ಮಹಿಳೆ ಕಾನೂನು ಅರಿವು: ನಾಯಕತ್ವ ಗುಣ – ನಾಗಲಕ್ಷ್ಮೀ

ಮಹಿಳೆ ಕಾನೂನು ಅರಿವು image

ಬಾಗಲಕೋಟೆ: ಒಂದು ಮನೆ ಸುಸಜ್ಜಿತವಾಗಿ ಸಾಗಬೇಕಾದರೆ ಆ ಮನೆಯ ಮೇಲೆ ಹೆಣ್ಣಿನ ಜವಾಬ್ದಾರಿ ಇದ್ದು, ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ನಾಯಕತ್ವ ಗುಣ ಹೊಂದಿರುತ್ತಾಳೆ. ಮಹಿಳೆ ಕಾನೂನು ಅರಿವು ಇಂದಿನ ಮಹಿಳೆಗೆ ತುಂಬಾ ಅಗತ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದರು.

ಇದನ್ನೂ ಓದಿ:ಎಫ್‌ಎಕ್ಯೂ ಗುಣಮಟ್ಟ: ಹೆಸರುಕಾಳು 8682 ರೂ.,ಸೂರ್ಯಕಾಂತಿ 7280 ರೂ.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಆರೋಗ್ಯ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆ ನಾಯಕತ್ವ ಗುಣ ಹೊಂದಿದ್ದರೂ ಸಹ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿ ಹೊಂದಬೇಕಾಗಿದೆ ಎಂದರು.

ಸರಕಾರ ಮಹಿಳೆಗೆ ಮೀಸಲಾತಿ ನೀಡಿದರು ಕೂಡಾ ಅಧಿಕಾರದಲ್ಲಿ ಬೆರಳಣಿಕೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆ ಬಂದರು ಕೂಡಾ ಗಂಡ ಹಾಗೂ ಮಕ್ಕಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಇದಕ್ಕೆ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಇಂದಿನ ಸಮಾಜದಲ್ಲಿ ಮಹಿಳೆ ಅಭಿವೃದ್ದಿ ಹೊಂದಬೇಕಾದರೆ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣ ಕಲಿತಾಗ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯುವದರ ಜೊತೆಗೆ ಅನ್ಯಾಯದ ವಿರುದ್ದ ತಲೆ ಎತ್ತಲು ಮುಂದಾಗಬೇಕು ಅಂದಾಗ ಮಾತ್ರ ಹಕ್ಕುಗಳನ್ನು ಪಡೆದುಕೊಳ್ಳಲು ಸಾದ್ಯವಾಗುತ್ತದೆ ಎಂದರು.
ಮಹಿಳೆಯರಿಗೆ ಸಂವಿಧಾನದಲ್ಲಿ ಸಾಕಷ್ಟು ಹಕ್ಕುಗಳನ್ನು ಕೊಡಲಾಗಿದೆ. ಅವುಗಳನ್ನು ಪಡೆದುಕೊಳ್ಳದೇ ಹೊರತು ಅಭಿವೃದ್ದಿ ಹೊಂದಲು ಸಾದ್ಯವಾಗುವದಿಲ್ಲ. ಇದಕ್ಕೆ ಕಾಯ್ದೆಗಳ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಮಹಿಳಾ ಕಾನೂನುಗಳ ಬಗ್ಗೆ ಅರಿವು ಮೂಡಿಸಲುವ ಕೆಲಸವಾಗಬೇಕು. ಧ್ವನಿ ಎತ್ತುವ ಕಾರ್ಯವಾಗಬೇಕು ಅಂದಾಗ ಮಾತ್ರ ಮಹಿಳೆಯರು ಮುಂದೆ ಬರಲು ಸಾಧ್ಯವಾಗುತ್ತದೆ. ಕೃಷಿ, ಪಶು, ತೋಟಗಾರಿಕೆ ಸಖಿಯರು ಇದ್ದಾರೆ. ಅವರ ಮೂಲಕ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಮಾತನಾಡಿ ಮಹಿಳೆ ಏನನ್ನಾದರೂ ಸಾಧಿಸುತ್ತಾಳೆ ಎಂಬುದು ಇತಿಹಾಸದಲ್ಲಿ ಕೇಳಿದ್ದೇವೆ. ಮಹಿಳೆ ಮುಖ್ಯವಾಹಿನಿಗೆ ಬರಬೇಕಾದರೆ ಆರೋಗ್ಯ ಮತ್ತು ಶಿಕ್ಷಣ ಮುಖ್ಯವಾಗಿದೆ. ಯುವ ಪೀಳಿಗೆ ವಿದ್ಯಾಬ್ಯಾಸದಲ್ಲಿ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗಂಡಿಗೆ ಸಮಾನವಾಗಿ ಹೆಣ್ಣಿಗೂ ಶಿಕ್ಷಣ ಕೊಡಿಸಿದಲ್ಲಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ಗಂಡಿಗಿಂತ ಹೆಣ್ಣು ಮಕ್ಕಳ ಸಾಕ್ಷರತ ಪ್ರಮಾಣದಲ್ಲಿ ಕಡಿಮೆ ಇದೆ. ಶೇ.86 ರಷ್ಟು ಪುರುಷರಿದ್ದರೆ, ಮಹಿಳೆಯರಲ್ಲಿ ಶೇ.68 ರಷ್ಟು ಸಾಕ್ಷರರಾಗಿದ್ದಾರೆ. ಸ್ವಾತಂತ್ರ ಸಿಕ್ಕು 78 ವರ್ಷವಾದರೂ ಶಿಕ್ಷಣದಲ್ಲಿ ಮಹಿಳೆ ಹಿಂದುಳಿದಿದ್ದಾರೆ. ಶಿಕ್ಷಣ ಕೊಡುವಲ್ಲಿ ಗಂಡು ಹೆಣ್ಣು ಎಂಬ ಕೀಳರಿಮೆ ಹೋಗಲಾಡಬೇಕು. ಇಬ್ಬರಿಗೂ ಸಮಾನ ಶಿಕ್ಷಣ ಕೊಡಿಸಲು ಮುಂದಾದಲ್ಲಿ ಮಾತ್ರ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ ಮಹಿಳೆಯರಿಗೆ ಇರುವ ಕಾನೂನಿನ ಅರಿವು ಅಗತ್ಯವಾಗಿದೆ. ಕಾನೂನನ್ನು ನೀವು ರಕ್ಷಿಸಿದರೆ, ನಿಮ್ಮನ್ನು ಕಾನೂನು ರಕ್ಷಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ವಕೀಲೆ ಅರುಣಾ ರಘುವೀರ ಮಹಿಳೆ ರಕ್ಷಣೆ, ಹಕ್ಕುಗಳ ಹಾಗೂ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ, ಡಾ.ರುದ್ರೇಶ್ ಪಿಸಿಪಿಎನ್‍ಡಿಟಿ ಕುರಿತು ಹಾಗೂ ಜಿಲ್ಲಾ ನಿರೂಪನಾಧಿಕಾರಿ ಅಮರೇಶ ಬಾಲ್ಯವಿವಾಹ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »