ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮದಲ್ಲಿ ಇತ್ತೀಚಿಗೆ ವರದಕ್ಷಿಣೆ ಕಿರುಕುಳದಿಂದ ಹತ್ಯೆಗೆ ಒಳಗಾಗಿರುವ ಮೃತ ಮಹಾದೇವಿ ಕಟ್ಟಿಮನಿ ಅವರ ಮನೆಗೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನವರ ಅಸಲಿ ಮುಖ ಬಹಿರಂಗವಾಗಿದೆ.
ಮುಧೋಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹತ್ಯೆಗೆ ಒಳಗಾದ ಮಹಿಳೆಯ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿ, ಪ್ರಕರಣದ ಬಗ್ಗೆ ಪೋಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಯೋಗವು ಈ ಬಗ್ಗೆ ಕ್ರಮ ಕೈಗೊಂಡು ಮೃತರ ಕುಟುಂಬಸ್ಥರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ನಂತರ ಮುಧೋಳ ಪಟ್ಟಣದ ಡಾ.ಅಂಬೇಡ್ಕರ ಬಾಲಕಿಯರ ವಸತಿ ನಿಲಯಕ್ಕೆ ಬೇಟಿ ನೀಡಿ ಅಲ್ಲಿನ ಬಾಲಕಿಯರೊಂದಿಗೆ ಸಂವಾದ ನಡೆಸಿದರು. ಮಕ್ಕಳಿಗೆ ಅಧ್ಯಯನ ಮಾಡುವ ಬಗ್ಗೆ, ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಹಾಗೂ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡಿದರು. ವಸತಿ ನಿಲಯದ ಅಡುಗೆ ವ್ಯವಸ್ಥೆ, ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನೀರಿನ ಟ್ಯಾಂಕ್ ಪರಿಶೀಲಿಸಿ ಅದನ್ನು ಬಹಳ ದಿನಗಳಿಂದ ಸ್ವಚ್ಚಗೊಳಿಸದೆ ಇರುವದನ್ನು ಗಮನಿಸಿದ ಅಧ್ಯಕ್ಷರು ವಸತಿ ನಿಲಯದ ವಾರ್ಡನ್ ಹಾಗೂ ತಾಲೂಕು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಲಂಚ ಪಡೆದವನಿಗೆ ನ್ಯಾಯಾಲಯದಿಂದ 40 ಸಾವಿರ ದಂಡ
ಅಲ್ಲದೆ ವಸತಿ ನಿಲಯದ ಮಕ್ಕಳಿಗೆ ಕಂಪ್ಯೂಟರ್ ಕಲಿಕೆಗೆ ಅವಕಾಶ ಮಾಡಿ ಕೊಡಲು ತಿಳಿಸಿದರು. ಹಾಗೂ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕಗಳನ್ನು ಒದಗಿಸಿ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಸೂಚಿಸಿದರು. ಮಕ್ಕಳ ವಾಸದ ಕೊನೆಯ ಕಿಟಕಿ ಬಾಗಿಲುಗಳು ದುರಸ್ತಿ ಅವಶ್ಯವಿದ್ದು, ಕೂಡಲೇ ದುರಸ್ಥಿ ಮಾಡಿಸಲು ತಿಳಿಸಿದರು. ನಂತರ ಮುಧೋಳ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲಿಸಿದರು. ಹೆಣ್ಣು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು, ಲಿಂಗಾನುಪಾತ ಸುಧಾರಣೆ ಕ್ರಮಗಳ ಕುರಿತು, ಹಾಗೂ ಲಿಂಗ ಪತ್ತೆ ಪರೀಕ್ಷೆ ನಡೆಸುವ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಂಡಿರುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಪರಿಶೀಲಿಸಿದರು.
ಮುಧೋಳ ತಾಲೂಕಾ ಭೇಟಿ ಪೂರ್ವದಲ್ಲಿ ಬಾಗಲಕೋಟೆ ನವನಗರದ ಕಲಾ ಭವನದಲ್ಲಿ ನಡೆದ ಕರ್ನಾಟಕ ಪ್ರದೇಶ ಕುರುಬರ ಸಂಘ, ಜಿಲ್ಲಾ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭೇಟಿ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಭಾಕರ ಕವಿತಾಳ, ರಕ್ಷಿತಾ ಈಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.