ದಾಖಲೆಯಾಗದ ಮಹಾನ್ಯಾಯವಾದಿಯ ಅವಿಸ್ಮರಣೀಯ_ವಾದ

0
310

ಅದೊಂದು ತೀವ್ರ ಕುತೂಹಲ ಕೆರಳಿಸಿದ ಜೋಡಿ ಕೊಲೆ ಆರೋಪ. ಅಂದಿನ ಬಿಜಾಪೂರ ಜಿಲ್ಲೆ(ಸಧ್ಯ ಬಾಗಲಕೋಟ) ಯ ಬೀಳಗಿಯಲ್ಲಿ ಸೋಮನಗೌಡ ಎನ್ನುವ ಒಬ್ಬ ಮುಖಂಡರಿದ್ದರು. ಅದೇ ಗ್ರಾಮದಲ್ಲಿ ಅವರಿಗೆ ಪ್ರಬಲ ವಿರೋಧಿ ಗುಂಪು ಸಹ ಇತ್ತು. ೧೯೩೬ ರಲ್ಲಿ ಸೋಮನಗೌಡರ ಬೆಂಬಲಿಗರು ಇಬ್ಬರ ಕೊಲೆ ಮಾಡಿದರೆಂದೂ ಮತ್ತೂ ಆ ಕೊಲೆ ಸೋಮನಗೌಡರೇ ಮಾಡಿಸಿದ್ದಾರೆ ಎಂದು ಸುದ್ದಿಯಾಗುತ್ತದೆ. ಆಗ ಪೋಲೀಸರು ಸೋಮನಗೌಡರ ಮೇಲೆ ಆರೋಪ ಹೊರಿಸಿ ಕೇಸು ದಾಖಲಿಸುತ್ತಾರೆ‌. ಈ ಕೊಲೆಗೆ ಸುಮಾರು ೨೦೦ ಜನ ಸಾಕ್ಷಿದಾರರು ಇದ್ದರು ಎನ್ನಲಾಗಿತ್ತು. ಸೋಮನಗೌಡರಿಗೆ ಗಲ್ಲು ಶಿಕ್ಷೆ ಖಂಡಿತ ಎನ್ನುವ ಚರ್ಚೆ ಆ ಸಮಯದಲ್ಲಿ ವಕೀಲರ ಗುಂಪಿನಲ್ಲಿ ನಡೆಯುತ್ತಿತ್ತು. ಆಗ ಬಿಜಾಪುರದಲ್ಲಿ M.C ಅಂಗಡಿ ಎನ್ನುವ ನಿಪುಣ ನ್ಯಾಯವಾದಿಯೊಬ್ಬರು ಸೋಮನಗೌಡರ ಪರ ವಕಾಲತ್ತು ನಡೆಸುತ್ತಿದ್ದರು. ಪ್ರಕರಣ ಗಂಭಿರವಾಗಿದ್ದರೂ ಸೋಮನಗೌಡರನ್ನು ಬಚಾವ್ ಮಾಡಲೇಬೇಕು ಎನ್ನುವ ಹಟಕ್ಕೆ ಬಿದ್ದ ಅಂಗಡಿಯವರು ಮುಂಬೈಗೆ ಪ್ರಯಾಣ ಹೋಗಿ ಬ್ಯಾರಿಸ್ಟರ್ ಲೇಲೆ ಮತ್ತು ಬ್ಯಾರಿಸ್ಟರ್ ಡಾ| B.R ಅಂಬೇಡ್ಕರ್ ಅವರನ್ನು ಕಂಡು ಕೇಸ್ ಗೆ ಸಂಬಂಧ ಪಟ್ಟ ದಾಖಲೆಗಳನ್ನು ನೀಡುತ್ತಾರೆ. ಅಂಗಡಿ ವಕೀಲರು ನೀಡಿದ ದಾಖಲಾತಿಗಳನ್ನು ಪರಿಶಿಲಿಸಿದ ಡಾ||ಅಂಬೇಡ್ಕರ್ ಅವರು “ನಾನು ನಿಮಗೆ ಪಾಯಿಂಟ್ ಗಳನ್ನು ಹೇಳುವೆ ಅವುಗಳ ಹಿನ್ನೆಲೆಯಲ್ಲಿ ನೀವು ಕೆಸ್ ನಡೆಸಬಹುದು” ಎಂದು ಹೇಳಿದರು.

ನ್ಯಾಯವಾದಿ ಅಂಗಡಿಯವರು ಬಾಬಾಸಾಹೇಬರನ್ನು ಬಹಳಷ್ಟು ಒತ್ತಾಯಿಸಿ ತಾವು ಕೇಳಿದಷ್ಟು ಫೀ ಕೊಡಲು ನಾವು ಸಿದ್ದರಿದ್ದು ತಾವೇ ಖುದ್ದಾಗಿ ಬಿಜಾಪುರಕ್ಕೆ ಬಂದು ಕೇಸು ನಡೆಸಬೇಕು ಎಂದು ವಿನಂತಿಸಿಕೊಳ್ಳುತ್ತಾರೆ. ಆಗ ಬಾಬಾಸಾಹೇಬರು ಅಂಗಡಿ ವಕೀಲರಿಗೆ ಒಂದು ಷರತ್ತನ್ನು ವಿಧಿಸುತ್ತಾರೆ. ನಾನು ಅಲ್ಲಿಗೆ ಬಂದಾಗ ಬಿಜಾಪುರ ಜಿಲ್ಲೆಯ ನಿಮ್ನ ವರ್ಗದ ಪರಿಷತ್ ಏರ್ಪಡಿಸುವಲ್ಲಿ ಜಿಲ್ಲೆಯ ನಿಮ್ನ ವರ್ಗದ ಜನ ಹೆಚ್ಚಾಗಿ ಬರುವಂತೆ ಹಾಗೂ ಕೌನ್ಸಿಲ್ ಗೆ ಆರಿಸಿ ಬಂದಿದ್ದ ‘ಇಂಡಿ’ ತಾಲೂಕಿನ ರೇವಪ್ಪ ಕಾಳೆಯವರನ್ನು ತಮ್ಮ ಪಕ್ಷಕ್ಕೆ ಕರೆತರಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎನ್ನುವ ಷರತ್ತಿನ ಮೇಲೆ ಬಾಬಾಸಾಹೇಬರು ೧೯೩೭ ಮೇ ೩೦ ರಂದು ತಮ್ಮ ಡೇಟ್ ಹೊಂದಿಸಿ ಅಂಗಡಿ ವಕೀಲರಿಗೆ ಕೊಡುತ್ತಾರೆ. ಮುಂಬಯಿಂದ ಮರಳಿದ ಅಂಗಡಿ ವಕೀಲರು ಬಿಜ್ಜರಗಿಯಲ್ಲಿ ಮಾಸ್ಟರ್ ಆಗಿದ್ದ ಶ್ರೀಯುತ ಗೌರ ಅವರನ್ನು ಭೇಟಿಯಾಗಿ ಬಾಬಾಸಾಹೇಬರು ಹೇಳಿದ್ದನ್ನು ಹೇಳಿ ಬಿಜಾಪುರದಲ್ಲಿ ಜಿಲ್ಲಾ ಹರಿಜನ ಪರಿಷತ್ ಏರ್ಪಡಿಸಿ ಅದಕ್ಕೆ ಅಂಬೇಡ್ಕರ್ ಅವರನ್ನೇ ಅಧ್ಯಕ್ಷರನ್ನಾಗಿಸಬೇಕು ಎನ್ನುವ ತಿರ್ಮಾನ ಕೈಗೊಂಡು ಮೇ ೩೧-೦೫-೧೯೩೭ ರಂದು ದಿನಾಂಕ ನಿಗದಿ ಮಾಡುತ್ತಾರೆ‌.

ಬಿಜಾಪುರದ ‘ರಾಣಿ ಬಗೀಚ್’ ಮೈದಾನದಲ್ಲಿ ಭವ್ಯ ಮಂಟಪ ಹಾಕಲಾಗುತ್ತದೆ. ಬಾಬಾಸಾಹೇಬರ ಫೋಟೊ ಹಾಕಿದ ಜಾಹಿರಾತುಗಳನ್ನ ಜಿಲ್ಲೆಯ ತುಂಬ ಹಾಕಿಸಲಾಗುತ್ತದೆ. ಅಂದು ನಿಗದಿತ ದಿನಾಂಕ ೨೯ ಮೇ ೧೯೩೭ರ ಮದ್ಯಾಹ್ನ ಬಿಜಾಪುರ ರೈಲು ನಿಲ್ದಾಣಕ್ಕೆ ಬಾಬಾಸಾಹೇಬರು ಆಗಮಿಸುತ್ತಾರೆ. ಬಾಬಾಸಾಹೇಬರನ್ನು ಕಾಣಲು ನಾನಾ ಕಡೆಗಳಿಂದ ಜನ ಕಿಕ್ಕಿರಿದು ರೈಲು ನಿಲ್ದಾಣದಲ್ಲಿ ಸೇರಿದ್ದರು. ರೈಲು ನಿಲ್ದಾಣದಲ್ಲಿ ಅಂಗಡಿ ವಕೀಲರು. ಮತ್ತು ಗೌರ ಮಾಸ್ಟರ್ ರೈಲು ನಿಲ್ದಾಣದಲ್ಲಿ ಹಾಜರಿದ್ದು ಬಾಬಾಸಾಹೇಬರನ್ನು ಸ್ವಾಗತಿಸಿ ಸರಕಾರಿ Inspection ಬೆಂಗಲೋಗೆ ಕರೆದುಕೊಂಡು ಹೋಗುತ್ತಾರೆ…

ಮಾರನೇ ದಿನ ಮೇ ೩೦, ೧೯೩೭ ಸರಿಯಾಗಿ ೧೧ ಗಂಟೆಗೆ ಡಾ||ಅಂಬೇಡ್ಕರ್ ರವರು ಸೋಮನಗೌಡರ ಕೇಸ್ ಪರ ವಾದ ಮಂಡಿಸಲು ನ್ಯಾಯಾಲಯಕ್ಕೆ ಆಗಮಿಸಿದರು. ಬಾಬಾಸಾಹೇಬರ ವಾದ ಕೇಳಲು ಎಲ್ಲ ನ್ಯಾಯವಾದಿಗಳು ಮಾತ್ರವಲ್ಲದೇ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಜಮಾಯಿಸಿದ್ದರು.

ಈ ಪ್ರಕರಣ ದಲ್ಲಿ ಅಂಬೇಡ್ಕರ್ ಅವರು ಜಯಶಾಲಿ ಆಗುವುದಿಲ್ಲ ಎನ್ನುವ ಅಭಿಪ್ರಾಯ ಎಲ್ಲರಲ್ಲಿ ದಟ್ಟವಾಗಿತ್ತು. ಅವತ್ತು ಡಾ||ಬಾಬಾಸಾಹೇಬರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ಭರ್ತಿ ಮೂರು ಗಂಟೆ. ಬೆಳಗಿನ ೧೧ ಗಂಟೆಯಿಂದ ಮದ್ಯಾಹ್ನ ೨ ಗಂಟೆವರೆಗೆ. ಈ ಮೂರು ಗಂಟೆಗಳಲ್ಲಿ ಬಾಬಾಸಾಹೇಬರು ಸೋಮನಗೌಡರು ನಿರಪರಾಧಿ ಎನ್ನುವುದಕ್ಕೆ ಬೇಕಾದ ಅಧಿಕೃತ ಪುರಾವೆ, ಕಾನೂನಿನ ಆಧಾರ ಅನೇಕ ಕೋರ್ಟುಗಳ ನಿರ್ಣಯ ಎಲ್ಲವನ್ನು ನ್ಯಾಯಾಲಯಕ್ಕೆ ನೀಡುತ್ತಾರೆ. ನಂತರ ನ್ಯಾಯಾಲಯದಿಂದ ಆಚೆ ಬಂದು ನ್ಯಾಯವಾದಿ ಅಂಗಡಿಯವರಿಗೆ ಮಿ.ಅಂಗಡಿ dont worry ನಿಮ್ಮ ಆರೋಪಿಗಳೆಲ್ಲ ನಿರ್ದೋಷಿಗಳಾಗುತ್ತಾರೆ ಎಂದು ಹೇಳುತ್ತಾರೆ. ಬಾಬಾಸಾಹೇಬರ ಆತ್ಮ ವಿಶ್ವಾಸ ಕಂಡು ಅಂಗಡಿ ವಕೀಲರು ಸಂತೋಷಗೊಳ್ಳುತ್ತಾರೆ (ಮುಂದೆ ಸೋಮನಗೌಡರು ನಿರ್ದೋಷಿಗಳಾಗಿ ಬಿಡುಗಡೆ ಯಾಗುತ್ತಾರೆ).

