ವಿಜಯಪುರ: ಅಕ್ಕಮಹಾದೇವಿಯವರ ಹೆಸರಿನ ವಿಶ್ವವಿದ್ಯಾಲಯವು ಮಹಿಳಾ ಶಿಕ್ಷಣ, ಸಬಲೀಕರಣ, ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಉಜ್ವಲ ಕೇಂದ್ರವಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ 17ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಿಜವಾದ ಜ್ಞಾನವು ವ್ಯಕ್ತಿಯನ್ನು ಸ್ವತಂತ್ರ, ನಿರ್ಭೀತ ಮತ್ತು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂಬ ಸಂದೇಶವನ್ನು ಅಕ್ಕಮಹಾದೇವಿ ಅವರು ತಮ್ಮ ಜೀವನದ ಮೂಲಕ ನೀಡಿದರು. ಶಿಕ್ಷಣವು ಜ್ಞಾನ ಸಂಪಾದನೆಯ ಮಾರ್ಗ ಮಾತ್ರವಲ್ಲದೆ, ಆತ್ಮ ವಿಶ್ವಾಸ ಮತ್ತು ಸಾಮಾಜಿಕ ಸೇವೆಯ ಮಾರ್ಗವಾಗಿದೆ ಎಂದು ಅವರ ಆದರ್ಶಗಳು ನಮಗೆ ಸ್ಫೂರ್ತಿ ನೀಡುತ್ತವೆ ಎಂದರು.
ಶಿಕ್ಷಣದಲ್ಲಿ ಪಡೆದ ಪದವಿ ಜ್ಞಾನಕ್ಕೆ ಸಾಕ್ಷಿಯಾಗಿರುವುದರ ಜೊತೆಗೆ ಶಿಸ್ತು, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಸಂಕೇತವಾಗಿದೆ. ಈ ಯುಗವು ಅವಕಾಶಗಳು ಮತ್ತು ಸವಾಲುಗಳಿಂದ ಕೂಡಿದೆ. ಅಂತಹ ಪರಿಸ್ಥಿತಿಯಲ್ಲಿ, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಮತ್ತು ಸೂಕ್ಷ್ಮತೆಯ ಜೊತೆಗೆ ಜ್ಞಾನವನ್ನು ಕೊಂಡೊಯ್ಯಬೇಕಾಗುತ್ತದೆ. ಪ್ರಸ್ತುತ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಯುಗ. ಡಿಜಿಟಲ್ ಇಂಡಿಯಾ, ಸ್ಟಾರ್ಟಆಪ್‌ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ವೋಕಲ್ ಫಾರ್ ಲೋಕಲ್‌ನಂತಹ ಉಪಕ್ರಮಗಳ ಮೂಲಕ ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಉಪಸ್ಥಿತಿಯನ್ನು ವೇಗವಾಗಿ ಬಲಪಡಿಸುತ್ತಿದೆ. ಈ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜ್ಞಾನವನ್ನು ವೈಯಕ್ತಿಕ ಪ್ರಗತಿಗೆ ಮಾತ್ರವಲ್ಲದೆ ಸಮಾಜದ ಕಲ್ಯಾಣಕ್ಕೂ ಬಳಸಬೇಕು. ಜೀವನದಲ್ಲಿ ನೈತಿಕ ಮೌಲ್ಯಗಳು, ಸಮಗ್ರತೆ ಮತ್ತು ಸೂಕ್ಷ್ಮತೆಗೆ ನೀವು ಅತ್ಯಂತ ಪ್ರಾಮುಖ್ಯತೆಯನ್ನು ನೀಡಬೇಕು. ಸಮಾಜದ ದುರ್ಬಲ, ವಂಚಿತ ಮತ್ತು ನಿರ್ಲಕ್ಷಿತ ವರ್ಗಗಳ ಉನ್ನತಿಯಲ್ಲಿ ನೀವು ಸಕ್ರಿಯ ಪಾತ್ರ ವಹಿಸಬೇಕು. ನಮ್ಮ ಧರ್ಮಗ್ರಂಥಗಳು “ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ” ಎಂದು ಹೇಳುತ್ತವೆ, ಅಂದರೆ “ಎಲ್ಲಿ ಮಹಿಳೆಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವರುಗಳು ವಾಸಿಸುತ್ತಾರೆ.” ಎಂಬ ಸಂದೇಶವನ್ನು ಸಾರುತ್ತವೆ. ಇದು ಕೇವಲ ಒಂದು ಶ್ಲೋಕವಲ್ಲ, ಆದರೆ ಭಾರತೀಯ ಸಂಸ್ಕೃತಿಯ ಮೂಲಭೂತ ತತ್ವಶಾಸ್ತ್ರ. ಮಹಿಳಾ ಶಿಕ್ಷಣ ಮತ್ತು ಸಬಲೀಕರಣವು ಯಾವುದೇ ರಾಷ್ಟ್ರದ ಪ್ರಗತಿಯ ಅಡಿಪಾಯ ಎಂದು ನಮಗೆಲ್ಲರಿಗೂ ತಿಳಿದಿದೆ. ಒಬ್ಬ ಮಹಿಳೆ ಶಿಕ್ಷಣ ಪಡೆದಾಗ, ಅವರು ತನ್ನ ಸ್ವಂತ ಜೀವನವನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಸಬಲಗೊಳಿಸುತ್ತಾರೆ. ಇಂದಿನ ಭಾರತೀಯ ಮಹಿಳೆ ಕುಟುಂಬದ ಅಡಿಪಾಯ ಮಾತ್ರವಲ್ಲದೆ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಶಕ್ತಿ ಎಂದರು.
ಮಹಿಳೆಯರು ದೇಶೀಯ ಮತ್ತು ವೃತ್ತಿಪರ ಪ್ರಪಂಚಗಳನ್ನು ಮೀರಿ ಸಾಮಾಜಿಕ ಮತ್ತು ರಾಷ್ಟ್ರೀಯ ಸೇವೆಯ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಅವರು ಕಷ್ಟಕರವಾದ ಅಡೆತಡೆಗಳನ್ನು ನಿವಾರಿಸಿ ಹೊಸ ಅವಕಾಶಗಳ ಜಗತ್ತನ್ನು ಪ್ರವೇಶಿಸಿದ್ದಾರೆ. ಖಗೋಳಶಾಸ್ತ್ರ, ಬಾಹ್ಯಾಕಾಶ ಪ್ರಯಾಣ, ವೈದ್ಯಕೀಯ, ತಂತ್ರಜ್ಞಾನ, ಎಂಜಿನಿಯರಿAಗ್, ವಾಣಿಜ್ಯ, ಗಣಿತ, ಮಿಲಿಟರಿ ಸೇವೆ ಮತ್ತು ಕ್ರೀಡೆಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅವರು ತಮಗಾಗಿ ವಿಶಿಷ್ಟ ಗುರುತನ್ನು ರೂಪಿಸಿಕೊಂಡಿದ್ದಾರೆ. ಈ ತಾಂತ್ರಿಕ ಯುಗದಲ್ಲಿಯೂ ಸಹ, ಮಹಿಳೆಯರು ಸಂಶೋಧನೆಯ ಮೂಲಕ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳೇ, ಕನಸು ಕಾಣಿರಿ, ಅವುಗಳನ್ನು ಸಾಧಿಸುವ ಧೈರ್ಯವನ್ನು ಹೊಂದಿರಿ ಮತ್ತು ನಿಮ್ಮ ಪ್ರಯತ್ನಗಳ ಮೂಲಕ ಸಮಾಜಕ್ಕೆ ಸಕಾರಾತ್ಮಕ ಬದಲಾವಣೆಯನ್ನು ತಂದುಕೊಡಿ ಎಂದ ಅವರು, ಈ ಘಟಿಕೋತ್ಸವದಲ್ಲಿ, ಶ್ರೀಮತಿ ಸಂಗೀತಾ, ಶ್ರೀಮತಿ ಪಾರ್ವತಿ ಸಿದ್ದಪ್ಪ ಹೊಂಗಲ್ ಮತ್ತು ಶ್ರೀಮತಿ ಆಶಾದೇವಿ ಅವರಿಗೆ ಗೌರವ ಪದವಿಗಳನ್ನು ನೀಡಲಾಗಿದೆ. ಅವರಿಗೆ ಅಭಿನಂದಿಸುತ್ತಾ, ಸಮಾಜಕ್ಕಾಗಿ ಅವರ ಕಾರ್ಯ ಮುಂದುವರೆಯಲಿ ಎಂದು ಆಶಿಸುತ್ತೇನೆಂದರು.
ಮುಂಬೈನ ಮಹಿಳಾ ವಿವಿಯ ಕುಲಪತಿ ಪ್ರೊ. ಉಜ್ವಲಾ ಚಕ್ರದೇವ್ ಮಾತನಾಡಿ, ವ್ಯಾಖ್ಯಾನ ವಿಶ್ಪವಿದ್ಯಾಲಯಗಳು ನೀಡುವ ಪದವಿ ಪ್ರಮಾಣ ಪತ್ರಗಳಿಂದ ವಿದ್ಯಾರ್ಥಿಗಳ ಭವಿಷ್ಯ ಅರಳುವುದಿಲ್ಲ. ಪದವಿಯೊಟ್ಟಿಗೆ ಕೌಶಲ್ಯಗಳು, ಉದ್ಯೋಗಾರ್ಹತೆ ಮತ್ತು ಜೀವನಪೂರ್ತಿ ಕಲಿಕೆ ಮತ್ತು ಹೊಂದಾಣಿಕೆಯಿAದ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಉಜ್ವಲಾ ಚಕ್ರದೇವ್ ಹೇಳಿದರು.
ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಅಂತಿಮವಾಗಿ ತಂತ್ರಜ್ಞಾನದ ದಕ್ಷತೆಯೊಂದಿಗೆ ಮಾನವೀಯ ಸಂವೇದನೆಯೊAದಿಗೆ ಸಂಯೋಜನೆಯಾಗಬಲ್ಲ್ಲವರಿಗೆ ಉಜ್ವಲ ಭವಿಷ್ಯವಿದೆ ಎಂದರು.
ಕೃತಕ ಬುದ್ಧಿಮತ್ತೆಯಿಂದ ರೂಪುಗೊಳ್ಳುತ್ತಿರುವ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಅದು ಉದ್ಯಮಗಳನ್ನು ಪರಿವರ್ತಿಸುತ್ತಿದ್ದು, ಉದ್ಯೋಗಗಳನ್ನು ಮರು ಪರಿಭಾಷಿಸುತ್ತಿದೆ. ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ತಂತ್ರಜ್ಞಾನವು ಮುಂದುವರಿದರೂ, ಮಾನವೀಯ ಮೌಲ್ಯಗಳು, ನೈತಿಕ ಚಿಂತನೆ, ಸೃಜನಶೀಲತೆ ಮತ್ತು ಸಹಾನುಭೂತಿ ಮುಂತಾದ ಈ ಮೌಲ್ಯಗಳು ಸದಾ ಸ್ಥಿರವಾಗಿರುತ್ತವೆ ಎಂದರು.
ದೇಶ ವಿಕಸಿತ ಭಾರತ- 2047 ಎಂಬ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ, ಶಿಕ್ಷಣ ಪಡೆದ ಮತ್ತು ಸಬಲಗೊಂಡ ಮಹಿಳೆಯರ ಪಾತ್ರ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯವಾಗುತ್ತದೆ. ಶಿಕ್ಷಣ ಪಡೆದ ಮಹಿಳೆಯರು, ಆರ್ಥಿಕವಾಗಿ ಸ್ವಾವಲಂಬಿ ಮಹಿಳೆಯರಾಗುತ್ತಾರೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ನಾಯಕತ್ವ ಮುಂಚೂಣಿ ಪಾತ್ರ ನಿರ್ವಹಿಸುತ್ತಿದೆ. ಮಹಿಳೆಯರು ಅಭಿವೃದ್ಧಿಯಾದರೆ ರಾಷ್ಟ್ರವೂ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯ ಮತ್ತು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳು ಸಮಾನ ಉದ್ದೇಶ ಹೊಂದಿವೆ. ಶಿಕ್ಷಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಹಾಗೂ ಅವರನ್ನು ನಾಯಕಿಯರಾಗಿ ಮತ್ತು ಬದಲಾವಣೆಯ ಸಾರಥಿಗಳಾಗಿ ರೂಪಿಸುವುದು ಈ ಎರಡೂ ವಿಶ್ವವಿದ್ಯಾನಿಲಯಗಳ ಪ್ರಮುಖ ಉದ್ದೇಶವಾಗಿದೆ ಎಂದರು.
