ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ನೆನೆಗುದಿಗೆ | ರೈತರ ಆಕ್ರೋಶ

Bhoodihal Peerapur Project

ವಿಜಯಪುರ: ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಯ Bhoodihal Peerapur Project ಬಾಕಿ ಉಳಿದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಧರಣಿ ಸಂದರ್ಭದಲ್ಲಿ ನೀಡಿದ ಭರವಸೆ ಕೇವಲ ಮೂಗಿಗೆ ತುಪ್ಪ ಸವರಿ ಹೋದಂತಾಗಿದೆ. ಅವರು ಕೊಟ್ಟ ಮಾತು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಇವರು ಕೇವಲ ಭರವಸೆ ನೀಡುತ್ತಾ ರೈತರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುರಾಜ ಪಡಶೆಟ್ಟಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರದಂದು ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರೆದಿದ್ದ ಮಾಧ್ಯಮ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಗೆ ಸಂಬAಧಿಸಿದ ಪೀರಾಪೂರ ಏತ ನೀರಾವರಿ ಯೋಜನೆ ಬಾಕಿ ಉಳಿದ ಕಿರು ಕಾಲುವೆ (ಎಫ್.ಐ.ಸಿ) ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ ಪ್ರತಿಯೊಬ್ಬ ರೈತನ ಜಮೀನಿಗೆ ನೀರು ಒದಗಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪೆಬ್ರುವರಿ 2025 ರಂದು ತಾಳಿಕೋಟಿ ತಾಲೂಕಿನ ಕೊಡಗಾನೂರ ಕ್ರಾಸ್ ಬಳಿ 38 ಹಳ್ಳಿಗಳ ರೈತರೊಂದಿಗೆ 12 ದಿನಗಳವರೆಗೆ ಧರಣಿ ಹಮ್ಮಿಕೊಳ್ಳಲಾಗಿತ್ತು.

ಧರಣಿ ಸ್ಥಳಕ್ಕೆ ಉಸ್ತುವಾರಿ ಸಚಿವರಾದ ಎಮ್.ಬಿ.ಪಾಟೀಲರು ಆಗಮಿಸಿ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ಶೀಘ್ರದಲ್ಲಿ ಮುಕ್ತಾಯಗೊಳಿಸಲಾಗುವದೆಂದು ಧರಣಿ ನಿರತ ರೈತರಿಗೆ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಮೌನವಾಗಿದ್ದಾರೆ. ಧರಣಿ ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಸತ್ಯವಂತರAತೆ ಆವೇಶದಿಂದ ಮಾತನಾಡಿ ಜಿಲ್ಲೆಯ ನೀರಾವರಿಗೆ 14 ಸಾವಿರ ಕೋಟಿ ತಂದವನಿಗೆ 200 ಕೋಟಿ ಹಣ ಏನು. ಇದು ಜುಜಬಿ ಹಣ ನಾನು ಬಂದ ಮೇಲೆ ಕೆಲಸ ಆಯಿತು ಎಂದು ತಿಳಿದುಕೊಳ್ಳಿರಿ ಎಂದು ಸತ್ಯ ಹರಿಶ್ಚಂದ್ರರಂತೆ ಮಾತು ಕೊಟ್ಟು ರೈತರನ್ನು ವಂಚಿಸಿದ್ದಾರೆ.