ನ್ಯಾಯಾಲಯದಿಂದ ಕಾರಿನಲ್ಲಿ ಅಂಗಡಿ ವಕೀಲರೊಂದಿಗೆ ಬಾಬಾಸಾಹೇಬರು ಇನ್ಸಪೆಕ್ಶನ್ ಬೆಂಗಲೋಗೆ ತೆರಳುತ್ತಾರೆ. ಆಗ ಆರೋಪಿ ಸೋಮನಗೌಡರ ಪತ್ನಿ ಬಾಬಾಸಾಹೇಬರನ್ನು ಕಾಣಲು ಬರುತ್ತಾರೆ, ಬಾಬಾಸಾಹೇಬರನ್ನು ಕಂಡೊಡನೆ ಸೋಮನಗೌಡರ ಪತ್ನಿ ತನ್ನ ಮಗನನ್ನು ಅವರ ಕಾಲಿಗೆ ಅಡ್ಡಲಾಗಿ ಹಾಕಿ ನಮಸ್ಕರಿಸುತ್ತಾಳೆ. ನಂತರ ಅಂಗಡಿ ವಕೀಲರು ಡಾ||ಬಾಬಾಸಾಹೇಬರಿಗೆ ವಕಾಲತ್ತು ಫೀ ಯಾಗಿ ಆ ಕಾಲಕ್ಕೆ ಐದುಸಾವಿರ ರೂಪಾಯಿಗಳು ಮತ್ತು ಒಂದು ಸಾವಿರ ರೂಪಾಯಿಗಳನ್ನು ಅವರ ಇತರ ವೆಚ್ಚಗಳಿಗಾಗಿ ನೀಡಿ ಅವರನ್ನು ಬೀಳ್ಕೊಡುತ್ತಾರೆ.

ಇದು ಬಿಜಾಪುರಕ್ಕೆ ಬಾಬಾಸಾಹೇಬರ ಮೊದಲ ಮತ್ತು ಕೊನೆಯ ಭೇಟಿ. ಒಂದು ಅಸಾಧ್ಯ ಎಂದು ಹೇಳಬಹುದಾದ ಮೊಕದ್ದಮೆಯನ್ನು ಕೇವಲ ಮೂರು ಗಂಟೆಯ ವಾದ ಮಂಡನೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ ಆ ಪ್ರಕರಣ ಐತಿಹಾಸಿಕ ಘಟನೆ. ಈ ಪ್ರಕರಣ ಇತಿಹಾಸದಲ್ಲಿ (ಬಿಜಾಪುರ ಜಿಲ್ಲೆಯ) ದಾಖಲಾಗಬೇಕಿತ್ತು. ಆದರೆ ದುರಂತ ಯಾವ ಆಫಿಸಿನಲ್ಲೂ ಈ ವಿಷಯದ ಕುರಿತು ದಾಖಲೆಗಳಿಲ್ಲ ? (ದಾಖಲೆ ಹುಡುಕಲು ಪ್ರಯತ್ನಿಸಲಾಗುತ್ತಿದೆ) ಇಂತಹ ಇನ್ನಷ್ಟು ಅಡಗಿಹೋದ ವಿಷಯಗಳನ್ನು ಹುಡುಕಿ ಹೆಕ್ಕಿ ತಗೆಯುವ ಪ್ರಯತ್ನ ಪ್ರಜ್ಞಾವಂತರು ಮಾಡಬೇಕಾಗಿದೆ.
ರವೀಂದ್ರ ಎನ್ ಎಸ್ -ಲೇಖಕರು


ambedkar image

LEAVE A REPLY

Please enter your comment!
Please enter your name here