ಪದವೀಧರರಾಗಿ ಹೊರ ಬರುತ್ತಿರುವ ನಿಮಗೆ ಜ್ಞಾಪಕದಲ್ಲಿರಲಿ. ಕಲಿಕೆ ಇಲ್ಲಿಗೆ ಅಂತ್ಯಗೊಳ್ಳುವುದಿಲ್ಲ . ಇದು ಜೀವನ ಪೂರ್ತಿ ನಡೆಯುವ ಪ್ರಯಾಣ. ಮುಂದಿನ ದಿನಗಳಲ್ಲಿ ನೀವು ವೃತ್ತಿಪರ, ವೈಯಕ್ತಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸವಾಲುಗಳು ಅಡ್ಡಿಗಳು ಅಲ್ಲ. ಅವು ನಿಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿಸುವ ಅವಕಾಶಗಳು. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ದೃಢವಾಗಿರಿ. ನಿಮ್ಮ ಸಾಮರ್ಥ್ಯವನ್ನು ಎಂದಿಗೂ ಕಡಿಮೆ ಅಂದಾಜಿಸಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಮಹಿಳಾ ಸಬಲೀಕರಣವೆಂದರೆ ಶಿಕ್ಷಣ ಅಥವಾ ಉದ್ಯೋಗ ಮಾತ್ರವಲ್ಲ. ಅದು ಆತ್ಮವಿಶ್ವಾಸ, ಸ್ವಾತಂತ್ರ‍್ಯ ಮತ್ತು ನಿರ್ಧಾರಗಳನ್ನು ತೆಗೆದುಕೊಂಡು ಅವುಗಳೊಂದಿಗೆ ನಿಂತುಕೊಳ್ಳುವ ಸಾಮರ್ಥ್ಯ. ವಿದ್ಯಾವಂತ ಮಹಿಳೆಯರಾಗಿ, ನೀವು ಕುಟುಂಬ, ಸಮುದಾಯ ಮತ್ತು ಸಮಾಜದ ಮೇಲೆ ಮಹತ್ವದ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದ್ದೀರಿ.
ನೀವು ವಿಶ್ವದತ್ತ ಹೆಜ್ಜೆ ಇಡುವಾಗ, ಕಲಿಕೆಯನ್ನು ಎಂದಿಗೂ ನಿಲ್ಲಿಸಬೇಡಿ, ದೊಡ್ಡ ಕನಸು ಕಾಣಿ. ಆದರೆ ವಾಸ್ತವಿಕವಾಗಿರಿ. ನೀವು ಮಾಡುವ ಪ್ರತಿಯೊಂದರಲ್ಲಿ ಪ್ರಾಮಾಣಿಕತೆಯನ್ನು ಕಾಪಾಡಿ. ಇತರ ಮಹಿಳೆಯರನ್ನು ಬೆಂಬಲಿಸಿ ಮತ್ತು ಉತ್ತೇಜಿಸಿ. ನಿಮ್ಮ ಬೇರುಗಳು ಮತ್ತು ಮೌಲ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ. ನಿಮ್ಮ ಕುಟುಂಬಕ್ಕೆ ಗೌರವ ನೀಡಿ ಎಂದು ಉಜ್ವಲಾ ಚಕ್ರದೇವ್ ಸಲಹೆ ಮಾಡಿದರು. ನೀವು ಈ ವಿಶ್ವವಿದ್ಯಾನಿಲಯವನ್ನು ಬಿಟ್ಟು ಹೋಗುವಾಗ, ಅಕ್ಕಮಹಾದೇವಿಯವರ ಧೈರ್ಯ, ಜ್ಞಾನ ಮತ್ತು ನಿರ್ಭಯ ಸ್ವಾತಂತ್ರ‍್ಯದ ಆತ್ಮವನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಭವಿಷ್ಯವನ್ನು ರೂಪಿಸುವುದು ನಿಮ್ಮ ಕೈಯಲ್ಲಿದೆ. ಆತ್ಮವಿಶ್ವಾಸದೊಂದಿಗೆ ಮುಂದುವರಿಯಿರಿ. ಉದ್ದೇಶಪೂರ್ಣವಾಗಿ ನಡೆದುಕೊಳ್ಳಿ. ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನಿಮ್ಮ ಕೊಡುಗೆಯನ್ನು ನೀಡಿ ಎಂದರು.
ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಮುಂಬರುವ ದಿನಗಳಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗಲೇ ಗಳಿಕೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಿಗೆ ಬಯೋಡೀಸೆಲ್ ಘಟಕ, ಕಾಗದ ಮರುಬಳಕೆ ಘಟಕ, ಅನನ್ಯ ಆಹಾರ ಸಂಸ್ಕರಣಾ ಕೇಂದ್ರ ಮತ್ತು ಗ್ರೀನ್‌ಹೌಸ್‌ಗಳಲ್ಲಿ ವಿವಿಧ ಕೌಶಲಗಳನ್ನು ಕಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಅವರು ಘೋಷಿಸಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಯ ಪ್ರಗತಿ ವರದಿ ಮಂಡಿಸಿದ ಅವರು, ಕೌಶಲ್ಯ ಮಹಿಳಾ ತಂತ್ರಜ್ಞಾನ ಪಾರ್ಕ್ ಮೂಲಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಮಹಿಳೆಯರಿಗೆ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದರು.
ವಿದೇಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆಗಳ ಕಾಲ ಪಾರ್ಟ್ ಟೈಂ ಕೆಲಸ ಮಾಡುವ ಪದ್ಧತಿ ವ್ಯಾಪಕವಾಗಿ ಬಳಕೆಯಲ್ಲಿದೆ. ಅದೇ ಮಾದರಿಯಲ್ಲಿ ಮಹಿಳಾ ವಿವಿಯಲ್ಲಿ ಓದುವ ವಿದ್ಯಾರ್ಥಿನಿಯರು ತಮ್ಮ ಬಿಡುವಿನ ವೇಳೆಯಲ್ಲಿ ಪಾರ್ಟ್ ಟೈಂ ಕೆಲಸ ಮಾಡುವ ಮೂಲಕ ವಿವಿಧ ಕೌಶಲಗಳನ್ನು ಕಲಿಯುವುದರ ಜತೆಗೆ ವಿವಿಧ ಕೋರ್ಸ್ಗಳಲ್ಲಿ ಅಧ್ಯಯನ ಮಾಡುವಾಗಲೇ ಒಂದಷ್ಟು ದುಡ್ಡು ಸಂಪಾದಿಸುವ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿನಿಯರ ಪಾಲಕರ ಆರ್ಥಿಕ ಹೊರೆ ಒಂದಷ್ಟು ಕಡಿಮೆ ಮಾಡಬಹುದಾಗಿದೆ ಎಂದು ವಿವರಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕುಲಪತಿಗಳ ಸಮಾವೇಶದಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ದೂರಶಿಕ್ಷಣ ಪುನರಾಂಭಿಸುವ ಬಗೆಗೆ ವಿಸ್ತೃತ ಚರ್ಚೆಗಳನ್ನು ನಡೆಸಿದ್ದು ಈ ಸಂಬAಧ ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಉನ್ನತ ಶಿಕ್ಷಣದ ಅಭಿವೃದ್ಧಿಯಲ್ಲಿ ಮೂಲಸೌಕರ್ಯದ ಮಹತ್ವವನ್ನು ಅರಿತು, ನಮ್ಮ ವಿಶ್ವವಿದ್ಯಾಲಯವು ಕ್ಯಾಂಪಸ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಕೊಂಡಿದೆ. 2025-26 ನೇ ಶೈಕ್ಷಣಿಕ ವರ್ಷದಲ್ಲಿ ದಶಮಾನೋತ್ಸವದ ಮೊದಲ ಮಹಡಿಯಲ್ಲಿ ರೂ. 