ರೈತ ಸಂಘ ಮನವಿ: ಲಾಲ್ ಬಹದ್ದೂರಶಾಸ್ತ್ರೀ ಹಾಗೂ ಬಸವ ಸಾಗರ ಜಲಾಶಯಗಳ ನೀರಿನ ಮರು ಹಂಚಿಕೆ

ರೈತ ಸಂಘ ಮನವಿ image
ವಿಜಯಪುರ : ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಹೋರಾಟ ಸಮೀತಿ ಜಿಲ್ಲಾ ಘಟಕ ವಿಜಯಪುರ ವತಿಯಿಂದ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಿಗೆ  ಒತ್ತಾಯಪಡಿಸುವಂತೆ ಆಗ್ರಹಿಸಿ ಅವಳಿ ಜಲಾಶಯಗಳ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡರುಗಳು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರಿಗೆ ಅವರ ಸ್ವಗ್ರಹದಲ್ಲಿ ರೈತ ಸಂಘ ಮನವಿ ಸಲ್ಲಿಸಿದರು.
ಆಲಿಮಟ್ಟಿ ಜಲಾಶಯದ ನಿರ್ಮಾಣಕ್ಕೆ ಫಲವತ್ತಾದ ಬಹುತೇಕ ಭೂಮಿಯನ್ನು ಕಳೆದುಕೊಂಡಿರುವ ಕೃಷ್ಣೆಯ ಮಕ್ಕಳು ಅನಾಥರಾಗಿ ದಿಕ್ಕು ತೊಚದಂತಾಗಿದ್ದಾರೆ, ಭೂಮಿ ಕಳೆದುಕೊಂಡವರು ನಮ್ಮ ಜಿಲ್ಲೆಯವರು ಆದರೆ ಇದರ ಸಂಪೂರ್ಣ ಫಲ ಉಣ್ಣುತ್ತಿರುವವರು ನೆರೆಯ ಬಸವ ಸಾಗರ ಆಣೆಕಟ್ಟು ಹಾಗೂ ಆಂದ್ರದ ಜನರು, ಆದ್ದರಿಂದ ಈ ನೀರು ಹಂಚಿಕೆಯ ತಾರತಮ್ಯವನ್ನು ಕೂಡಲೇ ಇತ್ಯರ್ಥ ಪಡೆಸಿ 2  ಆಲಿಮಟ್ಟಿ ಹಾಗೂ ಬಸವ ಸಾಗರ ಜಲಾಶಯಗಳ ನೀರನ್ನು ಮರು ಹಂಚಿಕೆ ಮಾಡಬೇಕು ಎಂದರು. ಇದಕ್ಕಾಗಿ ರೈತ ನಿಯೋಗವನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತರ ನೀಯೊಗವನ್ನು ಮುಖ್ಯಮಂತ್ರಿಗಳ ಬಳಿ ಸಭೆಗೆ ಸಮಯ ನಿಗದಿ ಪಡಿಸಬೇಕು ಎಂದರು.
ಇದನ್ನೂ ಓದಿ:ಮಹಾತ್ಮ ಗಾಂಧೀಜಿ ಜಯಂತಿ: ಜಿಲ್ಲಾ ಮಟ್ಟದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ ಫಲಿತಾಂಶ ಪ್ರಕಟ
ವಿಜಯಪುರ ಜಿಲ್ಲೆಯಲ್ಲಿ 5 ನದಿಗಳು ಹರಿದು ಪಂಚನದಿಗಳ ಬೀಡು ಎರಡನೇಯ ಪಂಜಾಬ ಎಂದು ಹೇಳಿಕೊಳ್ಳಲು ಮಾತ್ರ ಸೀಮಿತವಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಕೂಡಾ ತೊಂದರೆ ಅನುಭವಿಸುವಂತಾಗಿದೆ. ಕೃಷಿಗೆ ನೀರುಣಿಸುವದು ಮಾತ್ರ ಕನಸಿನ ಮಾತಾಗಿದೆ. ಅವಳಿ ಜಿಲ್ಲೆಗಳ ರೈತರ ಬದುಕು ಹಸನಾಗಲು ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಮಾಡುವುದು ಅಗತ್ಯವಿದೆ.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಕುಲಕರ್ಣಿ ಅವರು ಮಾತನಾಡುತ್ತಾ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯ ಮತ್ತು ನಾರಾಯಣಪುರದ ಬಸವ ಸಾಗರ ನಿರ್ಮಾಣಕ್ಕೆ ಅಖಂಡ ವಿಜಯಪುರ ಜಿಲ್ಲೆಯ ಸುಮಾರು 201 ಗ್ರಾಮಗಳು ಬಾಧಿತಗೊಂಡು 136 ಗ್ರಾಮಗಳು ಸಂಪೂರ್ಣ ಮುಳುಗಡೆ ಹೊಂದಿ ಅಂದಾಜು 4 ಲಕ್ಷ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಅಖಂಡ ವಿಜಯಪುರ ಜಿಲ್ಲೆಯ ರೈತರ ಎಲ್ಲ ಜಮೀನುಗಳಿಗೆ ನೀರು ದೊರಕುತ್ತಿಲ್ಲ.
