ವಿಜಯಪುರ: ಜಿಲ್ಲೆಗೆ ಅಂತರ್‍ರಾಜ್ಯ ಮತ್ತು ಅಂತರ್‍ಜಿಲ್ಲಾ ಪ್ರಯಾಣಿಕರ ಮೇಲೆ ನಿಗಾ. ಧೂಳಖೇಡದಲ್ಲಿ ಚೆಕ್‍ಪೋಸ್ಟ್ ಸ್ಥಾಪನೆ

0
101

ವಿಜಯಪುರ ಮೇ.07: ಅಂತರ್‍ರಾಜ್ಯ ಮತ್ತು ಅಂತರ್‍ಜಿಲ್ಲಾ ಪ್ರಯಾಣಿಕರ ಪರಿಶೀಲನೆಗಾಗಿ ಸ್ಥಾಪಿಸಲಾದ ಧೂಳಖೇಡ ಚೆಕ್‍ಪೋಸ್ಟ್‍ಗೆ ಇಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾರಿ ಅನುಪಮ ಅಗರವಾಲ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಏಕ ಆಗಮನ ಏಕ ನಿರ್ಗಮನ ಅಂಗವಾಗಿ ಧೂಳಖೇಡದಲ್ಲಿ ಚೆಕ್‍ಪೋಸ್ಟ್ ಅನ್ನು ಸ್ಥಾಪಿಸಲಾಗಿದೆ. ದಿನದ 24 ಗಂಟೆಗಳ ಕಾಲ ಈ ಚೆಕ್‍ಪೋಸ್ಟ್ ಕಾರ್ಯನಿರ್ವಹಿಸಲಿದ್ದು, 6 ಜನ ತಜ್ಞ ವೈದ್ಯರು, 30 ಜನ ಆರೋಗ್ಯ ಕಾರ್ಯಕರ್ತರು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು, ಶಿಕ್ಷಕರು ಮತ್ತು ಪಿ.ಡಿ.ಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸಿದೆ. ಸೇವಾ ಸಿಂಧುದಲ್ಲಿ ನೋಂದಣಿ ಮಾಡದೇ ಇರುವಂತಹ ಪ್ರಯಾಣಿಕರಿಗೆ ಪ್ರತ್ಯೇಕ ಸೇವಾ ಸಿಂಧು ಆನ್‍ಲೈನ್ ಕೌಂಟರ್ ತೆರೆಯಲಾಗಿದೆ.

