ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಮನಃಪೂರ್ವಕವಾಗಿ ನೆನೆಯಬೇಕು; ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ

0
206

ವಿಜಯಪುರ ಜ.26: ಸಂವಿಧಾನ ಪಿತಾಮಹ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಧೀಮಂತ ನಾಯಕತ್ವದಲ್ಲಿ ರಚನೆಗೊಂಡ ಸಂವಿಧಾನವು 1950 ರ ಜನೇವರಿ 26 ರಂದು ಭಾರತದ ಗಣತಂತ್ರ ಒಕ್ಕೂಟ ವ್ಯವಸ್ಥೆಯ ಮೂಲಾಧಾರವಾಗಿ ಜಾರಿಗೆ ಬಂದಿತು. ಸರ್ವ ಸಮತೆಯನ್ನು ವಿಧಿವತ್ತಾಗಿ ಪಾಲಿಸಲು ಇಡೀ ದೇಶವೇ ಸಜ್ಜುಗೊಂಡ ದಿನವಿದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಹೇಳಿದರು.

ಜಿಲ್ಲೆಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ 72 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಾ ವಿಶ್ವದ ಹಲವಾರು ರಾಷ್ಟ್ರಗಳ ಸಂವಿಧಾನಗಳನ್ನು ಆಳವಾಗಿ ಮತ್ತು ತಾರ್ಕಿಕವಾಗಿ ಅಧ್ಯಯನ ಮಾಡಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ, ಭಾರತೀಯರ ಸಾಮಾಜಿಕ-ಸಾಂಸ್ಕಂತಿಕ ಹಾಗೂ ಸಾಂಪ್ರದಾಯಿಕ ಆಯಾಮಗಳಿಗೆ ಸರಿಹೊಂದುವ ಸರ್ವಶ್ರೇಷ್ಠ ಸಂವಿಧಾನವನ್ನು ರೂಪಿಸಿದ, ಸರ್ವಕಾಲಿಕ ಶ್ರೇಷ್ಠವಾದ ಈ ಅವಿಸ್ಮರಣೀಯ ಕೊಡುಗೆಗಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಮನಃಪೂರ್ವಕವಾಗಿ ನೆನೆಯಬೇಕು.

ನಮ್ಮೆಲ್ಲರ ಕನಸಿನ ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕೆ ಸುಭದ್ರ ಅಡಿಪಾಯ ಒದಗಿಸಿರುವ ನಮ್ಮ ಘನ ಸಂವಿಧಾನ ರಚನೆಗೆ ಶ್ರಮಿಸಿದ ಎಲ್ಲರ ಕಾಣ್ಕೆಯನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಭಾಷೆ, ಸಂಸ್ಕಂತಿ ಮತ್ತು ಧರ್ಮಗಳ ಆಚರಣೆ ಮತ್ತು ಅನುಕರಣೆಯಲ್ಲಿ ವೈವಿಧ್ಯಪೂರ್ಣ- ವರ್ಣಮಯ ಇತಿಹಾಸವನ್ನು ಹೊಂದಿರುವ ಕನ್ನಡ ನಾಡು ಇತ್ತೀಚಿನ ಕೆಲವು ವರ್ಷಗಳಲ್ಲಿ ನಿರಂತರವಾಗಿ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿರುತ್ತದೆ.

ಕಳೆದ ಸಾಲಿನ ಅತಿವೃಷ್ಠಿ ಹೊಡೆತ, ಕೋವಿಡ್-19 ಎಂಬ ಜಾಗತಿಕ ಮಹಾ-ಮಾರಿ ಮತ್ತು ಅದರ ರೂಪಾಂತರಿತ ಕೋವಿಡ್ ವೈರಸ್‍ನ ಭೀಷಣ ಪ್ರಾಕೃತಿಕ ವಿಕೋಪಗಳಿಂದಾಗಿ ಜನಸಾಮಾನ್ಯರ ಬದುಕು ಅಲ್ಲೋಲ-ಕಲ್ಲೋಲಗೊಂಡ ಪ್ರಕ್ಷುಬ್ದ ಸನ್ನಿವೇಶಗಳನ್ನು ಇಡೀ ದೇಶವೇ ಮೆಚ್ಚುವಂತೆ ರಕ್ಷಣಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಿ ಜನಸಾಮಾನ್ಯರಿಂದ ಮತ್ತು ಜನಪ್ರತಿನಿಧಿಗಳಿಂದ ಭೇಷ್ ಎನಿಸಿಕೊಂಡು ಸರ್ವರ ಪ್ರಶಂಸೆಗೆ ಪಾತ್ರವಾಗಿರುವ ಸರ್ಕಾರವು ಶೃದ್ಧೆ-ನಿಷ್ಠೆ-ಕಾಳಜಿ ಪೂರ್ವಕವಾಗಿ ಪರಿಣಾಮಕಾರಿ ತುರ್ತು ಕ್ರಮಗಳನ್ನು ಕೈಕೊಳ್ಳುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಕಂಕಣಬದ್ಧವಾಗಿರುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದಿರುವ ಕ್ರೀಡಾಪಟುಗಳಿಗೆ ಸಚಿವರು ಮತ್ತು ಗಣ್ಯರು ಸನ್ಮಾನಿಸಿದರು. ಪೊಲೀಸ್ ತಂಡಗಳ ಆಕರ್ಷಕ ಕವಾಯಿತು ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ), ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಜಿ.ಪಂ ಅಧ್ಯಕ್ಷೆ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ, ವಿಜಯಪುರ ತಹಶೀಲ್ದಾರರಾದ ಮೋಹನಕುಮಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here