Bhoodihal Peerapur Project ತಾಳಿಕೋಟಿ ಭಾಗದ ಅಸ್ಕಿ, ನೀರಲಗಿ, ಬೆಕಿನಾಳ, ಜಲಪೂರ, ಬೆನ್ನಟ್ಟಿ, ಬೂದಿಹಾಳ, ಹಾಳಗುಂಡಕನಾಳ, ರಾಂಪೂರ, ವಣಕಿಹಾಳ, ತುರಕನಕೇರಿ ಸೇರಿ 38 ಗ್ರಾಮಗಳಲ್ಲಿ ನೀರಿನ ಭವಣೆ ಗಂಭೀರವಾಗಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿವೆ. ಕೃಷಿಗೂ ಕೂಡ ನೀರಿಲ್ಲ. ಅಂದಾಜು ನಾಲ್ಕೈದು ಕಿಲೋ ಮೀಟರ್ ವರೆಗೆ ನೀರು ಇದ್ದಲ್ಲಿ ಹುಡುಕಿಕೊಂಡು ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸಿದ್ದಾಪೂರ ಹಾಗೂ ರೈತ ಮುಖಂಡರಾದ ಎಂ.ಜಿ. ಯಂಕಂಚಿ ಮಾತನಾಡಿ, ಈ ಯೋಜನೆ ಪೂರ್ಣಗೊಂಡರೆ 50,657 ಎಕರೆ ಜಮೀನು ನೀರಾವರಿಗೆ ಒಳಪಡುತ್ತದೆ.

ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೋಮ್ಮಾಯಿಯವರು ಈ ಯೋಜನೆಯ 1ನೇ ಹಂತದ ಉದ್ಘಾಟನೆ ಮಾಡಿ 2ನೇ ಹಂತದ ಶಂಕು ಸ್ಥಾಪನೆ ನೆರವೇರಿಸಿದ್ದರು. ಆದರೆ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಈಗಾಗಲೇ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಕೇವಲ ಸ್ವಲ್ಪ 10% ಪ್ರಮಾಣದಲ್ಲಿ ಕಾಮಗಾರಿ ಉಳಿದಿದ್ದು ಕೇವಲ ಅದಕ್ಕೆ 200ಕೋಟಿ ಅನುದಾನದ ಅವಶ್ಯಕತೆ ಇದೆ. 38 ಹಳ್ಳಿಗಳಿಗೆ 40 ರಿಂದ 80 ಎಕರೆಗೆ 1ರಂತೆ ಔಟಲೆಟ್ ಕೂಡಿಸಿದ್ದಾರೆ. ಒಟ್ಟು 1200 ಔಟ್‌ಲೆಟ್ ಬಾಕ್ಸ್ಗಳನ್ನು ಜಮೀನಿನಲ್ಲಿ ಅಳವಡಿಸಲಾಗಿದೆ.

ಇನ್ನು ಬಾಕಿ ಉಳಿದ ಕಾಮಗಾರಿ ಮುಕ್ತಾಯಗೊಳಿಸಲು 200 ಕೋಟಿ ಹಣ ಸರ್ಕಾರಕ್ಕೆ ಏನು ಹೊರೆಯಲ್ಲ. ಆದ ಕಾರಣ ಕೂಡಲೇ ಅನುದಾನ ಬಿಡುಗಡೆ ಮಾಡಿ ಬಾಕಿ ಉಳಿದ ಕಾಮಗಾರಿ ಮುಕ್ತಾಯಗೊಳಿಸಬೇಕು ಇಲ್ಲದಿದ್ದರೆ ಮತ್ತೆ ತಾಳಿಕೋಟಿ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ 38 ಹಳ್ಳಿಗಳ ರೈತರೊಂದಿಗೆ ಸಭೆ ಸೇರಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅರವಿಂದ ಕುಲಕರ್ಣಿ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವನ ಬಾಗೇವಾಡಿ ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ತಾಲೂಕಾಧ್ಯಕ್ಷರಾದ ಮಹಾದೇವಪ್ಪ ತೇಲಿ, ಶ್ರೀಶೈಲ ತಾಳಿಕೋಟಿ, ದತ್ತಾತ್ರೆಯ ಕುಲಕರ್ಣಿ, ಅರವಿಂದ ತೇಲಿ, ಗುರುನಾಥ ಬಾಗೇವಾಡಿ ಇದ್ದರು.

Share the Post:

ಇತ್ತೀಚಿನ ಸುದ್ದಿಗಳು