500 ಪದದ ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಾಳೆ. ನನ್ನೆದುರಿನ ವೃತ್ತಪತ್ರಿಕೆ ರಾಯಬಾಗದ 17 ವರ್ಷದ ಹುಡುಗಿ ಮೇಲೆ ಅತ್ಯಾಚಾರವೆಸಗಿ ಅವಳನ್ನು ಬಾವಿಯಲ್ಲಿ ದೂಡಿ ಹೋದ ಸುದ್ದಿಯನ್ನು ರಾಚುತ್ತಿದೆ. ಅತ್ಯಾಚಾರ ಈ ನೆಲದ ಉದ್ದಗಲಕ್ಕೂ ಸಂಭವಿಸುತ್ತಲೇ ಇದೆ. ಅನಾದಿಯಿಂದ ಭಾರತೀಯ ಮಹಿಳೆ ನಾನಾ ನೆಲೆ, ರೂಪಗಳಲ್ಲಿ ತಾರತಮ್ಯ, ದೌರ್ಜನ್ಯವನ್ನು ಸಹಿಸಿಕೊಂಡು ಬಂದಿದ್ದಾಳೆ. ಯುದ್ಧ, ಕೋಮುದಂಗೆ, ರಕ್ಷಣಾ ಕಾರ್ಯಾಚರಣೆ, ಜಾತಿದೌರ್ಜನ್ಯ, ಅಭಿವೃದ್ಧಿ ಏನೇ ಸಂಭವಿಸಲಿ ಕೊನೆಗದರ ಬಲಿಪಶುವಾಗುವವಳು ಹೆಣ್ಣು. ಹೀಗಿರುತ್ತ ತನ್ನ ಸಹಜೀವಿಯ ಮೇಲೆ ಅನಾರೋಗ್ಯಕರ ದೃಷ್ಟಿಕೋನವನ್ನು ಬೆಳೆಸಿಕೊಂಡ ಪುರುಷ ಮನಸ್ಥಿತಿ ವರ್ಮಾ ವರದಿ ಜಾರಿಯಿಂದ ರಿಪೇರಿಯಾಗುವುದೇ ಎಂದು ತಳಮಳವಾಗುತ್ತಿದೆ.
ಇದನ್ನೂ ಓದಿ: ಹೆಣ್ಣು ಮಾಯಾ ಜಿಂಕೆಯಾದರೆ,ಗಂಡೇನು…….?
ಅದೇ ವೇಳೆ ದಲಿತ ಸೋದರಿಯರು ಅಧ್ಯಯನ ಶಿಬಿರವೊಂದರಲ್ಲಿ ಕೇಳಿದ ಪ್ರಶ್ನೆ ಗುಂಯ್ಞ್ಗುಡುತ್ತಿದೆ. ದಿನನಿತ್ಯ ನಡೆಯುವ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳ ಬಗೆಗೆ ಮಾಧ್ಯಮದವರಾಗಲೀ, ಆಡಳಿತ ಮತ್ತು ನ್ಯಾಯವ್ಯವಸ್ಥೆಯಾಗಲೀ, ಮಹಿಳಾ ಸಂಘಟನೆಗಳಾಗಲೀ ಒಮ್ಮೆಲೇ ಏಕೆ ಪ್ರತಿಕ್ರಿಯಿಸುವುದಿಲ್ಲ? ಖೈರ್ಲಾಂಜಿ, ನಾಗಲಾಪಲ್ಲಿಗಳಂತಹ ಎಷ್ಟೋ ಬರ್ಬರ ಅತ್ಯಾಚಾರ-ಸಾವುಗಳು ಸಂಭವಿಸಿದರೂ ಅವು ದೆಹಲಿ ಪ್ರಕರಣದಷ್ಟು ಪ್ರಾಮುಖ್ಯತೆ ಏಕೆ ಪಡೆಯಲಿಲ್ಲ ಎಂದು ಕೇಳಿದ ಪ್ರಶ್ನೆ ಮುಜುಗರ ತರುವಂಥದಾದರೂ ಬಹುಮುಖ್ಯವಾಗಿದೆ. ಆನಂದ್ ತೇಲ್ತುಂಬ್ಡೆ ಸೇರಿದಂತೆ ಹಲವರ ಬರಹ, ಚರ್ಚೆಗಳಲ್ಲೂ ಈ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಮಾರ್ಚ್ 8ನ್ನು ಈ ಪ್ರಶ್ನೆಗೆ ಉತ್ತರಿಸದೇ ದಾಟುವುದು ಸಾಧ್ಯವಿಲ್ಲ.