ವಿವಿಧ ರಾಜ್ಯಗಳಿಂದ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಹಾಗೂ ನಗರ ಪ್ರದೇಶದಲ್ಲಿ ಹೋಮ್‍ಕ್ವಾರಂಟೈನ್‍ಗೆ ಕ್ರಮ ಕೈಗೊಂಡಿದೆ. ಕೋವಿಡ್-19 ಲಕ್ಷಣಯುಳ್ಳ ವರ್ಗ ‘ಎ’ದವರಿಗೆ ಆಸ್ಪತ್ರೆ ಕ್ವಾರಂಟೈನ್, ಮತ್ತು ವರ್ಗ ‘ಬಿ’(ಲಕ್ಷಣ ಇಲ್ಲದವರಿಗೆ) ದವರಿಗೆ ಕ್ವಾರಂಟೈನ್‍ಗೆ ಕ್ರಮ ಕೈಗೊಂಡಿದೆ. ಸರ್ಕಾರ ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಪ್ರಯಾಣಿಕರ ಮಾಹಿತಿ, ಆರೋಗ್ಯ ಸ್ಥಿತಿಗತಿ ಪರಿಶೀಲಿಸುತ್ತಿದ್ದು, ಬೇರೆ ಜಿಲ್ಲೆಗಳಿಗೆ ಪ್ರಯಾಣಿಕರನ್ನು ಕಳಿಸುವ ಸಂದರ್ಭದಲ್ಲಿ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ಅವರು ಮಾತನಾಡಿ ಮಹಾರಾಷ್ಟ್ರ, ಗುಜರಾತ, ಉತ್ತರಪ್ರದೇಶ, ರಾಜಸ್ಥಾನ ಪ್ರಯಾಣಿಕರ ಕುರಿತು ತೀವ್ರ ನಿಗಾಕ್ಕೆ ಸುಸಜ್ಜಿತ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ. ಡಿವೈಎಸ್‍ಪಿ, ಸಬ್‍ಇನ್ಸ್‍ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಬರುವ ಮತ್ತು ಹೋಗುವ ಪ್ರಯಾಣಿಕರು, ಅನುಮತಿ ಇಲ್ಲದೆ ಹೋಗುವ ಪ್ರಯಾಣಿಕರು ಸೇರಿದಂತೆ ಇನ್ನಿತರ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ. ಸಿಸಿಟಿವಿ ಕ್ಯಾಮರಾಗಳ ಮೂಲಕವು ತೀವ್ರ ನಿಗಾ ವಹಿಸಿ ಪೊಲೀಸ್ ಇಲಾಖೆಯ ವತಿಯಿಂದ ಕಟ್ಟೆಚ್ಚರ ವಹಿಸಲಾಗಿದೆ.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಮಾತನಾಡಿ ಕೋವಿಡ್-19 ಪೀಡಿತ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ. ಶ್ವಾಸಕೋಶ ತೊಂದರೆ, ಜ್ವರ, ನೆಗಡಿ, ಕೆಮ್ಮು ಇರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಚೆಕ್‍ಪೋಸ್ಟದಲ್ಲಿ ಜಿಲ್ಲಾಡಳಿತದ ವತಿಯಿಂದ ಒಟ್ಟು 10 ಕೌಂಟರ್‍ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕೌಂಟರ್‍ನಲ್ಲಿ ಓರ್ವ ಆರೋಗ್ಯ ಕಾರ್ಯಕರ್ತರು ಶ್ವಾಸಕೋಶ ತೊಂದರೆ, ನೆಗಡಿ, ಕೆಮ್ಮು, ಜ್ವರಗಳ ಬಗ್ಗೆ ಬರಿಶೀಲಿಸುತ್ತಿದ್ದು, ಥರ್ಮಲ್ ಸ್ಕ್ರೀನಿಂಗ್ ಸಹ ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ ತಲಾ ಒಬ್ಬರು ಶಿಕ್ಷಕರನ್ನು ನೇಮಿಸಿದ್ದು, ಪ್ರಯಾಣಿಕರಿಗೆ ಅನುಭಂಧಗಳನ್ನು ಭರ್ತಿ ಮಾಡುವ ಕುರಿತಂತೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಕಂದಾಯ ಇಲಾಖೆ, ಗ್ರಾಮಿಣಾಭಿವೃದ್ಧಿ ಪಂಚಾಯತರಾಜ್ ಇಲಾಖೆ ಸಿಬ್ಬಂದಿಗಳನ್ನು ಮತ್ತು ಡೇಟಾ ಎಂಟ್ರೀ ಆಪರೇಟರ್‍ಗಳನ್ನು ಸಹ ನೇಮಿಸಿದ್ದು, ತಜ್ಞ ವೈದ್ಯರನ್ನು ಸಹ ಆರೋಗ್ಯ ಸ್ಥಿತಿಗತಿ ಪರಿಶೀಲನೆಗೆ ನಿಯೋಜಿಸಲಾಗಿದೆ.

ಚೆಕ್‍ಪೋಸ್ಟ್‍ದಲ್ಲಿ ಪೊಲೀಸ್ ಸಿಬ್ಬಂದಿಗಳ ಮೂಲಕ ಇ-ಪಾಸ್ ಅಧಿಕೃತ ಕುರಿತಂತೆ ಪರಿಶೀಲನೆ ಸಹ ನಡೆಸುತ್ತಿದ್ದು, ಅನುಬಂಧಗಳಲ್ಲಿ ಪ್ರಯಾಣಿಕರ ಮಾಹಿತಿ ಪಡೆಯುವುದರ ಜೊತೆ ಸೀಲ್ ಸಹ ಹಾಕಲಾಗುತ್ತಿದೆ. ವಿಜಯಪುರ ಜಿಲ್ಲೆಯ ಪ್ರಯಾಣಿಕರ ಮಾಹಿತಿಯನ್ನು ಅನುಬಂಧ 1 ರಲ್ಲಿ ಪಡೆಯುವುದರ ಜೊತೆಗೆ ಹೋಮ್‍ಕ್ವಾರಂಟೈನ್ ಆಗುವುದರ ಕುರಿತಂತೆ ಮುಚ್ಚಳಿಕೆ ಸಹ ಪಡೆಯಲಾಗುತ್ತಿದೆ. ದಿನದ 24 ಗಂಟೆಗಳಕಾಲ ಪ್ರತಿ 8 ಗಂಟೆಗೆ ಒಂದು ತಂಡದಂತೆ ಚೆಕ್‍ಪೋಸ್ಟ್‍ದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಊಟ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೌಂಟರ್‍ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಸಹ ಹಾಕಲಾಗಿದೆ. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಬಳಕೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.

