ಎಸ್ಪಿ ಆದೇಶಕ್ಕೆ ಕ್ಯಾರೆ ಎನ್ನದ ಚಡಚಣ ಎಸೈ ಮಹಾದೇವ ಯಲಿಗಾರ ಅಮಾನತು

0
303

ವಿಜಯಪುರ: ಮೇ.13: ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗದ ಚಡಚಣದ ಹೆಸರು ಕರ್ನಾಟಕ, ಮಹಾರಾಷ್ಟ್ರ ರಾಜ್ಯ  ಸೇರಿದಂತೆ ಸದ್ದು ಮಾಡಿ ತಣ್ಣಗಾಗಿತ್ತು ಎನ್ನುವಾಗಲೇ ಈಗ ಮತ್ತೇ ಚಡಚಣ ಪೊಲೀಸ್ ಠಾಣೆಯ ಎಸೈ ಒಬ್ಬರು ಅಮಾನತುಗೊಳ್ಳುವ ಮೂಲಕ ಈಗ ಸುದ್ದಿಯಲ್ಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಪಿಎಸ್ಐ ಮಹಾದೇವ ಯಲಿಗಾರ ಅವರನ್ನು ಅಮಾನತು ಮಾಡಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.

ಸದಾ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುವ ಮೂಲಕ ಚಡಚಣ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಈ ಸಲ ಕೋರೋನಾ ವೈರಸ್ ನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎನ್ನುವ ಗಂಭೀರ ಸ್ವರೂಪದ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದ ಹಿನ್ನೆಯಲ್ಲಿ ಎಸೈ ಮಹಾದೇವ ಯಲಿಗಾರ ಅಮಾನತುಗೊಂಡಿದ್ದಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದ ಚಡಚಣದಲ್ಲಿ ಪ್ರತಿನಿತ್ಯ ಹಲವಾರು ಜನರು ಅಕ್ರಮವಾಗಿ ರಾಜ್ಯದೊಳಗೆ, ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳಿಗೆ ನುಸುಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಪೊಲೀಸ್ ಸಿಬ್ಬಂದಿ ಇದನ್ನು ತಡೆಗಟ್ಟುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಿಲ್ಲ ಎಂಬುದು ಸ್ಥಳಿಯರ ಆರೋಪವಾಗಿತ್ತು. ಇದೆಲ್ಲದರ ಮಧ್ಯವೇ ಎಸೈ ಯಲಿಗಾರ ಅವರು ‘ಕೋರೋನಾ ವಾರಿಯರ್ಸ’ ಸನ್ಮಾನದ ಹೆಸರಿನಲ್ಲಿ ಜಿಗಜೇವಣಗಿ ಮತ್ತು ದೇವರ ನಿಂಬರಗಿ ಗ್ರಾಮಗಳ ಕಾರ್ಯಕ್ರಮಗಳಲ್ಲಿ ಸಿಬ್ಬಂದಿ ಸಮೇತರಾಗಿ ಪಾಲ್ಗೊಂಡಿದ್ದರು. ಈ ಕ್ರಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ದಿವ್ಯ ನಿರ್ಲಕ್ಷ್ಯದ ಆರೋಪಗಳು ಸಿಬ್ಬಂದಿ ಹಾಗೂ ಎಸೈ ಯಲಿಗಾರ ವಿರುದ್ದ ಕೇಳಿ ಬಂದಿದ್ದು, ಇಲ್ಲಿ ಸರ್ಕಾರದ ಆದೇಶವನ್ನು ಪಾಲನೆ ಮಾಡದೆ ಉಲ್ಲಂಘನೆ ಮಾಡಿದ್ದು ಇಲಾಖೆ ಹಾಗೂ ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಪೊಲೀಸರಿಗೆ ಗ್ರಾಮಸ್ಥರು ಸನ್ಮಾನಿಸಿದ್ದಾರೆ ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದವರಾರು ಎಂಬುದು ಪ್ರಶ್ನೆಯಾಗಿತ್ತು. ಶಿಸ್ತು ಕಾಪಾಡಬೇಕಾದ ಅಧಿಕಾರಿಯಿಂದಲೇ ಈ ರೀತಿ ಅಶಿಸ್ತು ನಡೆದರೆ ಕಾನೂನಿನ ಪರಿಪಾಲನೇ ಹೇಗೆ ಸಾಧ್ಯ ಎಂದು ಸಾರ್ವಜನಿಕರು ಆರೋಪಿಸಿದ್ದರು. ಇದರಿಂದಾಗಿ ಇಲಾಖೆಯ ಮೇಲಾಧಿಕಾರಿಗಳು ಸಹ ಎಸೈ ವರ್ತನೆಯಿಂದ ಬೇಸತ್ತಿದ್ದರು ಎನ್ನಲಾಗಿದೆ. ಇದು ಅಲ್ಲದೆ ಎಸೈ ಯಲಿಗಾರ ವಿರುದ್ದ ಇನ್ನೂ ಹಲವಾರು ರೀತಿಯ ಆರೋಗಳು ಸಹ ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್ಪಿ ಅನುಪಮ್ ಅಗರವಾಲ್  ಅವರು ಚಡಚಣ ಸೇವೆಯಿಂದ ಬಿಡುಗಡೆ ಮಾಡಿ ಎಸ್ಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಆದರೆ ಎಸೈ ಯಲಿಗಾರ ಕಚೇರಿಗೆ ಹಾಜರಾಗದೆ ಅಶಿಸ್ತು ತೋರಿದ್ದರಿಂದ ಸೇವೆಯಿಂದ ಅಮಾನತು ಮಾಡಿದ್ದಾರೆ.

ಚಡಚಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಲಾಖೆ ಬಗ್ಗೆ ಜನರಿಗೆ ಋಣಾತ್ಮಕ ಅಭಿಪ್ರಾಯ ಇರುವುದರಿಂದ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿರುತ್ತದೆ. ಅಲ್ಲದೆ ತಾವು ಶಿಸ್ತಿನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದುದ್ದನ್ನು ಕಡೆಗಣಿಸಿ, ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರ ಹಾಜರಾಗಿರುವುದರಿಂದ ಹಾಗೂ ಬೇಜವಾಬ್ದಾರಿತನ ತೋರಿರುವುದರಿಂದ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಅಲ್ಲದೆ ಎಸ್ಪಿ ಕಚೇರಿಯಲ್ಲಿದ್ದ ಎಸೈ ಸಿ.ಬಿ.ಬಾಗೇವಾಡಿ ಅವರನ್ನು ಚಡಚಣ ಪಿಎಸ್ಐ ಆಗಿ ವರ್ಗಾವಣೆ ಮಾಡಲಾಗಿದೆ. ಅವರು ಚಡಚಣಕ್ಕೆ ತೆರಳಿ ಅಧಿಕಾರ ಸ್ವೀಕರಿಸಿದ್ದಾರೆ.

ಪೊಲೀಸ್ ಇಲಾಖೆ ಎಷ್ಟೇ ಮುತುವರ್ಜಿ ವಹಿಸಿ ಸರಿಯಾದ ಸೂಚನೆ, ಆದೇಶಗಳನ್ನು ನೀಡಿದಾಗಲೂ ಸಹ ಇಲಾಖೆಯ ಕೆಲ ಅಧಿಕಾರಿಗಳು ಶಿಸ್ತನ್ನು ಮರೆತು ಇಡೀ ಪೊಲೀಸ್ ಇಲಾಖೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ನಾಚೀಕೆಗೇಡಿನ ಸಂಗತಿ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಧಿಕಾರ ದುರುಪಯೋಗದಿಂದಾಗಿ ಇಂದು ಚಡಚಣ ಪೊಲೀಸ್ ಠಾಣೆ ಖ್ಯಾತಿ ಬದಲು ಕುಖ್ಯಾತಿ ಪಡೆಯುವಂತಾಗಿದೆ.


 

 

ambedkar image

LEAVE A REPLY

Please enter your comment!
Please enter your name here