ವಿಜಯಪುರ: ಕನ್ನಡದ ಆದ್ಯ ನಾಟಕಕಾರರು ಎಂದು ಪ್ರಸಿದ್ಧರಾಗಿರುವ ಶ್ರೀ ಸಕ್ಕರಿ ಬಾಳಾಚಾರ್ಯರು ಶಾಂತಕವಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರು. 19ನೇ ಶತಮಾನದ ಆರಂಭದಲ್ಲಿ ಉತ್ತರ ಕರ್ನಾಟಕವು ಸಂಪೂರ್ಣ ಬ್ರಿಟಿಷರ್ ಆಧೀನ ಪೇಶ್ವೆಯರ ಆಡಳಿತದ ಉಸ್ತುವಾರಿಯಲ್ಲಿ ಇದ್ದುದರಿಂದ ಸಹಜವಾಗಿಯೇ ಎಲ್ಲ ರಂಗಗಳಲ್ಲಿಯೂ ಮರಾಠಿ ಭಾಷೆ ಹಾಸುಹೊಕ್ಕಾಗಿತ್ತು. ಶಾಂತವಿಕಗಳು ಕನ್ನಡ ಭಾಷೆಯಲ್ಲಿ ನಾಟಕ, ಕೀರ್ತನೆ, ಕಾವ್ಯ ಹಾಗೂ ಬಿಡಿಕವಿಗಳನ್ನು, ಅನುವಾದ ಗ್ರಂಥಗಳನ್ನು ರಚಿಸಿ ಕನ್ನಡಿಗರಲ್ಲಿ ಕನ್ನಡತನವನ್ನು ಜಾಗೃತಗೊಳಿಸಲು ರಂಗಭೂಮಿಯೇ ಸುಲಭ ಸಾಧನ ಎಂದು ಮನಗೊಂಡು ಶಾಂತಕವಿಗಳು 1877 ರಲ್ಲಿ ಕನ್ನಡ ಭಾಷೆಯಲ್ಲಿ ‘ಉಷಾಹರಣ’ ಮೊಟ್ಟಮೊದಲ ಸ್ವತಂತ್ರ ನಾಟಕ ಬರೆದು ಪ್ರದರ್ಶಿಸಿದರು ಎಂದು ರಂಗಭೂಮಿ ವಿದ್ವಾಂಸರಾದ ಡಾ. ರಾಮಕೃಷ್ಣ ಮರಾಠೆ ಹೇಳಿದರು.
ಇದನ್ನೂ ಓದಿ: Vijayapura News | ೧೯೭೪ ರ ವಕ್ಫ ಕಾಯ್ದೆ ಗೆಜೆಟ್ ರದ್ದುಗೊಳಿಸಲು ನಾಳೆ ಬಿಜೆಪಿಯಿಂದ ಧರಣಿ ಸತ್ಯಾಗ್ರಹ
ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್ ಧಾರವಾಡ ಇವರ ಸಹಯೋಗದೊಂದಿಗೆ ಸಂಶೋಧನಾ ಕೇಂದ್ರದಲ್ಲಿ ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ಜರುಗಿದ ಸಮಾರಂಭದಲ್ಲಿ ಮಾತನಾಡಿ ಹೊಸಗನ್ನಡ ಕಾವ್ಯ ನಾಟಕ ರಚಿಸಿ ರಂಗಭೂಮಿಗೆ ಅವಿಶ್ರಾಂತವಾಗಿ ದುಡಿದ ಸಕ್ಕರಿ ಬಾಳಾಚಾರ್ಯರು ಯಕ್ಷಗಾನ ತಂತ್ರವನ್ನು ಬಳಸಿಕೊಂಡು ಜನಪದ ಹಾಗೂ ಶ್ರೇಷ್ಠ ರಂಗಭೂಮಿಯ ಸಮನ್ವಯತೆಯನ್ನು ಸಾಧಿಸಿ ರಂಗಾಸಕ್ತರ ಮೆಚ್ಚುಗೆಯಿಂದ ಕೃಷ್ಣಾರಾಧಾ ವಿಲಾಸ. ಕಿಚಕ ವಧೆ, ಸೀತಾರಣ್ಯ ಪ್ರವೇಶ, ರಾವಣ ವಧೆ ಮುಂತಾದ 60ಕ್ಕೂ ಹೆಚ್ಚು ನಾಟಕಗಳನ್ನು ಬರೆದು ಸ್ವತಃ ಕಲಿಸಿ ಪ್ರದರ್ಶಿಸುವ ಮೂಲಕ ನಾಡಿನ ಜನತೆ ಕನ್ನಡ ನಾಟಕ ನೋಡುವ ಹೊಸ ಪರಂಪರೆ ರೂಢಿಸಿದರು ಎಂದರು.
