ಮನುಷ್ಯ ಹುಟ್ಟಿನಿಂದ ಸಾಯುವ ತನಕ ಏನೆಲ್ಲ ಅನುಭವಿಸಬೇಕಾಗುತ್ತದೆ. ಮನುಷ್ಯ ಬದುಕಿರುವಷ್ಟು ಕಾಲ ನೆಮ್ಮದಿಯಿಂದ ಬದುಕಬೇಕೆನ್ನುತ್ತಾನೆ. ಆದರೆ ಈ ನೆಮ್ಮದಿ ಸಾವಿನ ಕೊನೆಯ ತನಕ ಸಿಗುವುದೇ ಇಲ್ಲ. ಆಗಾಗ ಒಂದಿಷ್ಟು ಸಿಕ್ಕಂತೆ ಮಾಡಿ ಹೊರಟು ಹೋಗುತ್ತದೆ. ಆದರೆ ಬದುಕಿರುವ ತನಕ ಜೀವನ ಸಫಲತೆಯ ಹಾದಿಯಲ್ಲಿ ಮುನ್ನಡೆಯಬೇಕು. ನಮ್ಮ ಪ್ರಯತ್ನ ಸಫಲತೆಯ ಹಾದಿಯಲ್ಲಿ ಮುಂದುವರೆದರೆ, ಮನುಷ್ಯನಿಗೆ ಬೇಸರವಾಗಲಿ, ಆಲಸ್ಯವಾಗಲಿ ಸಮೀಪ ಸುಳಿಯುವುದಿಲ್ಲ. Motivational

ಕೆಲವೊಂದು ಸಲ ನಾವು ಎಷ್ಟೇ ಕ್ರೀಯಾಶೀಲವಾಗಿದ್ದರೂ, ಬೇಸರೆಂಬ ಬ್ಯಾನಿ ನಮ್ಮನ್ನು ಕಾಡುತ್ತಲೇ ಇರುತ್ತದೆ. ಬೇಸರ ಎಂಬುದು ದೊಡ್ಡ ರೋಗ. ಈ ರೋಗ ಪ್ರತಿಯೊಬ್ಬರಿಗು ಅಂಟಿಕೊಂಡಿರುತ್ತದೆ. ಈ ರೋಗ ಬಂದಾಗ ಯಾವುದೇ ಕೆಲಸ ಮಾಡಬೇಕೆಂದರೂ, ಮಾಡುವುದಾಗುವುದಿಲ್ಲ. ನಾವು ಕೆಲಸದಿಂದ ದೂರ ಉಳಿಯುತ್ತ ಹೋದರೆ, ಈ ಬೇಸರ ಎಂಬ ರೋಗವು ಮತ್ತಷ್ಟು ಉಲ್ಬಣಗೊಳ್ಳುವುದು. ಒಂದು ಕ್ಷಣದಲ್ಲಿ ಮಾಡಿ ಮುಗಿಸುವ ಕೆಲಸಗಳು ದಿನಗಟ್ಟಲೆ ತೆಗೆದುಕೊಳ್ಳುತ್ತವೆ.
