ಧರ್ಮದ ಬೀಜ ಭೀತ್ತಿದ ಕೈಗಳು

0
281

ಬಹುಶಃ ಅದು ನಾನು ಡಿಗ್ರಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಸಮಯ ಇರಬಹುದು. ಯಾವುದೋ ರಜಾ ದಿನಗಳು ಅಂತ ಊರಿಗೆ ಬಂದಿದ್ದೆ, ಊರಿಗೆ ಬಂದಾಗ ಊರೆಲ್ಲ ಯಾವುದೋ ಒಂದು ಸಮಾರಂಭಕ್ಕೆ ತಯಾರಿ ಮಾಡ್ತ ಇದ್ದಿದ್ದು ಕಾಣ್ತ ಇತ್ತು, ಒಂದೆರಡು ಗೆಳೆಯರನ್ನು ವಿಚಾರಿಸಿದಾಗ ನಾಳೆ ನಮ್ಮೂರಲ್ಲಿ “ಭಜರಂಗ ದಳ” ದ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಇದ್ದು ರಾಜ್ಯ ಸಂಚಾಲಕರಾದ ‘ಪ್ರಮೋದ ಮುತಾಲಿಕ್’ ಅವರು ಬರುವ ಕಾರ್ಯಕ್ರಮ ಇದೆ ಎನ್ನುವ ವಿವರಣೆ ಸಿಕ್ತು, ಸರಿ ಮಾರನೇ ದಿವಸ ಒಂದಿಷ್ಟು ಗೆಳೆಯರ ಜೊತೆ ಕಾರ್ಯಕ್ರಮಕ್ಕೆ ಹೋದೆ.

ನಿಗದಿತ ಸಮಯಕ್ಕೆ ಬಂದ ಮುತಾಲಿಕ್ ಶಾಖೆ ಉದ್ಘಾಟಿಸಿದ್ದು ನಂತರ ಅವರ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಲು ಆರಂಭಿಸಿದರು ಅದು ಎಂಥ ಭಾಷಣ ?? ಅದನ್ನು ಭಾಷಣ ಎನ್ನುವುದಕ್ಕಿಂತ ಬೆಂಕಿ ಉಂಡೆಗಳು ಅಂತನೇ ಹೇಳಬಹುದು ಸುಮಾರು ಒಂದು ಗಂಟೆಗಳಿಗೂ ಹೆಚ್ಚಿನ ಸಮಯ ಅವರು ಮಾತಾಡಿದ ಮಾತುಗಳಲ್ಲಿ ಹಿಂದೂ ಮುಸ್ಲಿಮ್, ಪಾಕಿಸ್ತಾನ, ಭಯೊತ್ಪಾದನೆಯನ್ನು ಗುರಿಯಾಗಿರಿಸಿಕೊಂಡು ಹೊಡಿ ಬಡಿ ಕೊಚ್ಚಿಹಾಕಿ ಸುಟ್ಟು ಹಾಕಿ ಎನ್ನುವ ತಮ್ಮ ಉಗ್ರ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರೆ ಸಹಜವಾಗೇ ಇನ್ನೂ ಪದವಿ ಓದುತ್ತಿರುವ ನಾನು ಮತ್ತು ನನ್ನಂಥ ಅನೇಕ ಹುಡುಗರು ಮುತಾಲಿಕ ಅವರ ಅಭಿಮಾನಿಗಳಾಗಿ ಹೋದೆವು. ಭಾಷಣ ಮುಗಿದ ನಂತರ ಮನೆಯ ಕಡೆಗೆ ತೆರಳುತ್ತಿದ್ದ ನಾವು ನಾಲ್ಕು ಜನ ಹುಡುಗರನ್ನು ಸ್ಥಳಿಯ ಕಾರ್ಯಕರ್ತರೊಬ್ಬರು ಕರೆದು ಅವರ ಮನೆಯ ಕಡೆಗೆ ಕರೆದುಕೊಂಡು ಹೋದರು ಅಲ್ಲಿ ಅವರ ಮನೆಯ ಟೆರಸ್ ಮೇಲೆ ಮುತಾಲಿಕ್ ಅವರು ಒಂದಿಷ್ಟು ಬೇರೆ ಬೇರೆ ಸಮುದಾಯದ ಹುಡುಗರ ಜೊತೆ ಚರ್ಚೆ ನಡೆಸುತ್ತಿದ್ದಿದ್ದು ಕಂಡು ಬಂತು.

