ವಿಜಯಪುರ: ಮೇ ಸಾಹಿತ್ಯ ಬಳಗ, ಸಮಾನತಾ ಚಳುವಳಿಯ ಬಹುಮುಖ್ಯ ಭಾಗವಾಗಿ ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸುವಲ್ಲಿ ಜನಪರ ಗಾಯಕರು, ಹೋರಾಟದ ಹಾಡುಗಾರರು ಬಹುದೊಡ್ಡ ಕೆಲಸ ಮಾಡುತಿದ್ದಾರೆ ಎಂದು ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಭೀಮಪ್ಪ ಎ. ಹೇಳಿದರು.
ಇಲ್ಲಿನ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಮೇ ಸಾಹಿತ್ಯ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಹೋರಾಟ ಹಾಡುಗಳ ತರಬೇತಿ ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮೂಢನಂಬಿಕೆಗೆ ಬಲಿಯಾಗಿ ಶೋಷಣೆಗೆ ಒಳಗಾಗುತ್ತಿರುವ ಬಹುಸಂಖ್ಯಾತ ಬಡವರು ಮತ್ತು ಕೆಳವರ್ಗದ ಜನರನ್ನು ಶೋಷಣೆಯಿಂದ ಮುಕ್ತಗೊಳಿಸುವ ಜವಾಬ್ದಾರಿ ಜನಪರ ಚಳವಳಿಗಾರರ ಮೇಲಿದೆ. ಆ ನಿಟ್ಟಿನಲ್ಲಿ ಜನಪರ ಗಾಯಕರು ಮತ್ತಷ್ಟು ಕೆಲಸ ಮಾಡಬೇಕು ಎಂದು ಹೇಳಿದರು.
ಮೇ ಸಾಹಿತ್ಯ ಬಳಗ ಬಸವಧರ್ಮ ಚಿಂತಕರಾದ ಡಾ. ಜೆ.ಎಸ್. ಪಾಟೀಲ್ ಮಾತನಾಡಿ, ಬುದ್ಧ-ಬಸವ-ಅಂಬೇಡ್ಕರ್ ಅವರು ಸಮಾನತೆಗಾಗಿ ಸಂಘರ್ಷ ಮಾಡಿದ್ದಾರೆ. ಸಂವಿಧಾನ ಜಾರಿಯಾಗಿ 75 ವರ್ಷಗಳ ನಂತರವೂ ಲಿಂಗ ತಾರತಮ್ಯ, ಅಸ್ಪೃಶ್ಯತೆ ಆಚರಣೆ ಅಬಾಧಿತವಾಗಿ ನಡೆದಿದೆ. ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಪರ ಹೋರಾಟಗಾರರು, ಹಾಡುಗಾರರು ಹೆಚ್ಚು ಹೆಚ್ಚು ಕೆಲಸ ಮಾಡಬೇಕಿದೆ ಎಂದರು.
ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥರಾದ ಬಾಲರಾಜ ಬಿರಾದಾರ ಅವರು ಮಾತನಾಡಿ, ಶತಮಾನಗಳಿಂದ ನಡೆದುಕೊಂಡು ಬಂದಿರುವ ಅಸ್ಪೃಶ್ಯತೆ ಆಚರಣೆ ಇವತ್ತು ಕಡಿಮೆಯಾಗಿದೆ ಎನಿಸಿದರೂ ಗ್ರಾಮೀಣ ಭಾಗದಲ್ಲಿ ಅದು ಜೀವಂತವಿದೆ. ಸಾಮಾಜಿಕ ಸಮಾನತ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ ಕೋರ್ಟ್ನಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನ
ಅಧ್ಯಕ್ಷತೆ ವಹಿಸಿದ್ದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಪಾದರ್ ಟಿಯೋಲ್ ಮಾತನಾಡಿ, ಹವು ಜಾತಿಗಳಲ್ಲಿ ಹಂಚಿಹೋಗಿರುವ ಸಮಾಜದಲ್ಲಿ ಐಕ್ಯತೆ ಮೂಡಿಸುವ ದಿಸೆಯಲ್ಲಿ ಅನೇಕ ಮಹಾತ್ಮರು ಶ್ರಮಿಸಿಹೋಗಿದ್ದಾರೆ. ಸಂವಿಧಾನದ ಆಶಯದಂತೆ ಜಾತಿಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅನೇಕ ಚಿಂತಕರು, ಕಲಾವಿದರು, ಹಾಡುಗಾರರು ಈಗಲೂ ಶ್ರಮಿಸುತ್ತಲೇ ಇದ್ದಾರೆ. ಸೌಹಾರ್ದ ಸಮಾಜಕ್ಕೆ ಮರುಸ್ಥಾಪನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.
ಶಿಬಿರ ನಿರ್ದೇಶಕರಾಗಿ ಆಗಮಿಸಿರುವ ಮೈಸೂರಿನ ಸಂಪನ್ಮೂಲ ವ್ಯಕ್ತಿ ಡಾ. ಎಂ. ಯೇಸುದಾಸ ಅವರು ಕ್ರಾಂತಿಗೀತೆ ಹಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ದಲಿತ ಮುಖಂಡರು ಸಮಾಜ ಸೇವಕ ಫಯಾಜ ಕಲಾದಗಿ, ಕೃಷಿ ವಿಜ್ಙಾನಿ ಡಾ. ರವೀಂಧ್ರ ಬೆಳ್ಳಿ ವೇದಿಕೆಯಲ್ಲಿದ್ದರು. ಪ್ರಭುಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚೆನ್ನು ಕಟ್ಟಿಮನಿ ವಂದಿಸಿದರು. ಅನಿಲ ಹೊಸಮನಿ, ಮೋಹನ ಕಟ್ಟಿಮನಿ ಮತ್ತಿತರರು ಇದ್ದರು.
ನಂತರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ಸಂಪನ್ಮೂಲ ವ್ಯಕ್ತಿಗಳಾದ ಶಂಬಯ್ಯ ಹಿರೇಮಠ, ಶಂಕ್ರಣ್ಣ ಸಂಕಣ್ಣವರ, ಡಾ. ಯೇಸುದಾಸ್, ಬಸವರಾಜ ಸೂಳಿಬಾವಿ ಶಿಬಿರದ ಉದ್ದೇಶಗಳನ್ನು ತಿಳಿಸಿದರು. ಸೆ. 29ರಂದು ಸಂಜೆ ಶಿಬಿರ ಮುಕ್ತಾಯಗೊಳ್ಳಲಿದೆ.






