
ವಿಜಯಪುರ: ರಸಗೊಬ್ಬರ ಮಾರಾಟ ಸಂಬಂಧಿಸಿದಂತೆ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ, ಅಕ್ರಮ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿದರೆ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಎಚ್ಚರಿಕೆ ನೀಡಿದರು.
ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ರಸಗೊಬ್ಬರ ಉತ್ಪಾದಕರು ಹಾಗೂ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ರಸಗೊಬ್ಬರಗಳನ್ನು ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರದ ಮೂಲಕವೇ ಕಡ್ಡಾಯವಾಗಿ ಮಾರಾಟ ಮಾಡಿ ದಾಖಲಿಸಬೇಕು ಎಂದರು. ಯೂರಿಯಾ ರಸಗೊಬ್ಬರ ಮಾರಾಟ ಮಾಡುವಾಗ ಕೃಷಿ ಇಲಾಖೆಯ ಕೆ-ಕಿಸಾನ್ ತಂತ್ರಾಂಶದ ಮೂಲಕ ಫ್ರುಟ್ಸ್ ಐಡಿ ಆಧಾರಿತ ಜಮೀನಿನ ವಿಸ್ತೀರ್ಣದ ಪ್ರಕಾರ, ಒಂದು ಎಕರೆಗೆ ಒಂದು ಚೀಲದಂತೆ ಮಾರಾಟ ಮಾಡಬೇಕು ಎಂದರು.
ರಸಗೊಬ್ಬರ ಮಳಿಗೆಗಳಲ್ಲಿ ಪಿಒಎಸ್ ದಾಖಲಾತಿ ಮತ್ತು ಭೌತಿಕ ದಾಸ್ತಾನು ಹೊಂದಾಣಿಕೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು. ರಸಗೊಬ್ಬರ ಮಾರಾಟಗಾರರು ತಮ್ಮ ಮಳಿಗೆಯ ಮುಂದೆ ಅಂದಿನ ರಸಗೊಬ್ಬರ ದರ ಹಾಗೂ ದಾಸ್ತಾನು ವಿವರಗಳನ್ನು ಸ್ಪಷ್ಟವಾಗಿ ಕಾಣುವಂತೆ ಫಲಕ ಪ್ರದರ್ಶಿಸುವುದು ಕಡ್ಡಾಯವಾಗಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಮುಂಬರುವ ಮುಂಗಾರು ಹಂಗಾಮಿಗೆ ಜಿಲ್ಲೆಗೆ ಏಪ್ರಿಲ್ 2026 ದಿಂದ ಸೆಪ್ಟೆಂಬರ್ 2026 ರವರೆಗೆ ಒಟ್ಟು 1.27 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು,ದಿನಾಂಕ: 15.04.2026ರ ಸ್ಥಿತಿಗೆ ಜಿಲ್ಲೆಯಲ್ಲಿ ಒಟ್ಟು 64,337 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಅದರಲ್ಲಿ ಮುಖ್ಯವಾಗಿ 16,442 ಮೆಟ್ರಿಕ್ ಟನ್ ಯೂರಿಯಾ, 9,871 ಮೆಟ್ರಿಕ್ ಟನ್ ಡಿ.ಎ.ಪಿ ಹಾಗೂ 32,466 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರಗಳ ದಾಸ್ತಾನು ಇದೆ. ಮಾಹೆವಾರು ಸರಬರಾಜು ಯೋಜನೆಯಂತೆ ಜಿಲ್ಲೆಗೆ ರಸಗೊಬ್ಬರ ಪೂರೈಕೆ ಆಗುತ್ತಿದ್ದು, ಸಮರ್ಪಕ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಸಗೊಬ್ಬರ ಮಾರಾಟಗಾರರಿಗೆ ಸೂಚಿಸಿದರು.
ಜಿಲ್ಲೆಯುಅಂತಾರಾಜ್ಯ ಗಡಿಭಾಗದಲ್ಲಿರುವುದರಿಂದ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ಗಳ ಮೂಲಕ ಯೂರಿಯಾ ಅನಧಿಕೃತ ಸಾಗಾಣಿಕೆಗೆ ನಿಗಾ ವಹಿಸಲಾಗುತ್ತಿದೆ. ಪ್ರತಿವಾರ ವಿಡಿಯೋ ಕಾನ್ಸರೆನ್ಸ್ ಸಭೆಗಳ ಮೂಲಕ ರಸಗೊಬ್ಬರ ಪೂರೈಕೆ, ಮಾರಾಟ ಹಾಗೂ ದಾಸ್ತಾನು ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು.
ಯೂರಿಯಾ ಹಾಗೂ ಡಿ.ಎ.ಪಿ ರಸಗೊಬ್ಬರಗಳಿಗೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ ಬಳಕೆಗೆ ಉತ್ತೇಜನ ನೀಡುವಂತೆ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ ಎಂದರು. ಏಪ್ರಿಲ್ 2026 ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಮತ್ತು ಡಿ.ಎ.ಪಿ ಮಾರಾಟ ಮಾಡಿದ ಕೆಲ ರಸಗೊಬ್ಬರ ಮಾರಾಟಗಾರರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಜಂಟಿ ನಿರ್ದೇಶಕರು ಸಭೆಗೆ ವಿವರಿಸಿದರು.
ಸಭೆಯಲ್ಲಿ ರಸಗೊಬ್ಬರ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳು, ಸಗಟು ಹಾಗೂ ಚಿಲ್ಲರೆ ರಸಗೊಬ್ಬರ ಮಾರಾಟಗಾರರು, ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ವಿಭಾಗೀಯ ಉಪ ಕೃಷಿ ನಿರ್ದೇಶಕರು ಪಾಲ್ಗೊಂಡಿದ್ದರು.