3.73 ಕೋಟಿ ಅನುದಾನದಲ್ಲಿ ಸ್ನಾತಕ ಕೋರ್ಸುಗಳನ್ನು ನಡೆಸುವ ಸಲುವಾಗಿ ತರಗತಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕೇಂದ್ರ ಸರ್ಕಾರದ ಪಿಮ್_ಉಷಾ ಯೋಜನೆಯಡಿ 9.07 ಕೋಟಿ ಮೊತ್ತದ ಅನುದಾನದಲ್ಲಿ ಮಹಿಳಾ ಕ್ಷೇಮಾಭಿವೃದ್ಧಿ ಕೇಂದ್ರ ಹಾಗೂ ಮಹಿಳಾ ಶೌಚಾಲಯಗಳ ನವೀಕರಣ ಕಟ್ಟಡ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ವಿವಿಯ ಜ್ಞಾನಶಕ್ತಿ ಕ್ಯಾಂಪಸ್‌ನಲ್ಲಿ ನಾಲ್ಕು ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿ ನಿಲಯಗಳು ಇವೆ. ಇದಲ್ಲದೆ, ಸ್ನಾತಕ ವಿದ್ಯಾರ್ಥಿನಿಯರಿಗಾಗಿ ಎರಡು ವಸತಿ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶ್ವವಿದ್ಯಾಲಯವು ವಿದ್ಯಾರ್ಥಿನಿಯರಿಗೆ 500 ಲೀಟರ್ ಸಾಮರ್ಥ್ಯದ ಆರ್.ಒ. ನೀರು ಶುದ್ಧೀಕರಣ ಯಂತ್ರ, ಗೀಸರ್‌ಗಳು, ಸೌರ ಹೀಟರ್‌ಗಳು, ಸೌರ ದೀಪಗಳು ಮತ್ತು ವಸತಿ ನಿಲಯಗಳ ಸುತ್ತಲೂ ಸೌರ ರಸ್ತೆ ದೀಪಗಳಂತಹ ಸೌಲಭ್ಯಗಳನ್ನು ಒದಗಿಸುತ್ತದೆ. ವಿದ್ಯಾರ್ಥಿನಿಯರ ಭದ್ರತೆಯನ್ನು ಖಚಿತಪಡಿಸಲು 24 ಗಂಟೆಗಳ ಭದ್ರತಾ ವ್ಯವಸ್ಥೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ವಿದ್ಯಾರ್ಥಿನಿಯರ ಕಲ್ಯಾಣಕ್ಕಾಗಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ನರ್ಸ್ ನೇಮಕವಾಗಿದ್ದು, ಆರೋಗ್ಯ ಕೇಂದ್ರದಲ್ಲಿ 24×7 ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲು ಆಂಬ್ಯುಲೆನ್ಸ್ ಸೇವೆಯೂ ಲಭ್ಯವಿದೆ ಎಂದೂ ಕುಲಪತಿಗಳು ವಿವರಿಸಿದರು.
ವೇದಿಕೆಯ ಮೇಲೆ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶ್ರೀಮತಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಡಾ.ಸಂಗೀತಾ ಎನ್ ಕಟ್ಟಿಮನಿ ಮತ್ತು ಶ್ರೀಮತಿ ಆಶಾದೇವಿ ಜಗದೀಶ ಗುಡಗುಂಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು ಉಪಸ್ಥಿತರಿದ್ದರು.

ಮೂವರು ಸಾಧಕಿಯರಿಗೆ ಗೌರವ ಡಾಕ್ಟರೇಟ್ ಪ್ರದಾನ :
ರಾಜ್ಯಪಾಲ ಥಾವರ್‌ಸಿಂಗ್ ಗೆಹ್ಲೋಟ್‌ರಿಂದ ಗೌಡಾ ಪ್ರದಾನ ವಿಜಯಪುರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 17ನೆಯ ಘಟಿಕೋತ್ಸವದಲ್ಲಿ ಪಾರ್ವತೆವ್ವ ಹೊಂಗಲ್, ಡಾ.ಸಂಗೀತಾ ಕಟ್ಟಿಮನಿ ಹಾಗೂ ಆಶಾದೇವಿ ಗುಡಗುಂಟಿ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್, ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಮತ್ತಿತರರು ಉಪಸ್ಥಿತರಿದ್ದರು.






