ಮುರುಗೇಶ ನಿರಾಣಿ ಕ್ರೆಡಿಟ್ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ವಂಚನೆ, ಅನಿರ್ಧಿಷ್ಟಾವಧಿ ಧರಣಿ ಕುಳಿತ ಗ್ರಾಹಕರು

0
268

ವಿಜಯಪುರ ನ.26: ಮುರುಗೇಶ ನಿರಾಣಿ ಕ್ರೆಡಿಟ್ ಸಹಕಾರಿ ನಿ. ವಿಜಯಪುರ (ಎಸ್.ಎಂ.ಎನ್) ಈ ಶಾಖೆಗಳಲ್ಲಿ ಗ್ರಾಹಕರು ತೊಡಗಿಸಿದ ಹಣವನ್ನು ದುರುಪಯೋಗ ಪಡಿಸಿದ್ದನ್ನು ಖಂಡಿಸಿ ಹಾಗೂ ಗ್ರಾಹಕರಿಗೆ ಹಣ ಹಿಂದಿರುಗಿಸಲು ಒತ್ತಾಯಿಸಿ ಗುರುವಾರ ವಂಚಿತ ಗ್ರಾಹಕರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಆವರಣದಲ್ಲಿ ಆರಂಭಿಸಲಾಯಿತು.

ಈ ಧರಣಿಯನ್ನುದ್ದೇಶಿಸಿ ರೈತ ಸಂಘದ ಮುಖಂಡರಾದ ಅರವಿಂದ ಕುಲಕರ್ಣಿ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಮುರುಗೇಶ ನಿರಾಣಿ ಅವರ ಹೆಸರಿನಲ್ಲಿ ಆರಂಭವಾದ ಕ್ರೆಡಿಟ್ ಸೌಹಾರ್ದದಲ್ಲಿ ಅನೇಕ ಗ್ರಾಹಕರು ಹಣವನ್ನು ಎಫ್.ಡಿ., ಆರ್.ಡಿ., ಎಂ.ಐ.ಎಸ್. ಮೂಲಕ ಹಣವನ್ನು ಸೌಹೌರ್ದದಲ್ಲಿ ಇಟ್ಟಿದ್ದಾರೆ. ರೈತರು, ವ್ಯಾಪಾರಸ್ಥರು, ಜನಸಾಮಾನ್ಯರು ಸೇರಿದಂತೆ ಹೊಟೇಲಗಳಲ್ಲಿ ಕೆಲಸ ಮಾಡುವಂತಹ ಮಹಿಳೆಯರು ಸಹ ಹಣವನ್ನು ತೊಡಗಿಸಿದ್ದಾರೆ. ಕಳೆದ 18 ತಿಂಗಳಿನಿಂದ ಜಿಲ್ಲೆಯಲ್ಲಿರುವ ಈ ಸೌಹಾರ್ದದ ಎಲ್ಲ ಶಾಖೆಗಳು ಗ್ರಾಹಕರಿಗೆ ಹಣವನ್ನು ಹಿಂದುರುಗಿಸುತ್ತಿಲ್ಲ.

ಇದರಿಂದಾಗಿ ಗ್ರಾಹಕರಿಗೆ ಮಾನಸಿಕವಾಗಿ ಕುಗ್ಗಿಹೋಗಿ ಕಂಗಾಲಾಗಿದ್ದಾರೆ. ಜಿಲ್ಲೆಯ ಎಲ್ಲ ಶಾಖೆಯಿಂದ 39 ಕೋಟಿ ಹಣವನ್ನು ಸೌಹಾರ್ದದ ಆಡಳಿತ ಮಂಡಳಿಯವರು, ವ್ಯವಸ್ಥಾಪಕರು, ಸಿಬ್ಬಂಧಿಗಳು ಶ್ಯಾಮೀಲಾಗಿ ಹಣವನ್ನು ದುರುಪಯೋಗಪಡಿಸಿಕೊಂಡು ಗ್ರಾಹಕರಿಗೆ ವಂಚಿಸಿದ್ದಾರೆ. ಈಗ ಹಣ ಕೇಳಲು ಹೋದರೆ ಹಾರಿಕೆ ಉತ್ತರ ನೀಡುತ್ತ ನುಣುಚಿಕೊಳ್ಳುತ್ತಿದ್ದಾರೆ. ಎಲ್ಲ ಶಾಖೆಗಳಿಗೆ ಬೀಗ ಹಾಕಿದ್ದಾರೆ. ಇದರಿಂದ ಗ್ರಾಹಕರಿಗೆ ದಿಕ್ಕು ತೋಚದಂತಾಗಿದೆ. ಎರಡು ದಿನಗಳ ಕಾಲ ಬೆಳಗ್ಗೆ 11 ರಿಂದ 5 ಗಂಟೆಗೆಯವರೆಗೆ ಧರಣಿ ಸತ್ಯಾಗ್ರಹ ನಡೆಯಲಿದ್ದು ಸೋಮವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಲಾಗುವುದು ಎಂದರು.