ನಾವು ನಾಲ್ಕೈದು ಜನ ಹುಡುಗರು ಅವರ ಕಣ್ಣಿಗೆ ಕಾಣುತ್ತಿದ್ದಂತೆ ತುಂಬ ಆತ್ಮೀಯವಾಗೇ ಬನ್ನಿ ಕುಳಿತುಕೊಳ್ಳಿ ಎಂದು ತಮ್ಮ ಪಕ್ಕದಲ್ಲಿ ಕುಳಿಸಿಕೊಂಡ ಮುತಾಲಿಕ ಅವರು ಎಲ್ಲ ಸಮುದಾಯದ ಹುಡುಗರ ಜೊತೆ ಮಾತನಾಡಿ ಕೊನೆಗೆ ನಮ್ಮ ಜೊತೆ ಮಾತಿಗೆ ಆರಂಭಿಸಿದರು ಹೇಳಿ ಸಹೋದರ ಏನ್ಮಾಡ್ತ ಇದ್ದಿರಿ ? ಏನ್ ಓದ್ತ ಇದ್ದಿರಿ ? Studies ಎಲ್ಲ ಹೇಗೆ ನಡಿತಿದೆ ಅಂತ ತುಂಬ ಮೃದುವಾಗಿ ಭುಜ ತಟ್ಟಿ ಕೇಳಿದಾಗ ವೇದಿಕೆಯ ಮೇಲೆ ಸಿಡಿ ಗುಂಡಿನಂತೆ ಭಾಷಣ ಮಾಡಿದ ವ್ಯಕ್ತಿ ಇವರೇನಾ ? ಎಂದು ಆಶ್ಚರ್ಯ ಪಡುವಂತಾಯಿತು. ಒಂದಿಷ್ಟು casual ಮಾತುಗಳು ಮುಗಿದ ಮೇಲೆ ತಮ್ಮ ಸಿದ್ಧಾಂತದ ನಿಲುವುಗಳಾದ ಹಿಂದೂ, ಮುಸ್ಲಿಂ, ರಾಮ ಮಂದಿರ ಮಸ್ಜಿದ್ ಇವುಗಳ ಬಗ್ಗೆ ಚರ್ಚಿಸಲು ಆರಂಭಿಸಿದರು. ಅದಾಗಲೇ ರಾಜ್ಯ ಮಟ್ಟದ ಸಂಚಾಲಕರಾಗಿದ್ದ ಇನ್ನೂ ಡಿಗ್ರೀ ಓದೋ ಹಂತದಲ್ಲಿದ್ದ ನನ್ನ knowledge ಎಲ್ಲಿ ?

ಅವರು ಹೇಳಬೇಕಾಗಿದ್ದ ಎಲ್ಲವನ್ನು ಹೇಳಿ ಆದ್ಮೆಲೆ ಕೊನೆಲಿ ಸಹೋದರರೆ ‘ಹಿಂದೂ ನಾವೆಲ್ಲ ಒಂದು ” ನಿಮ್ಮ ಮನಸಿನಲ್ಲಿ ಏನಾದ್ರೂ ಪ್ರಶ್ನೆಗಳಿದ್ದರೆ ಕೇಳಿ ಅಂತ ಹೇಳಿದಾಗ ಒಬ್ಬ ಸಣ್ಣ ಸಾಮಾನ್ಯ ವಿದ್ಯಾರ್ಥಿ ಆದ ನಾನು ಅವರಿಗೆ ಯಾವ ಪ್ರಶ್ನೆ ಕೇಳ್ಲಿ ಅಂತ ತಡಬಡಾಯಿಸುತ್ತಲೆ ಅಲ್ಲೊ ಇಲ್ಲೋ ಪತ್ರಿಕೆಗಳಲ್ಲಿ ಓದಿದ್ದ ಒಂದಿಷ್ಟು ಸುದ್ದಿಗಳ ಆಧಾರದ ಮೇಲೆ ಕೇವಲ ಮೂರು ಪ್ರಶ್ನೆಗಳನ್ನು ಕೇಳಿದೆ ಮೊದಲನೆಯದು ಮುತಾಲಿಕ್ ಜೀ ಹಿಂದೂಗಳೆಲ್ಲ ಒಂದು ಆದ್ಮೇಲೆ ಹಿಂದೂ ದೇವಾಲಯಗಳಿಗೆ ಅಸ್ಪೃಶ್ಯರಿಗೆ ಪ್ರವೇಶ ಇಲ್ಲ ಯಾಕೆ ? ಎರಡನೇ ಪ್ರಶ್ನೆ ಹಿಂದೂ ಎಲ್ಲ ಒಂದು ಅಂತ ಹೇಳ್ತ ಇರೋ ತಾವು ಇಲ್ಲಿವರೆಗೆ ಎಷ್ಟು ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ್ದಿರಿ ? ಮೂರನೇ ಪ್ರಶ್ನೆ ಕಂಬಾಲಪಲ್ಲಿಯಲ್ಲಿ ದಲಿತರನ್ನು ಸಜೀವವಾಗಿ ದಹಿಸಿದ ಕುರಿತು ನಿವು ಖಂಡಿಸಿರುವ ಹೇಳಿಕೆ ಕೊಡಿ.

ಬಹುಶಃ ನನ್ನಂಥ ಎಳಸು ಹುಡುಗನೊಬ್ಬನಿಂದ ಈ ಪ್ರಶ್ನೆಗಳನ್ನು ನಿರೀಕ್ಷಿಸಿರದ ಮುತಾಲಿಕ ಅವರು ಗಲಿಬಿಲಿ ಗೊಂಡರು ತಕ್ಷಣ ಸಾವರಿಸಿಕೊಂಡು ಎನೇನೋ ಒಂದಿಷ್ಟು ತೇಪೆ ಹಚ್ಚಿ ವಿಷಯ ಅಲ್ಲಿಗೇ ಮೊಟಕು ಗೊಳಿಸಿದರು ಅಲ್ಲಿಗೆ ಚರ್ಚೆ ಮುಗಿದು ನಾವು ಹೊರಟು ಮನೆಗೆ ಬಂದಾಗ ಸಾಯಂಕಾಲ 7:30 ಒಂದರ್ಧ ಗಂಟೆ ಕಳೆಯುತ್ತಲೆ ಯಾರೋ ಒಬ್ಬ ಹುಡುಗ ಸೈಕಲ್ ಮೇಲೆ ಬಂದು ಅಣ್ಣ ನೀವು ವೆಂಕಟರಮಣ ದೇವಸ್ಥಾನಕ್ಕೆ ಬರಬೇಕಂತೆ ಮುತಾಲಿಕ ಅವರು ಕರ್ಕೊಂಡು ಬರೋಕೆ ಕಳ್ಸಿದ್ದಾರೆ ಅಂತ ಕರದಾಗ ನಮ್ಮ ಅಪ್ಪ ಒಂದು ಕ್ಷಣ ಅಳುಕಿನಿಂದಲೇ ಏನ್ ಲಫಡಾ ಮಾಡ್ಕೊಂಡ್ ಬಂದ್ಯಪ್ಪ ಅಂತ ಕೇಳಿದಾಗ ನನಗೂ ಒಂದು ಕ್ಷಣ ಮನಸಲ್ಲಿ ಅಳುಕು

ವೆಂಕಟರಮಣ ನಮ್ಮೂರ ಬ್ರಾಹ್ಮಣ ದೇವರು ಅಲ್ಲಿ ಸೆರೋರೆಲ್ಲ Pure ವೈದಿಕ ಆಸಾಮಿಗಳು ಎಲ್ಲೋ ಚರ್ಚೆ ಹೆಸರಲ್ಲಿ ಫಿಟ್ ಆಗ್ಬಿಟ್ನೆನೋ ಅಂತ ಅನಿಸಿ ಆ ಹುಡುಗನನ್ನ ಕೇಳ್ದೆ ಯಾಕೆ ಏನು ವಿಷಯ ? ಅಂತ. ಅದಕ್ಕೆ ಆ ಹುಡುಗ ಏನಿಲ್ಲ ಅಣ್ಣ ನಿವು ನಾಲ್ಕು ಜನ ಹುಡುಗರನ್ನ ಊಟಕ್ಕೆ ಕರ್ದಿದ್ದಾರೆ ಅಂತ ಹೇಳಿದಾಗ ಸ್ವಲ್ಪ ನಿರಾಳ ಅನಿಸಿತು. ಆಗ ನಯವಾಗಿ ಆ ಹುಡುಗನ ಕರೆಯನ್ನು ನಿರಾಕರಿಸಿ ಕಳುಹಿಸಿ ಕೊಟ್ಟೆ.

ಮಾರನೇ ದಿವಸ ಬೆಳಿಗ್ಗೆ ಕಣ್ಣು ಬಿಡುತ್ತಲೇ ಊರು ತುಂಬ ಪೋಲೀಸ್ ಜೀಪ್ ಗಳು ಓಣಿ ಓಣಿಗಳಲ್ಲಿ ಖಾಕಿಗಳ ಓಡಾಟ ಒಂದು ಕ್ಷಣ ಗಾಬರಿ ಗೊಂಡು ರಸ್ತೇಲಿ ಪರಿಚಯದ PC ಒಬ್ಬರನ್ನು ವಿಚಾರಿಸಿದಾಗ ರಾತ್ರಿ ಯಾರೋ ಕಿಡಿಗೆಡಿಗಳು ಭಜರಂಗ ದಳದ ಬೋರ್ಡನ್ನು ಕೆಡವಿ ಹಾಕಿದ್ದಾರೆ ಅದಕ್ಕೆ ನಿಮ್ಮೂರಲ್ಲಿ sec 144 ವಿಧಿಸಲಾಗಿದೆ ಎನ್ನುವ ಮಾಹಿತಿ ನೀಡಿದ.

ಸ್ಥಳಿಯ ಪೋಲೀಸರು ಕೆಸ್ ದಾಖಲಿಸಿಕೊಂಡು ಹೆಚ್ಚು ಕಡಿಮೆ ನೂರು ನೂರೈವತ್ತು ಜನಗಳ ಮೇಲೆ FIR ದಾಖಲಿಸಿದರು ಅವರಲ್ಲಿ ಅರ್ಧ ಹಿಂದೂ ಅರ್ಧ ಮುಸ್ಲಿಂ ಅವತ್ತು ಪ್ರಮೋದ್ ಮುತಾಲಿಕ್ ಬಂದಿದ್ದ ಕಾರ್ಯ ಅರ್ಧ ಯಶಸ್ಸು ಕಂಡಿತು. ಅವತ್ತಿನ ತನಕ (ಅಷ್ಟೇ ಯಾಕೇ ಇವತ್ತಿಗೂ ಕೂಡ) ನಮ್ಮ ಊರಲ್ಲಿ ಹಿಂದೂ ಮುಸ್ಲಿಂ ಗಲಾಟೆಗಳು ಯಾವತ್ತೂ ಇರಲಿಲ್ಲ ಎಲ್ಲರೂ ಒಟ್ಟಾಗಿಯೇ ಹೋಳಿ, ದಸರಾ, ಈದ್ ಮೊಹರಂ ಆಚರಣೆ ಮಾಡುತ್ತಿದ್ದ ಸೌಹಾರ್ಧತೆ ಈ ಘಟನೆಯ ನಂತರ ನಿಂತು ಹೋಯಿತು. ಹಿಂದೂಗಳು ಮುಸಲ್ಮಾರರ ಅಂಗಡಿಗಳಿಗೆ, ಹಿಟ್ಟಿನ ಗಿರಣಿಗಳಿಗೆ ಹೋಗುವುದನ್ನು ನಿಲ್ಲಿಸುವಂತೆ ಒತ್ತಡಗಳು ಆರಂಭವಾದವು ರಾಮ ಮಂದಿರ ನಿರ್ಮಾಣ, ಜೈ ಶ್ರೀರಾಮ ಘೋಷಣೆಗಳು ಸಣ್ಣದಾಗಿ ಬಳಕೆಗೆ ಬರಲಾರಂಭಿಸಿದವು ಹಿಂದೂದುತ್ವದ ಪರ ಚರ್ಚೆಗಳು ಕೆಸರಿ ಧ್ವಜಗಳ ಹಾರಟ ಆರಂಭವಾಯಿತು.