ಇದನ್ನೂ ಓದಿ: ಚಡಚಣ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಭೇಟಿ ಮತ್ತು ವಿವಿಧ ಕಾಮಗಾರಿ ಪರಿಶೀಲನೆ
ಕೃಷ್ಣಾ ಮೇಲ್ದಂಡೆ ಯೋಜನೆಯ ಸಾಕಾರಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ರೈತರು ಹಾಗೂ ಜನರು ತಮ್ಮ ಪೂರ್ವಜರಿಂದ ವಾಸವಾಗುತ್ತಾ ಬಂದಿರುವ ಮನೆ ,ಜಮೀನುಗಳನ್ನು ತ್ಯಾಗ ಮಾಡಿ ಸರ್ಕಾರ ಕೊಟ್ಟ ಜಾಗೆಯಲ್ಲಿ ಕೆಲವರು ವಾಸವಾಗಿದ್ದರೆ ಇನ್ನು ಕೆಲವರು ದಿಕ್ಕು ದೆಸೆ ಇಲ್ಲದಂತೆ ಸರ್ಕಾರವು ನೀಡಿದ ಪರಿಹಾರದ ಹೆಸರಿನಲ್ಲಿ ಕೊಟ್ಟ ಪುಡಿಗಾಸನ್ನು ತೆಗೆದುಕೊಂಡು ಅನ್ಯ ರಾಜ್ಯಗಳಿಗೆ ಗುಳೆಹೋಗಿದ್ದಾರೆ. ಇಷ್ಟೊಂದು ತ್ಯಾಗ ಮಾಡಿದ ಜಿಲ್ಲೆಯ ರೈತರಿಗೆ ಸ್ಕೀಮ್ ಎ ಮತ್ತು ಸ್ಕೀಮ್ ಬಿ ಹೆಸರಿನಲ್ಲಿ ನೀರಿನಿಂದ ವಂಚಿಸಲಾಗುತ್ತಿದೆ ಎಂದು ರೈತ ಸಂಘ ಮನವಿ ಯಲ್ಲಿ ಹೇಳಿಕೊಂಡಿದೆ.
ಇದನ್ನು ಬಗೆ ಹರಿಸಿ ಈ ಭಾಗದ ರೈತರಿಗೆ ಎನಿ ಟೈಮ್ ವಾಟರ್ ಎನ್ನುವಂತೆ ರೈತರಿಗೆ ಅಗತ್ಯವಿರುವ ಸಂದರ್ಭದಲ್ಲಿ ನೀರು ಒದಗಿಸಬೇಕೆಂದು ಈ ಭಾಗದ ರೈತರು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರು ಯಾವುದೇ ಪ್ರಯೋಜನವಾಗಿಲ್ಲ. ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದಲ್ಲಿ 123.081 ಟಿ.ಎಮ್.ಸಿ ಅಡಿ ನೀರು ಸಂಗ್ರಹವಾಗುತ್ತದೆ.
