ವಿಜಯಪುರ: ಕೊರೋನಾ ತಡೆಯಲು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ; ಜಿಲ್ಲಾದ್ಯಂತ 40 ಚಾಲ್ತಿಯಲ್ಲಿರುವ ಕಂಟೇನ್ಮೆಂಟ್ ವಲಯಗಳು

0
228

ವಿಜಯಪುರ ಜೂನ್ 26: ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತಂತೆ ಅವಶ್ಯಕ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕಂಟೇನ್ಮೆಂಟ್ ವಲಯಗಳಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ತಹಶಿಲ್ದಾರರು ಮತ್ತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತು ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳಬೇಕು. 60ಕ್ಕಿಂತ ಮೇಲ್ಪಟ್ಟ ವಯೋಮಾನದ ವಯೋವೃದ್ಧರು, 10 ವರ್ಷದೊಳಗಿನ ಮಕ್ಕಳು ಯಾವುದೇ ಪರಿಸ್ಥಿತಿಯಲ್ಲಿ ಹೊರಗೆ ಬರದಂತೆ ಮುನ್ನೆಚ್ಚರಿಕೆ ವಹಿಸಲು ಅವರು ಮನವಿ ಮಾಡಿದ್ದಾರೆ.

ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಾಥಮಿಕ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಲಕ್ಷಣ ಕಂಡುಬಂದಲ್ಲಿ ಯಾವುದೇ ರೀತಿಯ ಸ್ವಯಂ ಧ್ಯಾನಕ್ಕೆ ಒಳಗಾಗದೆ ಸೂಕ್ತ ಚಿಕಿತ್ಸೆಗೆ ಒಳಪಡಬೇಕು. ಮಳೆಗಾಲ ಇರುವುದರಿಂದ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟ ತೊಂದರೆಗಳು ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು. ತೀವ್ರ ಉಸಿರಾಟ ತೊಂದರೆ ಆಗುವವರೆಗೆ ವಿಳಂಬ ಮಾಡದೇ ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ಸಂಪರ್ಕಿಸುವಂತೆ ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ಅತಿಹೆಚ್ಚು ಜನಸಂದಣಿ, ಕೊಳಗೇರಿ ಪ್ರದೇಶಗಳಲ್ಲಿ ಸಾರ್ವಜನಿಕರೆಲ್ಲರು ಎಚ್ಚರಿಕೆ ಇಂದ ಇದ್ದು ಸೂಕ್ತ ಮುಂಜಾಗೃತೆ ವಹಿಸಿಕೊಳ್ಳಬೇಕು. ಜಿಲ್ಲಾದ್ಯಂತ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವಂತೆ ತಿಳಿಸಿರುವ ಅವರು ತೀರಾ ಅವಶ್ಯಕ ಕಾರ್ಯಗಳಿದ್ದಾಗ ಮಾತ್ರ ಮನೆಯಿಂದ ಹೊರ ಬರುವಂತೆ ಮತ್ತು ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದವರು ತಕ್ಷಣ ಆಯಾ ಪಟ್ಟಣಗಳ ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ಮತ್ತು ಸ್ಥಳಿಯ ಆಡಳಿತ ವರ್ಗಕ್ಕೆ ಹಾಗೂ ಆಯಾ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗೆ ಮಾಹಿತಿ ಒದಗಿಸಬೇಕು. ಕಡ್ಡಾಯವಾಗಿ 14 ದಿನಗಳ ಕಾಲ ಹೋಮ್‍ಕ್ವಾರಂಟೈನ್‍ಗೆ ಒಳಪಡುವಂತೆಯೂ ಅವರು ತಿಳಿಸಿದ್ದು, ಇಂತಹ ವ್ಯಕ್ತಿಗಳು ಬಂದ ತಕ್ಷಣ ಸಹಾಯವಾಣಿ 1077 ಗೂ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.