ಪ್ರತಿಯೊಬ್ಬ ಪ್ರಯಾಣಿಕರಿಂದ ಕರ್ನಾಟಕಕ್ಕೆ ಆಗಮಿಸಿದ ದಿನ, ಪ್ರಯಾಣ ಪ್ರಾರಂಭಿಸಿದ ಸ್ಥಳ, ಅಂತಿಮವಾಗಿ ತಲುಪಬೇಕಾದ ಸ್ಥಳ, ವಿಳಾಸದ ವಿವರ. ಆರೋಗ್ಯ ಸ್ಥಿತಿಗತಿ, ಕೋವಿಡ್-19 ಲಕ್ಷಣಗಳ ಬಗ್ಗೆ ಅನುಬಂಧದಲ್ಲಿ ಮಾಹಿತಿ ಪಡೆಯಲಾಗುತ್ತಿದೆ. ಆರೋಗ್ಯ ಸೇತು ಆಪ್, ಆಪ್ತಮಿತ್ರ ಆಪ್, ಕ್ವಾರಂಟೈನ್ ವಾಚ್ ಆಪ್‍ಗಳನ್ನು ಕಡ್ಡಾಯವಾಗಿ ಡೌನ್‍ಲೋಡ್ ಪ್ರಯಾಣಿಕರಿಂದ ಮಾಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ಚಕ್ರ ವಾಹನ, ದ್ವೀಚಕ್ರ ವಾಹನ, ಕಾಲ್ನಡಿಗೆ ಮತ್ತು ಇತರೆ ಮೂಲಗಳಿಂದ ಆಗಮಿಸುವ ಪ್ರಯಾಣಿಕರ ಬಗ್ಗೆ ತೀವ್ರ ನಿಗಾ ಇಡಲಾಗಿದೆ.

ಚೆಕ್‍ಪೋಸ್ಟ್‍ದಲ್ಲಿ ಶಾಮಿಯಾನ ಹಾಕಲಾಗಿದ್ದು, ಕೋವಿಡ್-19 ಸೇವಾ ಸಿಂಧು ಆನ್‍ಲೈನ್ ದಾಖಲಾತಿ ಕೌಂಟರ್, ಅಂತರ್‍ರಾಜ್ಯ ಪ್ರತ್ಯೇಕ ಕೌಂಟರ್, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಿಣ, ಬಾಗಲಕೋಟ ಜಿಲ್ಲೆಗಳಿಗೆ ಕೌಂಟರ್ ಹಾಗೂ ಇತರೆ ಜಿಲ್ಲೆಗಳ ಪ್ರಯಾಣಿಕರ ಅನುಕೂಲಕ್ಕಾಗಿ 4 ಪ್ರತ್ಯೇಕ ಕೌಂಟರ್‍ಗಳನ್ನು ಸ್ಥಾಪಿಸಲಾಗಿದೆ.

ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ಡಿವೈಎಸ್‍ಪಿ ಎಂ.ಬಿ ಸಂಕದ, ಡಯೆಟ್ ಹಿರಿಯ ಉಪನ್ಯಾಸಕರಾದ ಶ್ರೀ ಲಿಮ್ಕರ್, ಚಡಚಣ ತಹಶಿಲ್ದಾರ್ ಎನ್.ಬಿ ಗೆಜ್ಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀ ಪ್ರಸನ್ನಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಆಲಗೂರ, ಬಿ.ಆರ್.ಸಿ ಸಮನ್ವಯಾಧಿಕಾರಿ ಶ್ರೀ ಶಿವಪ್ಪ, ಡಾ.ಅರ್ಚನಾ ಕುಲಕರ್ಣಿ ಪಿಎಸ್‍ಐ ಯಲಗಾರ ಮತ್ತು ಇತರ ಅಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.


 

LEAVE A REPLY

Please enter your comment!
Please enter your name here