ಆದರೆ ಜಲಾಶಯ ವ್ಯಾಪ್ತಿಯ ಎ.ಎಲ್.ಬಿ.ಸಿ ಏತ ನೀರಾವರಿ ಯೋಜನೆ ಎ.ಆರ್.ಬಿ.ಸಿ ಏತ ನೀರಾವರಿ ಯೋಜನೆ, ತಿಮ್ಮಾಪೂರ ಏತ ನೀರಾವರಿ ಯೋಜನೆಯ ಡಿ.ಸಿ -1 ಮತ್ತು ಡಿ.ಸಿ-2 ಮುಳವಾಡ ಏತ ನೀರಾವರಿ ಯೋಜನೆಯ ಪೂರ್ವ ಹಾಗೂ ಪಶ್ಚಿಮ ಕಾಲುವೆಯ, ಚಿಮ್ಮಲಗಿಯ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆ, ತೆಗ್ಗಿ-ಸಿದ್ದಾಪೂರ, ರೊಳ್ಳಿ- ಮನ್ನಿಕೇರಿ , ಸೊನ್ನ ಸೇರಿ ಒಟ್ಟು 1.16 ಲಕ್ಷ ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಅವರು ಮಾತನಾಡುತ್ತಾ ಈಗ ಚಾಲ್ತಿಯಲ್ಲಿರುವ ಎಲ್ಲ ಕಾಲುವೆಗಳ ಮೂಲಕವಾಗಿ ಮುಂಗಾರು ಹಂಗಾಮಿಗೆ 6 ಟಿ.ಎಮ್.ಸಿ ಅಡಿ ಮತ್ತು ಹಿಂಗಾರು ಹಂಗಾಮಿಗೆ 9 ಟಿ.ಎಮ್.ಸಿ ಅಡಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದಲ್ಲಿ 123.081 ಟಿ.ಎಮ್.ಸಿ ಅಡಿ ಹಾಗೂ ಬಸವ ಸಾಗರ ಜಲಾಶಯದಲ್ಲಿ 33 ಟಿಎಮ್.ಸಿ ಅಡಿ ನೀರು ಸಂಗ್ರಹವಾಗುತ್ತದೆ.
ಇದರಲ್ಲಿ ಅವಳಿ ಜಿಲ್ಲೆಗಳು ಸಮಗ್ರ ನೀರಾವರಿಯಾಗಲಿ ಎನ್ನುವ ಮಹದುದ್ದೇಶದಿಂದ ಯು.ಕೆ.ಪಿ ಹಂತ -3 ಸೇರಿ ನೂತನವಾಗಿ ಮುಳವಾಡ ಏತ ನೀರಾವರಿ ಯೋಜನೆಯಲ್ಲಿ 2,27,966 ಹೆಕ್ಟರ್ ಪ್ರದೇಶ ಚಿಮ್ಮಲಗಿ ಪೂರ್ವ ಕಾಲುವೆ ವ್ಯಾಪ್ತಿಯ 33,061 ಹೆಕ್ಟರ್ ಪ್ರದೇಶ ಹೆರಕಲ್ಲ, ಪೀರಾಪೂರ-ಬೂದಿಹಾಳ, ಕೆರೂರ ಏತ ನೀರಾವರಿ ಹೀಗೆ ಅವಳಿ ಜಿಲ್ಲೆಯ ಸುಮಾರು 2.70 ಲಕ್ಷ ಹೆಕ್ಟರ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಮುಖ್ಯ ಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿರ್ಮಿಸಿದ್ದಾರೆ.
ಪ್ರತಿ ಭಾರಿ ನಡೆಯುವ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮೀತಿ ಸಭೆಯಲ್ಲಿ ನಡೆಯುವ ಚರ್ಚೆಯಲ್ಲಿ ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ 61 ಟಿ.ಎಮ್.ಸಿ ಅಡಿ ಹಾಗೂ ಹಿಂಗಾರು ಹಂಗಾಮಿಗೆ 71 ಟಿ.ಎಮ್.ಸಿ ಅಡಿ ನೀರು ಬಳಕೆಯಾಗುತ್ತದೆ ಎಂದು ಅಧಿಕಾರಿಗಳು ಯೋಜನೆ ಮತ್ತು ಹಂತಗಳ ಹೆಸರಿನಲ್ಲಿ ಹೇಳುವದನ್ನು ಜನಪ್ರತಿನಿಧಿಗಳು ಕೇಳುತ್ತಾ ಬಂಧಿದ್ದಾರೆ.
ಇನ್ನು ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯ ವ್ಯಾಪ್ತಿಯ ಚಾಲ್ತಿಯಲ್ಲಿರು ಎಲ್ಲ ಕಾಲುವೆಗಳಿಗೆ ನಿರು ಹರಿಸಿದರು ಒಂದು ದಿನಕ್ಕೆ ಕೇವಲ 0.1 ಟಿ.ಎಮ್.ಸಿ. ಅಡಿ ನೀರು ಬೇಕಾಗುತ್ತದೆ. ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಪ್ರತಿ ದಿನ 1 ಟಿ.ಎಮ್.ಸಿ ನೀರು ಬೇಕಾಗುತ್ತದೆ. ಒಟ್ಟಿನಲ್ಲಿ ಅವಳಿ ಜಲಾಶಯಗಳಲ್ಲಿ ಸಂಗ್ರಹವಾಗುವ 156 ಟಿ.ಎಮ್.ಸಿ ನೀರಿನಲ್ಲಿ ಮುಂಗಾರು ಬೆಳೆಗಳಿಗೆ ಅವಳಿ ಜಲಾಶಯಗಳ ವ್ಯಾಪ್ತಿಯ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತದೆ.
