ಬಾಗಲಕೋಟೆ: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ದುರ್ಬಲ ವರ್ಗದ ಜನರ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನವನಗರದ ಕಲಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾನ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದುಳಿದವರ ಸರ್ವತೋಮುಖ ಅಭಿವೃದ್ದಿಗಾಗಿ ಹತ್ತು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡು ದುರ್ಬಲ ವರ್ಗದ ಜನರ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
ಮೈಸೂರನ್ನು ಕರ್ನಾಟಕ ಎಂಬ ನಾಮಕರಣ ಮಾಡಿದವರು. ಅವರ ಕಾಲದಲ್ಲಿ ಕೂಲಿ ಮಾಡುವವರು ಭೂ ಮಾಲಿಕರಾದವರು. ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಿದರು. ಸಣ್ಣ ಸಣ್ಣ ಸಮುದಾಯದವರನ್ನು ರಾಜಕೀಯದಲ್ಲಿ ಬರುವಂತೆ ಮಾಡಿದ ಫಲವಾಗಿ ಇಂದು ಅನೇಕರು ಮುಖ್ಯಮಂತ್ರಿಗಳ ಹುದ್ದೆ ಅಲಂಕರಿಸುವಂತಾಗಿದೆ. ಅರಸು ಅವರ ಕಾರ್ಯ ಇಂದಿನ ರಾಜಕೀಯದವರಿಗೆ ನೀತಿ ಪಾಠವಾಗಿದ್ದು, ಅವರ ಆಡಳಿತವನ್ನು ನಾವೆಲ್ಲರೂ ಅನುಸರಿಸುವಂತಾಗಿದೆ ಎಂದರು.
ಇಂತಹ ಮಹಾನ್ ನಾಯಕರ ಇತಿಹಾಸವನ್ನು ಇಂದಿನ ಯುವ ಪೀಳಿಗೆ ಅನುಸರಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಒಂದು ದಿನವಾದರೂ ಡಿ.ದೇವರಾಜ ಅರಸು ರಂತಹ ಮಹಾನ್ ವ್ಯಕ್ತಿಗಳ ಇತಿಹಾಸ ಸಾರುವ ಪುಸ್ತಕ ಓದುವ ಕಾರ್ಯ ನಡೆಯಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ದಿ.ದೇವರಾಜ ಅರಸುರವರು ಸರ್ವರು ರಾಷ್ಟ್ರಕಂಡ ಧೀಮಂತ ನಾಯಕ, ಮುತ್ಸದ್ದಿ ರಾಜಕಾರಣಿ, ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು ದುರ್ಬಲರಿಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ರವು ದೊರೆತಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರೆತಂತಾಗುತ್ತದೆ ಎಂದು ತಿಳಿಸಿದರು. ಡಿ.ದೇವಾರಾಜ ಅರಸು
ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ದೇವರಾಜ ಅರಸುರವರು ಸಮಾಜದ ಮಾರ್ಗದರ್ಶಕರಾಗಿದ್ದು, ಸಣ್ಣ ಸಮುದಾಯದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಶ್ರೀಮಂತರ ಮನೆಯಲ್ಲಿ ಹುಟ್ಟಿ ಬೆಳೆದರು ದುರ್ಬಲ ವರ್ಗಗಳ ಏಳಿಗೆಗೆ ಆದ್ಯತೆ ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಪ್ರತಿಮೆಯನ್ನು ಪ್ರತಿ ಜಿಲ್ಲೆಗೆ ಸ್ಥಾಪನೆ ಮಾಡಲು ಸರಕಾರದ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಶೋಷಿತರ ಹಾಗೂ ಅವಕಾಶ ವಂಚಿತರ ಪರವಾಗಿ ಇದ್ದವರು ದೇವರಾಜ ಅರಸು ಅವರು ಎಂದರು.
ಧಾರವಾಡದ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕ ಪ್ರೊ.ಎಂ.ಚಂದ್ರ ಪೂಜಾರ ಮಾತನಾಡಿ ದೇವರಾಜ ಅರಸು ಅವರು ಒಬ್ಬ ದಾಕ್ಷಣಿಕ ವ್ಯಕ್ತಿಯಾಗಿದ್ದು, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಮಲ, ಜೀತ ಪದ್ದತಿ ನಿರ್ಮೂಲನೆ ಮಾಡಿದ್ದಾರೆ. ದುಡಿಯುವ ವರ್ಗಕ್ಕೆ ಆರ್ಥಿಕ ಸ್ಥಿತಿ ಸುಧಾರಣೆ ಮಾಡುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು. ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿ.ದೇವಾರಾಜ ಅರಸು
ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಎಂ.ತುಂಬರಮಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಡಿ.ದೇವರಾಜ ಅರಸು ಅವರ 109ನೇ ಜಯಂತಿ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಕಲಾಭವನಕ್ಕೆ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಬಿಸಿಎಂ ಇಲಾಖೆ ವ್ಯಾಪ್ತಿಯ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ ಪ್ರೀತಮ ಕೊಣ್ಣೂರ, ಸಾಗರ ಕುರಬೆಟ್ಟ, ಸುನೀಲ ಮುಧೋಳ ಹಾಗೂ ಪಿಯುಸಿಯಲ್ಲಿ ಪ್ರವೀಣ ಕೊಲಕಾರ, ಮಹೇಶ ಲಮಾಣಿ, ಐಶ್ವರ್ಯ ಕೌಜಲಗಿ ಅವರನ್ನು ಸನ್ಮಾನಿಸಲಾಯಿತು.