ವಿಜಯಪುರ: ದೇಶದ ಭವಿಷ್ಯ ಶಾಲೆಗಳಲ್ಲಿ ನಿರ್ಮಾಣಗೊಳ್ಳುತ್ತದೆ, ಶಾಲೆಗಳು ಈ ನಾಡಿಗೆ ಜ್ಞಾನವನ್ನು ಉಣಬಡಿಸುವ ಪವಿತ್ರ ದೇವಾಲಯಗಳು ಎಂದು ಡ್ರೀಮ್ಸ್ ಕಮ್ಸ್ ಟ್ರು (Dreams Comes True) ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸರ್ಫರಾಜ್ ಮಿರ್ದೆ ಹೇಳಿದರು.
ಇದನ್ನೂ ಓದಿ: Cleanliness Campaign: ನಮ್ಮ ಸ್ವಚ್ಚತೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.
ವಿಜಯಪುರದ ಭವಾನಿ ನಗರದಲ್ಲಿರುವ ಕೆಬಿಎಸ್ ನಂ.57 ರಲ್ಲಿ ಡ್ರೀಮ್ಸ್ ಕಮ್ಸ್ ಟ್ರು ಸಂಸ್ಥೆಯ ಸಹಯೋಗದಲ್ಲಿ ನಮ್ಮೂರು ನಮ್ಮ ಶಾಲೆ ಎಂಬ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆ ಹಾಗೂ ಈ ವಿಷಯವಾಗಿ ಮಕ್ಕಳಿಂದ ವಿಚಾರ ಮಂಡನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಭವಿಷ್ಯ ವರ್ಗಕೋಣೆಯಲ್ಲಿ ರೂಪಿತವಾಗುತ್ತದೆ ಎಂಬ ಮಹಾನ್ ತತ್ವಜ್ಞಾನಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾತು ಅಕ್ಷರಶ: ಸತ್ಯ, ವಿದ್ಯೆ ಒದಗಿಸುವ ಶಿಕ್ಷಕರು ದೇವರ ಪ್ರತಿರೂಪವಾದರೆ, ಶಾಲೆ ಒಂದು ದೇವಾಲಯವಿದ್ದಂತೆ. ಹೀಗಾಗಿ ಮಕ್ಕಳು ತಾವು ಕಲಿಯುತ್ತಿರುವ ಶಾಲೆ, ತಾವು ವಾಸಿಸುತ್ತಿರುವ ಪ್ರದೇಶದ ಬಗ್ಗೆ ಸಮಗ್ರ ಮಾಹಿತಿ ಹೊಂದಬೇಕು ಎಂದರು.
ವಿಜಯಪುರ ನಗರ ಐತಿಹಾಸಿಕ ನಗರಿ, ವೈಶಿಷ್ಟ್ಯಪೂರ್ಣ ಸ್ಮಾರಕಗಳು ಇಲ್ಲಿವೆ, ಈ ಎಲ್ಲ ಸ್ಮಾರಕಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಹೊಂದಬೇಕು ಎಂದರು. ಮಕ್ಕಳಲ್ಲಿ ದೇಶಾಭಿಮಾನ ಬೆಳಸಲು ಶಿಕ್ಷಕರು ಶ್ರಮಿಸಬೇಕು.
ಇದನ್ನೂ ಓದಿ: ಶಿಕ್ಷಕ: ರಾಜ್ಯದಾದ್ಯಂತ ಅನಿರ್ದಿಷ್ಟ ಕಾಲಾವಧಿಗೆ ಮುಷ್ಕರ
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಪ್ರಮಾಣಪತ್ರ ವಿತರಿಸಿದ ಸಮಾಜಸೇವಕ ಅಲ್ಲಾಭಕ್ಷ ಬಿಜಾಪೂರ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳಗಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ, ಸಂಸ್ಕಾರ, ಸಂಸ್ಕೃತಿ, ದೇಶಭಕ್ತಿ, ಜ್ಞಾನವನ್ನು ಬಿತ್ತುವ ಪವಿತ್ರ ಕಾರ್ಯ ನಿರ್ವಹಿಸುವ ಶಿಕ್ಷಕರ ಮಹತ್ವವನ್ನು ನಾವು ಅರಿಯಬೇಕು, ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಪ್ರಕಾಶಿಸುವ ಕಾರ್ಯ ನಡೆಯಬೇಕಿದೆ, ಡ್ರೀಮ್ಸ್ ಕಮ್ಸ್ ಟ್ರು ಸಂಸ್ಥೆ (Dreams Comes True) ಮಕ್ಕಳಲ್ಲಿ ಚಿತ್ರಕಲೆ, ಚರ್ಚಾ ಸ್ಪರ್ಧೆ ನಡೆಸುವ ಮೂಲಕ ಪ್ರತಿಭೆಯನ್ನು ಬೆಳಕಿಗೆ ತರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಝಿಯಾ ಪಠಾಣ, ಡ್ರೀಮ್ಸ್ ಕಮ್ಸ್ ಟ್ರು ಸಂಸ್ಥೆಯ ಉಪಾಧ್ಯಕ್ಷ ವಸೀಮ್ ಜಂಬಗಿ, ಎಸ್ಡಿಎಂಸಿ ಅಧ್ಯಕ್ಷ ಶ್ರೀಕಾಂತ ಗುಣಕಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಆರ್.ಎನ್. ವಡಗೇರಿ ಮೊದಲಾದವರು ಉಪಸ್ಥಿತರಿದ್ದರು.





