ಕಮಾಂಡೋ ‘ಕೋಬ್ರಾ’ ಕೆಣಕಿ ಹೈರಾಣಾದ ಬೆಳಗಾವಿ ‘ಪೊಲೀಸ್’

0
250

ಬೆಳಗಾವಿ ಜಿಲ್ಲೆ ಸದಲಗಾ ಎಂಬ ಗ್ರಾಮದಲ್ಲಿ ಸಚೀನ್ ಸಾವಂತ ಎಂಬ ಅರೇ ಸೇನಾಪಡೆ ಕಮಾಂಡೋ ಒಬ್ಬರ ಮೇಲೆ ಸ್ಥಳಿಯ ಪೋಲಿಸರು ನಡೆಸಿದರು ಎನ್ನಲಾದ ಹಲ್ಲೆ ದಿನಕ್ಕೆ ಒಂದು ರೂಪ ಪಡೆದು ಕೊಳ್ಳುತ್ತಿದ್ದು ಇದೀಗ ಠಾಣಾ ಎಸೈ ಅವರನ್ನು ಅಮಾನತ್ತು ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಗೃಹ ಸಚಿವರು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆಗೆ ಆದೇಶ ನಿಡುತ್ತಿದ್ದಂತೆ ಇಲಾಖೆ ಎಸೈ ಅವರ ಮೇಲೆ ಕ್ರಮ ಕೈಗೊಂಡಿದೆ, ಹಾಗಾದ್ರೆ ತನಿಖೆ ? ಈ ಘಟನೆಗೆ ಕಾರಣೀಭೂತರು ಯಾರು? ಯಾವ ಕಾರಣಗಳಿಂದ ಈ ಅಹಿತಕರ ಎನ್ನಬಹುದಾದ ಘಟನೆ ಸಂಭವಿಸಿತು ಎನ್ನುವ ಮಾಹಿತಿ ರಾಜ್ಯದ ಜನತೆಗೆ ಗೊತ್ತಾಗಬೇಕಲ್ಲವೇ?. ಯಾಕೆಂದರೆ ಬೆಳಗಾವಿ ಪೊಲೀಸ್ ಮೊದಲಿನಿಂದಲೂ ಈ ಪ್ರಕರಣವನ್ನು ಸಮರ್ಥನೆ ಮಾಡುತ್ತಲೇ ಬಂದಿದೆ. ಇಲ್ಲಿ ತನಿಖೆ ಕೇವಲ ಪೊಲಿಸ್ ಅಧಿಕಾರಿಗಳಿಂದ ಮಾತ್ರ ನಡೆದಲ್ಲಿ ಸಂಪೂರ್ಣ ಸತ್ಯ ಹೊರ ಬರುವ ಸಂಭವ ತೀರ ಕಡಿಮೆ. ಪೊಲೀಸ್ ಅಧಿಕಾರಿಗಳ ಜೊತೆ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಿದಲ್ಲಿ ಸಂಪೂರ್ಣ ಸತ್ಯ ಹೊರ ಬರಬಹುದು.

ಆರೋಪಿತ ಜವಾನನಿಗೆ ಹಿಂಡಲಗಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಏನೋ ಮಾಡಲಾಗಿದೆ. ಆದರೆ ಆತನಿಗೆ ಠಾಣೆಯಲ್ಲಿ Third degree Treatment ಕೊಟ್ಟಿರೋದು ಇದಿಗ ಹೊಸ ಸಂಶಯಗಳನ್ನು ಹುಟ್ಟು ಹಾಕಿದೆ. ಸ್ಥಳಿಯ ಪೋಲಿಸರು ಮಾಡಿದ ಆರೋಪದ ಅನ್ವಯ ಮೊದಲನೆಯದಾಗಿ ಆತ ಮಾಸ್ಕ ಧರಿಸಿರಲಿಲ್ಲ ಎನ್ನುವುದು, ನಾಲ್ಕೈದು ಜನಗಳ ಜೊತೆ ಮಾತನಾಡುತ್ತ ನಿಂತಿದ್ದ, ಪೋಲೀಸರು ನೀಡಿದ ಸೂಚನೆಗಳಿಗೆ ಎದುರು ಮಾತನಾಡಿದ,ಆತನೇ ಮೊದಲು ಹಲ್ಲೆ ಮಾಡಿದ, ಇವು ಪೋಲೀಸರು ಮಾಡಿದ ಆರೋಪಗಳು. ಸದ್ಯಕ್ಕೆ ಲಭ್ಯ ಇರುವ ವಿಡಿಯೋ ಮತ್ತು ಇತರ ಮಾಹಿತಿಗಳ ಪ್ರಕಾರ ಝಟಾಪಟಿ ನಡೆದಿರುವುದು ನಿಜ,  ಆದರೆ ಅದು ಯಾರಿಂದ ಹೇಗೆ ಆರಂಭವಾಯಿತು ಎನ್ನುವುದು ತನಿಖೆಯ ಮೂಲಕವೇ ಗೊತ್ತಾಗಬೇಕು.  ಎರಡನೆಯದಾಗಿ ಅ ಜವಾನ ಬಲಿಷ್ಠನಾಗಿದ್ದ ಆದಕಾರಣ ಆತನಿಗೆ ಕೈ ಕಾಲಿಗೆ ಕೋಳ ಹಾಕಿ ಠಾಣೆಯಲ್ಲಿ ಇರಿಸಲಾಗಿತ್ತು ಎನ್ನುವ ಪೋಲೀಸರ ಹೇಳಿಕೆ,  ಇದು ತೀರ ತಮ್ಮ ಕೃತ್ಯವನ್ನು ಸಮರ್ಥಸಿಕೊಳ್ಳುವ ಹೇಳಿಕೆ ಅಷ್ಟೇ. ಯಾಕೆಂದರೆ ಆತ ಒಬ್ಬ ಜವಾನ ಆತನಿಗೆ ನೀತಿ ನಿಯಮ ಕಾನೂನು ಬಗ್ಗೆ ತರಬೇತಿಯಲ್ಲಿ ಹೇಳಿ ಕೊಡಲಾಗುತ್ತದೆ ಹಾಗೊಂದು ವೇಳೆ ಅವರು ನಿಯಮಗಳನ್ನು , ಕಾನೂನನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆಯನ್ನು (ಕೋರ್ಟ್ ಮಾರ್ಷಲ್  ಸಹಿತ) ಸಹ ನೀಡಲಾಗುತ್ತದೆ.