ಹೌದು. ಎಲೈಟ್ ಜಾತಿ/ವರ್ಗ ಅನುಭವಿಸುವ ಕಷ್ಟಗಳಿಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ದೊರೆಯುತ್ತದೆ. ವ್ಯವಸ್ಥೆಯ ಗಮನ ಸೆಳೆದು ಪರಿಹಾರವೂ ಬೇಗ ದೊರೆಯುತ್ತದೆ. ನ್ಯಾಯದಾನ ವ್ಯವಸ್ಥೆ ಕೂಡ ವರ್ಗ/ಜಾತಿ ತಾರತಮ್ಯ ತೋರಿಸುತ್ತದೆ. ಬ್ರಿಟಿಷರು ಅತ್ಯಾಚಾರ ಕಾಯ್ದೆ ತಂದಾಗ ಕೆಲ ಮ್ಯಾಜಿಸ್ಟ್ರೇಟುಗಳು ತಮ್ಮ ತೀರ್ಪಿನಲ್ಲಿ ಮೇಲ್ಜಾತಿ ಹೆಣ್ಣು ಕೆಳಜಾತಿ ಗಂಡಿನಿಂದ ಅತ್ಯಾಚಾರಕ್ಕೊಳಗಾದರೆ ಹೆಚ್ಚು `ಮಾನ’ ನಷ್ಟವಾಗುವುದಾಗಿಯೂ; ಕೆಳಜಾತಿ ಹೆಣ್ಣು ಮೊದಲೇ ಸಡಿಲ ನಡತೆಯವಳಾಗಿರುವ ಕಾರಣ ಮೇಲ್ಜಾತಿ ಗಂಡಿನಿಂದ ಅತ್ಯಾಚಾರಕ್ಕೊಳಗಾದರೆ ಮಾನ ನಷ್ಟ ಕಡಿಮೆ ಎಂದೂ ತೀರ್ಪು ಬರೆಯುತ್ತಿದ್ದರು! 1995ರಲ್ಲಿ ಭನವಾರಿದೇವಿ ಅತ್ಯಾಚಾರ ಪ್ರಕರಣದಲ್ಲಿಯೂ ರಾಜಸ್ಥಾನ ಹೈಕೋರ್ಟು ಮೇಲ್ಜಾತಿ ಪುರುಷರು ದಲಿತ ಭನವಾರಿಯ ಅತ್ಯಾಚಾರ ಮಾಡಿರಲಿಕ್ಕಿಲ್ಲ ಎಂದು ಇಂಥದೇ ತೀರ್ಪು ಬರೆಯಿತು!
ಹೀಗೆ ಅಸಮಾನ ಭಾರತದ ಪೊಲೀಸ್ ಮತ್ತು ನ್ಯಾಯವ್ಯವಸ್ಥೆಗಳು ಜಾತಿಪೂರ್ವಗ್ರಹದಿಂದ ಮುಕ್ತವಲ್ಲದೆ ಇರುವಾಗ ಪ್ರಕರಣಗಳ ದಾಖಲು, ವರದಿ, ನ್ಯಾಯದಾನ, ಶಿಕ್ಷೆ ಎಲ್ಲದರಲ್ಲೂ ಜಾತಿ/ವರ್ಗಗಳು ಪ್ರಮುಖ ಪಾತ್ರ ವಹಿಸುತ್ತವೆಯೆ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆೆ. ಎಂದೇ ಮಹಿಳಾ ಚಳುವಳಿ ತಮ್ಮನ್ನು ಒಳಗೊಳ್ಳುವ ಕುರಿತು ತಳಸಮುದಾಯಗಳಿಗೆ ಆಳದ ಅವಿಶ್ವಾಸ ಬೆಳೆದುಬಂದಿದೆ.
