ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನವರ ಹೆಸರು ನಾಮಕರಣ ಮಾಡಲು ಆಗ್ರಹ

0
148

ವಿಜಯಪುರ:ಜುಲೈ30: ಬುರಣಾಪುರ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯ ಪ್ರಾರಂಭವಾಗಿದ್ದು, ವಿಜಯಪುರ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನವರ ಹೆಸರು ನಾಮಕರಣ ಮಾಡಬೇಕೆಂದು ಬಸವನ ಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮಿ ಹಾಗೂ ರೈತ ಮುಖಂಡ ಅರವಿಂದ ಕುಲಕರ್ಣಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ವಿಜಯಪುರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ನಿರ್ಮಾಣಗೊಳ್ಳುತ್ತಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನವರ ಹೆಸರಿಡುವುದೇ ಅತ್ಯಂತ ಸೂಕ್ತವಾಗಿದ್ದು, ಬಸವಣ್ಣನವರು ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿದವರು. ಮೇಲು ಕೀಳು ಎಂಬ ಭಾವನೆ, ಹೊಡೆದು ಹಾಕಲು ಕಲ್ಯಾಣದಲ್ಲಿ ಅಂತರ್ಜಾತಿ ವಿವಾಹ ಮಾಡುವ ಮೂಲಕ ಮಹಾಕ್ರಾಂತಿಯನ್ನೇ ಮಾಡಿ ಜಾತಿಯನ್ನು ಹೋಗಲಾಡಿಸಲು ಪ್ರಯತ್ನಿಸಿದವರು. ಜಗತ್ತಿನಲ್ಲಿ ಪ್ರಥಮವಾಗಿ ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಸಂವಿಧಾನದ ಪರಿಕಲ್ಪನೆ ಕೊಟ್ಟವರೇ ಬಸವಣ್ಣನವರು. ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಹೇಳಿದ ಮಹಾಮಾನವತಾವಾದಿ ಇವರು. ಅಡುಗೆ ಮನೆಯೇ ಗತಿ ಎಂದು ಹತಾಶಗೊಂಡ ಮಹಿಳೆಯರನ್ನ ಸಮಾಜದ ಮುಖ್ಯವಾಹಿನಿಗೆ ತಂದವರೇ ಬಸವಣ್ಣನವರು. ಇಂತವರ ಹೆಸರಿಡುವುದು ಉತ್ತಮ ಹಾಗೂ ಬಸವಣ್ಣನವರ ಹೆಸರು ನಾಮಕರಣ ಮಾಡುವುದಕ್ಕೆ ಯಾರ ಅಭ್ಯಂತರವು ಬರುವುದಿಲ್ಲ. ನಾಡಿನ ಎಲ್ಲ ಬಸವಾಭಿಮಾನಿಗಳ ಆಶಯ ಕೂಡ ಇದೇ ಆಗಿದೆ. ಎಂದು ಹೇಳಿದರು.

ಹುಣಶ್ಯಾಳ ಶ್ರೀಮಠದ ಸಂಗನ ಬಸವ ಸ್ವಾಮಿಗಳು ಮಾತನಾಡಿ, ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಚರ್ಚಿಸಿ ಮುಂದಿನ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಈ ಕುರಿತು ಸೋಮವಾರದಂದು ದಿನಾಂಕ : 02-08-2021 ರಂದು ಬಸವನಬಾಗೇವಾಡಿಯಲ್ಲಿ ಮೆರವಣಿಗೆ ಮೂಲಕ ಒಂದು ದಿನದ ಸಾಂಕೇತಿಕ ಧರಣಿಯನ್ನು ನಾಡಿನ ಎಲ್ಲ ಮಠಾಧೀಶರು ಎಲ್ಲ ಬಸವಾಭಿಮಾನಿಗಳು ಎಲ್ಲ ಸಂಘಟನೆಗಳು ಧರಣಿ ನಡೆಸಲಾಗುವುದು. ಸರ್ಕಾರ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಶೀಘ್ರದಲ್ಲಿ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರ ವಿಮಾನ ನಿಲ್ದಾಣವೆಂದು ನಾಮಕರಣ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ, ರೈಲು ತಡೆ,ಉಪವಾಸ ಸತ್ಯಾಗ್ರಹ ಮುಂತಾದ ಚಳುವಳಿಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ಎಪಿಎಂಸಿ ಅಧ್ಯಕ್ಷ ಶೇಖರ ಗೊಳಸಂಗಿ, ಬಸವನಬಾಗೇವಾಡಿ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಗಮೇಶ ಓಲೆಕಾರ, ಬಸವನಬಾಗೇವಾಡಿ ಪುರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ ಹಾರಿವಾಳ, ರೈತ ಮುಖಂಡರಾದ ಸÀದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here