ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಶನಿವಾರ ಸಂಜೆ ವಿಜಯಪುರ ನಗರದ ಭೂತನಾಳ ಕ್ರಾಸ್ ಬಳಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.
ವಸತಿ ನಿಲಯದ ಅಡುಗೆ ಕೊಠಡಿ, ಭೋಜನಾಲಯ, ಸೋಲಾರ್ ವ್ಯವಸ್ಥೆ, ವಿದ್ಯಾರ್ಥಿ ಕೊಠಡಿಗಳು, ವಸತಿ ನಿಲಯದ ಆವರಣಕ್ಕೆ ಖುದ್ದಾಗಿ ತೆರಳಿ ಪರಿಶೀಲಿಸಿದರು. ಪ್ರತಿ ದಿನ ಅಡುಗೆ ಕೊಠಡಿ, ಭೋಜನಾಲಯ, ದಾಸ್ತಾನು ಕೊಠಡಿ, ನಿಲಯದ ಶೌಚಾಲಯ, ಸ್ನಾನದ ಗೃಹಗಳು, ಶುದ್ಧ ಕುಡಿಯುವ ನೀರಿನ ಘಟಕ ಈ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದರ ಮೂಲಕ ಸ್ವಚ್ಚತೆ ಕಾಪಾಡಬೇಕು. ಸಮರ್ಪಕ ನಿರ್ವಹಣೆ ಮಾಡಬೇಕು. ವಸತಿ ನಿಲಯದ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪುಸ್ತಕಗಳು, ದಿನಪತ್ರಿಕೆ, ಮಾಸ ಪತ್ರಿಕೆ, ಉದ್ಯೋಗ ಮಿತ್ರ ಒದಗಿಸಲು ಕ್ರಮವಹಿಸಬೇಕು.ಗಣಕಯಂತ್ರ ಕೊಠಡಿಗಳಲ್ಲಿ ಕಡ್ಡಾಯವಾಗಿ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಮಾಡಿಸಿ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು.
ಇದನ್ನೂ ಓದಿ:ಪಾಲಿಕೆ ಡೇನಲ್ಮ ಅಭಿಯಾನ: ಇಂಟರ್‍ನಶಿಪ್ ತರಬೇತಿಗೆ ಅರ್ಜಿ ಆಹ್ವಾನ
ವಿದ್ಯಾರ್ಥಿಗಳು ಆಟೋಟಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಕ್ರೀಡಾ ಸಾಮಗ್ರಿಗಳನ್ನು ಪೂರೈಸಬೇಕು. 1000 ಲೀಟರ್ ಸಾಮಥ್ರ್ಯದ ವಾಟರ್ ಫಿಲ್ಟರ್‍ನ್ನು ಅಳವಡಿಸಿ ಶುದ್ಧ ಕುಡಿಯುವ ನೀರು ಒದಗಿಸಿ, ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣವಾಗುತ್ತಿರುವ ಶೌಚಾಲಯ ಕಾಮಗಾರಿ ಕಟ್ಟಡಗಳನ್ನು ಹದಿನೈದು ದಿನಗಳೊಳಗಾಗಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಉಪಯೋಗಕ್ಕೆ ವ್ಯವಸ್ಥೆ ಮಾಡುವುದು. ಸ್ನಾನ ಗೃಹ ಮತ್ತು ಶೌಚಾಲಯಗಳನ್ನು ಶುಚಿಗೊಳಿಸಲು ಕ್ರಮ ವಹಿಸಬೇಕು. ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ, ಊಟದ ಕೊಠಡಿಯಲ್ಲಿ ಪ್ರತಿದಿನ ಶುಚಿಯಾದ ಹಾಗೂ ರುಚಿಯಾದ ಆಹಾರ ಸಿದ್ಧಪಡಿಸಿ, ಶುಚಿತ್ವಕ್ಕೆ ಆದ್ಯತೆ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಬಾಡಿಗೆ ಕಟ್ಟಡದಲ್ಲಿ ವಾಸಿಸಲು ವ್ಯವಸ್ಥೆ ಮಾಡುವುದು ಮತ್ತು ವಸತಿ ನಿಲಯದಲ್ಲಿ ಸಾಮಾನ್ಯ ದುರಸ್ತಿ ಕಾರ್ಯಗಳು ಬಾಕಿ ಇದ್ದಲ್ಲಿ ಕೂಡಲೇ ದುರಸ್ತಿಗೊಳಿಸುವಂತೆ ಸೂಚಿಸಿದ ಅವರು ಒಂದು ವಾರದೊಳಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿದ್ಯಾರ್ಥಿಗಳು ಸುಚಿತ್ವದ ಜೊತೆಗೆ ಆಟ ಪಾಠಗಳನ್ನು ಸರಿಯಾಗಿ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಭೂತನಾಳ ಕ್ರಾಸ್ ವಸತಿ ನಿಲಯದಲ್ಲಿ ಸಿದ್ಧಪಡಿಸಿದ ಆಹಾರ ಸೇವಿಸುವ ಮೂಲಕ ಗುಣಮಟ್ಟ ಪರೀಕ್ಷಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಲು ಸೂಚನೆ ನೀಡಿದರು. ಸಿಇಓ ಅವರು, ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅಲ್ಲಿನ ವ್ಯವಸ್ಥೆಗಳ ಕುರಿತು ಚರ್ಚಿಸಿದರು. ವಿದ್ಯಾರ್ಥಿ ಜೀವನದಲ್ಲಿ ಓದು ಮುಖ್ಯ ಓದಿನ ಕಡೆಗೆ ಹೆಚ್ಚು ಗಮನ ನೀಡÀಬೇಕು. ಸ್ಪರ್ಧಾತ್ಮಕ ಜ್ಞಾನದ ಬಗ್ಗೆಯೂ ಕೂಡ ಗಮನ ಹರಿಸಬೇಕು. ಅನೇಕ ಸ್ಪರ್ಧಾತ್ಮ ಪರೀಕ್ಷೆಗಳಿಗೆ ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕು. ಪ್ರಮುಖ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಉಪಕಾರ್ಯದರ್ಶಿಗಳಾದ ಡಾ. ವಿಜಯಕುಮಾರ ಆಜೂರ, ಯೋಜನಾ ನಿರ್ದೇಶಕರಾದ ಸಿ.ಬಿ. ದೇವರಮನಿ, ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪುಂಡಲೀಕ ಮಾನವರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈರಣ್ಣ ಆಶಾಪುರ, ಬಿ.ಜೆ. ಇಂಡಿ, ನಿಲಯ ಪಾಲಕರು,ಸಿಬ್ಬಂದಿಯವರು ಉಪಸ್ಥಿತರಿದ್ದರು.