ಮೂರು ದಿನದ ಬದುಕಿಗೆ ನೂರು ದಿನದ ಮನಸು

0
389
Web

ಮನುಷ್ಯನ ಎಲ್ಲ ಆಗು ಹೋಗುಗಳಿಗೆ ಮನುಷ್ಯನೇ ಕಾರಣ. ಸಕಲ ಜೀವ ರಾಶಿ ಕುಲವನ್ನು ನೋಡಿದಾಗ ಮನುಷ್ಯನೇ ಅತ್ಯಂತ ಸೋಮಾರಿ. ಈ ಮನುಷ್ಯ ತನ್ನ ಆತ್ಮ ನೆಮ್ಮದಿಗಾಗಿ ಈ ಸೃಷ್ಠಿಯಲ್ಲಿ ಅದೆಷ್ಟೋ ವಸ್ತುಗಳನ್ನು ದ್ವೇಷಿಸುತ್ತಾನೆ, ತಿರಸ್ಕರಿಸುತ್ತಾನೆ. ಇನ್ನು ಅದೆಷ್ಟು ವಸ್ತುಗಳನ್ನು ಪ್ರೀತಿಸುತ್ತಾನೆ, ಆರಂಭಿಸುತ್ತಾನೆ, ಪೂಜ್ಯ ಭಾವನೇ ತಾಳುತ್ತಾನೆ, ಭಕ್ತಿ ಭಾವದಿಂದ ಮುಕ್ತಿ ಮಾರ್ಗಕ್ಕೆ ಹೋಗಲು ಪ್ರಯತ್ನಿಸುತ್ತಾನೆ, ಇಷ್ಟಾದರು ನೆಮ್ಮದಿಯ ಬದುಕು ಇನ್ನು ಸಿಕ್ಕಿಲ್ಲ. ಅದು ಸಿಗುವುದಿಲ್ಲ. ಯಾಕೆಂದರೆ ನೆಮ್ಮದಿ, ಸಂತೋಷ, ಪರಮಾನಂದ, ಸಿಗಬೇಕಾದರೆ ಈ ಸೃಷ್ಠಿಯಲ್ಲಿ ಸಿಗುವ ಪ್ರತಿಯೊಂದನ್ನು ಅನುಭವಿಸಲು ಹಾಗೂ ಪ್ರೀತಿಯಿಂದ ಸ್ವೀಕರಿಸುವ ಮನೋಭಾವ ಬಂದಾಗ ನೆಮ್ಮದಿ ಸಿಗಲು ಸಾಧ್ಯ. ಮನುಷ್ಯ ಎಷ್ಟು ಬೇಗ ಉನ್ನತ ಹಂತ ತಲುಪುತ್ತ ನಡೆಯುತ್ತಿದ್ದಾನೆಯೋ ಅಷ್ಟೇ ವೇಗದಲ್ಲಿ ತನ್ನ ವಿನಾಶದ ಹಂತವನ್ನು ತಲುಪುತ್ತಾನೆ. ವೇದ, ಪುರಾಣ ಕಾಲದಿಂದ ಹಿಡಿದು ಇಂದಿನವರೆಗೂ ಎಲ್ಲ ಮಹಾತ್ಮರು, ಸತ್ಪುರುಷರು, ಯೋಗಿಗಳು, ತ್ಯಾಗಿಗಳು ಎಲ್ಲರೂ ಹೇಳಿದ್ದು ಒಂದೇ ಮಾತು. “ಬದುಕು ಮೂರು ದಿನದ ಸಂತಿ” ಎಂದು. ಈ ಮಾತು ಎಷ್ಟು ಸತ್ಯವಾಗಿದೆಯೋ ಅಷ್ಟನ್ನು ತಿಳಿದುಕೊಳ್ಳಲು ಮಾನವ ಸೋತಿದ್ದಾನೆ. ಈ ಮೂರು ದಿನದ ಬದುಕಿಗೆ, ಮನಸು ಕಾಣಬಾರದೆಲ್ಲ ಕನಸುಗಳನ್ನು ಕಾಣುತ್ತಿದೆ. ಮೂರು ದಿನ ನೆಮ್ಮದಿಯಾಗಿ ಬದುಕುವ ಬವಣೆಗೆ ಮೂರು ದಿನದ ಯೋಚನೆ ಮಾಡಬೇಕಾದ ಮನಸು, ನೂರು ದಿನದ ಆಸೆಗೆ ಲೆಕ್ಕ ಹಾಕಿದಾಗ ನೋವು, ನಿರಾಸೆ, ಭಯ, ದುಃಖ, ದುಗುಡ, ಚಿಂತೆ, ನಿರುತ್ಸಾಹ ಸಹಜವಾಗಿ ಮನುಷ್ಯನ ಅಂತರಂಗ ಪ್ರವೇಶಿಸುತ್ತದೆ. ಈ ಬದುಕಿನಲ್ಲಿ ನಾವು ಅಂದುಕೊಂಡಂತೆ ಯಾವುದು ನಡೆಯುವುದಿಲ್ಲ. ಹಾಗೂ ನಾವು ಅಂದುಕೊಂಡಂತೆ ನಡೆಯಲೂಬಾರದು. ಜಗತ್ತಿನ ಪ್ರತಿಯೊಬ್ಬ ಮೇಧಾವಿಯ ಜೀವನ ಕಂಡುಬರುತ್ತದೆ. ಮನುಷ್ಯನಲ್ಲಿ ಅಸಮಾಧಾನದ ಹೊಗೆ ಆಟವಾಡುತ್ತದೆ, ಅಂದಾಗ ಯಾವನು ತನ್ನ ಯೋಗ್ಯತೆಯನ್ನು ಮೀರಿ ಶ್ರಮಿಸುತ್ತಾನೆಯೋ ಅವನಲ್ಲಿ ಮಾತ್ರ ಅಸಮಾಧಾನದ ಹೊಗೆಯಾಡುತ್ತದೆ.

ಬದುಕಿರುವಷ್ಟು ಕಾಲ ತನ್ನೆಲ್ಲ ಆಸೆಗಳಿಗೆ ಒಂದು ಮಿತಿ ಹಾಕಿ ಬದುಕಿದ್ದರೆ, ಅವನಿಂದು ರಾಮನಕ್ಕಿಂತಲೂ ಶ್ರೇಷ್ಠವಾದ ವ್ಯಕ್ತಿಯಾಗುತ್ತಿದ್ದ. ರಾವಣ ತನ್ನ ಅಪೇಕ್ಷೆಯಂತೆ ಸೀತೆಯನ್ನ ಅಪಹರಿಸಿಕೊಂಡು ಬಂದ. ರಾಮ ತನ್ನ ಅಪೇಕ್ಷೆಯಂತೆ ಸೀತೆಯೊಂದಿಗೆ ಬಾಳುವುದಾಗಲಿಲ್ಲ. ಧುರ್ಯೊಧನ ತನ್ನ ಅಪೇಕ್ಷೆಯಂತೆ ಪಾಂಡವರನ್ನು ಕಾಡಿಗೆ ಅಟ್ಟಿದ. ಆದರೆ ತನ್ನಿಚ್ಚೆಯಂತೆ ಧುರ್ಯೊಧನನಿಗೆ ಯುದ್ದದಲ್ಲಿ ಪಾಂಡವರನ್ನು ಸೋಲಿಸಲಾಗಲಿಲ್ಲ. ಅದೇ ರೀತಿ ನಾವು ಆಧುನಿಕ ಕಾಲಕ್ಕೆ ಬಂದಾಗ ಶ್ರೀಲಂಕಾ ಸರಕಾರಕ್ಕೆ ಬಂದೋದಗಿದ ಆಪತ್ತಿಗಾಗಿ, ರಾಜೀವ ಗಾಂಧಿ ಆ ಸರಕಾರಕ್ಕೆ ಸೈನಿಕ ನೆರವು ನೀಡಿದ. ಆದರೆ ಅದೇ ಎಲ್.ಟಿ.ಟಿ.ಇ ಹಂತಕರಿಂದ ತನ್ನ ಪ್ರಾಣ ರಕ್ಷಿಸಿಕೊಳ್ಳಲಾಗಲಿಲ್ಲ. ತುಂಡು ಬಟ್ಟೆಯನ್ನುಟ್ಟು ತನ್ನ ಜೀವನದುದ್ದಕ್ಕೂ ಬ್ರಿಟಿಷರೊಂದಿಗೆ ಹೋರಾಡಿದ ಮಹಾತ್ಮ ಗಾಂಧಿಗೆ ತನ್ನನ್ನು ಕೊಲ್ಲಲು ಬಂದ ಒಬ್ಬ ಹಂತಕನೊಂದಿಗೆ ಹೋರಾಡುವುದಾಗಲಿಲ್ಲ. ಬದುಕು ಎಷ್ಟು ವಿಚಿತ್ರ ಅಲ್ಲವೇ? ಮನುಷ್ಯ ಒಂದು ದಿನ ಸಾಯಲೇಬೇಕು ಆ ಸಾವು ಸಂಭವಿಸುವುದರೊಳಗೆ ಸಾವಿಗಿಂತಲೂ ಘೋರವಾದ ಎಷ್ಟೊಂದು ಅನಾಹುತ ಘಟನೆಗಳು ನಡೆಯುತ್ತವೆ ಅಲ್ಲವೇ ? ಇಂಥ ಅನಾಹುತ ಘಟನೆಗಳಿಗೇನು ಕಾರಣ? ನಾವು ವಿಚಾರಿಸಬೇಕಾದ ವಿಧಾನದಲ್ಲಿ ಎಲ್ಲೋ ತಪ್ಪು ನಡೆದು ಹೋಗಿದೆ ಎಂದೇ ಅದರ ಅರ್ಥ.
