ನಿರಂತರ ಅಧ್ಯಯನವೇ ಯಶಸ್ಸಿನ ಮಂತ್ರ: ದ್ವಿತೀಯ ಪಿಯು ಟಾಪರ್‌ಗಳಿಗೆ ಜಿಲ್ಲಾಧಿಕಾರಿಗಳ ಸನ್ಮಾನ

II PUC Toppers Felicitation image

ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾದಾಗ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉನ್ನತ ಜೀವನ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ 2026ರ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಗೆ ಕ್ರಮವಾಗಿ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ ಅವರು ಮಾತನಾಡಿದರು. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ವರ್ಷಾರಂಭದಿAದಲೇ ಆಸಕ್ತಿಯಿಂದ ಓದಲಾರಂಭಿಸಿದರೆ ಪರೀಕ್ಷೆ ಯಶಸ್ಸು ನೀರು ಕುಡಿದಷ್ಟೇ ಸುಲಭವಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಠಿಣ ಅಧ್ಯಯನ ಶೈಲಿ ರೂಢಿಸಿಕೊಳ್ಳಬೇಕು. ವಿಷಯ ಕರಗತ ಮಾಡಿಕೊಂಡು ಮನನ ಮಾಡಿಕೊಳ್ಳುವ ಮೂಲಕ ತಮ್ಮನ್ನು ತಾವು ಮೌಲ್ಯಮಾಪನಕ್ಕೊಳಡಿಸಿ ಕೊಂಡರೆ, ಓದಿದ್ದೆಲ್ಲವೂ ಸ್ಮೃತಿಪಟಲದಲ್ಲಿ ಉಳಿಯುತ್ತದೆ ಎಂದರು. ವಿದ್ಯಾಭ್ಯಾಸದೊಟ್ಟಿಗೆ ದೈಹಿಕ ಚಟುವಟಿಕೆಗಳಿಗೂ ನೀಡಬೇಕು. ತಮಗೆ ಆಸಕ್ತಿದಾಯಕ ಕ್ರೀಡೆಗಳಲ್ಲೂ ತೊಡಗಿಸಿಕೊಂಡರೆ ಅಧ್ಯಯನ ಇನ್ನಷ್ಟು ಸುಲಭವಾಗುತ್ತದೆ ಎಂದರು.

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸೇಂಟ್ ಜೋಸೆಫ್ ಪಿಯು ಕಾಲೇಜ್ ನ ಪ್ರಜ್ಞಾ ಗಲಗಲಿ, ದ್ವಿತೀಯ ಸ್ಥಾನ ಪಡೆದ ವಿ.ಬಿ ದರಬಾರ ಪಿಯು ಕಾಲೇಜಿನ ಸರ್ವಜ್ಞ ಗುರ್ಜಾಲ ಹಾಗೂ ತೃತೀಯ ಸ್ಥಾನ ಪಡೆದ ಶ್ರೀ ಬಿ.ಎಂ.ಪಾಟೀಲ ಕಾಲೇಜಿನ ಕನಿಶಾ ಕಮಲೇಶ ಪೋರವಾಲ, ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಸ್ಥಾನ ಪಡೆದ ನಗರದ ರೇಡಿಯಂಟ್ ಪಿಯು ಕಾಲೇಜಿನ ನುಝಾತ ಫಾತಿಮಾ ತಾಳಿಕೋಟಿ, ದ್ವಿತೀಯ ಸ್ಥಾನ ಪಡೆದ ಆಕ್ಸಫರ್ಡ್ ಪಿಯು ಕಾಲೇಜಿನ ಲಕ್ಷ್ಮಿ ಪರಸಪ್ಪ ಅಡಿಗಿಮನಿ, ಹಾಗೂ ತೃತೀಯ ಸ್ಥಾನ ಪಡೆದ ಶಾಂತಿನಿಕೇತನ ಪಿಯು ಕಾಲೇಜಿನ ವಿದ್ಯಾಶ್ರೀ ಪ್ರಕಾಶ ಕಾಮನಕೇರಿ, ಆಕ್ಸಫರ್ಡ್ ಪಿಯು ಕಾಲೇಜಿನ ಭಾಗ್ಯ ಪುಂಡಲಿಕಪ್ಪ ಹೊಸಮನಿ, ಇದೇ ಕಾಲೇಜಿನ ನಂದಿತಾ, ಶಾಂತಿನಿಕೇತನ ಪಿಯು ಕಾಲೇಜಿನ ಪೂಜಾ ಈಟಿ, ತುಂಗಳ ಸೈನ್ಸ್ ಪಿಯು ಕಾಲೇಜಿನ ಪೃಥ್ವಿ ಪತ್ತಾರ, ಸೇಂಟ್ ಜೋಸೆಫ್ ಪಿಯು ಕಾಲೇಜಿನ ಸಿದ್ದಿ ಜಿ ತೋನ್ಸಿವಾಲ್ ಹಾಗೂ ತುಂಗಳ ಸೈನ್ಸ್ ಪಿಯು ಕಾಲೇಜಿನ ಸುಶ್ಮಿತಾ ಈರಪ್ಪ ಕೊಪ್ಪಳ ನಿದರ್ಶನವಾಗಿದ್ದಾರೆ ಎಂದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳಾದ ಡಾ. ಆನಂದ .ಕೆ. ಅವರು ಕ್ರಮವಾಗಿ ಜಿಲ್ಲೆಗೆ ಸ್ಥಾನ ಪಡೆದ ಈ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಗೌರವಿಸಿ ಅಭಿನಂದಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ. ಹೊಸಮನಿ ಮಾತನಾಡಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು, ಈ ಸಾಧಕ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ಒದಗಿಸಿ, ಈ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ ಕಾರಣರಾದ ಪೋಷಕರು, ಶಿಕ್ಷಕರು ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾ ರಿಷಿ ಆನಂದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಕೆ.ಹೊಸಮನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಮತ್ತು ಗಣ್ಯರು ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು