ಸಮಗ್ರ ನೀರಾವರಿಗೆ ಮಠಾಧೀಶರ ಹೋರಾಟ; ಪಕ್ಷಾತೀತವಾಗಿ ಹೋರಾಟ ರೂಪಿಸಲು ಚಿಂತನೆ

0
202

ವಿಜಯಪುರ ಪೆ.06: ಪ್ರತಿಯೊಂದು ಜಿಲ್ಲೆಯ ಭೌಗೋಳಿಕವಾಗಿ ಮೂರು ಕಾಲ ಅನುಭವಿಸುತ್ತದೆ. ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ. ಆದರೆ ವಿಜಯಪುರ ಜಿಲ್ಲೆ ಈ ಮೂರು ಕಾಲಗಳ ಜತೆಗೆ ನಿರಂತರವಾಗಿ ಬೇಸಿಗೆ ಕಾಲವನ್ನೂ ಅನುಭವಿಸುತ್ತಿದೆ. ಹೀಗಾಗಿ ಜಿಲ್ಲೆಯ ಸಮಗ್ರ ನೀರಾವರಿಗೆ ಒತ್ತಾಯಿಸಿ ಜಿಲ್ಲೆಯ ಸಮಸ್ತ ಮಠಾಧೀಶರು ನಿರ್ಧರಿಸಿದ್ದಾರೆ.

ತಾಲೂಕಿನ ಪ್ರತಿಷ್ಠಿತ ಕನ್ನೂರ ಗುರುಮಠದಲ್ಲಿ ನಡೆದ ಜಿಲ್ಲೆಯ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಈ ಕುರಿತು ಸುಮಾರು 50ಕ್ಕೂ ಹೆಚ್ಚು ಮಠಾಧೀಶರು ನಿರ್ಣಯ ಕೈಗೊಂಡಿದ್ದಾರೆ. ಕನ್ನೂರ ಗುರುಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಹಾಗೂ ಕೊರೊನಾ ಬಳಿಕ ಮಠಗಳ ಅಭಿವೃದ್ಧಿ ಕುರಿತು ಸುಧೀಘ್ರ ಚರ್ಚೆ ನಡೆಸಲಾಯಿತು.

ಜಿಲ್ಲೆ ನಿರಂತರ ಬರ ಅನುಭವಿಸುತ್ತಿದೆ. ಬರಗಾಲ ಮತ್ತು ಹಿಂದುಳಿದ ಜಿಲ್ಲೆ ಎಂಬ ಕಾರಣಕ್ಕಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಜಿಲ್ಲೆಯನ್ನು ಕಡೆಗಣಿಸುತ್ತಿರುವು ಸರಿಯಲ್ಲ. ಇತಿಹಾಸ ಪ್ರಸಿದ್ಧ ವಿಜಾಪುರ ಜಿಲ್ಲೆಯು ಸಂತ-ಶರಣ- ದಾರ್ಶನಿಕರನ್ನು ಇಡೀ ನಾಡಿಗೆ ನೀಡಿದೆ ಎಂದು ಮಠಾಧೀಶರು ಅಭಿಮಾನ ವ್ಯಕ್ತಪಡಿಸಿದರು.
ಸ್ವತಂತ್ರ ಪೂರ್ವದಲ್ಲಿ ಅನೇಕ ಶತಮಾನಗಳ ಹಿಂದೆ ಅನೇಕ ವಿಶ್ವವಿದ್ಯಾಲಯ ಮೂಲಕ ಅಕ್ಷರ ಜ್ಞಾನ ನೀಡಿರುವುದು ವಿಜಯಪುರ ಜಿಲ್ಲೆ. ಸಾಮರಸ್ಯ ಭಾವೈಕ್ಯತೆ ಜಾತಿ- ಮತ- ಪಂಥ- ಧರ್ಮಗಳನ್ನು ಮೀರಿ ಪರಸ್ಪರ ಸಹಬಾಳ್ವೆಯ ಬದುಕು, ಜೀವನವನ್ನು ನಡೆಸುವ ಆದರ್ಶ ಮತ್ತು ಮಾದರಿಯ ಜಿಲ್ಲೆಯಾಗಿದೆ ಎಂದರು.

ಸತತ ಬರದಿಂದ ಬಳಲುತ್ತಿರುವ ಜಿಲ್ಲೆಯಲ್ಲಿ 1 ಸಾವಿರದಿಂದ 1500 ಅಡಿ ಕೊಳವೆ ಬವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಭವಿಷ್ಯತ್ತಿನ ದಿನಮಾನದಲ್ಲಿ ನೀರು ಸಿಗುವದು ತುಂಬಾ ಕಷ್ಷಕರವಾಗುತ್ತದೆ. ನೀರು ಇಲ್ಲದೆ ರೈತರು ಮತ್ತು ಸಾರ್ವಜನಿಕರ ಬದುಕು ದುಸ್ತರವಾಗಬಹುದು. ರೈತರು ಬೆಳೆಯುವ ಸಮಯದಲ್ಲಿ ನೀರಿನ ಅಭಾವದಿಂದ ಬೆಳ ಬೆಳೆಯಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಮಕ್ಕಳು, ಪಟ್ಟಣಗಳ ಕಡೆ ದುಡಿಯಲು ಗುಳೇ ಹೋಗುತ್ತಿದ್ದಾರೆ. ಅಂತಹ ಯುವಕರು ದಾರಿ ತಪ್ಪುತ್ತಿರುವುದು ಬೇಸರದ ಸಂಗತಿ ಎಂದು ಹಲವು ಶ್ರೀಗಲು ಖೇದ ವ್ಯಕ್ತಪಡಿಸಿದರು.