ಒಂದು ದಿನ ಸಾಯಬೇಕಾದ ಮನುಷ್ಯ ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದೇ ಅಥವಾ ಸರಿಯಾಗಿ ವಿಚಾರಿಸದಿದ್ದರೆ, ಮೂರೇ ಮೂರು ದಿನದ ಬದುಕಿನಲ್ಲಿ ನೂರು ದಿನದ ಯಾತನೆ ಅನುಭವಿಸಲು ಸಿದ್ದವಾಗಿ ನಿಲ್ಲಬೇಕಾಗುತ್ತದೆ. ಇಷ್ಟೆಲ್ಲ ತಿಳಿದುಕೊಂಡಾದ ಬಳಿಕ ಜೀವನ ಹುಟ್ಟುವಾಗಲೇ ಕಷ್ಟದಿಂದ ಹುಟ್ಟುತ್ತದೆ. ಕಷ್ಟದಿಂದ ಹುಟ್ಟಿರುವ ಜೀವನವನ್ನು ಸುಖದಿಂದ ಕಳೆಯಬೇಕೆಂದು ಬಯಸುತ್ತೇವೆ. ಅದು ಸಾಧ್ಯವಿಲ್ಲ ಯಾಕೆಂದರೆ, ಭೂಮಿಗೆ ಬಂದ ಮೇಲೆ ಪ್ರತಿಯೊಂದನ್ನು ಅನುಭವಿಸಲು ಸಿದ್ದರಾಗಿ ನಿಲ್ಲಬೇಕಾಗುತ್ತದೆ. ಪ್ರತಿಯೊಬ್ಬ ಪ್ರತಿ ಕ್ಷಣವೂ ಸಾವಿನ ಕಡೆಗೆ ಸಮೀಪಿಸುತ್ತಾನೆ. ಬದುಕಿನ ಸತ್ಯ ಅಂದರೆ ಇದೆ ಇರಬಹುದಲ್ಲವೇ? ಯಾವನು ಮನಸ್ಸನ್ನು ಸತ್ಯ ಶೋಧನೆಯೆಡೆಗೆ ಒಯ್ಯುತ್ತಾನೆಯೋ ಅವನಿಗೆ ಮಾತ್ರ ಶಾಂತಿ ಸಿಗುತ್ತದೆ. ಅವನು ಮಾತ್ರ ಮಾಯಾ ಲೋಕದಿಂದ ಹೊರಗೆ ಬರಲು ಸಾಧ್ಯವಿದೆ. ಜೀವನದ ಸತ್ಯ ಅರ್ಥವಾದಾಗ ಈ ಲೋಕವೆಲ್ಲ ಕ್ಷಣಿಕವೆನಿಸುತ್ತದೆ. ಯಾವಾಗ ಈ ಲೋಕ ಕ್ಷಣಿಕವೆನಿಸುತ್ತದೆಯೊ ಆಗ ಮನಸ್ಸು ನಿರ್ಮಲವಾಗಿರುತ್ತದೆ. ಮನಸ್ಸು ನಿಯಂತ್ರಣದಲ್ಲಿರುತ್ತದೆ. ಅದು ನಮ್ಮ ನಿಯಂತ್ರಣದಲ್ಲಿರುತ್ತದೆ. ಮನಸ್ಸು ನಿಯಂತ್ರಣದಲ್ಲಿದ್ದಾಗ ಮೂರು ದಿನದ ಬದುಕಿಗೆ ಒಂದು ಬೆಲೆ ಇರುತ್ತದೆ.
ಎಸ್.ಪಿ.ಯಂಭತ್ನಾಳ, ಸಾಹಿತಿ

LEAVE A REPLY

Please enter your comment!
Please enter your name here