ಜಿಲ್ಲಾದ್ಯಂತ ಕೋವಿಡ್-19 ಮುನ್ನೆಚ್ಚರಿಕೆಯಾಗಿ ಕಂಟೇನ್ಮೆಂಟ್ ವಲಯಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 85 ಕಂಟೇನ್ಮೆಂಟ್ ವಲಯಗಳನ್ನು ಗೊತ್ತುಪಡಿಸಿದ್ದು, ಚಾಲ್ತಿಯಲ್ಲಿರುವ 40 ಕಂಟೇನ್ಮೆಂಟ್ ಝೋನ್‍ಗಳಿವೆ. ಈವರೆಗೆ ಒಟ್ಟು 45 ಕಂಟೇನ್ಮೆಂಟ್ ವಲಯಗಳನ್ನು ಡಿ ನೋಟಿಫಿಕೇಶನ್ ಮಾಡಲಾಗಿದೆ. ವಿಜಯಪುರ ನಗರದಲ್ಲಿ 20, ವಿಜಯಪುರ ಗ್ರಾಮಾಂತರದಲ್ಲಿ 2, ಬಬಲೇಶ್ವರದಲ್ಲಿ 1, ತಿಕೋಟಾದಲ್ಲಿ 1, ಬ,ಬಾಗೇವಾಡಿಯಲ್ಲಿ ಯಾವುದೇ ಕಂಟೇನ್ಮೆಂಟ್ ವಲಯಗಳಿಲ್ಲ, ನಿಡಗುಂದಿಯಲ್ಲಿ 2, ಕೋಲ್ಹಾರ-ಇಲ್ಲ, ಇಂಡಿ-7, ಚಡಚಣ-1, ಮುದ್ದೇಬಿಹಾಳ-4, ತಾಳಿಕೋಟೆ-ಇಲ್ಲ, ಸಿಂದಗಿ-2, ದೇವರ ಹಿಪ್ಪರಗಿ-ಇಲ್ಲ ಹೀಗೆ ಒಟ್ಟು 40 ಕಂಟೇನ್ಮೆಂಟ್ ವಲಯಗಳು ಚಾಲ್ತಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾದ್ಯಂತ ಇರುವ ಕಂಟೇನ್ಮೆಂಟ್ ವಲಯಗಳ ವಿವರ ಈ ರೀತಿಯಾಗಿದೆ. ವಿಜಯಪುರ ನಗರದ ಅಲ್ಲಾಪುರ ಬೇಸ್, ಗ್ಯಾಂಗ್ ಬಾವಡಿ, ತಾಜ್ ಬಾವಡಿ, ರಾಜಾಜಿನಗರ, ಮೇಹಬೂಬ್‍ನಗರ(ಕೆ.ಎಚ್.ಬಿ), ಹರಣಶಿಕಾರ ಗಲ್ಲಿ, ಗೋಳಗುಮ್ಮಟ ಎದರು, ಆದರ್ಶನಗರ, ಗಿಸಾಡಿ ಓಣಿ(ಇಂಡಿ ರಸ್ತೆ), ಮಿಷನ್ ಕಂಪೌಂಡ್, ರೈಲ್ವೆ ನಿಲ್ದಾಣ, ಅಪ್ಸರಾ ಥೇಟರ್, ಸಕಾಫ್ ರೋಜಾ, ಹಬೀಬನಗರ(ಅಥಣಿ ರಸ್ತೆ), ನವಬಾಗ, ನಾಗರಬೌಡಿ, ಜುಮ್ಮಾ ಮಸಿದಿ ಹಿಂಬಾಗ, ಎಸ್.ಪಿ ಕಾಲೋನಿ, ಶಿಕಾರಖಾನೆ, ಅಕ್ಕಿ ಕಾಲೋನಿ, ವಿಜಯಪುರ ಗ್ರಾಮಾಂತರದಲ್ಲಿ ಹೆಗಡಿಹಾಳ ತಾಂಡಾ, ಅದರಂತೆ ಬಬಲೇಶ್ವರ ತಾಲೂಕಿನ ತೋನಶಾಳ, ತಿಕೋಟಾ ತಾಲೂಕಿನ ಇಟ್ಟಂಗಿಹಾಳ, ನಿಡಗುಂದಿ ತಾಲೂಕಿನ ಬಳಬಟ್ಟಿ, ವಡವಡಗಿ ತಾಂಡಾ, ಇಂಡಿ ತಾಲೂಕಿನ ಅಥರ್ಗಾ, ಮಿರಗಿ, ಸಾಲೋಟಗಿ ರಸ್ತೆ ಇಂಡಿ, ಹಿರೆದೇವಣೂರ, ಕೋರ್ಟ ಹತ್ತಿರ ಇಂಡಿ, ಹಿಂಗಣಿ, ಹಿಂಗಣಿ(ತೋಟ), ಚಡಚಣ ತಾಲೂಕಿನ ಹಲಸಂಗಿ, ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ನಗರ, ಗಣೇಶ ನಗರ, ಮುದ್ದೇಬಿಹಾಳ, ದೋಟೆಗಲ್ಲಿ, ಮುದ್ದೇಬಿಹಾಳ, ಎರಗಲ್, ಸಿಂದಗಿ ತಾಲೂಕಿನ ಆಲಮೇಲ್, ಮತ್ತು ವಾರ್ಡ್ ನಂಬರ 07 ಹಾಗೂ ಸಿಂದಗಿಗಳಲ್ಲಿ ಕಂಟೇನ್ಮೆಂಟ್ ವಲಯಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ ವಿಜಯಪುರ ನಗರದ 5, ಬಬಲೇಶ್ವರದ 2, ತಿಕೋಟಾದ 3, ಬ.ಬಾಗೇವಾಡಿಯ 6, ನಿಡಗುಂದಿಯ 1, ಇಂಡಿಯ 3, ಚಡಚಣದ 3, ಮುದ್ದೇಬಿಹಾಳದ 3, ತಾಳಿಕೊಟೆಯ 7, ಸಿಂದಗಿಯ 6, ದೇವರ ಹಿಪ್ಪರಗಿಯ 6 ಕಂಟೇಂನ್ಮೆಂಟ್ ವಲಯಗಳು ಸೇರಿದಂತೆ ಒಟ್ಟು 45 ವಲಯಗಳನ್ನು ಡಿ ನೋಟಿಫಿಕೇಶನ್ ಮಾಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here