ಆದರೆ ಸಪ್ಟೆಂಬರ್ ತಿಂಗಳಿನಲ್ಲಿ ಅವಳಿ ಜಲಾಶಯಗಳಲ್ಲಿ ಗರಿಷ್ಟ ನೀರಿನ ಸಂಗ್ರಹ ಇರದೆ ಇದ್ದರೆ ಎರಡು ಜಲಾಶಯಗಳ ವ್ಯಾಪ್ತಿಯ ಜಮೀನುಗಳಿಗೆ ಹಿಂಗಾರು ಬೆಳೆಗಳಿಗೆ ನೀರು ಇಲ್ಲ ಎನ್ನುವುದು ವಾಡಿಕೆಯಾಗಿದೆ. ಹೀಗಾದರೆ ಕಡಿಮೆ ನೀರು ಬೇಕಾದವರಿಗೂ ಮತ್ತು ಹೆಚ್ಚು ನೀರು ಬೇಕಾದವರಿಗೂ ಒಂದೇ ಮಾನದಂಡವಾದರೆ ಹೇಗೆ.
ಆದ್ದರಿಂದ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ಏಕಕಾಲಕ್ಕೆ ಯಾವುದೇ ಹಂತಗಳ ನೆಪ ಹೇಳದೆ ರೈತರಿಗೆ ಅಗತ್ಯವಿದ್ದ ಸಂದರ್ಭದಲ್ಲಿ ನೀರು ಹರಿಸಬೇಕು ಜಿಲ್ಲೆಯ ರೈತರಿಗೆ ನ್ಯಾಯ ದೊರಕಿಸಿ ಕೊಡಲು ರಾಜ್ಯ ಸರ್ಕಾರ ಅವಳಿ ಜಲಾಶಯಗಳ ಮಧ್ಯ ನೀರು ಮರು ಹಂಚಿಕೆ ಮಾಡಬೇಕೆಂದು ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಹೋರಾಟ ಸಮೀತಿ ಜಿಲ್ಲಾ ಘಟಕ ವಿಜಯಪುರ ರಾಜ್ಯ ಸರ್ಕಾರಕ್ಕೆ ರೈತ ಸಂಘ ಮನವಿಯಲ್ಲಿ ಒತ್ತಾಯಿಸಿದೆ.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಮನವಿ ಸ್ವೀಕರಿಸಿ ಮಾತನಾಡುತ್ತಾ ಈ ವಿಷಯ ಕುರಿತು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಆರ.ಬಿ.ತಿಮ್ಮಾಪುರ ಅವರಿಗೆ ಬೇಟಿ ಆಗಿ ಮಾತನಾಡಿ, ಒಂದು ವೇಳೆ ಇಲ್ಲಿ ಬಗೆಹರೆಯದಿದ್ದರೆ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಬಳಿ ಚರ್ಚಿಸಲು ಸಮಯಾವಕಾಶ ತೆಗೆದುಕೊಳ್ಳೊಣ ಎಂದರು.
ಈ ವೇಳೆ ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ, ತಿಕೊಟಾ ಅಧ್ಯಕ್ಷರಾದ ಸಾತಲಿಂಗಯ್ಯ ಸಾಲಿಮಠ, ಮಹಾದೇವ ಕದಂ, ಮಹಾಂತೇಶ ಮಮದಾಪುರ, ಸಂಗಪ್ಪ ಟಕ್ಕೆ, ತಿಪ್ಪರಾಯ ಭೈರೋಡಗಿ, ವಿಠ್ಠಲ ಬಿರಾದಾರ, ಸೋಮನಗೌಡ ಪಾಟೀಲ, ಪ್ರಲ್ಹಾದ ನಾಗರಾಳ, ಸಿದ್ದಪ್ಪ ಕೊಟ್ಟಲಗಿ, ಹೊನ್ನಕೆರಪ್ಪ ತೇಲಗಿ, ಸದಾಶಿವ ಬರಟಗಿ ಸೇರಿದಂತೆ ಅನೇಕರು ಇದ್ದರು.


Share the Post:

ಇತ್ತೀಚಿನ ಸುದ್ದಿಗಳು