಾಲಕ್ಕೆ ಹೊಸ ರೂಪಗಳಲ್ಲಿ ಬರುತ್ತಲೇ ಇರುತ್ತವೆ. ಅಂತಹವನ್ನು ಎಲ್ಲಾ ಕಾಲಕ್ಕೂ ಸ್ವೀಕರಿಸಿ ಅಳವಡಿಸಿಕೊಳ್ಳಲು ತಯಾರಿಲ್ಲದೇ ಎಲ್ಲಿ ಹುಟ್ಟಿತೋ ಅಲ್ಲೇ ನಿಂತುಕೊಂಡ ಸನಾತನ ಧರ್ಮ ಪ್ರಗತಿಪರವಾಗಿದೆ ಎಂದು ಹೇಗೆ ಹೇಳಬಹುದು?

ಹಾಗಾಗಿ ಈ ಎಲ್ಲಾ ಅಂಶಗಳ ತರ್ಕದಿಂದ ನಮಗೆ ತಿಳಿಯುವುದೇನೆಂದರೆ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಅನ್ನುವುದಕ್ಕೆ ಅರ್ಥವೇ ಬರುವುದಿಲ್ಲ. ಹಾಗೆ ಅರ್ಥ ಬರುವುದಿದ್ದರೆ ಆಗಾಗ ಶರಣ ಚಳುವಳಿಯಂತಹ ಸಾಮಾಜಿಕ ಕ್ರಾಂತಿಗಳು ಜುರುಗಬೇಕಾದ ಅಗತ್ಯವೇ ಇರಲಿಲ್ಲ. ಸನಾತನ ಧರ್ಮಕ್ಕೂ ಅನುಭ(ಭಾ)ವ ಮಂಟಪಕ್ಕೂ ಹೋಲಿಕೆ ಇದ್ದರೂ, ಸನಾತನ ಪ್ರಗತಿಪರತೆ ಅನ್ನುವುದೇ ಅರ್ಥವಿಲ್ಲದ ಪರಿಕಲ್ಪನೆಯಾಗಿರುವಾಗ ಅದಕ್ಕೊ ಅನುಭವ ಮಂಟಪಕ್ಕೂ ಸಂಬಂಧವಿಲ್ಲ. ಮತ್ತು ಅನುಭವ ಮಂಟಪದ ನಿರ್ಮಾಣದ ಮೂಲಕ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಸಾಧ್ಯವೂ ಇಲ್ಲ. ಅನುಭವ ಮಂಟಪ ಶರಣರ ಅನುಭಾವಗಳ ಆಶಯಕ್ಕೆ ತಕ್ಕಂತೆ ಕೆಲಸ ಮಾಡಲಿ. ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಮಾಡುವ ಪರಿಕಲ್ಪನೆ ಇರುವವರು ಸನಾತನವನ್ನು ಮೊದಲು ಪ್ರಗತಿಪರತೆಗೆ ತೆರೆದಿಟ್ಟು ನಂತರ ಈಗಾಗಲೇ ಇರುವ ಅಸಂಖ್ಯಾತ ಮಠಗಳು, ಆಶ್ರಮಗಳು, ಮಂದಿರಗಳು, ಸಂಘಟನೆಗಳ ಮೂಲಕ ಆ ಚಿಂತನೆಯ ಮರುಸೃಷ್ಟಿಗೆ ಶ್ರಮಿಸಲಿ.

ಇವರೇನಾದರೂ ನೂತನ ‘ಅನುಭವ ಮಂಟಪ’ದ ಮೂಲಕ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಮಾಡಬೇಕಿದ್ದರೆ.. ಮೊದಲು
೧. ದೇವಾಲಯಗಳಲ್ಲಿ ಪ್ರತ್ಯೇಕ ಪಂಕ್ತಿ ಭೋಜನ ನಿಲ್ಲಿಸಲಿ
೨. ಲವ್ ಜಿಹಾದ್ ಎಂದು ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ ಅಂತರ್ಧರ್ಮೀಯ ವಿವಾಹ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಲಿ
೩. ಪರಿಶಿಷ್ಟರೂ ಸೇರಿದಂತೆ ಎಲ್ಲಾ ವರ್ಗದವರನ್ನು ಅರ್ಚಕರನ್ನಾಗಿ ಹೆಚ್ಚೆಚ್ಚು ನೇಮಿಸಿ, ಒಂದು ವರ್ಗದ ಏಕಸ್ವಾಮ್ಯವನ್ನು ಕೊನೆಗಾಣಿಸಲಿ.
೪. ಎಲ್ಲಾ ದೇವಾಲಯಗಳಿಗೂ ಲಿಂಗಭೇದ, ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಪ್ರವೇಶ ಮುಕ್ತವಾಗಿಸಲಿ.
೫. ಅನ್ನಭಾಗ್ಯ, ಕ್ಷೀರಭಾಗ್ಯ ಇತ್ಯಾದಿಗಳನ್ನು ಅಣಕವಾಡಿ ವಿರೋಧಿವುದು ಬಿಟ್ಟು ವಿದ್ಯಾದಾನ, ಮತ್ತು ದಾಸೋಹವನ್ನು ಸರ್ಕಾರದ ಪ್ರಮುಖ ಧ್ಯೇಯವನ್ನಾಗಿಸಿಕೊಳ್ಳಲಿ. ಕಾಯಕ ಸಂಸ್ಕೃತಿಯನ್ನು ಮರುಸೃಷ್ಟಿಮಾಡಲು ಉದ್ಯೋಗಗಳನ್ನು ಸೃಷ್ಟಿಸಿ. ಸಹಕಾರಿ ಕೃಷಿ ಪದ್ಧತಿ, ಶ್ರಮದಾನ, ಅರಣ್ಯ ರಕ್ಷಣೆ, ನೀರಿನ ಮೂಲಗಳ ರಕ್ಷಣೆ, ಗ್ರಾಮ ನೈರ್ಮಲ್ಯಗಳನ್ನೆಲ್ಲ ಕೈಗೊಳ್ಳಲು ಜನರನ್ನು ಪ್ರೇರೇಪಿಸಲಿ. ಜನರಲ್ಲಿ ಕಾಯಕ ಭೇದ, ಕೆಲಸಗಳ ಬಗ್ಗೆ ಕೀಳುಭಾವನೆಯನ್ನೆಲ್ಲ ತೆಗೆದುಹಾಕಲು ಜಾಗೃತಿ ಕಾರ್ಯಕ್ರಮಗಳನೆಲ್ಲ ಮಾಡಲಿ.

ಇಂತಹವನ್ನೆಲ್ಲ ಮಾಡಿದಾಗ ಇವರ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿಯ ಆಶಯವೂ ಈಡೇರುತ್ತದೆ. ಮತ್ತು ಅನುಭವ ಮಂಟಪದ ಮೂಲಕ ಶರಣ ಪಂಥದವರು ಸಾಧಿಸಬೇಕೆಂದಿರುವ ಸಾಮಾಜಿಕ ಪರಿವರ್ತನೆಯೂ ಕೂಡ ತಂತಾನೇ ಸಾಧ್ಯವಾಗುತ್ತದೆ.

-ಸೋಮಪ್ರಕಾಶ್ ಆರ್ಯ


LEAVE A REPLY

Please enter your comment!
Please enter your name here