ಅವತ್ತಿನ ವರೆಗೆ ಅಷ್ಟಾಗಿ ಪ್ರಚಾರದಲ್ಲಿ ಇರದಿದ್ದ ಪ್ರಮೋದ್ ಮುತಾಲಿಕ್ ಹೆಸರು ಎಲ್ಲ ಪತ್ರಿಕೆಗಳಲ್ಲಿ ರಾರಾಜಿಸ ತೊಡಗಿತು ನೋಡ ನೋಡುತ್ತಿದ್ದಂತೆ ಪ್ರಮೋದ್ ಮುತಾಲಿಕ್ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿ ಬಿಟ್ಟರು. ನಂತರ ಒಂದೆರಡು ಕಡೆಗಳಲ್ಲಿ ಅವರನ್ನು ನೋಡುವ ಅವಕಾಶ ಸಿಕ್ಕಿತು ಆಗಲೂ ನನ್ನ ಗುರುತಿಸಿ ನನ್ನತ್ತ ಕೈ ಬೀಸುತ್ತಿದ್ದ ಮುತಾಲಿಕರನ್ನು ಕೊನೆಯ ಬಾರಿ ಭೇಟಿ ಯಾಗಿದ್ದು ಬೆಳಗಾವಿಯ ಚಿತ್ರ ಮಂದಿರ ಒಂದರಲ್ಲಿ ಶಿವರಾಜ್ ಕುಮಾರ್ ಅಭಿನಯದ “ತಮಸ್ಸು” ಚಿತ್ರ ವೀಕ್ಷಿಸುವ ಸಂದರ್ಭದಲ್ಲಿ( ರಾತ್ರಿ 9-12) interval ಟೈಮಲ್ಲಿ ಎದುರಿಗೆ ಸಿಕ್ಕಾಗ ಅವರ ಜೊತೆಯಲ್ಲಿ ಇಬ್ಬರು Gun Man ಗಳಿದ್ದರು. ಆ ವೇಳೆಗಾಗ್ಲೆ ಅನೇಕ ವರ್ಷಗಳು ಕಳೆದು ಹೊಗಿದ್ದರಿಂದ ಅವರಿಗೆ ನನ್ನ ಗುರುತು ಸಿಕ್ಲಿಲ್ಲ ಆದರೂ ನಾನೇ ಹೋಗಿ ಮಾತಾಡಿಸಿದಾಗ ಓ..ನೀವಾ ಹೆಗಿದ್ದಿರಿ ? ಎಂದು ಒಂದೆರಡು ನಿಮಿಷ ಕುಶಲೋಪ ಮಾತಾಡಿ ಹೋರಟು ಹೋದರು.

ನಂತರದಲ್ಲಿ ಅವರು ಭಜರಂಗದಳದಿಂದ ಬೇರೆಯಾಗಿ “ಶ್ರೀರಾಮ ಸೇನೆ” ಎನ್ನುವ ಸಂಘಟನೆ ಕಟ್ಟಿಕೊಂಡರು ಹೆಸರು ಬೇರೆಯಾದರೂ ಉದ್ದೇಶಗಳು ಒಂದೇ ಆಗಿದ್ದರಿಂದ ಇವತ್ತಿನವರೆಗೂ ಹಿಂದೂ ಪರ ವಿಚಾರಗಳಲ್ಲಿ ಆಗಾಗ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತ ಇರೋದನ್ನ ನೋಡ್ತ ಇರ್ತಿನಿ. ಅವಾಗೆಲ್ಲ ನಾನು ಅವರಿಗೆ ಕೇಳಿದ ಮೂರು ಪ್ರಶ್ನೆಗಳು ಅದಕ್ಕೆ ಅವರು ಉತ್ತರಿಸಲು ಹೆಣಗಾಡಿದ್ದು ಜ್ಞಾಪಕ ಬರುತ್ತೆ ಅವರ ಸಿದ್ಧಾಂತಗಳಿಗೆ ಪೂರ್ಣ ವಿರುದ್ದವಾದ ಸಿದ್ಧಾಂತದಲ್ಲಿ ಸಾಗುತ್ತಿರುವ ನನಗೆ ಅಥವಾ ನನ್ನಂತಹವರಿಗೆ ಮುತಾಲಿಕ ಅವರಂಥ ಸಂಘಟಕರಿಂದ ತಿಳಿದು ಕೊಳ್ಳೊಬೇಕಾದ ವಿಷಯ ಎಂದರೆ ಅವರ dedication. ಇವತ್ತು ನಾವು ಬಿತ್ತುತ್ತಿರುವ ಬೀಜ ಮುಂದೊಂದು ದಿನ ಫಲ ಕೊಟ್ಟೇ ಕೊಡುತ್ತೆ ಎನ್ನುವ Confidence. ಅಂತಹ ನಂಬಿಗೆ ಇಂದಲೇ ಮದುವೆ ಮಾಡ್ಕೊಳ್ದೆ ಮನೆ ಮನೆಯವರನ್ನ ಬಿಟ್ಟು ಮೈ ಮೇಲೆ ಕೇಸುಗಳನ್ನು ಹಾಕೋಂಡು ಕೊರ್ಟು ಕಚೇರಿ ಅಂತ ಅಲೆದಾಡಿ ಅದೆಷ್ಟೋ ಹುಡುಗರ ಮನಸಿನಲ್ಲಿ ಹಿಂದೂ ಹಿಂದುತ್ವದ ಬೀಜಗಳನ್ನು ಬಿತ್ತಿದ Result ಕಣ್ಣ ಮುಂದಿದೆ.

ಇದೇ ಪ್ರಮೋದ್ ಮುತಾಲಿಕ್ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಧರ್ಮದ ಬೀಜ ಬಿತ್ತನೆ ಆರಂಭಿಸಿದ ಮುತಾಲಿಕ ಮತ್ತು ಅವರಂಥ ಅದೆಷ್ಟೋ ಜನ ಸಂಘಟಕರು ಬಿತ್ತಿದ ಬೀಜ ಇವತ್ತು ಹೆಮ್ಮರವಾಗಿ ‘ಫಲ’ ಕೊಡ್ತ ಇದೆ, ಅವತ್ತು ಶರವೇಗದ ಕುದುರೆಯಾಗಿದ್ದ ಮುತಾಲೀಕ್ ಇವತ್ತು ಮೊದಲಿನ ವೇಗ, ಅಬ್ಬರ ಕಳ್ಕೊಂಡಿದ್ದಾರೆ, ಇವತ್ತು ನಿಜವಾಗಿಯೂ ಅನಿಸುತ್ತಿರುವುದೇನೆಂದರೆ ಮುತಾಲಿಕರಂಥ ಸಂಘಟಕರು ಕೇವಲ ಹಿಂದೂ, ಹಿಂದುತ್ವ ,ಶ್ರೀ ರಾಮ, ಮುಸ್ಲಿಂ, ಪಾಕಿಸ್ತಾನ್ ನಂಥ ಅನಗತ್ಯ ದ್ವೇಷದ ಬೀಜಗಳನ್ನು ಅಮಾಯಕ ಜನಗಳ ಎದೆಯಲ್ಲಿ ಬಿತ್ತುವ ಬದಲು ಮಾನವಿಯ, ಜಾತ್ಯಾತೀತ, ಧರ್ಮ ನಿರಪೇಕ್ಷ, ಭ್ರಾತೃತ್ವ, ಸದೃಢ ಭಾರತದ ಬೀಜಗಳನ್ನು ಒಂದು ವೇಳೆ ಬಿತ್ತಿದ್ದರೆ ಖಂಡಿತ ಭಾರತದ ಭವಿಷ್ಯ ಬದಲಾಗಬಹುದಿತ್ತು, ಮುತಾಲಿಕ್ ಒಂದು ವರ್ಗಕ್ಕೆ ಸೀಮಿತವಾಗಿ ಉಳಿದೇ ಕರ್ನಾಟಕದ ಜನಗಳ ಜ್ಯಾತ್ಯಾತೀತ ನಾಯಕನ ಸ್ಥಾನ ಪಡ್ಕೊಳ್ತ ಇದ್ದ್ರು

ಆದ್ರೆ ದುರಂತ ಹೊಡಿರಿ ಬಡಿರಿ ಸುಟ್ಟು ಹಾಕಿ ಎನ್ನುವ ಸಿದ್ಧಾಂತದ ಬೆನ್ನತ್ತಿ ಎಲ್ಲೋ ನೆಪಥ್ಯಕ್ಕೆ ಸರಿದು ಹೋದರು.ರಾಮ ಮಂದಿರದ ಭೂಮಿ ಪೂಜೆಯ ಈ ದಿವಸ ರಾಮ ಮಂದಿರದ ವಿಷಯ ಮೊಟ್ಟ ಮೊದಲು ನನ್ನ ಕಿವಿಗೆ ಹಾಕಿದ ಮುತಾಲಿಕರ ನೆನಪು ಸ್ಮೃತಿ ಪಟಲದಲ್ಲಿ ಬಂದು ಹೋಯ್ತು..

ರವೀಂದ್ರ ಎನ್ ಎಸ್ – ಲೇಖಕರು


 

LEAVE A REPLY

Please enter your comment!
Please enter your name here