Vijayapura Lokayukta News: ಖಾಲಿ ಪೇಪರ್‌ಗೆ ಸಹಿ ಪಡೆದ ಸರ್ವೇಯರ್ ವಿರುದ್ಧ ಕೇಸ್ – ನ್ಯಾ. ಫಣೀಂದ್ರ

Vijayapura Lokayukta News – ಉಪಲೋಕಾಯುಕ್ತ ನ್ಯಾ. ಕೆ.ಎಸ್. ಫಣೀಂದ್ರ

ವಿಜಯಪುರ: Vijayapura Lokayukta News: ಜಮೀನು ಮಾಲೀಕರಿಂದ ಖಾಲಿ ಪೇಪರ್ ಮೇಲೆ ಸಹಿ ಪಡೆದು, ತಮಗೆ ಬೇಕಾದ ರೀತಿಯಲ್ಲಿ ಮಹಜರ್ ಬರೆದುಕೊಳ್ಳುವ ದುರುದ್ದೇಶದಿಂದ ಕೆಲವು ಸರ್ವೇಯರ್‌ಗಳು ಕಾರ್ಯನಿರ್ವಹಿಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಈ ಸಂಬಂಧ ಓರ್ವ ಸರ್ವೇಯರ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಸಮಗ್ರ ತನಿಖೆ ನಡೆಸಲು ಸಿದ್ಧವಿರುವುದಾಗಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎಸ್. ಫಣೀಂದ್ರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕಡತಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಸರ್ವೇಯರ್ ಒಬ್ಬರು ಜಮೀನು ಮಾಲೀಕರಿಂದ ಖಾಲಿ ಪೇಪರ್ ಮೇಲೆ ಸಹಿ ಪಡೆದಿರುವುದು ಕಂಡುಬಂದಿದೆ. ಎರಡು ಮೂರು ಘಟನೆಗಳಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಸಂಬಂಧಿಸಿದ ಸರ್ವೇಯರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿರುವುದಾಗಿ ಹೇಳಿದರು.

Vijayapura Lokayukta News: ಸರ್ಕಾರಿ ಶಾಲೆಯ ಮಕ್ಕಳಿಗೆ ಜೀವಭಯ!

ವಿಜಯಪುರ ನಗರದ ಸರ್ಕಾರಿ ಶಾಲೆಯೊಂದರಲ್ಲಿ 24 ಮಕ್ಕಳು ಜೀವಭಯದಲ್ಲಿಯೇ ಕುಳಿತು ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಗಂಭೀರ ಸ್ಥಿತಿಯನ್ನು ಗಮನಿಸಿ, ತಕ್ಷಣವೇ ತರಗತಿಗಳನ್ನು ಪಕ್ಕದಲ್ಲಿರುವ ಸೇವಾದಳದ ಭವನಕ್ಕೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ ಎಂದು ನ್ಯಾ. ಫಣೀಂದ್ರ ತಿಳಿಸಿದರು.

ವಿದ್ಯಾರ್ಥಿ ವಸತಿ ನಿಲಯಗಳ ಅವ್ಯವಸ್ಥೆಗೆ ಅಧಿಕಾರಿಗಳಿಗೆ ತರಾಟೆ

ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಅಲ್ಲಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡು ತಾನೇ ದಂಗಾಗಿರುವುದಾಗಿ ತಿಳಿಸಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಹೇಳಿದರು.

ವಸತಿ ನಿಲಯಗಳಲ್ಲಿ ಸೊಳ್ಳೆ ಹಾಗೂ ತಿಗಣೆಗಳ ಕಾಟ, ಸುಣ್ಣ-ಬಣ್ಣ ಕಾಣದ ಗೋಡೆಗಳು ಸೇರಿದಂತೆ ಹಲವು ಅವ್ಯವಸ್ಥೆಗಳಿವೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಚರ್ಚಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸೂಕ್ತ ಸ್ಥಳದಲ್ಲಿ ಬಾಡಿಗೆ ಆಧಾರದ ಮೇಲೆ ಕಟ್ಟಡ ಅಥವಾ ನಿವೇಶನ ಪಡೆದು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಎರಡು ದಿನಗಳಲ್ಲಿ 115 ಪ್ರಕರಣಗಳ ವಿಚಾರಣೆ, 81 ಇತ್ಯರ್ಥ

ವಿಜಯಪುರದಲ್ಲಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 115 ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 81 ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ ಎಂದು ಉಪಲೋಕಾಯುಕ್ತ ನ್ಯಾ. ಕೆ.ಎಸ್. ಫಣೀಂದ್ರ ಮಾಹಿತಿ ನೀಡಿದರು.

