ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವಚ್ಛೋತ್ಸವ-ನಿತ್ಸೋತ್ಸವ ಕಾರ್ಯಕ್ರಮ

0
212

ಹಾಸನ ಸೆ. 30:- ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಕ್ಟೋಬರ್ 2 ರಿಂದ 31 ರವರೆಗೆ ಸ್ವಚ್ಛೋತ್ಸವ-ನಿತ್ಸೋತ್ಸವ ಮಾಸಾಚರಣೆ ಕಾರ್ಯಕ್ರಮವನ್ನು ಆಯೋಜಿಸಲು ಹಾಸನ ಜಿಲ್ಲಾ ಪಂಚಾಯತ್ ಮುಂದಾಗಿದೆ.

ರಾಜ್ಯದ ಪ್ರತಿಯೊಂದು ಗ್ರಾಮವು ಸ್ವಚ್ಛ, ಸುಂದರ ಆರೋಗ್ಯಕರ ಮತ್ತು ತ್ಯಾಜ್ಯ ಮುಕ್ತವಾಗಿಸುವ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ರಾಜ್ಯಾದ್ಯಂತ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಿರ್ಮಿಸಲಾಗುವ ತ್ಯಾಜ್ಯ ನಿರ್ವಹಣಾ ಘಟಕದ ಸ್ವಚ್ಛ ಸಂಕೀರ್ಣವು ಏಕರೂಪದ ಬಣ್ಣ, ಚಿಹ್ನೆ, ಸಂದೇಶ ಮತ್ತು ವಿನ್ಯಾಸವನ್ನು ಹೊಂದಿರಬೇಕು ಎಂಬ ಉದ್ದೇಶದಿಂದ ತ್ಯಾಜ್ಯ ನಿರ್ವಹಣಾ ಘಟಕಗಳ ಏಕರೂಪದ ಬ್ರ್ಯಾಡಿಂಗ್‍ನ್ನು ವಿನ್ಯಾಸಪಡಿಸಲಾಗಿದೆ.

ಸ್ವಚ್ಛ ಸಂಕೀರ್ಣ, ಘನ ತ್ಯಾಜ್ಯ ನಿರ್ವಹಣಾ ಘಟಕದ ವಿನ್ಯಾಸವು ವರ್ತುಲ ಆರ್ಥಿಕತೆಯ ಮಾದರಿಯಿಂದ ಸ್ಪೂರ್ತಿ ಪಡೆದಿದೆ. ಇಲ್ಲಿ ತಿರಸ್ಕರಿಸಬಹುದಾದ ಮತ್ತು ತಿರಸ್ಕರಿಸಿದ ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ ಉನ್ನತೀಕರಿಸಿದ ಮತ್ತು ಉಪಯುಕ್ತ ದಿನ ನಿತ್ಯದ ವಸ್ತುಗಳಾಗಿ ಪರಿವರ್ತಿಸಲಾಗುತ್ತದೆ. ಇನ್ನು ಮರು ಬಳಕೆ ಮಾಡಲಾಗದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಸ್ವಚ್ಛ ಸಂಕೀರ್ಣದಲ್ಲಿ ಘನ ತ್ಯಾಜ್ಯ, ಇ-ತ್ಯಾಜ್ಯ, ಜೈವಿಕ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಮೀಸಲಾದ ಪ್ರದೇಶಗಳೊಂದಿಗೆ ಸ್ವಯಂ ಸುಸ್ಥಿರ ವ್ಯವಸ್ಥೆ ಒಳಗೊಂಡಿದೆ ಪರಿಸರ ಉದ್ಯಾನವನದ ಅನುಭವ ನೀಡುವ ಹಿನ್ನಲೆಯಲ್ಲಿ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.

ಅಕ್ಟೋಬರ್ 2 ರಂದು ತ್ಯಾಜ್ಯ ನಿರ್ವಹಣಾ ಘಟಕಗಳ ಬ್ರ್ಯಾಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡುವ ಸಲುವಾಗಿ ಪ್ರತಿ ನಿರ್ಮಾಣದ ಕಾಮಗಾರಿ ಪೂರ್ಣಗೊಂಡು ತ್ಯಾಜ್ಯ ಸಂಗ್ರಹಕ್ಕಾಗಿ ವಾಹನ ಖರೀದಿ ಮಾಡಿರುವ ಹಾಗೂ ಪ್ರಸ್ತುತ ತ್ಯಾಜ್ಯ ನಿರ್ವಹಣೆ ಚಾಲ್ತಿಯಲ್ಲಿರುವ ಮಾದರಿ ಗ್ರಾಮ ಪಂಚಾಯಿತಿಯೊಂದನ್ನು ಬ್ರ್ಯಾಡಿಂಗ್ ಮಾಡಲು ಆಯ್ಕೆ ಮಾಡಲಾಗುತ್ತಿದೆ.

ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಏಕರೂಪ ಬ್ರ್ಯಾಡಿಂಗ್ ಮಾಡುವ ನಿಮಿತ್ತ ಹಾಸನ ಜಿಲ್ಲಾ ಪಂಚಾಯತ್ ಅಕ್ಟೋಬರ್ 2 ರಂದು ಬೇಲೂರು ತಾಲ್ಲೂಕಿನ ಹಗರೆ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯದ ನಿರ್ವಹಣೆ ವಿಲೇವಾರಿ ಕುರಿತು ವ್ಯಾಪಕವಾದ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಅಕ್ಟೋಬರ್ 2 ರಿಂದ 31ರವರೆಗೆ ಸ್ವಚ್ಛೋತ್ಸವ-ನಿತ್ಸೋತ್ಸವ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಮಾಸಾಚರಣೆಯ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಶ್ರಮದಾನ, ವಸ್ತು ಪ್ರದರ್ಶನ, ಪ್ರಬಂಧ ಸ್ವರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುವುದು.


 

LEAVE A REPLY

Please enter your comment!
Please enter your name here