ಸಾಮಾಜಿಕ ಅಂತರದೊಂದಿಗೆ ಕೃಷಿ ಚಟುವಟಿಕೆಗೆ ನಿರ್ಬಂಧ ಇಲ್ಲ -ಕೃಷಿ ಸಚಿವ ಬಿ.ಸಿ ಪಾಟೀಲ

0
176

ವಿಜಯಪುರ ಎ.07: ಕೃಷಿ ಚಟುವಟಿಕೆಗಳಿಗೆ ವಿಶೇಷವಾಗಿ ಬೇಸಾಯ, ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲವೆಂದು ತಿಳಿಸಿರುವ ಕೃಷಿ ಸಚಿವ ಬಿ.ಸಿ ಪಾಟೀಲ ಅವರು ಸಾಮಾಜಿಕ ಅಂತರ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ರೈತರ ಕೃಷಿ ಬೆಳೆ, ತೋಟಗಾರಿಕಾ ಬೆಳೆ ಹಾಗೂ ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸುವದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸದ್ಯಕ್ಕೆ ಕೊರೋನಾ ನಿಯಂತ್ರಣ ಮತ್ತು ನಿವಾರಣೆಗೆ ಹೆಚ್ಚಿನ ಗಮನ ನೀಡುತ್ತಿದ್ದು, ಹಠಾತ್ತಾಗಿ ಬಂದಿರುವಂತಹ ಈ ಪರಿಸ್ಥಿತಿ ವಿಶ್ವದಾದ್ಯಂತ ತಲ್ಲಣಗೊಳಿಸಿದೆ. ಕಾರಣ ಎಲ್ಲರೂ ಸಂಯಮದಿಂದ ಮತ್ತು ಮುಂಜಾಗ್ರತೆಯಿಂದ ಇರುವಂತೆ ತಿಳಿಸಿದ ಅವರು ಕ್ರಮೇಣ ಎಲ್ಲ ತೊಂದರೆಗಳು ನಿವಾರಣೆಯಾಗಲಿದ್ದು, ರೈತರಿಗೂ ಸಹ ಸಹಕಾರಿಯಾಗಲಿದೆ ಎಂದು ಹೇಳಿದರು. ಜಿಲ್ಲೆಯಾದ್ಯಂತ ಕೊರೋನಾ ಸೋಂಕಿತ ಒಂದೂ ಪ್ರಕರಣ ಆಗದಂತೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಸಚಿವ ಬಿ.ಸಿ ಪಾಟೀಲ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರೈತ ಸಮುದಾಯಕ್ಕೆ ತೊಂದರೆಯಾದಲ್ಲಿ ಇಡೀ ದೇಶಕ್ಕೆ ತೊಂದರೆ ಇದ್ದಂತೆ ಕಾರಣ ರೈತ ಸಮುದಾಯಕ್ಕೆ ಅನುಕೂಲವಾಗಲು ಕೃಷಿ ಉತ್ಪನ್ನಗಳ ಸುಗಮ ಮಾರಾಟ ಮತ್ತು ಸಾಗಾಣಿಕೆಗೆ ಅಂತರಾಜ್ಯ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಜಿಲ್ಲೆಯಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಲು ಸೂಚಿಸಿದ ಅವರು ಹಾಪ್‍ಕಾಮ್ಸ್‍ಗಳಲ್ಲಿ ತರಕಾರಿ, ಹಣ್ಣು ಮತ್ತು ಮೊಟ್ಟೆ ಮಾರಾಟಕ್ಕೆ ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು ಪರಿಸ್ಥಿತಿಯ ದುರ್ಲಾಭಪಡೆದು ರೈತರಿಗೆ ತೊಂದರೆ ನೀಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಕೃಷಿಗೆ ಸಂಬಂಧಿಸಿದ ವಿವಿಧ ಸೊಸೈಟಿಗಳ ಚಟುವಟಿಕೆಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಸಚಿವರು ತಿಳಿಸಿದರು.