ಇದನ್ನೂ ಓದಿ: ಮೂರು ದಿನದ ಬದುಕಿಗೆ ನೂರು ದಿನದ ಮನಸು
ಬೇಸರ ಎಂಬ ಕಾಯಿಲೆ ಹೀಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯಿಂದ ಈ ಕಾಯಿಲೆ ಅಂಟಿಕೊಳ್ಳುವುದು. ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ, ಕೆಲವರಿಗೆ ಪದೇ ಪದೇ ಒಂದೇ ಕೆಲಸ ಮಾಡುವುದರಿಂದ, ಕೆಲವರಿಗೆ ಪದೇ ಪದೇ ಊರುರು ಅಲೆದಾಡುವುದರಿಂದ, ಇನ್ನು ಕೆಲವರಿಗೆ ಜೀವನದಲ್ಲಿ ಏನನ್ನು ಸಾಧಿಸುವುದಾಗಲಿಲ್ಲ ಎಂಬ ಕೊರಗಿನಿಂದ, ಒಟ್ಟಾರೆ ಹೇಳಬೇಕೆಂದರೆ, ಯಾವುದೇ ಕಾಯಿಲೆ ಅಂಟಿಕೊಳ್ಳುವುದು. ಇದು ಅಂಟಿಕೊಂಡರೆ ಕೆಲವರಿಗೆ ಕ್ಷಣದಲ್ಲಿಯೇ ಮಾಯವಾಗಿ ಹೋಗುವುದು. ಇನ್ನು ಕೆಲವರಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. Motivational
ಮನುಷ್ಯನಿಗೆ ಬೇಸರಬೇಕು. ಆದರೆ ಅದಕ್ಕೊಂದು ಮಿತಿ ಇರಬೇಕು. ನಾವು ಪ್ರತಿಯೊಂದು ಕೆಲಸದಲ್ಲಿ ಬೇಸರವಾಗುತ್ತದೆಂದು ಬೇಸರ ಮಾಡಿಕೊಂಡರೆ ಆ ವ್ಯಕ್ತಿಯ ವ್ಯಕ್ತಿತ್ವ ಸಂಪೂರ್ಣವಾಗಿ ನಶಿಸಿ ಹೋಗುವುದು. ಬದುಕು ಒಂದು ಬಂಧನದಲ್ಲಿ ಸಿಲುಕಿಕೊಂಡಿದೆ. ಈ ಬಂಧನದಿಂದ ಮನುಷ್ಯ ಹೊರ ಬರಬೇಕೆಂದು ಪ್ರಯತ್ನಿಸುತ್ತಿದ್ದಾನೆ. ಅದು ಅವರಿಗೆ ಎಂದಿಗೂ ಸಾಧ್ಯವಿಲ್ಲ. ಬೇಸರೆಂಬ ಬ್ಯಾನಿ ಒಂದಿಷ್ಟು ಇದ್ದರೆ ಚಿಂತೆಯಿಲ್ಲ. ಆದರೆ ಅದು ಮಿತಿ ಮೀರಿ ಹೋದರೆ, ಮನುಷ್ಯನಲ್ಲಿ ಆಲಸ್ಯ ಪ್ರವೃತ್ತಿ ಬೆಳೆಯುತ್ತದೆ.

ಇದರಿಂದಾಗಿ ಜೀವನದಲ್ಲಿ ಯಾವುದೋ ಒಂದು ಜಿಗುಪ್ಸೆಯ ಭಾವನೆ ಅಂತರಂಗದಲ್ಲಿ ಕೊರೆಯುತ್ತದೆ. ಆಗ ಬದುಕು ಕತ್ತಲೆಯೆಡೆಗೆ ನಡೆಯುತ್ತದೆ. ಬದುಕು ಕತ್ತಲೆಯೆಡೆಗೆ ನಡೆದಾಗ, ಆತ್ಮ ವಿಶ್ವಾಸ ಕುಗ್ಗುತ್ತದೆ. ಆಗ ಮನಸ್ಸು ದೇಹಕ್ಕೆ ಜಡವಾಗುವುದು. ದೇಹ ಮನಸ್ಸಿಗೆ ಜಡವಾಗುವುದು. ಒಟ್ಟಿನಲ್ಲಿ ಆ ವ್ಯಕ್ತಿ ಈ ಭೂಮಿಯ ಮೇಲೆ ಜಡವಾಗಿ ಬಿಡುವನು. ಆಗ ಸಮಾಜದಲ್ಲಿ ಆ ವ್ಯಕ್ತಿಗೆ ಸರಿಯಾದ ಸ್ಥಾನ ಮಾನ ಸಿಗದೇ ಹೋಗುತ್ತವೆ. ಆಗ ಅವನ ಬಗ್ಗೆ ಏನೆಲ್ಲ ಆಡಿಕೊಳ್ಳಲು ಪ್ರಾರಂಭಿಸುತ್ತಾರೆ. ಜನರ ಮಾತಿನಿಂದ ಆ ವ್ಯಕ್ತಿ ಮತ್ತಷ್ಟು ಬೇಸರೆಂಬ ಕಾಯಿಲೆಗೆ ಅಂಟಿಕೊಳ್ಳುತ್ತಾನೆ.
ಬೇಸರೆಂಬ ಬ್ಯಾನಿಯಲ್ಲಿ ಯಾವುದೇ ಕೆಲಸ ಮಾಡಿದರೂ, ಅದು ನಿಷ್ಪ್ರಯೋಜಿತ. ಆದಕಾರಣ ಬೇಸರವೆನಿಸಿದಾಗ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಅಷ್ಟರಿಂದ ಬೇಸರ ಕಳೆಯದಿದ್ದರೆ ಕಥೆ, ಕವನ, ಕಾದಂಬರಿ ಏನಾದರೂ ಓದಿ. ಅದರಿಂದಲೂ ಈ ಬೇಸರ ಕಳೆಯದಿದ್ದರೆ, ನೆರೆ ಹೊರೆಯವರೊಂದಿಗೆ ಬೆರೆತುಕೊಳ್ಳಿ. ಅದರಿಂದಲೂ ನಿಮಗೆ ತೃಪ್ತಿ ಸಿಗದಿದ್ದರೆ ಆಗ ನಿಮ್ಮ ಬಾಳಿನ ಯಾವುದೋ ಒಂದು ಸುಖವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಿರಿ ಎಂದೇ ಅರ್ಥ.

ಅತಿಯಾದ ಬೇಸರ ಬಂದಾಗ ಏನೇ ಮಾಡಲು ಹೋದರೂ ಅದು ಮತ್ತಷ್ಟು ಬೇಸರವಾಗುತ್ತದೆ. ಮನಸ್ಸಿಗೆ ಸಾವಿರಾರು ಆಸೆಗಳಿವೆ ಮತ್ತು ಮನಸ್ಸು ಕೂಡ ಅಷ್ಟೇ ಚಂಚಲವಾದದ್ದು. ಮನಸ್ಸು ಬಯಸಿದ್ದೆಲ್ಲಾ ಕೊಡಬಾರದು ಹಾಗೂ ಮನಸ್ಸು ಬಯಸಿದ್ದನ್ನೆಲ್ಲ ನಿರಾಕರಿಸಬಾರದು. ಅನುಕೂಲ ಮತ್ತು ಅನಾನುಕೂಲ ನೋಡಿಕೊಂಡು ಮನಸ್ಸು ಬಯಸಿದಂತೆ ಮಾಡಬೇಕು.
ಈ ಬೇಸರೆಂಬ ಕಾಯಿಲೆ ಮನಸ್ಸಿಗೆ ಅಂಟಿಕೊಳ್ಳಬಹುದು. ಈ ಕಾಯಿಲೆಯಿಂದ ದೂರವಿದ್ದಷ್ಟು ಮನಸ್ಸು ಸ್ವಚ್ಚವಾಗಿರುತ್ತದೆ. ಮನಸ್ಸು ಸ್ವಚ್ಚವಾಗಿದ್ದರೆ, ದೇಹ ಕ್ರೀಯಾಶಿಲತೆಯಿಂದ ಇರುತ್ತದೆ. ಮನಸ್ಸು ಮತ್ತು ದೇಹ ಸ್ವಚ್ಚವಾದ ಕ್ರೀಯೆಯಿಂದ ಕೂಡಿದ್ರೆ ಬೇಸರೆಂಬ ಕಾಯಿಲೆ ಯಾರ ಬಳಿಯೂ ಸುಳಿಯದು. ಬೇಸರ ಮನುಷ್ಯನಿಗೆ ಒಂಟಿತನ ಕಲಿಸಿಕೊಡುವುದು. ಬೇಸರ ಕಳೆಯಲು ಹೋಗಿ ಅಮೂಲ್ಯವಾದ ಜೀವನ ಕಳೆದುಕೊಳ್ಳಬಾರದು.