ನಿಜ. ಭಾರತೀಯ ಜಾತಿವ್ಯವಸ್ಥೆ ಲಿಂಗ ಸಂಬಂಧ ಮತ್ತು ತಾರತಮ್ಯದೊಂದಿಗೆ ಅವಿನಾ ಸಂಬಂಧ ಹೊಂದಿದ್ದು ಶೋಷಣೆಗೆ ಜಾತಿಯೂ ಒಂದು ಅಸ್ತ್ರವಾಗಿದೆ. ಪುರುಷ ಪ್ರಾಧಾನ್ಯ ಹಾಗೂ ಜಾತಿ ಶೋಷಣೆಯೆಂಬ ಎರಡಲುಗಿನ ನಡುವೆ ಮಹಿಳೆಯರು ದೌರ್ಜನ್ಯಕ್ಕೊಳಗಾಗಿದ್ದಾರೆ. ದೇವದಾಸಿ, ಬಸವಿ, ವೇಶ್ಯೆ, ಜೋಗತಿಯಂತಹವರು ಧಾರ್ಮಿಕ-ಸಾಮಾಜಿಕ ಕಾರಣಗಳಿಗಾಗಿ ದೌರ್ಜನ್ಯಕ್ಕೊಳಗಾಗಿದ್ದರೂ ಅವರೆಲ್ಲ ದಲಿತ, ಹಿಂದುಳಿದ ಸಮುದಾಯದ ಹೆಣ್ಣು ಮಕ್ಕಳೆನ್ನುವುದನ್ನು ಗಮನಿಸಬೇಕು. ದಲಿತ ಮಹಿಳೆ ಜಾತಿ-ಧರ್ಮ-ದೇವರ ಹೆಸರಿನಲ್ಲಿ ಸಮಾಜದ ಹಾಗೂ ಕೌಟುಂಬಿಕ ದೌರ್ಜನ್ಯದ ಇಬ್ಬಾಯಿ ಖಡ್ಗಕ್ಕೆ ನಲುಗುವ ಬಲಿಪಶುವಾಗಿದ್ದಾಳೆ.
ಹೀಗಿರುತ್ತ ಮೊದಲ ಮಹಿಳಾ ಚಳುವಳಿ ತನ್ನ ಎಲೈಟ್ ಹಿನ್ನೆಲೆಯ ಕಾರಣದಿಂದ ಜಾತಿ ಪ್ರಶ್ನೆಯನ್ನೆತ್ತಿಕೊಳ್ಳದೇ ದಲಿತ ಮಹಿಳಾ ಚಳುವಳಿ ಬೇರೆಯೇ ಆಗಿ ರೂಪುಗೊಳ್ಳುವ ಅನಿವಾರ್ಯತೆ ಉಂಟಾಗಿದ್ದು ಚಾರಿತ್ರಿಕ ಸತ್ಯವಾಗಿದೆ. ಆದರೆ ಇತ್ತೀಚಿನ ಎರಡು-ಮೂರು ದಶಕಗಳಲ್ಲಿ ಮಹಿಳಾ ಸಂಘಟನೆಗಳು ತಮ್ಮ ಕಾರ್ಯಕ್ಷೇತ್ರ ವಿಸ್ತಾರಗೊಳಿಸಿಕೊಳ್ಳುತ್ತ ಎಲ್ಲ ಮಹಿಳೆಯರನ್ನು ಒಳಗೊಳ್ಳುವತ್ತ ಸ್ಪಷ್ಟ ಹೆಜ್ಜೆ ಇಡತೊಡಗಿರುವುದನ್ನು ಗಮನಿಸಬೇಕು. ಮಥುರಾನಿಂದ ಭನವಾರಿ ದೇವಿಯವರೆಗೆ ದೌರ್ಜನ್ಯ ವಿರೋಧಿ ಕಾನೂನುಗಳು ರೂಪುಗೊಂಡ ಲ್ಯಾಂಡ್‌ಮಾರ್ಕ್ ಕೇಸುಗಳಲ್ಲಿ ಮಹಿಳಾ ಸಂಘಟನೆಗಳು ಬುಡಕಟ್ಟು-ದಲಿತ-ಹಿಂದುಳಿದ-ಅಲ್ಪಸಂಖ್ಯಾತ ಮಹಿಳೆಯ ಪರವಾಗಿಯೇ ಹೋರಾಡಿವೆ. ಈಗ ಹೋರಾಟದ ಮುಂಚೂಣಿ ವಿಷಯಗಳಲ್ಲಿ ಧರ್ಮ, ಜಾತಿ, ವರ್ಗ, ಉದ್ಯೋಗ, ರಕ್ಷಣೆ, ಅಭಿವೃದ್ಧಿ ಮೂಲದ ದೌರ್ಜನ್ಯಗಳ ಜೊತೆ ಹಿಜಡಾ ಸಮುದಾಯದ ಸಮಸ್ಯೆಯೂ ಸೇರಿಕೊಂಡಿದೆ. ಉಮಾ ಚಕ್ರವರ್ತಿ ಹಾಗೂ ಶರ್ಮಿಳಾ ರೇಗೆಯಂತಹ ಮಹಿಳಾವಾದಿಗಳು ಜಾತಿ ವಿಷಯವನ್ನು ಲಿಂಗಸಂಬಂಧಿ ಬಿಕ್ಕಟ್ಟುಗಳ ವಿಶ್ಲೇಷಣೆಯಲ್ಲಿ ಸದಾ ಮುನ್ನೆಲೆಗೆ ತರುತ್ತಲೇ ಇದ್ದಾರೆ. ಶೋಷಕ ವ್ಯವಸ್ಥೆಯ ಬಹುಮುಖ್ಯ ಘಟಕ `ಜಾತಿ’ ಎನ್ನುವುದನ್ನು ಮಹಿಳಾ ಚಳುವಳಿ ಬಹುತೇಕ ಒಪ್ಪಿಕೊಂಡಿದೆ. ಎಡಪಂಥೀಯ ಸಿದ್ಧಾಂತವೂ, ಪಕ್ಷ-ಹೋರಾಟಗಳೂ ಈ ನಿಟ್ಟಿನಲ್ಲಿ ತಮ್ಮ ಸಾಂಪ್ರದಾಯಿಕ ನಿಲುವನ್ನು ಬದಲಿಸಿಕೊಂಡು ಮುನ್ನಡೆದಿರುವುದನ್ನು ಗಮನಿಸಬಹುದಾಗಿದೆ.
ಆದರೂ ದಲಿತ ಮಹಿಳೆಯ ವಿಷಯವಷ್ಟೇ ಅಲ್ಲ, ಒಟ್ಟಾರೆ ದಲಿತ ಪ್ರಶ್ನೆಗಳ ಕುರಿತು `ಗಣ್ಯ’ ಚಿಂತಕರು ಒಮ್ಮೆಲೇ ಮಾತನಾಡದೇ ಜಾಣ ಕುರುಡಿನಿಂದ ವರ್ತಿಸುವುದು ತಳಸಮುದಾಯಗಳು ಈ ಅವಿಶ್ವಾಸ ಹೊಂದಲು ಕಾರಣವಾಗಿದೆ. ಆದರೆ ಪ್ರತಿ ಮಹಿಳಾ ದೌರ್ಜನ್ಯಕ್ಕೂ ಆ ಜಾತಿ ಸಂಘಟನೆ/ಬಾಂಧವರಷ್ಟೇ ಹೋರಾಡುವುದು ಸರಿಯೇ ಎಂಬ ಪ್ರಶ್ನೆಯೇಳುತ್ತದೆ.
ಇಲ್ಲಿ ಮಹಿಳೆ, ಜಾತಿ, ಸಂಘಟನೆಗಳ ಕುರಿತು ವಸ್ತುನಿಷ್ಠವಾಗಿ ಯೋಚಿಸುವುದು ಅವಶ್ಯವೆನಿಸುತ್ತಿದೆ.