ಕಲ್ಲಂಗಡಿ ಹಣ್ಣಿನ ಕುರಿತು ಮತ್ತು ಹಕ್ಕಿ ಜ್ವರದ ಅಪಪ್ರಚಾರದಿಂದಾಗಿ ಕಲ್ಲಂಗಡಿ ಹಣ್ಣು ಮತ್ತು ಕೋಳಿ ಸಾಕಾಣಿಕೆ, ಆಹಾರ ಸರಬರಾಜು ಮತ್ತು ಕೋಳಿ ಮಾರಾಟಕ್ಕೆ ಅಡ್ಡಿಯಾಗಿದೆ. ಜನರು ಇಂತಹ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿರುವ ಅವರು ಕಲ್ಲಂಗಡಿ ಮತ್ತು ಸೌತೇಕಾಯಿ ತಿನ್ನುವುದರಿಂದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಲಿದೆ. ಅದರಂತೆ ಕೋಳಿ ಮಾಂಸ, ಮೀನು ಮಾಂಸದಿಂದಲೂ ಯಾವುದೇ ಸಮಸ್ಯೆ ಇರುವುದಿಲ್ಲ ಎಂದ ಅವರು ಜನರು ಸಾಮಾಜಿಕ ಅಂತರದೊಂದಿಗೆ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸುವಂತೆ ಮನವಿ ಮಾಡಿ ಕೃಷಿಕರ ತೊಂದರೆ ನಿವಾರಣೆ, ಮುಂಗಾರು ಹಂಗಾಮುನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಇನ್ನಿತರ ಸಾಧನ, ಸಲಕರಣೆಗಳ ಸದ್ಭಳಕೆಗೆ ರೈತರಿಗೆ ಸಕಾಲಕ್ಕೆ ನೆರವಾಗಲು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ದ್ರಾಕ್ಷಿ ಬೆಳೆ ಸಾಗಣೆ, ಮಾರುಕಟ್ಟೆ ತೊಂದರೆ ನಿವಾರಣೆ ಮತ್ತು ವಿಜಯಪುರದಲ್ಲಿ ನಡೆಯುತ್ತಿರುವ ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಒಣದ್ರಾಕ್ಷಿಗೆ ಅವಶ್ಯಕತೆ ಇರುವ ಡಿಪ್ಪಿಂಗ್ ಆಯಿಲ್ ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳುವವರಿಗೆ ನೆರವಾಗಬೇಕು. ರೈತರು ಬೆಳೆದ ಬೆಳೆಯು ಆತನ ಮಗುವಿನಂತಿದ್ದು, ನಿಂಬೆ ಬೆಳೆಗಾರರಿಗೆ, ಹೂ ಮಾರಾಟಗಾರರಿಗೆ, ತರಕಾರಿ ಬೆಳೆಗಾರರಿಗೆ ಎಲ್ಲ ರೀತಿಯಿಂದ ನೆರವಾಗಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಅವಶ್ಯಕ ವಸ್ತುಗಳನ್ನು ರೈತರು ನಾಶಪಡಿಸಿದೆ ಜಿಲ್ಲಾಡಳಿತದ ನೆರವು ಪಡೆಯಬೇಕು. ಆತ್ಮಹತ್ಯೆಗೆ ಶರಣಾಗದಂತೆಯೂ ಅವರು ಸಭೆ ಮೂಲಕ ಮನವಿ ಮಾಡಿದರು.