ರಾಜ್ಯ ಪೋಲೀಸರಿಗೆ ಅವರ ತಪ್ಪುಗಳಿಗೆ,  ನಿಯಮ ಉಲ್ಲಂಘನೆಗೆ ಮತ್ತು ಕರ್ತವ್ಯ ಲೋಪಗಳಿಗೆ ಶಿಕ್ಷೆಗಳನ್ನು ವಿಧಿಸಲಾಗುತ್ತದೆ. ಅವರುಗಳಿಗೆ ಮೆಮೋ ಅಥವಾ Transfer,  ಹೆಚ್ಚಿಗೆ ಅಂದರೆ Suspension ಇಷ್ಟೇ ಶಿಕ್ಷೆ,  ಇಂತಹ  ಶಿಕ್ಷೆಗಳಿಂದ ಸಹ ತಮ್ಮ ಮೇಲಾಧಿಕಾರಿಗಳ ಪ್ರಭಾವ ಅಥವಾ ರಾಜಕಾರಣಿಗಳ ಕೃಪಾಕಟಾಕ್ಷದಿಂದ ಪಾರಾಗುವ ಅವಕಾಶ State Police ನವರಿಗೆ ಇದೆ.  ಆದರೆ Defence service ನವರಿಗೆ ಶಿಕ್ಷೆಗಳಿಂದ ಪಾರಾಗುವ ಅವಕಾಶಗಳು ತೀರ ಕಡಿಮೆ ಹಾಗಾಗಿ ಆ ಜವಾನನಿಗೆ ಕಾನೂನಿನ ತಿಳುವಳಿಕೆ ಇದ್ದಾಗ್ಯೂ ಸಹ ಸ್ಥಳಿಯ ಪೋಲೀಸರೊಂದಿಗೆ ವಾಗ್ವಾದ,  ಹೊಡೆದಾಟಕ್ಕೆ ನಿಂತಿದ್ದು ಏಕೆ ? ಉತ್ತರ ಹುಡುಕ್ತ ಹೋದರೆ ಸಿಗುವುದು ಒಂದು ಸಂವಹನದ ಕೊರತೆ, ಇನ್ನೊಂದು ಪ್ರಾಯಶಃ ಸ್ಥಳೀಯ ಪೊಲೀಸರ್ ಅವಾಚ್ಯ ಶಬ್ದಗಳ ಬಳಕೆ ಹಾಗೂ ನಿಂದನೆ ಹಾಗೂ ಪೊಲೀಸ್  ಇಲಾಖೆಯ ಕೆಲವು ಸಿಬ್ಬಂದಿಗಳಲ್ಲಿರುವ Ego. ನಿಜವಾಗಿಯೂ ಪೋಲಿಸರ ಕೆಲಸ ಒತ್ತಡದ ಕೆಲಸ,  ನಾಗರೀಕ ಸಮಾಜ ವ್ಯವಸ್ಥಿತವಾಗಿ ಇರಬೇಕೆಂದರೆ ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ಮಾತ್ರ ಎಲ್ಲವೂ ಸರೀ,  ಇಲ್ಲದಿದ್ದಲ್ಲಿ ಗುಂಡಾರಾಜ್ಯ,  ಜಂಗಲ್ ರಾಜ್ಯ ಆಗಿ ಬಿಡುತ್ತದೆ.  Defence service ನವರ ಕೆಲಸ ಸ್ಥಳೀಯ ಪೊಲಿಸರ ಕೆಲಸದ ಒತ್ತಡಕ್ಕಿಂತ ಹೆಚ್ಚಿನ ಒತ್ತಡದಿಂದ ಕೂಡಿರುತ್ತದೆ. ನೀರು ಆಹಾರಗಳಿಲ್ಲದೆ ತಿಂಗಳುಗಳ ಗಟ್ಟಲೇ ಭಯಂಕರ ಬಿಸಿಲಿನ ರಾಜಸ್ಥಾನದ ಮರಳುಗಾಡುಗಳಲ್ಲಿ, ಹಿಮಾಲಯದ ಮೈನಸ್ 8-10 ಡಿಗ್ರಿ ಮೈ ಕೊರೆಯುವ ಚಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ವಿಷಯ ಹೀಗಿರುವಾಗ ಒಂದು ದೇಶದ ಭಾಹ್ಯ ಮತ್ತು ಆಂತರಿಕ ಸುರಕ್ಷತೆಯ ದೃಷ್ಠಿಯಿಂದ ಜವಾನರ ಮತ್ತು ಪೊಲೀಸರ ಅವಶ್ಯಕತೆ ಇದ್ದೆ ಇದೆ.  ಪೋಲಿಸ್ ಇಲಾಖೆಯ ಶ್ರಮವನ್ನು ಶ್ಲಾಘಿಸುತ್ತಲೇ ಇಲಾಖೆಯಲ್ಲಿ ನಡೆಯುವ ತಪ್ಪುಗಳ ಮೇಲೂ ಬೆಳಕು ಚೆಲ್ಲಲೇಬೇಕಾದ ಅವಶ್ಯಕತೆ ಇದೆ.


ತೀರ ಇತ್ತೀಚೆಗೆ ಕರ್ನಾಟಕದಲ್ಲೇ ನಡೆದ ಲಾಕಪ್ ಡೆತ್ ಪ್ರಕರಣ ಮಾಧ್ಯಮಗಳಲ್ಲಿ ಪ್ರಚಾರ ಪಡೆದು  ಒಂದಿಷ್ಟು ಪ್ರತಿಭಟನೆಗಳು ನಡೆದು ಇಬ್ಬರು ಪೊಲೀಸ್ ಸಿಬ್ಬಂದಿಗಳ ಮೇಲೆ ಕೊಲೆ ಕೇಸು ದಾಖಲಿಸುವುದರೊಂದಿಗೆ ಅಂತ್ಯಗೊಂಡಿತು.ಇಂಥ ಪ್ರಕರಣಗಳಿಗೆ ಲೆಕ್ಕವೆ ಇಲ್ಲ. ಕೆಲವು ಪ್ರಕರಣಗಳು ಬೆಳಕಿಗೆ ಬಂದರೆ ಇನ್ನು ಕೆಲವು ಪ್ರಕರಣಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗುತ್ತದೆ. ತೀರ ಶೋಷಿತರ ಮನೆಯವರು ಪ್ರತಿಭಟನೆಗೆ ಇಳಿದಾಗ,  ಅಥವಾ ಮಾಧ್ಯಮದವರು ಬೆನ್ನಟ್ಟಿದಾಗ ಮಾತ್ರ ಜನಸಾಮಾನ್ಯರಿಗೆ ಇಂತಹ ಘಟನೆಗಳು ಗೊತ್ತಾಗೊದು. ಬಹುಶಃ ಜವಾನ್ ಸಚಿನ್ ಸಾವಂತ ಪ್ರಕರಣ ಕೂಡ ಹೀಗೇ ಆಗಿ ಹೋಗ್ತಾ ಇತ್ತು.

ಒಂದು ವೇಳೆ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವ ಒಂದು ಸಣ್ಣ ಸುಳಿವು ಸಿಕ್ಕಿದ್ದರೂ ಸಹ, ಸ್ಥಳೀಯ ಪೊಲೀಸರು ಠಾಣೆಯಲ್ಲಿಯೇ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಅಲ್ಲಿಯೇ ಬಿಟ್ಟು ಕೈ ತೊಳೆದುಕೊಳ್ಳುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ಪೊಲೀಸರು ಪ್ರತಿಷ್ಠೆಯಾಗಿ ತೆಗೆದುಕೊಂಡು ಜಿದ್ದಾಜಿದ್ದಿಗೆ ಬಿದ್ದು ಆತನ ಕೈಗೆ ಕೋಳ ತೊಡಿಸಿ, ಠಾಣೆಗೆ ಎಳೆದುಕೊಂಡು ಒಯ್ದು ಆತನ ಮೇಲೆ ಥರ್ಡ್ ಡಿಗ್ರಿ ಪ್ರಯೋಗಿಸಿ ಎಫ್ ಐ ಆರ್ ದಾಖಲಿಸಿ ಆತನನ್ನು ಹಿಂಡಲಗಾ ಜೈಲಿಗಟ್ಟಿ ತಮ್ಮ ಪೌರುಷವನ್ನು ಪ್ರದರ್ಶಿಸಿದರು. ಆದರೆ  ಯಾವಾಗ  ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ಸ್ಥಳಿಯ ಮಾಧ್ಯಮಗಳಲ್ಲಿ ಈ ವಿಷಯ ಪ್ರಸಾರ ಗೊಂಡು ರಾಜ್ಯ ದೇಶವ್ಯಾಪಿ ಆಗಿ ಹೋಯಿತೋ ಆಗ ಗಲಿಬಿಲಿಗೊಂಡ ಜಿಲ್ಲಾ ಪೊಲೀಸ್ ಮೊದ ಮೊದಲು ಈ ಘಟನೆಯನ್ನು ಸಮರ್ಥಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡಿತು. ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಜವಾನನ ಕೈಗೆ ಕೋಳ ತೊಡಿಸಿದ ಕ್ರಮ,  FIR ದಾಖಲಿಸಿದ ಕ್ರಮ ಸಮರ್ಥಿಸಿಕೊಂಡು ಪೋಲಿಸರ ನೈತಿಕ ಶಕ್ತಿ ಸ್ಥೈರ್ಯ ಕುಂದಿಸಬಾರದು ಎನ್ನುವ ಮಾತನಾಡಿದ್ದರು. ಆದರೆ ಯಾವಾಗ ಪ್ರಕರಣ ರಾಷ್ಟ್ರ  ಮಟ್ಟಕ್ಕೆ ಬೆಳೆಯಿತೋ ಎಸೈ ಒಬ್ಬರ ತಲೆ ದಂಡವಾಯಿತು, ಹಾಗಾದರೆ ಈ ಇಡೀ ಪ್ರಕರಣಕ್ಕೆ ಎಸೈ ಒಬ್ಬರೇ ಕಾರಣರೇ ? ಎಸೈ ಮೇಲೆ ಕ್ರಮ ಕೈಗೊಂಡ ತಕ್ಷಣ ಪ್ರಕರಣದ ತನಿಖೆ ಬೇಡವೇ? ಎನ್ನುವುದು ಈಗ ಸದ್ಯದ ಜನಸಾಮಾನ್ಯರ ಪ್ರಶ್ನೆ.  ಖಂಡಿತ ಪ್ರಕರಣದ ತನಿಖೆ ನಡೆಯಲೇ ಬೇಕು.