ಶೋಷಣೆಯ ಒಂದು ಪ್ರಬಲ ಅಸ್ತ್ರ ಜಾತಿ. ಹಾಗೆಯೇ ಸಂಘಟಿತಗೊಳ್ಳಲು ಮತ್ತು ರಾಜಕೀಯ ಅಧಿಕಾರದತ್ತ ಸಾಗಲು ಇರುವ ಉಪಕರಣವೂ ಜಾತಿಯೇ. ಈ ವೈರುಧ್ಯದ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳು ಸಂಘಟನೆಗೆ ಜಾತಿಯನ್ನು ಎಷ್ಟು, ಹೇಗೆ ಬಳಸಿಕೊಳ್ಳಬೇಕು? ಜಾತಿ ವ್ಯವಸ್ಥೆ ಮಹಿಳೆಯನ್ನು ಬಹುಮುಖಿ ಬಿಕ್ಕಟ್ಟುಗಳಿಗೆ ಈಡಾಗಿಸಿರುವಾಗ ಜಾತಿ ಸಂಘಟನೆಗಳಲ್ಲಿ ಮಹಿಳೆಯ ಪಾತ್ರವೇನು? ಜಾತಿ ಮೂಲ ಶೋಷಣೆಯಿಂದ ಪಾರಾಗಲು ಸಮುದಾಯ ಸಂಘಟನೆಯಲ್ಲಿ ಹೆಣ್ಣು ಮಕ್ಕಳಿರುವುದು ಅನಿವಾರ್ಯವೇ ಆದರೂ ಮಹಿಳಾ ಬಿಕ್ಕಟ್ಟುಗಳಿಗೆ ಅವು ಸ್ಪಂದಿಸುತ್ತಿವೆಯೆ? ಮಹಿಳೆಯರಿಗೆ ಸಿಗುತ್ತಿರುವ ಪ್ರಾಮುಖ್ಯತೆ ಎಂಥದ್ದು? ಮಹಿಳೆಗೆ ನೀಡಲಾದ ಜವಾಬ್ದಾರಿ ಮಹಿಳಾ ನಾಯಕತ್ವ ಬೆಳೆಸುತ್ತಿದೆಯೆ? ಎಂಬ ಸೂಕ್ಷ್ಮ ಪ್ರಶ್ನೆಗಳತ್ತ ಗಮನ ಹರಿಸಬೇಕಾಗಿದೆ.
ಇದನ್ನೂ ಓದಿ: Motivational: ನಿನ್ನೊಳಗೊಂದು ಎನೋ ಕದನವಿದೆಯಲ್ಲ!!!
ಮೀಸಲಾತಿ, ಅಧಿಕಾರ, ಚುನಾವಣಾ ರಾಜಕಾರಣವೇ ಮುಖ್ಯವಾಗಿ ಜಾತಿಸಂಘಟನೆಗಳು ಈಗ ಲಿಂಗಪ್ರಶ್ನೆಯನ್ನು ಬಹುತೇಕ ಹಿನ್ನೆಲೆಗೆ ಸರಿಸಿವೆ. ಅದಷ್ಟೇ ಅಲ್ಲ, ಭೂಮಿ ಒಡೆತನ, ಪರಿಸರ, ಬಂಡವಾಳ-ಅಭಿವೃದ್ಧಿ ಕುರಿತ ಪ್ರಶ್ನೆಗಳೂ ಮಹಿಳಾ ವಿಷಯಗಳ ಜೊತೆ ಹಿನ್ನೆಲೆಗೆ ಸರಿದಿವೆ. ಮಹಿಳೆ ಅಂಥ ಸಂಘಟನೆಗಳಲ್ಲಿ ಪ್ರಾತಿನಿಧಿಕವಾಗಿ ಕಾಣಬರುತ್ತಾಳೇ ಹೊರತು ಸಮಾನ ಪಾಲುದಾರಿಕೆಯಲ್ಲಿ ಅವಳನ್ನು ನಡೆಸಿಕೊಳ್ಳುತ್ತಿಲ್ಲ. ಹೀಗಿರುತ್ತ ತಂತಮ್ಮ ಸಮುದಾಯಗಳ ಹೋರಾಟದಲ್ಲಿ ಮಹಿಳೆಯರಿರುವುದು ಅವಶ್ಯವಾದಂತೆಯೇ ಜಾತಿ/ಸಮುದಾಯಗಳೊಳಗಿನ ಪಿತೃಪ್ರಾಧಾನ್ಯದಿಂದ ಬಿಡಿಸಿಕೊಳ್ಳಲು ಇಡೀ ಮಹಿಳಾ ಚಳುವಳಿಯ ಒಂದು ಭಾಗವಾಗಿ ತನ್ನನ್ನು ಗುರುತಿಸಿಕೊಳ್ಳುವುದೂ ಅನಿವಾರ್ಯವಾಗಿದೆ. ಎಲ್ಲರನ್ನೂ ಒಳಗೊಳ್ಳುವ ರಾಜಕಾರಣದ ಭಾಗವಾಗಿ ಮಹಿಳೆ ಬೆಳೆಯಬೇಕಿದೆ. ಆಗ ಅವಳ ವಿಮೋಚನೆಯ ದಾರಿ ಇಡೀ ಸಮುದಾಯದ ಹೊರಬರುವ ದಾರಿಯಾಗಿಯೂ ಒದಗಿಬರುತ್ತದೆ.