ಈಗಾಗಲೇ ಈ ಕುರಿತು ತಹಶೀಲ್ದಾರ, ಜಿಲ್ಲಾಧಿಕಾರಿಗಳಿಗೆ, ಉಪ ನಿಬಂಧಕರಿಗೆ ಮನವಿ ಪತ್ರ ಸಲ್ಲಿಸಿದರು ಯಾವುದೆ ಪ್ರಯೋಜನವಾಗಿಲ್ಲ. ಗ್ರಾಹಕರು ಮನ ನೊಂದು ಈಗ ಅನಿರ್ಧೀಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ಗ್ರಾಹಕರಿಗೆ ಬಡ್ಡಿ ಸಮೇತ ಹಣ ಮರಳಿ ನೀಡುವವರೆಗೂ ಈ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆಡಳಿತ ಮಂಡಳಿ ವರ್ಗದವರು ವಂಚಿತ ಗ್ರಾಹಕರಿಗೆ ಮರಳಿ ಹಣ ಕೊಡಿಸಲು ಮುಂದಾಗಿ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆಮರಣ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಹಕರಾದ ವಿಠ್ಠಲ ಬೆಳ್ಳುಬ್ಬಿ, ಐ.ಎಂ.ಸಾರವಾಡ ಮಾತನಾಡಿ, ಈ ಸೌಹಾರ್ದದಲ್ಲಿ ತೊಡಗಿಸಿದ ಬಹುತೇಕ ಹಿರಿಯ ನಾಗರಿಕರಿದ್ದು ಇವರು ಈಗ ಹಣವನ್ನು ತೆಗೆದುಕೊಳ್ಳಲು ಸಾಕಷ್ಟು ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ಮುರುಗೇಶ ನಿರಾಣಿ ಅವರ ಹೆಸರನ್ನು ನೋಡಿ ಬಹುತೇಕರು ಹಣವನ್ನು ಈ ಸೌರ್ಹಾದಲ್ಲಿ ಇಟ್ಟಿದ್ದಾರೆ. ಈಗ ಮುರುಗೇಶ ನಿರಾಣಿಯವರು ನಮಗೆ ಈ ಸೌಹಾರ್ದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಹೇಳುತ್ತಿರುವುದು ಅವರಿಗೆ ಶೋಭೆ ತರುವುದಲ್ಲ. ಅವರು ಜವಾಬ್ದಾರಿಯುತ ರಾಜಕಾರಣಿಯಾಗಿದ್ದು ಕೂಡಲೇ ಗ್ರಾಹಕರ ಸ್ಥಿತಿಗತಿಯನ್ನು ತಿಳಿದು ಮರಳಿ ಹಣವನ್ನು ಕೊಡಿಸುವಲ್ಲಿ ತಾವು ಮುಂದಾಗಬೇಕು ಎಂದು ವಿನಂತಿಸಿಕೊಂಡರು.

ಈ ಸೌಹಾರ್ದದ ಅವ್ಯವಹಾರದಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂಧಿವರ್ಗದವರ ಜೊತೆಗೆ ಸಹಕಾರ ಇಲಾಖೆಯ ಅಧಿಕಾರಗಳು ಕೂಡಾ ಭಾಗಿಯಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಇಲ್ಲಿಯವರೆಗೆ ಸುಮ್ಮನಾಗಿದ್ದಾರೆ. ವಂಚಿತ ಗ್ರಾಹಕರ ಪರ ನಿಲ್ಲಬೇಕಾದ ಉಪ ನಿಬಂಧಕರು ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಮಾತನಾಡಿ, ವಂಚಿತ ಗ್ರಾಹಕರ ಹೋರಾಟಕ್ಕೆ ರೈತ ಸಂಘವು ಸಂಪೂರ್ಣ ಬೆಂಬಲ ನೀಡುತ್ತದೆ. ಕೂಡಲೇ ಅಧಿಕಾರಿಗಳು ಅನ್ಯಾಯಕ್ಕೊಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.


LEAVE A REPLY

Please enter your comment!
Please enter your name here