ರಾಜಗುರು ಫುಡ್ಸ್ ಗೋದಾಮಿನ ದುರಂತ: ರಾಜ್ಯ ಸರ್ಕಾರದಿಂದ ಮೃತ ಕುಟುಂಬಗಳಿಗೆ ಪರಿಹಾರ-ಸಚಿವ ಡಾ.ಎಂ.ಬಿ.ಪಾಟೀಲ

ವಿಜಯಪುರ ಡಿ.05: ತಾಲೂಕಿನ ಅಲಿಯಾಬಾದ್ ಗ್ರಾಮದ ಕೈಗಾರಿಕಾ ಪ್ರದೇಶದ ಬ್ಲಾಕ್-2ರಲ್ಲಿರುವ ರಾಜಗುರು ಫುಡ್ಸ್ ಗೋದಾಮಿನಲ್ಲಿ ನಡೆದ ದುರಂತದಲ್ಲಿ ಸಾವಿಗೀಡಾದ 7 ಜನ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

0
74
KN Image

ವಿಜಯಪುರ ಡಿ.05: ತಾಲೂಕಿನ ಅಲಿಯಾಬಾದ್ ಗ್ರಾಮದ ಕೈಗಾರಿಕಾ ಪ್ರದೇಶದ ಬ್ಲಾಕ್-2ರಲ್ಲಿರುವ ರಾಜಗುರು ಫುಡ್ಸ್ ಗೋದಾಮಿನಲ್ಲಿ ನಡೆದ ದುರಂತದಲ್ಲಿ ಸಾವಿಗೀಡಾದ 7 ಜನ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕಿಶೋರ ಜೈನ್ ಎಂಬುವರ ಒಡೆತನದ ರಾಜಗುರು ಫುಡ್ಸ್ ವ್ಯಾಪಾರ ಕೇಂದ್ರದಲ್ಲಿ 500 ರಿಂದ 600 ಟನ್ ಸಾಮಥ್ರ್ಯದ 3 ಸರಣಿ ಟ್ಯಾಂಕ್‍ಗಳಿದ್ದು, ಈ ಟ್ಯಾಂಕ್‍ಗಳ ಪೈಕಿ ಒಂದು ಟ್ಯಾಂಕ್ ಸರಣಿ ಕಂಬ ಮುರಿದು ಕುಸಿದು ಬಿದ್ದಿರುವುದರಿಂದ ಟ್ಯಾಂಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು. ಇದರಲ್ಲಿ 8 ಜನ ಕಾರ್ಮಿಕರ ಪೈಕಿ ಓರ್ವ ಕಾರ್ಮಿಕನನ್ನು ರಕ್ಷಿಸಿ ಗಾಯಾಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ ಹಾಗೂ ಈ ಘಟನೆಯಲ್ಲಿ ದುರಾದೃಷ್ಟವಶಾತ್ 7 ಜನ ಕಾರ್ಮಿಕರು ಮೃತಪಟ್ಟಿದ್ದು, ಮೃತ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಿಸಿದ್ದು, ವ್ಯಾಪಾರ ಕೇಂದ್ರದ ಮಾಲೀಕರಿಂದ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ರಾಜ್ಯದ ಯಾವುದೇ ಕೈಗಾರಿಕೆಗಳಲ್ಲಿ ಅನಾಹುತಕ್ಕೆ ಆಸ್ಪದ ನೀಡದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಹಾಗೂ ಸುರಕ್ಷಾ ಕ್ರಮಗಳಿಗೆ ಆದ್ಯತೆ ನೀಡಲಾಗುವುದು. ಇಂತಹ ದುರ್ಘಟನೆಗಳು ಮರುಕಳಿಸದಂತೆ ಎಲ್ಲ ವ್ಯಾಪಾರ ಕೇಂದ್ರಗಳಿಗೂ ಹಾಗೂ ಕೈಗಾರಿಕಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳುವಂತೆ ಕ್ರಮ ವಹಿಸಲಾಗುವುದು. ವ್ಯಾಪಾರ ಕೇಂದ್ರದಲ್ಲಿ ಆಗಿರುವ ಘಟನೆಗೆ ತಾಂತ್ರಿಕ ದೋಷ ಮತ್ತು ನ್ಯೂನ್ಯತೆಗಳ ಕುರಿತು ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