ವೃದ್ಧಾಶ್ರಮಗಳಿಗೆ ಸರ್ಕಾರಿ ಕಟ್ಟಡ ಅಥವಾ ನಿವೇಶನಕ್ಕೆ ಸೂಚನೆ

ಮಡಿಕೇರಿ ಹಾಗೂ ಕೊಲ್ಹಾರ ಮಾದರಿಯಲ್ಲಿ ವಿಜಯಪುರದ ವೃದ್ಧಾಶ್ರಮಗಳಿಗೂ ಸರ್ಕಾರಿ ಕಟ್ಟಡ ಅಥವಾ ಸರ್ಕಾರಿ ನಿವೇಶನ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ನ್ಯಾ. ಫಣೀಂದ್ರ ತಿಳಿಸಿದರು.

ಸರ್ಕಾರಿ ಅನುದಾನದ ಸಹಯೋಗದಲ್ಲಿ ನಡೆಯುತ್ತಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಅನೇಕ ವೃದ್ಧರು ವಾಸಿಸುತ್ತಿರುವುದು ಕಂಡುಬಂದಿದೆ. ಅಲ್ಲಿರುವ ಪ್ರತಿಯೊಬ್ಬರಿಗೂ ನೋವಿನ ಕಥೆಯಿದೆ. ಸರ್ಕಾರದಿಂದ ವಾರ್ಷಿಕ 12 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತಿದ್ದರೂ ವೃದ್ಧಾಶ್ರಮದ ನಿರ್ವಹಣೆಗೆ ಅದು ಸಾಕಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ.

ಇದಲ್ಲದೆ, ವೃದ್ಧಾಶ್ರಮದ ಕಟ್ಟಡವೂ ಬಾಡಿಗೆ ಆಧಾರದಲ್ಲಿದೆ. ಮಡಿಕೇರಿ ಹಾಗೂ ಕೊಲ್ಹಾರದಲ್ಲಿ ವೃದ್ಧಾಶ್ರಮಗಳಿಗೆ ಸರ್ಕಾರಿ ಕಟ್ಟಡ ಅಥವಾ ನಿವೇಶನ ಒದಗಿಸಲು ತಾವೇ ಮುತುವರ್ಜಿ ವಹಿಸಿದ್ದಾಗಿ ತಿಳಿಸಿದ ಅವರು, ಇದೇ ಮಾದರಿಯಲ್ಲಿ ವಿಜಯಪುರದ ವೃದ್ಧಾಶ್ರಮಗಳಿಗೂ ಸರ್ಕಾರಿ ಕಟ್ಟಡ ಅಥವಾ ನಿವೇಶನ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದರು.

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ

ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ಹಾಗೂ ಇನ್ನಷ್ಟು ಪರಿಣಾಮಕಾರಿಯಾದ ಕಾಯ್ದೆ ರೂಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎಸ್. ಫಣೀಂದ್ರ ತಿಳಿಸಿದರು.

ಅಧಿಕಾರಿಗಳು ಎಷ್ಟೇ ದೊಡ್ಡ ತಪ್ಪು ಎಸಗಿದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ದೊರೆಯಬೇಕು. ಈ ನಿಟ್ಟಿನಲ್ಲಿ 21ಕ್ಕೂ ಹೆಚ್ಚು ಅಧಿಕಾರ ಬಲದ ಪ್ರಸ್ತಾವನೆಗಳನ್ನು ಒಳಗೊಂಡಂತೆ ಲೋಕಾಯುಕ್ತ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಈ ಪ್ರಸ್ತಾವನೆಗಳನ್ನು ಅನುಷ್ಠಾನಕ್ಕೆ ತರುವ ವಿವೇಚನೆ ಸರ್ಕಾರಕ್ಕೆ ಬಿಟ್ಟದ್ದು ಎಂದು ಅವರು ತಿಳಿಸಿದರು.

Share the Post:

ಇತ್ತೀಚಿನ ಸುದ್ದಿಗಳು

error: Content is protected !!