ಹೋರಾಟಗಾರನಾದವನು ಒಳ್ಳೆ ಪತ್ರಕರ್ತನಾಗಲು ಸಾಧ್ಯ- ಬಿ ಎಂ ಹನೀಫ್

ಒಬ್ಬ ಹೋರಾಟಗಾರನಾದವನು ಒಳ್ಳೆಯ ಪತ್ರಕರ್ತನಾಗಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಬಿ ಎಂ ಹನೀಫ್ ಹೇಳಿದರು.
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಮೊದಲ ದಿನದ ಮೊದಲ ಗೋಷ್ಠಿ ಸಾಮಾಜಿಕ ಬದ್ಧತೆ ಪತ್ರಕರ್ತನಾಗಿ ನನ್ನ ಅನುಭವಗಳು ವಿಷಯದ ಮಂಡನೆ ಮಾಡಿ ಮಾತನಾಡಿದರು.
ಇತ್ತೀಚಿಗೆ ಕೆಲವು ಪತ್ರಕರ್ತರು ನಾವು ಆಕಾಶದಿಂದ ಬಿದ್ದವರು ನಾವು ಯಾರಿಗೆ ಬೇಕಾದರೂ ಏನು ಬೇಕಾದರೂ ಪ್ರಶ್ನೆ ಕೇಳಬಹುದು ಎಂಬ ಭಾವನೆ ಹೊಂದಿದ್ದಾರೆ. ಅವರು ಆಕಾಶದಿಂದ ಬಿದ್ದಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆಯಲ್ಲಿ ಅಪಘಾತ ನಡೆದಾಗ ಮೊದಲು ಗಾಯಳುಗಳನ್ನು ರಕ್ಷಣೆ ಮಾಡಬೇಕು, ಇತ್ತೀಚಿಗೆ ಕೆಲವು ದೃಶ್ಯ ಮಾಧ್ಯಮದವರು ಗಾಯಾಳುಗಳನ್ನು ರಕ್ಷಣೆ ಮಾಡಲು ಮುಂದಾಗದೆ ವಿಡಿಯೋ ಮಾಡುತ್ತ ನಿಲ್ಲುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ ಅವರು ಪತ್ರಕರ್ತ ಮೊದಲು ಮಾನವೀಯ ಬದ್ಧತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತನಾದವನು ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸುದ್ದಿ ಪ್ರಸಾರ ಮಾಡಬೇಕು ಪತ್ರಕರ್ತ ಯಾವಾಗಲು ವಿರೋಧ ಪಕ್ಷದ ನಾಯಕರಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.
ವಿಜಯಪುರದ ಕ್ರೀಡಾಂಗಣಕ್ಕೆ ಅಂಬೇಡ್ಕರ್ ಹೆಸರು ಇಡಲಿಕ್ಕೆ ಧರಣಿ ಕುಳಿತಿದ್ದರು ಶಾಸಕರಾಗಿದ್ದ ಎಂಬಿ ಪಾಟೀಲ ತಮ್ಮ ತಂದೆ. ಬಿ ಎಂ ಪಾಟೀಲ ಹೆಸರು ಇಡಲು ಒತ್ತಡ ಹಾಕುತ್ತಿದ್ದರು. ಆಗ ಜಿಲ್ಲಾಧಿಕಾರಿಯಾಗಿದ್ದ ಮದನಗೋಪಾಲ ಅವರು ಎಂಬಿ ಪಾಟೀಲ ಅವರು ನೀಡಿದ ದೇಣಿಗೆಯನ್ನು ಹಿಂತಿರುಗಿಸಿ. ರಾತ್ರೋರಾತ್ರಿ ಕ್ರೀಡಾಂಗಣಕ್ಕೆ ಡಾ ಬಿ ಆರ್ ಅಂಬೇಡ್ಕರ್ ಹೆಸರು ಇಟ್ಟು ನಾಲ್ಕು ದಿಕ್ಕಿಗೆ ಬೋರ್ಡ್ ಬರೆಸಿದರು. ಇದನ್ನು ಮೊದಲು ಪ್ರಜಾವಾಣಿಯಲ್ಲಿ ಸುದ್ದಿ ಮಾಡಿದ್ದು ನಾನೇ ಎಂದು ಹೇಳಿದ ಅವರು ಆಗ ನಾನು ಹೋರಾಟಗಾರನಾಗಿದ್ದೆ ಎಂದು ಹೇಳಿದ ಅವರು ಪತ್ರಕರ್ತನಾದವನು ನಾಯಕರನ್ನು ಒಲಿಸಿಕೊಳ್ಳಲು ಸುದ್ದಿ ಮಾಡದೆ ನಾಯಕರಿಗೆ ಮಾಹಿತಿ ಒದಗಿಸುವವನಾಗಿರಬೇಕು ಎಂದರು.
ಸಮಾಜಮುಖಿ ಮಾಸ ಪತ್ರಿಕೆ ಸಂಪಾದಕ ಚಂದ್ರಕಾಂತ ವಡ್ಡು ಅವರು ಮಾತನಾಡಿ ಪತ್ರಕರ್ತ ಹೋರಾಟಗಾರನ ಜೊತೆಗೆ ಒಳ್ಳೆಯ ಭಾಷಣಕಾರನಾಗಿರಬೇಕು ಎಂದು ಹೇಳಿದರು.
ಕಸ್ತೂರಿ ಪತ್ರಿಕೆಯಲ್ಲಿ ಲಂಕೇಶ ಅವರಿಗೆ ಕೇಳದೆ ಸಂಕ್ರಾಂತಿ ನಾಟಕ ಪ್ರಕಟಿಸಿದ್ದೆ ಆ ಸಂದರ್ಭದಲ್ಲಿ ಹಿರಿಯರಾದ ಶಾಮರಾಯರು ಕಸ್ತೂರಿ ಪತ್ರಿಕೆ ಸಂಪಾದಕರಾಗಿದ್ದರು. ಅವರಿಗೆ ಫೋನ್ ಮಾಡಿ ಮಾತನಾಡಿದಾಗ ಆದ ಪ್ರಮಾದವನ್ನು ಮನ್ನಿಸಿ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸಿದ್ದು ಇಂದಿಗೂ ನನಗೆ ನೆನಪಿದೆ ಎಂದು ಹೇಳಿದರು.
ಸಂವಾದದಲ್ಲಿ ರಶ್ಮಿ ಪಾಟೀಲ ಅವರು ಪತ್ರಿಕೋದ್ಯಮದಲ್ಲಿ ಹೆಣ್ಣು ಮಕ್ಕಳ ಪಾತ್ರ ಮತ್ತು ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ ಎಂ ಹನೀಫ್ ಅವರು ಮಂಡ್ಯದಲ್ಲಿ ಮೊದಲು ಪ್ರಜಾವಾಣಿ ಪತ್ರಿಕೆಯಲ್ಲಿ ಮಹಿಳಾ ವರದಿಗಾರರನ್ನು ಸಂಸ್ಥೆ ಅವರು ನೇಮಕ ಮಾಡಿದ್ದರು ಎಂದು ಹೇಳಿದ ಅವರು ಇಂದು ಪತ್ರಿಕೋದ್ಯಮದಲ್ಲಿ ಸಾಕಷ್ಟು ಜನ ಮಹಿಳೆಯರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿರಿಯ ವರದಿಗಾರ ರಫಿ ಬಂಡಾರಿ ಅವರು ಮಾತನಾಡಿ ಪತ್ರಕರ್ತರಾದವರು ಸಾಮಾಜಿಕ ಬದ್ಧತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು ಮೇ ಸಾಹಿತ್ಯ ಬಳಗ ಇಂತಹ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಎಂ ಪಾಟೀಲ ಗಣಿಹಾರ, ಯೂಸುಫ್ ನೇವಾರ, ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ, ವೈ ಎಸ್ ಗುಣಕಿ, ಸುರೇಶ ಬಿಜಾಪುರ,ಬೋಗೇಶ ಸೋಲಾಪುರ ಲಾಯಪ್ಪ ಇಂಗಳೆ ಸೇರಿ ಹಲವರು ಉಪಸ್ಥಿತರಿದ್ದರು.
Share the Post:

ಇತ್ತೀಚಿನ ಸುದ್ದಿಗಳು