ಡಾ. ಕೃಷ್ಣಕೊಲ್ಹಾರ ಕುಲಕರ್ಣಿ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ನಿರ್ದೇಶಕರು ಮಾತನಾಡುತ್ತ ಕವಿ, ಕೀರ್ತನಕಾರ, ನಾಟಕಕಾರರಾಗಿ ಕನ್ನಡ ನಾಡು, ನುಡಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಫಲ ಬಯಸದೆ ದುಡಿದವರಲ್ಲಿ ಶಾಂತಕವಿಗಳು ಪ್ರಮುಖರು. ಕನ್ನಡ ದಾಸಯ್ಯನೆಂದು ತಮ್ಮನ್ನು ಕರೆದುಕೊಂಡು ನವೋದಯ ಕಾಲದ ಕನ್ನಡ ಶಕ್ತಿಯಾದವರು. ಸಾಹಿತ್ಯ ಕ್ಷೇತ್ರದಲ್ಲಿ ಎಲೆ-ಮರೆ-ಕಾಯಿಯಂತೆ ತೊಡಿಗಿಕೊಂಡು ಕನ್ನಡ ನುಡಿ, ಸಾಂಸ್ಕøತಿಯ ಪುರುಜ್ಜೀವನಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟರು. ಕನ್ನಡ ರಂಗಭೂಮಿಗೆ ಭದ್ರಬುನಾದಿಯನ್ನು ಹಾಕಿದ ಕೀರ್ತಿ ಸಕ್ಕರಿ ಬಾಳಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ. ವಿ.ಡಿ. ಐಹೊಳ್ಳಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಹೊಸಗನ್ನಡ ಕಾವ್ಯ ನಾಟಕ ಕನ್ನಡ ಭಾಷೆಯ ಬಗೆಗಿನ ಶಾಂತಕವಿಗಳ ಚಿಂತನೆ ಇಂದಿನವರಿಗೆ ಸ್ಪೂರ್ತಿಯಾಗುವಂತದ್ದು, ಅವರ ಸ್ಮರಣಿಯ ಕಾರ್ಯಗಳು ಆಧುನಿಕ ಕನ್ನಡ ರಂಗಭೂಮಿಯ ಪಿತಾಮಹ ಎಂದು ಸಕ್ಕರಿ ಬಾಳಾಚಾರ್ಯರು ನಮಗೆಲ್ಲ ಆದರ್ಶ. ಅವರ ಕುರಿತಾಗಿ ವಂಶಸ್ಥರು ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಧಾರವಾಡ ಮೂಲಕ ಕರ್ನಾಟಕ ಪ್ರತಿ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ರಂಗಭೂಮಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ ಶ್ಲಾಘನೀಯ ಎಂದರು.
ಇದನ್ನೂ ಓದಿ: Vijayapura News | ಕನ್ನಡ ಪುಸ್ತಕ ಪರಿಷತ್ತು ಸಮ್ಮೆಳನಾಧ್ಯಕ್ಷ ಡಾ.ಪ್ರಕಾಶ ಖಾಡೆಗೆ ಆಹ್ವಾನ
ರಂಗನಿರ್ದೇಶಕ ಸಂಗಮೇಶ ಬದಾಮಿ ಮಾತನಾಡಿ ಕರ್ನಾಟಕ ನಾಟಕದ ಪ್ರಥಮ ಗುರು ಶಾಂತಕವಿಗಳು ಕರ್ನಾಟಕ ಕನ್ನಡ ವೃತ್ತಿರಂಗಭೂಮಿಯನ್ನು ಉದ್ಘಾಟಿಸಿದ ಅಖಂಡ ಕರ್ನಾಟಕದ ಮೊಟ್ಟ ಮೊದಲ ವೃತ್ತಿ ನಾಟಕ ಮಂಡಳಿಯಾಗಿದೆ. ಶಾಂತಕವಿಗಳ ರಕ್ಷಿಸು ಕರ್ನಾಟಕ ದೇವಿ ಎಂಬ ಗೀತೆ ಬಹಳ ಕಾಲದವರೆಗೆ ಉತ್ತರ ಕರ್ನಾಟಕದಲ್ಲಿ ನಾಡಗೀತೆಯಾಗಿತ್ತು ಎಂದರು.
ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿಗಳಾದ ಡಾ. ಎಂ.ಎಸ್. ಮದಭಾವಿ ಸರ್ವರನ್ನು ಸ್ವಾಗತಿಸಿದರು. ಪ್ರೊ. ಸುಭಾಸ ಕನ್ನೂರ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಬಿ.ಎಂ. ಪಾಟೀಲ, ವಿ.ಸಿ. ನಾಗಠಾಣ, ಡಾ. ಆರ್.ಕೆ. ಕುಲಕರ್ಣಿ, ಸುಭಾಸ ಯಾದವಾಡ, ಬಸವರಾಜ ಕುಂಬಾರ, ಡಾ. ಉಷಾದೇವಿ ಹಿರೇಮಠ, ದ್ರಾಕ್ಷಾಯಿಣಿ ಬಿರಾದಾರ, ಮನು ಪತ್ತಾರ, ಡಾ. ಎಂ.ಎಸ್. ಮಾಗಣಗೇರಿ, ರಮೇಶ ತೇಲಿ, ಎಂ.ಜಿ. ಯಾದವಾಡ, ಶರಣಗೌಡ ಪಾಟೀಲ, ವಿಠ್ಠಲ ತೇಲಿ, ಎಂ.ಎಸ್. ಡಿಗ್ಗಾಂವಿ, ಎಂ.ಆರ್. ಬಡಿಗೇರ, ಬಿ.ಕೆ. ಗೊಟ್ಯಾಳ, ಎಸ್.ಬಿ. ದೊಡಮನಿ, ಎಸ್.ಎನ್. ಶಿವಣಗಿ ಉಪಸ್ಥಿತರಿದ್ದರು.






