ವಿಜಯಪುರ: Drain Cleaning Drive ಹಿನ್ನೆಲೆ ವಿಜಯಪುರ ನಗರದಲ್ಲಿ ನಾಲೆ, ಚರಂಡಿ ಹಾಗೂ ಕಂದಕಗಳ ತ್ವರಿತ ಸ್ವಚ್ಛತೆಗೆ ಜಿಲ್ಲಾಧಿಕಾರಿ ಡಾ. ಕೆ. ಆನಂದ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ನಾಲೆ ಮತ್ತು ಕಂದಕಗಳ ಪರಿಶೀಲನೆ
ಮುಂಗಾರು ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳಾದ ಡಾ. ಕೆ. ಆನಂದ ಅವರು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ನಾಲೆಗಳು ಹಾಗೂ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ನವಬಾಗ್ ರಸ್ತೆ, ಜನ್ನಥ್ ಫಂಕ್ಷನ್ ಹಾಲ್ ಸಮೀಪದ ಕೋಟೆಗೋಡೆ ಕಂದಕ, ರಾಮನಗರ ರಸ್ತೆ, ಕಸ್ತೂರಿ ಕಾಲೊನಿ ಕೋಟೆಗೋಡೆ ಕಂದಕ ಹಾಗೂ ರೂಡಗಿ ಮಡ್ಡಿ ಸ್ಮಶಾನ ಸಮೀಪ ಎಸ್‌ಡಿಎಂಎಫ್ ನಿಧಿಯಡಿ ಕೈಗೊಳ್ಳಲಾಗುತ್ತಿರುವ ಹೂಳೆತ್ತುವ ಕಾಮಗಾರಿಗಳನ್ನು ಪರಿಶೀಲಿಸಿದರು.
Drain Cleaning Drive ಕಾರ್ಯಕ್ಕೆ ಆದ್ಯತೆ
ಮುಂಬರುವ ಮಳೆಗಾಲದ ಹಿನ್ನಲೆಯಲ್ಲಿ ನಗರದಲ್ಲಿನ ಎಲ್ಲಾ ಮಳೆ ನೀರು ಹರಿವಿನ ಚರಂಡಿಗಳು, ನಾಲೆಗಳು ಹಾಗೂ ಕೋಟೆಗೋಡೆ ಕಂದಕಗಳನ್ನು ಸಮಗ್ರವಾಗಿ ಸ್ವಚ್ಛಗೊಳಿಸಿ ಹೂಳೆತ್ತುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಜೆಸಿಬಿ ಯಂತ್ರಗಳು, ಡೀ-ವಾಟರಿಂಗ್ ಪಂಪ್‌ಗಳು, ಅಗತ್ಯ ಉಪಕರಣಗಳು ಹಾಗೂ ಸಿಬ್ಬಂದಿಯನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಗ್ಗು ಪ್ರದೇಶಗಳಿಗೆ ವಿಶೇಷ ತಂಡ
ನಗರದಲ್ಲಿ ಗುರುತಿಸಲಾದ ತಗ್ಗು ಪ್ರದೇಶಗಳಲ್ಲಿ ಮಳೆಯಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿಗಳಿಗೆ ತಕ್ಷಣ ಸ್ಪಂದಿಸಲು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಎಂ.ಜಿ.ಎನ್.ವಿ.ವೈ ಯೋಜನೆಯಡಿ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ತಕ್ಷಣ ಆರಂಭಿಸಿ, ವಿಶೇಷವಾಗಿ ಮಳೆ ನೀರು ಹರಿವಿನ ಚರಂಡಿ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪ್ರದೇಶವಾರು ಪರಿಶೀಲನೆಗೆ ಸೂಚನೆ
ಮಳೆಯಿಂದ ಉದ್ಭವಿಸಬಹುದಾದ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಿ ಪ್ರದೇಶವಾರು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರು, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ಕಾರ್ಯಪಾಲಕ ಅಭಿಯಂತರರು, ಇತರ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