ಒಬ್ಬ ಗಡಿಕಾಯುವ ಯೋಧನ ಕೈ ಕಾಲಿಗೆ ಕೋಳ ಹಾಕಿ ಠಾಣೆಗೆ ಕರೆತಂದು Pick pocketer,  Rowdi elements ಗಳ ರೀತಿಯಲ್ಲಿ ಥರ್ಡ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟಿದ್ದು,ನಂತರ ಸಮರ್ಥನೆಗೆ ಮುಂದಾಗಿದ್ದು ನಿಜಕ್ಕೂ ಇಲಾಖೆಯ ತಪ್ಪು,  ಆ ಜವಾನ ತಪ್ಪಿತಸ್ಥ ಆಗಿದ್ದಲ್ಲಿ ಆತನಿಗೆ ನ್ಯಾಯಬದ್ದ ಶಿಕ್ಷೆ ಆಗಲಿ ಆದರೆ ಮ್ಯಾಜಿಸ್ಟ್ರೇಟ್ ರ ಅನುಮತಿ ಇಲ್ಲದೇ ಕೈಗೆ ಕೋಳ ಹಾಕಿದ್ದ, ಆತನ ಮೇಲೆ ಪ್ರಕರಣ ದಾಖಲಿಸುವ ಮುಂಚೆ ಆತನ ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರದೇ ಇರುವುದು,  ಆತನ ಕೈಗೆ ಕೋಳ ಹಾಕಿ ಕೂಡಿಸಿದ ಚಿತ್ರ ಗಳನ್ನು ವೈರಲ್ ಮಾಡಿದ್ದು ಇದರಿಂದ ಜವಾನನಿಗೆ,  ಆತ ಕಾರ್ಯ ನಿರ್ವಹಿಸುವ ಫೋರ್ಸನ ನೈತಿಕ ಸ್ಥೈರ್ಯ ಹಾಳಾಗಲ್ವ ? ಆ ಇಲಾಖೆಗೆ ಅವಮಾನ ಆಗಲ್ವ?

ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಬೇಡಿ ಎಂಬ ಹೇಳಿಕೆ ನೀಡಿದ ಆ ಹಿರಿಯ ಅಧಿಕಾರಿಗೆ ಕೆಲವು ಪ್ರಶ್ನೆಗಳು. ಠಾಣೆಗಳಲ್ಲಿ ಅಮಾಯಕರನ್ನು ಹೊಡೆದು ಚಿತ್ರಹಿಂಸೆ ನೀಡಿ ಲಾಕಪ್ ಡೆತ್ ಮಾಡಿ ತಾವು ಕರ್ತವ್ಯ ನಿರ್ವಹಿಸುವ  ಠಾಣೆಗಳಲ್ಲಿನ ಪೊಲೀಸರು ತಾವೇ ಕೊಲೆ ಆರೋಪಿಗಳಾದಾಗ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲವೇ?.  ಒಬ್ಬ ದಾಂಧಲೆಕೋರ MLC ಮಗ ಅಂತ ಗೊತ್ತಾದ ತಕ್ಷಣ ಆತನಿಗೆ ಕುಳಿತುಕೊಳ್ಳುವುದಕ್ಕೆ ಚೇರ್ ಕೊಟ್ಟು  ರಾಜ ಮರ್ಯಾದೆ ನೀಡುವುದರಿಂದ ರಾಜ್ಯ ಪೋಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲವೆ ? ಒಬ್ಬ ದೇವಸ್ಥಾನದ ಸಾಮಾನ್ಯ ಪೂಜಾರಿಯ ಮೇಲೆ ಲಾಠಿ ಬೀಸಿದ ಎನ್ನುವ ಕಾರಣಕ್ಕೆ immediate ಆಗಿ ಪೇದೆಯನ್ನ ಸಸ್ಪೆಂಡ್ ಮಾಡಿ ಎಸೈ ಕೈಲಿ‌ ಕ್ಷಮಾಪಣೆ ಕೇಳಿಸಲಾಗುತ್ತದೆ, ಇಲ್ಲಿ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲವೇ ? ಇಂಥ ಸಂದರ್ಭ, ಪ್ರಕರಣಗಳಲ್ಲಿ ಕುಗ್ಗದೇ ಇರುವ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಒಬ್ಬ ಜವಾನನ ಪ್ರಕರಣದಲ್ಲಿ ಅದು ಹೇಗೆ ಕುಗ್ಗುತ್ತದೆ? ಎಲ್ಲದಕ್ಕೂ ಬೆಳಗಾವಿ ಜಿಲ್ಲೆಯ ಹಿರಿಯ ಪೋಲೀಸ್ ಅಧಿಕಾರಿಗಳೇ ಉತ್ತರ ನೀಡಬೇಕು.

ತಪ್ಪು ಗ್ರಹಿಕೆ ? ಸಂವಹನದ ಕೊರತೆಯಿಂದ ಉದ್ಭವಿಸಿದ ಪ್ರಕರಣ ಒಂದನ್ನು ವಿನಾಕಾರಣ ಪೊಲೀಸರು (ಮೇಲಾಧಿಕಾರಿಗಳು ಸೇರಿದಂತೆ) ಜಿದ್ದಾಜಿದ್ದಿಗೆ ಬಿದ್ದು ಪ್ರತಿಷ್ಠೆಯಾಗಿ ತೆಗೆದುಕೊಂಡು ಇಡೀ ರಾಜ್ಯ,  ರಾಷ್ಟ್ರ ಮಟ್ಟದಲ್ಲಿ ಇಲಾಖೆಗೆ ಕೆಟ್ಟ ಹೆಸರು ಬರುವಂತೆ ನಡೆದುಕೊಂಡಿದ್ದು ನಿಜಕ್ಕೂ ಬೇಸರ ತರುವ ಸಂಗತಿ.  ಬೆಳಗಾವಿ ಜಿಲ್ಲೆಯ ಪೊಲೀಸರ ಈ ನಡೆಯು ಇದೀಗ ಗೃಹ ಸಚಿವರ ಸ್ಥಾನಕ್ಕೆ ಸಂಚಕಾರ ತರುವಷ್ಟರ ಮಟ್ಟಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇನ್ನು ಮುಂದೆ ಗೃಹ ಸಚಿವರು,  ಸರ್ಕಾರ ಈ ಪ್ರಕರಣದ ಕುರಿತು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾಯಬೇಕಿದೆ. ಒಂದು ವೇಳೆ ಪ್ರಕರಣ ಇನ್ನೂ ಗಂಭೀರ ಸ್ವರೂಪ ಪಡೆದಿದ್ದೇ ಆದಲ್ಲಿ ಇನ್ನಷ್ಟು ಅಧಿಕಾರಿಗಳ ತಲೆದಂಡ ಆಗಲಿದೆ.


 

LEAVE A REPLY

Please enter your comment!
Please enter your name here