ದಿನಾಂಕ : 04-12-2023 ರಂದು ಸಂಜೆ 5 ಗಂಟೆಗೆ ಈ ಘಟನೆ ಸಂಭವಿಸಿದ್ದು, ಘಟನೆ ಮಾಹಿತಿ ದೊರೆತ ನಂತರ ಸಚಿವರು ಬೆಳಗಾವಿಯಿಂದ ಮಧ್ಯರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿ, ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಿಂದ ರಕ್ಷಣಾ ಕಾರ್ಯಾಚರಣೆ ಹಾಗೂ ಗಾಯಾಳುಗಳ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡರು. ರಕ್ಷಣಾ ಕಾರ್ಯಾಚರಣೆಗೆ ಸೂಕ್ತ ನಿರ್ದೇಶನ ನೀಡಿದರು. ದುರಂತದಲ್ಲಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಸೂಕ್ತ ವೈದ್ಯೋಪಚಾರ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೃತಪಟ್ಟ ಕಾರ್ಮಿಕರು: ಗೋದಾಮಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ 36 ವರ್ಷದ ರಂಭಿತ, 20 ವರ್ಷದ ರಾಜೇಶ ಮುಖಿಯಾ, 40 ವರ್ಷದ ಶಂಭು ಮುಖಿಯಾ, 40 ವರ್ಷದ ರಾಮಬಾಲಕ, 55 ವರ್ಷದ ಲುಕೋ ಯಾಧವ, 18 ವರ್ಷದ ಕೃಷ್ಣಕುಮಾರ ಮುಖಿಯಾ ಹಾಗೂ 33 ವರ್ಷದ ಧುಲಾಚಂದ ಮುಖಿಯಾ ಎಂಬ ಕಾರ್ಮಿಕರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಘಟನೆಯ ವಿವರ : ತಾಲೂಕಿನ ಅಲಿಯಾಬಾದ ಕೈಗಾರಿಕಾ ಪ್ರದೇಶದಲ್ಲಿ ರಾಜಗುರು ಫುಡ್ಸ್ ಎಂಬ ವ್ಯಾಪಾರ ಕೇಂದ್ರದಲ್ಲಿ 40 ರಿಂದ 50 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರದಲ್ಲಿ ಅವಶ್ಯಕತೆಯನುಸಾರ 100 ರಿಂದ 150 ಕಾರ್ಮಿಕರನ್ನು ಗುತ್ತಿಗೆ ಪಡೆಯಲಾಗುತ್ತದೆ. ಡಿ.4ರಂದು ಸಂಜೆ 5 ಗಂಟೆಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮೆಕ್ಕೆಜೋಳ ತುಂಬಿರುವ ಒಂದು ಟ್ಯಾಂಕ್ ಸರಣಿ ಕಂಬ ಮುರಿದು ಬಿದ್ದಿದ್ದು, ಕಾರ್ಮಿಕರು ಭಯಭೀತರಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಂದಾಜು 50 ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ 8 ಜನ ಕಾರ್ಮಿಕರಿಗೆ ಅಲ್ಲಿಂದ ಪಾರಾಗಲು ಸಾಧ್ಯವಾಗದ ಕಾರಣ, ಮೆಕ್ಕೆಜೋಳದ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಘಟನೆ ಕುರಿತು ಸಂಜೆ 6 ಗಂಟೆಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಅಗ್ನಿಶಾಮಕ, ಮಹಾನಗರಪಾಲಿಕೆ ಪೋಲಿಸ್ ಸಿಬ್ಬಂದಿಯೊಂದಿಗೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಓರ್ವ ವ್ಯಕ್ತಿಯನ್ನು ರಕ್ಷಿಸಿ ಅವರನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಿದ್ದಾರೆ. ನಂತರ ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ತಂಡಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಅಂದಾಜು 12 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಸಿಲುಕಿಕೊಂಡಿರುವ 7 ಮೃತ ದೇಹಗಳನ್ನು ಹೊರತೆಗೆಯಲಾಗಿದೆ.

ಇದನ್ನೂ ಓದಿ:ವಿಜಯಪುರದಲ್ಲಿ ಕಾರ್ಮಿಕರ ದಾರುಣ ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಾಟೀಲ ಆಗ್ರಹ

ಮೃತ ದೇಹಗಳನ್ನು ಹತ್ತಿರದ ವಿಮಾನ ನಿಲ್ಧಾಣದಿಂದ ಏರ್ ಲಿಪ್ಟ್ ಮಾಡಿ ಪಾಟ್ನಾ ವಿಮಾನ ನಿಲ್ಧಾಣದಕ್ಕೆ ತಲುಪಿದ ನಂತರ ಮೃತ ದೇಹಗಳನ್ನು ಮೃತರ ಮನೆಯವರೆಗೆ ತಲುಪಿಸವ ವ್ಯವಸ್ಥೆಯನ್ನು ಮಾಡಲಾಗಿದೆ. ಸದರಿ ಕಾರ್ಯಾಚರಣೆಯಲ್ಲಿ ಜೆಸಿಬಿ ಮತ್ತು ಹಿಟಾಚಿಗಳನ್ನು ಬಳಸಲಾಗಿದ್ದು, 24 ಜನ ಬೆಳಗಾವಿಯಿಂದ ಹಾಗೂ 26 ಜನ ಕಲಬುರಗಿಯಿಂದ ಎಸ್‍ಡಿಆರ್‍ಎಫ್ ತಂಡಗಳು, 30ಜನರನ್ನೊಳಗೊಂಡ ಮಹಾರಾಷ್ಟ್ರದ ಪುಣೆಯಿಂದ ಎನ್‍ಡಿಆರ್‍ಎಫ್ ತಂಡ ಭಾಗವಹಿಸಿತ್ತು.

ಸಚಿವರಿಂದ ಶ್ರದ್ಧಾಂಜಲಿ: ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆ ಆವರಣಕ್ಕೆ ತೆರಳಿ ವಿಜಯಪುರ ಗೋದಾಮಿನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಸಚಿವರಿಂದ ಪ್ರಶಂಸೆ ಪತ್ರ: ರಾಜಗುರು ಫುಡ್ಸ್ ಗೋದಾಮಿನಲ್ಲಿ ನಡೆದ ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಡೆಪ್ಯೂಟಿ ಕಮಾಂಡೆಂಟರ್ ಆರ್.ಅರವಿಂದ ನೇತೃತ್ವದ ಬೆಳಗಾವಿ ಹಾಗೂ ಡೆಪ್ಯೂಟಿ ಕಮಾಂಡೆಂಟ್ ಸಲಾವುದ್ದೀನ್ ನೇತೃತ್ವದ ಕಲ್ಬುರ್ಗಿ ಎಸ್‍ಡಿಆರ್‍ಎಫ್ ತಂಡ ಹಾಗೂ ಅನೀಲ ತಾಲಕೋಟ್ರಾ ನೇತೃತ್ವದ ಎನ್‍ಡಿಆರ್‍ಎಫ್ ತಂಡ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವನೆ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ್ ಸೌದಾಗರ, ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ ಹುಬ್ಬಳ್ಳಿ, ಕಂದಾಯ ಇಲಾಖೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರಿಗೆ, ಬಿಎಲ್‍ಡಿಇ ಫಾರೆನ್ಸಿಕ್ ಎಚ್‍ಓಡಿ ಸೇರಿದಂತೆ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲ ಇಲಾಖೆ ಸಿಬ್ಬಂದಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಕೃತಜ್ಞತೆ ಸಲ್ಲಿಸಿ ಪ್ರಶಂಸೆ ಪತ್ರ ನೀಡಿದರು.

KN Image

ambedkar image

LEAVE A REPLY

Please enter your comment!
Please enter your name here