ಈ ಎಲ್ಲ ವಿಚಾರಗಳನ್ನು ಒಳಗೊಂಡು ಪ್ರಥಮವಾಗಿ ಜಿಲ್ಲೆಯ ಸಮಗ್ರ ನೀರಾವರಿ, ಎಡದಂಡೆ ಮತ್ತು ಬಲದಂಡೆ ಕಾಲುವೆ ನಿರ್ಮಿಸಿ, ಸಮಗ್ರ ನೀರಾವರಿ ಕಲ್ಪಿಸುವ ಮೂಲಕ ರೈತರಿಗೆ ವರ್ಷಪೂರ್ತಿ ಅವರ ಭೂಮಿಗೆ ನೀರು ಕಲ್ಪಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಮಠಾಧೀಶರ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು. ಜಿಲ್ಲೆಯ ಜಿಲ್ಲೆಯ ಹೊಸ ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಬೇಕು. ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು. ನದಿಗಳ ಜೋಡಣೆ ಮತ್ತು ನದಿಗಳ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು.

ವಿಜಾಪುರ ಜಿಲ್ಲೆಯ ಮಠಾಧೀಶರ ಒಕ್ಕೂಟ ಕೈಗೊಂಡ ನಿರ್ಣಯಗಳು

  • ಜಿಲ್ಲೆಯ ಸಮಗ್ರ ನೀರಾವರಿಗೆ ಒತ್ತಾಯಿಸಿ ಹೋರಾಟ ರೂಪಿಸಲು ಪಕ್ಷಾತೀತ ಜನಪ್ರತಿನಿಧಿಗಳ ಸಭೆ.
  • ಜಾತಿ -ಧರ್ಮ- ಮತ ಪಂಥಗಳ ಮೀರಿ ಯುವಕರಿಗೆ ಸನ್ಮಾರ್ಗದ ಶಿಬಿರ ಹಮ್ಮಿಕೊಂಡು, ಸದ್ಗುಣಗಳ ದೀಕ್ಷೆ. ದುರ್ಗುಣಗಳ ಭಿಕ್ಷೆ ಅಭಿಯಾನಕ್ಕ ಚಾಲನೆ ನೀಡವದು.
  • ಮಠಗಳು ಮತ್ತು ಮಠಾಧೀಶರ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಭಕ್ತರ ವಂಶಸ್ಥರು ಹಸ್ತಕ್ಷೇಪ ಮಾಡಬಾರದು. ಮಠಗಳ ಬೆಳವಣಿಗೆಗೆ ಸಹಾಯ-ಸಹಕಾರ ಸಲಹೆ-ಸೂಚನೆ ನೀಡಬಹುದು.
  • ಜಿಲ್ಲೆಯ ಮಠಾಧೀಶರ ಒಕ್ಕೂಟದ ಸಭೆಯನ್ನು ಇಚಿಡಿ ತಾಲೂಕಿನ ಶಿರಶ್ಯಾಡದ ಹಿರೇಮಠ ಸಂಸ್ಥಾನ ಮಠದಲ್ಲಿ ಏಪ್ರಿಲ್ 14ರಂದು ನಡೆಸಲು ನಿರ್ಧಾರ.

ಆ ಮೂಲಕ ನದಿಗಳಲ್ಲಿ ವರ್ಷವಿಡೀ ನೀರು ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿ ಹಳ್ಳಿ ಹಳ್ಳಿಗೆ ಕೆರೆಗಳ ನಿರ್ಮಾಣ ಮಾಡಬೇಕು. ಈಗಿರುವ ಕೆರೆಗಳ ಹೂಳೆತ್ತಬೇಕು. ವರ್ಷಪೂರ್ತಿ ಕುಡಿಯಲು ಜನರಿಗೆ-ಜಾನುವಾರಗಳಿಗೆ ನೀರು ಸಿಗುವಂತಾಗಬೇಕು. ರೈತಾಪಿ ವರ್ಗವು ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಬೇಕಾಗಿದೆ. ಹನಿ ನೀರಾವರಿಯ ಜೊತೆಯಲ್ಲಿ ಮಳೆಯ ನೀರಿನ ಸಂಗ್ರಹವನ್ನು ತಮ್ಮ ಹೊಲಗಳಲ್ಲಿ ಪ್ರತಿಯೊಬ್ಬ ರೈತ ಮಾಡಬೇಕು. ರಾಸಾಯನಿಕ ಅತಿ ಹೆಚ್ಚು ಬಳಸದೇ ಕೃಷಿ ಪದ್ಧತಿ ಕೈಗೊಳ್ಳಲು ಸರಕಾರ ಮತ್ತು ಕೃಷಿ ವಿದ್ಯಾಲಯಗಳು ಪ್ರೋತ್ಸಾಹ-ಮಾರ್ಗದರ್ಶನ ನೀಡಬೇಕು ಎಂದು ಒತ್ತಾಯಿಸಿದರು.

ಯುವ ಪೀಳಿಗೆ ಆಚಾರ-ವಿಚಾರ ಸಂಸ್ಕಾರ ಸಂಸ್ಕೃತಿಯಿಂದ ದೂರ ಇರುವುದು ಇತ್ತೀಚಿನ ಬೆಳವಣಿಗೆ ಖೇದಕರವಾಗಿದೆ. ಇವತ್ತಿನ ಯುವಪೀಳಿಗೆಗೆ ಸಂಸ್ಕಾರಯುತವಾದ ಗುರುಕುಲ ಪದ್ಧತಿಯ ಶಿಕ್ಷಣ ನೀಡಬೇಕು. ಆ ಮೂಲಕ ಸದೃಢವಾದ ಯುವ ಸಮಾಜ ಕಟ್ಟಿ ಬೆಳೆಸಲು ಸಾಧ್ಯ. ಪ್ರತಿ ಮೂರು ತಿಂಗಳಿಗೊಮ್ಮೆ ಯುವಕರಿಗೆ ಸನ್ಮಾರ್ಗದ ಶಿಬಿರವನ್ನು 5 ದಿನಗಳವರೆಗೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಪ್ರಾರಂಭಿಸಲು ನಿರ್ಣಯ ಕೈಗೊಳ್ಳಲಾಯಿತು.

ಮಠಗಳಿಂದ ಧಾರ್ಮಿಕ ಕೇಂದ್ರಗಳಿಂದ ಉಚಿತ ಪ್ರಸಾದ ನಿಲಯ, ಬಡ ಹಿಂದುಳಿದ ರೈತಾಪಿ ವರ್ಗದವರ ಮಕ್ಕಳಿಗೆ ಉತ್ತಮ ಶಿಕ್ಷಣ, ಉನ್ನತ ವ್ಯಾಸಂಗಕ್ಕೆ ಸಹಾಯ-ಸಹಕಾರ, ಮಾರ್ಗದರ್ಶ ನೀಡಲು ನಿರ್ಧರಿಸಲಾಯಿತು. ಕನ್ನೂರ ಗುರುಮಠದಲ್ಲಿ ಏರ್ಪಡಿಸಿದ್ದ ಜಿಲ್ಲೆಯ ಮಠಾಧೀಶರ ಒಕ್ಕೂಟದ ಸಭೆಗೆ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ಮಠಾಧೀಶರಿಗೆ ಗ್ರಾಮಸ್ಥರು ತಳಿರು-ತೋರಣಗಳಿಂದ ಸ್ವಾಗತಿಸಿದರು.
ಕನ್ನೂರ ಗುರುಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಬಂಥನಾಳ, ಸಿಂದಗಿ ಸಾರಂಗಮಠ, ಜಾಲಿಹಳ್ಳಿ, ಮ್ಯಾಗನಗೇರಿ, ನಾಗಠಾಣ, ಹತ್ತಳ್ಳಿ, ತಾರಪುರ, ಆಲಮೇಲ, ಮನಗೂಳಿ, ಮುತ್ತಗಿ, ಬೊಮ್ಮನಹಳ್ಳಿ, ಗುಂಡಕನಾಳ, ಶಿರಶ್ಯಾಡ, ಬಸವನಬಾಗೇವಾಡಿ, ಯಂಕಂಚಿ, ಕನ್ನೂಳ್ಳಿ, ದೇವರಹಿಪ್ಪರಗಿಯ ಸದಯ್ಯನಮಠ, ಪರದೇಶಿಮಠ, ಬಸವನಹಟ್ಟಿ, ಕರಭಂಟನಾಳ, ದೇವೂರು, ಬೋರಗಿ, ತಿಕೋಟಾ, ಢವಳಗಿ, ಚಿಮ್ಮಲಗಿ, ಸಾಸನೂರು, ಇಂಚಗೇರಿ, ಆಲಮೇಲ ಅರ್ಜುಣಗಿ ಮಠ, ಆಲ್ಲಾಪುರ, ಮಸೂತಿ, ಕುಮಸಗಿ, ಗೋಲಗೇರಿ, ಕುಂಟೋಜಿ ರುದ್ರಮುನಿ, ಇಂಗಳೇಶ್ವರ, ಹಿರೋಳ್ಳಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.


ambedkar image

LEAVE A REPLY

Please enter your comment!
Please enter your name here