ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಕರೋನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

0
130

ವಿಜಯಪುರ ಮಾ 11: ಜಿಲ್ಲೆಯಾದ್ಯಂತ ಯಾವುದೇ ಕರೋನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲವೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಹೇಳಿದರು.ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಹೊಟೇಲ್ ಮಾಲಿಕರ ಸಂಘದ ಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗಾಗಿ ಕರೋನಾ ವೈರಸ್ ಮಾಹಿತಿ ವಿನಿಮಯ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈವರೆಗೆ ಜಿಲ್ಲೆಯಾದ್ಯಂತ ಯಾವುದೇ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ. ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದ ಅವರು ಸ್ವಚ್ಛತೆಗೆ ವಿಶೇಷ ಗಮನ ನೀಡುವ ಮೂಲಕ ಮುನ್ನೆಚ್ಚರಿಕೆ ವಹಿಸಲು ಅವರು ಮನವಿ ಮಾಡಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಕರೋನಾ ವೈರಸ್ ಕುರಿತು ಸೂಕ್ತ ಅರಿವು ಮೂಡಿಸಲಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅವಶ್ಯಕ ಪ್ರಾಥಮಿಕ ಸಿದ್ಥತೆಗಳನ್ನು ಮಾಡಿಕೊಳ್ಳಲಾಗಿದೆ. ವಿದೇಶದಿಂದ 13 ಜನ ಪ್ರವಾಸಿಗರು ಬಂದಿದ್ದು, ವಿಶೇಷವಾಗಿ ಕರೋನಾ ವೈರಸ್ ವಿಸ್ತರಣೆಗೆ ಹೆಸರುವಾಸಿಯಾಗಿರುವ 10 ದೇಶಗಳಾದ ಚೀನಾ, ಇಟಲಿ, ದಕ್ಷಿಣ ಕೊರಿಯಾ, ಇರಾನ್, ಹಾಂಕಾಂಗ್, ಜರ್ಮನಿ, ಥೈಲ್ಯಾಂಡ್, ಸಿಂಗಾಪೂರ, ಮಲೇಶಿಯಾ, ಸ್ಪೇನ್ ಪ್ರಜೆಗಳು ಮತ್ತು ಪ್ರವಾಸಿಗರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ವಿವಿಧ ಆಸ್ಪತ್ರೆ, ಹೊಟೇಲ್‍ಗಳಿಗೆ ಆಗಮಿಸುವ ಈ ಪ್ರಜೆಗಳು ಸ್ವಯಂ ವರದಿ ನೀಡಲು ನಿಗದಿತ ನಮೂನೆಯನ್ನು ಭರ್ತಿಗೆ ತಿಳಿಸಿದ್ದು, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಜಿಲ್ಲಾಸ್ಪತ್ರೆ ಸರ್ಜನ್ ಅವರಿಗೆ ದೂರು ಸಲ್ಲಿಸಲು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.
ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಸ್ಪತ್ರೆಯಲ್ಲಿ, ಅಲ್ ಆಮೀನ್, ಬಿಎಲ್‍ಡಿಇ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‍ಗಳನ್ನು ತೆರೆಯಲಾಗಿದ್ದು, ಇತರೆ ಆಸ್ಪತ್ರೆಗಳ ಸಹಕಾರ ಸಹ ಕೋರಲಾಗಿದೆ. ಆಸ್ಪತ್ರೆಯಲ್ಲಿ ಮೂರು ಅಡಿ ಅಂತರವಿರುವ ಬೆಡ್‍ಗಳನ್ನು ಹಾಗೂ ವೆಂಟಿಲೇಟೆಡ್ ಕೊಠಡಿಗಳನ್ನು ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಕರೋನಾ ವೈರಸ್ ಪರಿಶೀಲನೆಗೆ ರಾಜ್ಯದ ಬೆಂಗಳೂರು ಎರಡು ಕಡೆಗಳಲ್ಲಿ, ಮೈಸೂರು, ಶಿವಮೊಗ್ಗ, ಹಾಸನಗಳಲ್ಲಿ ಮಾತ್ರ ಲ್ಯಾಬ್‍ಗಳ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದಿಂದ ಮಾಡಲಾಗಿದ್ದು, ತುರ್ತು ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕರೋನಾ ವೈರಸ್ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ ಮುನ್ನೆಚ್ಚರಿಕೆಗಳಾದ ಸಾಬೂನಿನಿಂದ ಕೈ ತೊಳೆಯುವುದು, ಕೈ ಕುಲುಕುವುದನ್ನು ಮಾಡಬಾರದು, ಕೆಮ್ಮು ಮತ್ತು ಸೀನುವ ಸಂದರ್ಭದಲ್ಲಿ ಕರವಸ್ತ್ರ ಬಳಸುವುದು, ಕೆಮ್ಮು , ನೆಗಡಿ, ಜ್ವರ ಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿರುವ ಅವರು ಕರೋನಾ ವೈರಸ್‍ಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಸುಳ್ಳು ವದಂತಿಗಳನ್ನು ವಾಟ್ಸಾಪ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿಸುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಸಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಮಾಸ್ಕ್ ಪ್ರತಿಯೊಬ್ಬರು ಧರಿಸುವುದು ಕಡ್ಡಾಯವಲ್ಲ. ನೆಗಡಿ, ಜ್ವರ ಹಾಗೂ ಕೆಮ್ಮು ಕಂಡುಬಂದಲ್ಲಿ ಅಂತಹವರು ಮಾಸ್ಕ್ ಬಳಸುವ ಜೊತೆಗೆ ಚಿಕಿತ್ಸೆಗೆ ಒಳಪಡಬೇಕು. ಕರೋನಾ ವೈರಸ್ ಸೋಂಕಿತರು ಮಾತ್ರ ಎನ್-95 ಮಾಸ್ಕ್ ಧರಿಸಬಹುದಾಗಿದ್ದು, ಇತರರು ಬಳಸುವ ಅವಶ್ಯಕತೆಯಿಲ್ಲ. ಶಾಲಾ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಕ್ಷಣ ಸುತ್ತೋಲೆ ಹೊರಡಿಸಿ ಮಕ್ಕಳಿಗೆ ಮಾಸ್ಕ್ ಧರಿಸುವಂತೆ ಕಡ್ಡಾಯಗೊಳಿಸಬಾರದು ಎಂದು ಅವರು ಸೂಚನೆ ನೀಡಿದರು.
ಮಾಂಸ ಹಾಗೂ ಮೊಟ್ಟೆ ತಿನ್ನುವುದರಿಂದ ಯಾವುದೇ ಅಪಾಯವಿಲ್ಲ ಎಂದಿರುವ ಅವರು ಬೇಯಿಸಿ ತಿನ್ನುವುದರಿಂದ ಈ ವೈರಸ್‍ನಿಂದ ಯಾವುದೇ ಅಪಾಯವಿರುವುದಿಲ್ಲ. ಕರೋನಾ ವೈರಸ್‍ಗೆ ಸಂಬಂಧಪಟ್ಟಂತೆ ಆರೋಗ್ಯ ಸಹಾಯವಾಣಿ 104ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಗೋವಿಂದ ರೆಡ್ಡಿಯವರು ಮಾತನಾಡಿ ಸರ್ಕಾರದ ನಿರ್ದೇಶನದಂತೆ ಇದೇ ಮಾರ್ಚ್ 16ರೊಳಗೆ 1ರಿಂದ 3ನೇ ತರಗತಿಯ ಹಾಗೂ ಮಾರ್ಚ 21ರೊಳಗೆ 4ರಿಂದ 9ನೇ ತರಗತಿಯ ಪರೀಕ್ಷೆಗಳನ್ನು ಪೂರ್ಣಗೊಳಿಸುವಂತೆ ಆಯಾ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸರ್ಕಾರಿ ಹಾಗೂ ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಈ ನಿಯಮ ಪಾಲಿಸುವಂತೆ ನೋಡಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಡಬ್ಲ್ಯೂಎಚ್‍ಒ ಸರ್ವೇಲನ್ಸ್ ಅಧಿಕಾರಿಗಳಾದ ಮುಕುಂದ ಗಲಗಲಿ ಅವರು ಮಾತನಾಡಿ ವಿಶ್ವದ 1.18ಲಕ್ಷ ಜನರಿಗೆ ಕರೋನಾ ವೈರಸ್ ತಗುಲಿದ್ದು, 113 ರಾಷ್ಟ್ರಗಳಲ್ಲಿ ಈ ವೈರಸ್ ಪ್ರಕರಣಗಳು ಪತ್ತೆಯಾಗಿವೆ, ಭಾರತದಲ್ಲಿ 60 ಹಾಗೂ ಕರ್ನಾಟಕದಲ್ಲಿ 4 ಪ್ರಕರಣಗಳು ಪತ್ತೆಯಾಗಿದ್ದು, ಅವಶ್ಯಕ ಕ್ರಮಕೈಗೊಳ್ಳಲಾಗುತ್ತಿದೆ. ಕರೋನಾ ವೈರಸ್ ವ್ಯಕ್ತಿಯು ಕೆಮ್ಮಿದಾಗ ಮೂರು ಅಡಿಗಿಂತ ದೂರ ಕ್ರಮಿಸಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆಯಾಗಿ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಕರೋನಾ ವೈರಸ್ ಸೋಂಕಿತರ ಕುರಿತು ಪಾಲಿಸಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಅನುಪಮ ಅಗರವಾಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here