
ವಿಜಯಪುರ: ಇದೇ ಏ.23 ರಿಂದ ಮೇ.22 ರವರೆಗೆ ಜಿಲ್ಲೆಯಲ್ಲಿ 9ನೇ ಸುತ್ತಿನ ಕಾಲು ಬಾಯಿ ರೋಗದ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ತಿಳಿಸಿದ್ದಾರೆ. ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ರಾಷ್ರ್ಟೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ ಯೋಜನೆಯಡಿ 9ನೇ ಸುತ್ತಿನ ಕಾಲುಬಾಯಿ ಜ್ವರ ರೋಗದ ಲಸಿಕಾ ಕಾರ್ಯಕ್ರಮದ ಜಿಲ್ಲಾ ರ್ನಿಹಣಾ ಸಮಿತಿ ಸಭೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಅಭಿಯಾನದಲ್ಲಿ ರೈತರು, ಹಾಲು ಉತ್ಪಾದಕರ ಸಂಘಗಳು ಭಾಗವಹಿಸಿ ತಮ್ಮ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಾನುವಾರುಗಳಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ 1962 ಪಶು ಸಹಾಯವಾಣಿಗೆ ಕರೆ ಮಾಡಿ ಉಚಿತ ಅಂಬ್ಯುಲೆನ್ಸ್ ಸೇವೆ ಪಡೆದುಕೊಳ್ಳಬಹುದಾಗಿದೆ. ಕಾಲು ಬಾಯಿ ರೋಗವು ಎತ್ತು, ಹೋರಿ, ಹಸು ಹಾಗೂ ಎಮ್ಮೆ ಉಂಟಾದರೆ ಆರ್ಥಿಕ ನಷ್ಟ ಉಂಟಾಗುತ್ತದೆ. ಅಲ್ಲದೆ ರೋಗದಿಂದ ಗುಣಮುಖವಾದ ಜಾನುವಾರುಗಳಿಗೆ ಗರ್ಭಕಟ್ಟುವಿಕೆಯಲ್ಲಿ ವಿಳಂಬ ಉಂಟಾಗುತ್ತದೆ. ಜೊತೆಗೆ ಹಾಲಿನ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ. 3 ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವುದು ಅಗತ್ಯವಿದೆ ಎಂದು ಹೇಳಿದರು
ಈ ಕಾಲು ಬಾಯಿ ಲಸಿಕೆಯನ್ನು ವರ್ಷಕ್ಕೆ 2 ಬಾರಿ ಹಾಕಲಾಗುತ್ತದೆ. ಒಂದು ತಿಂಗಳು ನಡೆಯುವ ಈ ಅಭಿಯಾನದಲ್ಲಿ ಲಸಿಕೆದಾರರು ಬೆಳಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ಲಸಿಕೆದಾರರಿಗೆ ಲಸಿಕೆ ಹಾಕುವರು. ಈ ಬಾರಿ ಭಾರತ ಪಶುಧನ್ ಆ್ಯಪ್‍ನಲ್ಲಿ ಲಸಿಕೆದಾರರು ಲಸಿಕೆ ಹಾಕಿದ ಮಾಹಿತಿಯನ್ನು ಅಪ್‍ಲೋಡ್ ಮಾಡಲು ಅವಕಾಶ ಇರುತ್ತದೆ. ಈ ಅಭಿಯಾನದಲ್ಲಿ ದಿನಕ್ಕೆ 7000 ಜಾನುವಾರುಗಳಿಗೆ ಹಾಕುವ ಗುರಿ ಹೊಂದಿದ್ದು, ಕಳೆದ ಬಾರಿ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಶೇ100 ರಷ್ಟು ಗುರಿ ಸಾಧನೆ ಮಾಡಲಾಗಿದೆ. ಅಲ್ಲದೆ 1962ರ ಪಶು ಅಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿದೆ ಎಂದರು.
ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ. ರೇವಣಸಿದ್ದಪ್ಪ ಪದರಾ ಮಾತನಾಡಿ, ಜಿಲ್ಲೆಯಲ್ಲಿ 132843 ದನಗಳು, 135773 ಎಮ್ಮೆಗಳು ಒಟ್ಟು 268613 ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಜಿಲ್ಲೆಯಲ್ಲಿ ಕಾಲು ಬಾಯಿ ಜ್ವರಕ್ಕೆ ಲಸಿಕೆ ನೀಡುವ ತಂಡಗಳನ್ನು ರಚಿಸಲಾಗಿದೆಯಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಹಾಗೂ ರೈತಾಪಿ ವರ್ಗದವರು ಮೊಬೈಲ್ ಸಂಖ್ಯೆ 8277100200 ಸಂಪರ್ಕಿಸಬಹುದೆಂದು ತಿಳಿಸಿದರು. ಈ ಸಂದರ್ಭದಲ್ಲಿ 9ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮದ ಕರ ಪತ್ರ, ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರು ಮತ್ತು ಮುಖ್ಯ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.