ರೈತರಿಗೆ ಶೋಷಣೆ ಮಾಡುವಂತಹ ಮಧ್ಯವರ್ತಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ದ್ರಾಕ್ಷಿಬೆಳೆ ಅನುಕೂಲಕ್ಕಾಗಿ ವಿಜಯಪುರ ಮತ್ತು ಬಾಗಲಕೋಟಗಳಲ್ಲಿ 2850 ಟನ್ ಸಂಗ್ರಹಕ್ಕೆ ಕೋಲ್ಡ್ ಸ್ಟೋರೆಜ್‍ಗಳು ಲಭ್ಯವಿದ್ದು, ಉಚಿತವಾಗಿ ಇವುಗಳ ಸೇವೆ ಸರ್ಕಾರದಿಂದ ಲಭ್ಯವಾಗಲಿದ್ದು ರೈತರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ ಅವರು ದ್ರಾಕ್ಷಿ ಬೆಳೆ ಅನುಕೂಲಕ್ಕಾಗಿ ವೈನರಿ ಉತ್ಪಾದನೆಗೂ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ತಿಳಿಸಿದರು.
ರೈತರಿಗೆ ಯಾವುದೇ ರೀತಿಯ ತೊಂದರೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಯಾರಾದರೂ ರೈತರಿಗೆ ತೊಂದರೆ ನೀಡುವಂತಹ ಪ್ರಕರಣ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿ ವಿಭಾಗದಲ್ಲಿ ಅಗ್ರಿಲೆಂಡಿಂಗ್ ಹೆಚ್ಚಿದ್ದು, ಇತ್ತೀಚೆಗೆ ಸಾಲ ವಿತರಣೆಯಲ್ಲಿ ನೂತನ ತಂತ್ರಾಂಶ ಅಳವಡಿಸಿದ್ದರಿಂದ ರೈತರು ರಿಯಾಯಿತಿ ಪಡೆಯುವಲ್ಲಿ ತೊಂದರೆಯಾಗುತ್ತಿದ್ದು ಈ ಕುರಿತು ಸಹಕಾರ ಸಚಿವರು ಮತ್ತು ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರು ತೋಟಗಾರಿಕಾ ಬೆಳೆಗಳ ಹಾನಿ ಕುರಿತು ಮತ್ತು ಸೂಕ್ತ ಮಾರುಕಟ್ಟೆ ಒದಗಿಸಲು, ಶಾಸಕ ಶಿವಾನಂದ ಪಾಟೀಲ ಅವರು ಕೋಳಿ ಸಾಕಾಣಿಕೆದಾರರಿಗೆ ಸೂಕ್ತ ಅರಿವು ಮೂಡಿಸುವ ಮತ್ತು ಕೃಷಿ ಉತ್ಪಾದನಾ ಚಟುವಟಿಕೆಗಳಿಗೆ ನೀಡಲಾಗುವ ಸಾಲಕ್ಕೆ ಸಂಬಂಧಿಸಿದಂತೆ ರಿಯಾಯಿತಿ ಹಣ ರೈತರಿಗೆ ದೊರಕಿಸುವ ಬಗ್ಗೆ ಸಲಹೆ ನೀಡಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜ್ಯದಲ್ಲಿ ಕೋವಿಡ್-19 ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗುತ್ತಿರುವ ವದಂತಿಗಳ ಬಗ್ಗೆ ತೀವ್ರ ನಿಗಾ ವಹಿಸುವ ವ್ಯವಸ್ಥೆ ಜಾರಿಗೊಳಿಸಲು, ತೋಟಗಾರಿಕಾ ಬೆಳೆಗಳಾದ ಒಣದ್ರಾಕ್ಷಿ ಬೆಳೆಗೆ ಇ-ಟ್ರೇಡಿಂಗ್‍ಗೆ ಅವಕಾಶ ಕಲ್ಪಿಸಬೇಕು. ಬಿಳಿಜೋಳ ಖರೀದಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಶಾಸಕರಾದ ಶ್ರೀ ಸೋಮನಗೌಡ ಪಾಟೀಲ ಸಾಸನೂರ, ದೇವಾನಂದ ಚವ್ಹಾಣ, ವಿಧಾನ ಪರಿಷತ್ ಸದಸ್ಯ ಶ್ರೀ ಅರುಣ್ ಶಹಾಪೂರ, ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ambedkar image

LEAVE A REPLY

Please enter your comment!
Please enter your name here