ಚಡಚಣ ಸರ್ಕಾರಿ ಕಾಲೇಜು ವರ್ಗಾವಣೆ ಮಾಡಿದರೆ ಉಗ್ರ ಹೋರಾಟ: ವಿದ್ಯಾರ್ಥಿ ಸಂಘಟನೆ ಎಚ್ಚರಿಕೆ

ಚಡಚಣ ಸರ್ಕಾರಿ ಕಾಲೇಜು ಪ್ರತಿಭಟನೆ

ವಿಜಯಪುರ: ಚಡಚಣ ಸರ್ಕಾರಿ ಕಾಲೇಜು ಪಟ್ಟಣದಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಆಲ್ ಕರ್ನಾಟಕ ಸ್ಟೇಟ್ ಸ್ಟುಡೆಂಟ್ಸ್ ಅಸೋಶಿಯೇಶನ್ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

2025-26ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕ ಸರ್ಕಾರವು ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಸರ್ಕಾರಿ ಕಾಲೇಜ ಸ್ಥಾಪನೆಗೆ ಅನುಮೋದನೆ ನೀಡಿತ್ತು. ಆದರೆ ಚಡಚಣದ ಕೆಲ ವ್ಯಕ್ತಿಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಸಂಘಟನೆ ಆರೋಪಿಸಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯಾಗಬಹುದು ಎಂಬ ಕಾರಣದಿಂದ ಸರ್ಕಾರ ಮತ್ತು ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ವಿದ್ಯಾರ್ಥಿ ಮುಖಂಡರು ಹೇಳಿದರು. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಚಡಚಣ ಸರ್ಕಾರಿ ಕಾಲೇಜು ಅತ್ಯಂತ ಅಗತ್ಯವಾಗಿದೆ. ಕಾಲೇಜು ಪಟ್ಟಣದಲ್ಲೇ ಆರಂಭವಾದರೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಒಂದು ವೇಳೆ ಚಡಚಣ ಸರ್ಕಾರಿ ಕಾಲೇಜವನ್ನು ಪಟ್ಟಣದಿಂದ ಬೇರೆಡೆಗೆ ವರ್ಗಾವಣೆ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಿದ್ಯಾರ್ಥಿ ಸಂಘಟನೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀಶೈಲ ತೇಲಿ, ವಿಜಯಪುರ ತಾಲೂಕಾಧ್ಯಕ್ಷ ಯಮನಪ್ಪ ಬೂದಿಹಾಳ, ಮುತ್ತುರಾಜ ಕೂಡಗಿ, ಸುಮೀತ ನಿರಾಳೆ, ಹರೀಶ ಇಂಗಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು