
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಪೋನ್ ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಒಂದೇ ಸಾಧನದಲ್ಲಿ ಜಗತ್ತಿನ ಮಾಹಿತಿಯೇ ಸಿಗುವ ಕಾಲ ಇದು. ಆದರೆ ಇದೇ ಮೊಬೈಲ್ ಇಂದು ಅನೇಕ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಚಿಂತಾಜನಕ ಸಂಗತಿ. ಶಿಕ್ಷಣವೇ ಜೀವನದ ಮೂಲ ಆಧಾರವಾಗಿರುವಾಗ, ಅದರಿಗಿಂತ ಹೆಚ್ಚು ಒತ್ತು ಮೊಬೈಲ್ ಬಳಕೆಗೆ ನೀಡುತ್ತಿರುವುದು ಸಮಾಜದ ಭವಿಷ್ಯಕ್ಕೆ ಎಚ್ಚರಿಕೆಯ ಗಂಟೆ ಹೊಡೆಯುವಂತಾಗಿದೆ. ಒಂದು ಕಾಲದಲ್ಲಿ ಪುಸ್ತಕಗಳು, ಶಿಕ್ಷಕರು ಮತ್ತು ಶಾಲಾ ವಾತಾವರಣವೇ ವಿದ್ಯಾರ್ಥಿಗಳ ಜ್ಞಾನಲೋಕವಾಗಿದ್ದರೆ, ಈಗ ಸಾಮಾಜಿಕ ಜಾಲತಾಣಗಳು, ಆಟಗಳು ಮತ್ತು ವಿಡಿಯೋ ಅಪ್ಲಿಕೇಶನ್‍ಗಳು ಅವರ ಗಮನವನ್ನು ಸಂಪೂರ್ಣವಾಗಿ ಹಿಡಿದಿಟ್ಟಿವೆ.
ಮೊಬೈಲ್ ಮೂಲತಃ ಉಪಯುಕ್ತ ಸಾಧನ. ಆನ್‍ಲೈನ್ ತರಗತಿಗಳು, ಡಿಜಿಟಲ್ ನೋಟ್ಸ್, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಇವೆಲ್ಲವೂ ಮೊಬೈಲ್ ಮೂಲಕ ಸುಲಭವಾಗಿದೆ. ಆದರೆ ಉಪಯೋಗವನ್ನು ಮೀರಿದ ಅತಿಯಾದ ಬಳಕೆ ಸಮಸ್ಯೆಯ ಮೂಲ. ವಿದ್ಯಾರ್ಥಿಗಳು ಓದುವ ಸಮಯವನ್ನು ಕಡಿಮೆ ಮಾಡಿ, ಗಂಟೆಗಟ್ಟಲೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಕ್ಷಣಿಕ ಮನರಂಜನೆಗೆ ಒಲವು ಹೆಚ್ಚಾಗಿ, ಆಳವಾದ ಚಿಂತನೆ ಮತ್ತು ಗಮನ ಕೇಂದ್ರೀಕರಣದ ಸಾಮಥ್ರ್ಯ ಕುಗ್ಗುತ್ತಿದೆ. ಪಾಠಪುಸ್ತಕದ ಒಂದು ಪುಟ ಓದಲು ಸಹನಶಕ್ತಿ ಬೇಕಾದರೆ, 30 ಸೆಕೆಂಡಿನ ವಿಡಿಯೋ ನೋಡುವುದು ಸುಲಭವೆನಿಸುತ್ತದೆ. ಈ ಚಟುವಟಿಕೆ ಮನಸ್ಸಿನ ಶಿಸ್ತು ಮತ್ತು ಏಕಾಗ್ರತೆಯನ್ನು ಹಾಳು ಮಾಡುತ್ತಿದೆ.
ಮೊಬೈಲ್ ವ್ಯಸನವು ಕೇವಲ ಅಕಾಡೆಮಿಕ್ ಸಾಧನೆಗೆ ಮಾತ್ರವಲ್ಲ, ವ್ಯಕ್ತಿತ್ವ ವಿಕಾಸಕ್ಕೂ ಅಡ್ಡಿಯಾಗುತ್ತಿದೆ. ನೇರ ಸಂಭಾಷಣೆ ಕಡಿಮೆಯಾಗುತ್ತಿದೆ. ಕುಟುಂಬದ ಜೊತೆ ಕುಳಿತು ಮಾತನಾಡುವ ಸಮಯದ ಬದಲು, ಪ್ರತಿಯೊಬ್ಬರೂ ತಮ್ಮದೇ ಪರದೆಯಲ್ಲಿ ಮುಳುಗಿರುವ ದೃಶ್ಯ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಮೈದಾನದಲ್ಲಿ ಆಟವಾಡುವ ಬದಲು ಆನ್‍ಲೈನ್ ಗೇಮ್‍ಗಳಲ್ಲಿ ತಲ್ಲೀನರಾಗುತ್ತಿದ್ದಾರೆ. ದೈಹಿಕ ಚಟುವಟಿಕೆ ಕಡಿಮೆಯಾಗಿ, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಿದ್ರೆ ಕೊರತೆ, ಕಣ್ಣಿನ ತೊಂದರೆ, ಒತ್ತಡ ಇವುಗಳೆಲ್ಲವೂ ಅತಿಯಾದ ಮೊಬೈಲ್ ಬಳಕೆಯ ಪರಿಣಾಮಗಳು.
ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಆಭಾಸೀಯ ಜಗತ್ತು ವಿದ್ಯಾರ್ಥಿಗಳ ಮನೋಭಾವವನ್ನು ಬದಲಾಯಿಸುತ್ತಿದೆ. ಇತರರ ಸಾಧನೆ, ಜೀವನಶೈಲಿ, ಖ್ಯಾತಿ ಇವೆಲ್ಲವನ್ನು ನೋಡಿ ತಮ್ಮನ್ನು ತಾವು ಹೋಲಿಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ಆತ್ಮವಿಶ್ವಾಸ ಕುಗ್ಗಿ, ಅಸಮಾಧಾನ ಮತ್ತು ನಿರಾಶೆ ಮೂಡುತ್ತಿದೆ. ಓದಿನಲ್ಲಿನ ತಾತ್ಕಾಲಿಕ ವಿಫಲತೆಯನ್ನೇ ದೊಡ್ಡ ಸಮಸ್ಯೆಯಾಗಿ ಭಾವಿಸುವ ಪರಿಸ್ಥಿತಿ ಉಂಟಾಗಿದೆ. ಸಹನೆ ಮತ್ತು ಹೋರಾಟ ಮನೋಭಾವ ಕುಂದಿದೆ.
ಶಿಕ್ಷಕರ ಪಾತ್ರವೂ ಇಲ್ಲಿ ಮಹತ್ವದ್ದು. ವಿದ್ಯಾರ್ಥಿಗಳನ್ನು ಕೇವಲ ಪಾಠಪುಸ್ತಕದ ಮಿತಿಯೊಳಗೆ ಇಡುವುದಕ್ಕಿಂತ, ತಂತ್ರಜ್ಞಾನವನ್ನು ಸರಿಯಾದ ದಿಕ್ಕಿನಲ್ಲಿ ಬಳಸುವ ಮಾರ್ಗದರ್ಶನ ನೀಡಬೇಕು. ಮೊಬೈಲ್ ನಿರ್ಭಂದವೇ ಪರಿಹಾರವಲ್ಲ; ನಿಯಂತ್ರಿತ ಮತ್ತು ಉದ್ದೇಶಪೂರಿತ ಬಳಕೆ ಮುಖ್ಯ. ಪೋಷಕರ ಜವಾಬ್ದಾರಿಯೂ ಅಷ್ಟೇ ಮಹತ್ವದ್ದು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ನೀಡಿ ಅವರನ್ನು ನಿರ್ಲಕ್ಷಿಸುವ ಬದಲು, ಅವರ ಜೊತೆ ಸಮಯ ಕಳೆಯುವುದು, ಓದಿಗೆ ಪ್ರೇರೇಪಿಸುವುದು ಅಗತ್ಯ. ಮನೆಯ ವಾತಾವರಣದಲ್ಲೇ ಓದಿಗೆ ಸೂಕ್ತ ಶಿಸ್ತು ಮತ್ತು ಸಮಯ ನಿಯಮ ರೂಪಿಸಬೇಕು.
