ಸಿಂದಗಿ ಶಾಸಕ ಎಮ್.ಸಿ. ಮನಗೂಳಿ ಅವರ ನಿಧನಕ್ಕೆ ಗಣ್ಯರಿಂದ ತೀವ್ರ ಸಂತಾಪ

0
175

ವಿಜಯಪುರ:ಜ.28: ಮಾಜಿ ಸಚಿವ, ವಿಜಯಪುರ ಜಿಲ್ಲೆಯ ಸಿಂದಗಿ ಶಾಸಕರಾದ ಶ್ರೀ ಎಂ.ಸಿ.ಮನಗೂಳಿ ಅವರ ನಿಧನಕ್ಕೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ ಅವರು ಕೃಷಿ ಕುಟುಂಬದಿಂದ ಬಂದಿದ್ದು, ಜಿಲ್ಲೆಯ ಕೃಷಿ ಹಾಗೂ ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ ಹೋರಾಟ ನಡೆಸುವ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ.

ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಶ್ರೀ ಮನಗೂಳಿ ಅವರನ್ನು ಸದನದ ಒಳಗೂ ಹಾಗೂ ಹೊರಗಡೆಯೂ ಮಾವ ಎಂದೇ ಸಂಭೋದಿಸುತ್ತಿರುವುದಾಗಿ ತಿಳಿಸಿದ ಡಿಸಿಎಂ, ಅವರೊಂದಿಗೆ ತಾವು ಅವಿನಾಭಾವ ಸಂಬಂಧ ಹೊಂದಿದ್ದು, ಅವರ ನಿಧನದಿಂದ ದಿಗ್ಭ್ರಾಂತ ನಾಗಿದ್ದೇನೆ. ಅವರ ನಿಧನದಿಂದ ರಾಜ್ಯವು ಓರ್ವ ಹಿರಿಯ, ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಉಪ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಚಿವ ಸಿ.ಸಿ.ಪಾಟೀಲ ತೀವ್ರ ಸಂತಾಪ

ಮಾಜಿ ಸಚಿವರು, ಸಿಂದಗಿ ವಿಧಾನ ಸಭಾ ಕ್ಷೇತ್ರದ ಶಾಸಕರು, ಹಿರಿಯ ಮುತ್ಸದ್ಧಿ ರಾಜಕಾರಣಿಗಳಾಗಿದ್ದ ದಿವಂಗತ ಎಮ್. ಸಿ. ಮನಗೂಳಿ ಅವರ ನಿಧನಕ್ಕೆ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವರಾದ ಶ್ರೀ ಸಿ.ಸಿ.ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ದಿವಂಗತರು ಸುರ್ಧೀರ್ಘವಾದ ತಮ್ಮ ರಾಜಕೀಯ ಜೀವನದಲ್ಲಿ ಸಮಾಜಪರ ಕಾರ್ಯಗಳ ಜೊತೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ತೋಟಗಾರಿಕಾ ಸಚಿವರು ಮತ್ತು ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಹಿರಿಯ, ಮುತ್ಸದ್ಧಿ ರಾಜಕಾರಣಿಗಳಾಗಿದ್ದ ಅವರು ಎಲ್ಲರೊಂದಿಗೆ ಅತ್ಯಂತ ಸ್ನೇಹಮಯರಾಗಿದ್ದು, ಸರಳ, ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದರು. ಇವರ ನಿಧನದಿಂದ ಅವರ ಕುಟುಂಬ ವರ್ಗಕ್ಕೆ, ಕ್ಷೇತ್ರದ ಜನತೆಗೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.

ಇಂತಹ ಅಪರೂಪದ ನಾಯಕರ ಅಗಲಿಕೆಯಿಂದ ಅವರ ಅಭಿಮಾನಿಗಳಿಗೆ, ಕುಟುಂಬ ವರ್ಗದವರಿಗೆ, ಬಂಧು-ಬಳಗದವರಿಗೆ ತೀವ್ರ ಆಘಾತ ಉಂಟುಮಾಡಿದ್ದು, ಭಗವಂತನು ದುಃಖದಲ್ಲಿರುವ ಅವರ ಕುಟುಂಬ ವರ್ಗಕ್ಕೆ ದುಃಖಭರಿಸುವ ಶಕ್ತಿ ನೀಡಲಿ ಮತ್ತು ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲೆಂದು ಪ್ರಾರ್ಥಿಸುವದಾಗಿ ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಎಮ್.ಸಿ. ಮನಗೂಳಿ ಅವರ ನಿಧನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ತೀವ್ರ ಸಂತಾಪ

ಮಾಜಿ ಸಚಿವರು, ಸಿಂದಗಿ ವಿಧಾನ ಸಭಾ ಕ್ಷೇತ್ರದ ಶಾಸಕರು, ಹಿರಿಯ ಮುತ್ಸದ್ಧಿ ರಾಜಕಾರಣಿಗಳಾಗಿದ್ದ ದಿವಂಗತ ಎಮ್. ಸಿ. ಮನಗೂಳಿ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಂಡ ಅತ್ಯಂತ ಶ್ರೇಷ್ಠ ಮುತ್ಸದ್ಧಿ ಹಾಗೂ ಅಜಾತಶತ್ರುವೆಂದೇ ಖ್ಯಾತರಾಗಿದ್ದ ಶ್ರೀ ಮಲ್ಲಪ್ಪ ಚನ್ನವೀರಪ್ಪ ಮನಗೂಳಿ ಅವರ ನಿಧನದಿಂದ ರಾಜಕಾರಣದ ದೃವತಾರೆಯೊಂದು ಅಸ್ತಂಗತವಾದಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ 1937 ರಲ್ಲಿ ಜನಿಸಿದ ಶ್ರೀಯುತರದು ಬಹುಮುಖ ವ್ಯಕ್ತಿತ್ವ. 1994ರಲ್ಲಿ ಪ್ರಪ್ರಥಮ ಬಾರಿಗೆ ಸಿಂದಗಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಂತರ 2018ರಲ್ಲಿ ತೋಟಗಾರಿಕೆ ಇಲಾಖಾ ಸಚಿವರಾಗಿ ಹೀಗೆ ವಿವಿಧ ಹುದ್ದೆಗಳಲ್ಲಿ ಹಲವು ದಶಕಗಳಿಂದಲೂ ಹೆಚ್ಚು ಕಾಲ ಸಕ್ರಿಯವಾಗಿದ್ದರು.

ತಮ್ಮ ಸರಳ ವ್ಯಕ್ತಿತ್ವದಿಂದ ಇಡೀ ರಾಜ್ಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು. ಸಿಂದಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ.

ಇಂತಹ ಅಪರೂಪದ ನಾಯಕರ ಅಗಲಿಕೆಯಿಂದ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಅಪಾರ ಅಭಿಮಾನಿಗಳಿಗೆ, ಕುಟುಂಬದವರಿಗೆ, ಬಂಧು-ಬಾಂಧವರಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


ambedkar image

LEAVE A REPLY

Please enter your comment!
Please enter your name here