ವಿಜಯಪುರ: ಮುದ್ದೇಬಿಹಾಳದಲ್ಲಿ ಪ್ರೇಯಸಿಯ ಕೊಲೆ ಪ್ರಕರಣ ಇದೀಗ ವಿಜಯಪುರ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಿಯತಮೆಯನ್ನು ಕೊಲೆ ಮಾಡಿದ ಬಳಿಕ ಶವವನ್ನು ಸೇತುವೆಯಿಂದ ಎಸೆಯಲು ಯತ್ನಿಸಿದ ಆರೋಪಿಯು ಪರಾರಿಯಾಗಿರುವ ಘಟನೆ ನಡೆದಿದೆ.
ಮುದ್ದೇಬಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 158/2026, ಕಲಂ 103(1) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೇ 13 ರಂದು ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ.
ಮುದ್ದೇಬಿಹಾಳದಲ್ಲಿ ಪ್ರೇಯಸಿಯ ಕೊಲೆ ಯ ಆರೋಪಿತ ಸಮ್ಮೇದ ವಿಜಯ ಸಾಬಣ್ಣವರ ಹಾಗೂ ಮೃತ ಗಂಗವ್ವ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿತನು ಬೇರೆ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದರಿಂದ ಗಂಗವ್ವ ತಕರಾರು ಮಾಡುತ್ತಿದ್ದಳು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಆರೋಪಿತನು ಮರೋಳ ಗ್ರಾಮದ ಸಮೀಪ ಹೊಲಕ್ಕೆ ಕರೆದುಕೊಂಡು ಹೋಗಿ ಗಂಗವ್ವಳನ್ನು ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಶವವನ್ನು ಮೋಟಾರ್ ಸೈಕಲ್‌ನಲ್ಲಿ ತಂಗಡಗಿ ಸೇತುವೆ ಬಳಿ ತೆಗೆದುಕೊಂಡು ಹೋಗಿ ಎಸೆಯಲು ಯತ್ನಿಸಿದ್ದಾನೆ.
ಈ ವೇಳೆ ಸ್ಥಳೀಯರು ಗಮನಿಸಿದಾಗ ಆರೋಪಿಯು ಶವ ಹಾಗೂ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಮೃತಳ ತಾಯಿ ನೀಲವ್ವ ನಿಂಗಪ್ಪ ಅರಳಕಟ್ಟಿ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.