ವಿದ್ಯಾರ್ಥಿಗಳಿಗೂ ಆತ್ಮಪರಿಶೀಲನೆ ಅಗತ್ಯ. ತಮ್ಮ ಭವಿಷ್ಯವನ್ನು ನಿರ್ಧರಿಸುವುದು ಇಂದಿನ ಅಭ್ಯಾಸಗಳು ಎಂಬ ಅರಿವು ಇರಬೇಕು. ಕ್ಷಣಿಕ ಮನರಂಜನೆಗಾಗಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದರಿಂದ ನಾಳೆಯ ಕನಸುಗಳು ಮಸುಕಾಗಬಹುದು. ದಿನದಲ್ಲಿ ನಿರ್ದಿಷ್ಟ ಸಮಯವನ್ನು ಮಾತ್ರ ಮೊಬೈಲ್ ಬಳಕೆಗೆ ಮೀಸಲಿಟ್ಟು, ಉಳಿದ ಸಮಯವನ್ನು ಓದು, ಕ್ರೀಡೆ, ಹವ್ಯಾಸಗಳಿಗೆ ಮೀಸಲಿಡುವುದು ಒಳಿತು. ಗುರಿ ಸ್ಪಷ್ಟವಾಗಿದ್ದರೆ, ವ್ಯತ್ಯಯಗಳು ಸ್ವತಃ ಕಡಿಮೆಯಾಗುತ್ತವೆ.
ಡಿಜಿಟಲ್ ಯುಗವನ್ನು ಸಂಪೂರ್ಣವಾಗಿ ತಳ್ಳಿಹಾಕುವುದು ಸಾಧ್ಯವಿಲ್ಲ. ಆದರೆ ಅದರ ಅತಿಯಾದ ಅವಲಂಬನೆ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಶಿಕ್ಷಣವು ಕೇವಲ ಪರೀಕ್ಷೆ ಪಾಸಾಗಲು ಮಾತ್ರವಲ್ಲ, ಜೀವನ ನಿರ್ಮಾಣಕ್ಕೆ ಅಗತ್ಯ. ಮೊಬೈಲ್ ಸಾಧನವಾಗಿರಬೇಕು, ಸ್ವಾಮಿ ಆಗಬಾರದು. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಜ್ಞಾನ ಸಾಧನವಾಗಿ ಬಳಸಿದರೆ ಅದು ವರದಾನ; ವ್ಯಸನವಾಗಿ ಬಳಸಿದರೆ ಅದು ಶಾಪ.
ಒಟ್ಟಿನಲ್ಲಿ, ವಿದ್ಯಾರ್ಥಿಗಳು ಶಿಕ್ಷಣಕ್ಕಿಂತ ಮೊಬೈಲ್‍ಗೆ ಹೆಚ್ಚು ಒತ್ತು ನೀಡುತ್ತಿರುವುದು ತಾತ್ಕಾಲಿಕ ಪ್ರವೃತ್ತಿಯಷ್ಟೇ ಅಲ್ಲ, ಗಂಭೀರ ಸಾಮಾಜಿಕ ಸಮಸ್ಯೆಯೂ ಹೌದು. ಇದನ್ನು ತಿದ್ದಲು ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಜಾಗೃತರಾಗಬೇಕು. ಸಮಯದ ಮೌಲ್ಯವನ್ನು ಅರಿತು, ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದಾಗ ಮಾತ್ರ ವ್ಯಕ್ತಿಯೂ, ಸಮಾಜವೂ, ರಾಷ್ಟ್ರವೂ ಉಜ್ವಲ ಭವಿಷ್ಯವನ್ನು ಕಾಣಬಹುದು.
