ವಿಜಯಪುರ: Home Library Program ಅಡಿಯಲ್ಲಿ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಓದಿನ ಮಹತ್ವ, ಜ್ಞಾನ ವಿಕಾಸ ಹಾಗೂ ಯುವಕರಲ್ಲಿ ಓದುವ ಸಂಸ್ಕೃತಿ ಬೆಳೆಸುವ ಅಗತ್ಯವನ್ನು ಸಾಹಿತಿಗಳು ಒತ್ತಿಹೇಳಿದರು. ವಿಜಯಪುರ : ಪುಸ್ತಕಗಳು ಮಾನವನ ಜ್ಞಾನ, ಸಂಸ್ಕೃತಿ ಮತ್ತು ವ್ಯಕ್ತಿತ್ವ ವಿಕಾಸದ ಅಡಿಪಾಯವಾಗಿದ್ದು, ಓದು ಅಂತಃಪ್ರಜ್ಞೆಯ ಗ್ರಹಿಕೆಯಾಗಿದೆ ಎಂದು ನಗರದ ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎನ್.ಎಂ.ಬಿರಾದಾರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ರಾಜಾಜಿನಗರದಲ್ಲಿರುವ ಸಾಹಿತಿ ಮುರುಗೇಶ ಸಂಗಮ ಅವರ ನಿವಾಸದಲ್ಲಿ ಶನಿವಾರ ಸಂಜೆ ನಡೆದ Home Library Program ಅಡಿಯಲ್ಲಿ ಗ್ರಂಥಾವಲೋಕನ, ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕ ಓದಿನಿಂದ ಏಕಾಗ್ರತೆ ಹೆಚ್ಚುತ್ತದೆ
ಸಾಮಾಜಿಕ ಜಾಲತಾಣದಲ್ಲಿನ ಓದು ಮನಸ್ಸನ್ನು ತಣಿಸದು. ಪುಸ್ತಕದ ಪುಟಗಳನ್ನು ತಿರುವಿ ಓದುವುದರಿಂದ ಸಿಗುವ ಜ್ಞಾನ, ಅನುಭವ ಹಾಗೂ ಏಕಾಗ್ರತೆ ಬೇರೆಲ್ಲಿಯೂ ಸಿಗದು ಎಂದು ಎನ್.ಎಂ.ಬಿರಾದಾರ ಹೇಳಿದರು. ಮುಖ್ಯ ಅತಿಥಿ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, “ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹದಂತೆ” ಎಂಬ ಮಾತಿದೆ. ಮನೆ ಪುಸ್ತಕ ಮನೆಯಾದರೆ ಅದರ ಗೌರವವೇ ಬೇರೆ ಎಂದು ತಿಳಿಸಿದರು.
ಬಸವ ಜನ್ಮಸ್ಥಳ ಕೃತಿ ವಿಶ್ಲೇಷಣೆ
ಸಾಹಿತಿ ಅಡವಿಸ್ವಾಮಿ ಕೊಳಮಲಿ ಅವರು ಲೇಖಕ ಮುರುಗೇಶ ಸಂಗಮ ಅವರ ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ ಕೃತಿಯನ್ನು ವಿಶ್ಲೇಷಿಸಿ ಮಾತನಾಡಿದರು. ಬಸವಣ್ಣನವರ ಜನನ, ಜೀವನ ಚರಿತ್ರೆ ಹಾಗೂ ಬಸವನಬಾಗೇವಾಡಿಯ ಸ್ಮಾರಕ ಹಿನ್ನೆಲೆಯನ್ನು ಸಂಶೋಧನಾತ್ಮಕವಾಗಿ ದಾಖಲಿಸಿರುವ ಈ ಕೃತಿ ಮಹತ್ವದ್ದಾಗಿದೆ ಎಂದು ಹೇಳಿದರು.
ಯುವಕರಿಗೆ ಓದುವ ಸಂಸ್ಕೃತಿ ಬೆಳೆಸುವ ಕರೆ
ಅಧ್ಯಕ್ಷತೆ ವಹಿಸಿದ್ದ ಪುಸ್ತಕ ಪ್ರಾಧಿಕಾರದ ರಾಜ್ಯ ಸದಸ್ಯ ಡಾ. ಕುಶಾಲ ಬರಗೂರು ಮಾತನಾಡಿ, ಪುಸ್ತಕಗಳು ಬೌದ್ಧಿಕ ಬೆಳವಣಿಗೆಗೆ ಅರಿವಿನ ಬೆಳಕು ಬೀರುವ ಸಾಧನಗಳಾಗಿವೆ ಎಂದರು. ಯುವಕರು ಮೊಬೈಲ್ ಗೀಳು ಕಡಿಮೆ ಮಾಡಿ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕವಿಗೋಷ್ಠಿ ಮತ್ತು ಸನ್ಮಾನ
ಕವಿಗೋಷ್ಠಿಯಲ್ಲಿ ಕಲ್ಯಾಣರಾವ ದೇಶಪಾಂಡೆ, ಈರಮ್ಮ ಬೋನೂರ, ಮಲ್ಲಿಕಾರ್ಜುನ ತೊದಲಬಾಗಿ, ಮಹಾದೇವಿ ಪಾಟೀಲ ಸೇರಿದಂತೆ ಹಲವು ಕವಿಗಳು ಸ್ವರಚಿತ ಕವನ ವಾಚಿಸಿದರು. ಬಬಲೇಶ್ವರದ ಸಮಾಜಸೇವಕ ಡಾ. ಶಂಕರಗೌಡ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.