ಎಂದೇ ಹಾಲಕ್ಕಿ, ಬೋವಿ, ಕುಣಬಿ ಇನ್ನಿತರ ಸಮುದಾಯಗಳ ತೆರೆದೆದೆಯ ಹೆಣ್ಣುಮಕ್ಕಳು ರವಿಕೆ ಮೇಲಿನ ತಮ್ಮ ಹಕ್ಕು ಸಾಧಿಸುತ್ತಲೇ ತನ್ನ ಹಾಗೂ ಸಮಾಜದ ಪುರುಷಪಾರಮ್ಯದಿಂದ ಪಾರಾಗಲು ಹೋರಾಡಬೇಕು. ದಲಿತ ಮಹಿಳೆ ದೇವದಾಸಿ ಪದ್ಧತಿ ವಿರೋಧಿಸುತ್ತಲೇ ದಲಿತ ಸಂಘಟನೆಗಳೊಳಗೆ ಲಿಂಗಸೂಕ್ಷ್ಮತೆಯನ್ನು ಬೆಳೆಸಬೇಕು. ಎಲ್ಲ ರೂಪದ ಯಜಮಾನಿಕೆಯ ವಿರುದ್ಧ ಮಹಿಳೆ ಸಂಘಟಿತ ಹೋರಾಟ ನಡೆಸಬೇಕು.
ಮಹಿಳಾ ಚಳುವಳಿ ಮತ್ತು ಮಹಿಳಾಪರ ಚಿಂತನೆಗಳು ಸರಕು ಸಂಸ್ಕೃತಿಯ ಕಾಲದಲ್ಲಿ ಸೂಕ್ತ ವಕ್ತಾರಿಕೆ ಇಲ್ಲದೆ ಹಿನ್ನಡೆ ಅನುಭವಿಸುತ್ತಿರುವಾಗ ಇತ್ತೀಚಿನ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಎದ್ದಿರುವ ಪ್ರತಿಭಟನಾ ಮನೋಭಾವವನ್ನು ದೌರ್ಜನ್ಯ ವಿರೋಧಿ ಚಳುವಳಿಯನ್ನಾಗಿ ಪರಿವರ್ತಿಸುವ ಅವಶ್ಯಕತೆಯಿದೆ. ಜೊತೆಗೇ ಜಾತಿ/ಧರ್ಮ/ವರ್ಗಗಳ ಹೆಸರಲ್ಲಿ ಮಹಿಳೆಯರು ಹರಿದು ಹಂಚಿಹೋಗದೇ ದೌರ್ಜನ್ಯಗಳ ವಿರುದ್ಧ ಒಗ್ಗಟ್ಟಾಗಿ ಬೀದಿಗಿಳಿಯಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಮಾರ್ಚ್ 8ರಂದು ಮಂಗಳೂರಿನಲ್ಲಿ ನಲವತ್ತಕ್ಕೂ ಮಿಕ್ಕಿ ಮಹಿಳಾ ಸಂಘಟನೆಗಳು ಒಂದೆಡೆ ಸೇರಿ `ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ’ ಅಸ್ತಿತ್ವಕ್ಕೆ ಬರುತ್ತಿದ್ದು ಸಂಘಟಿತ ಮಹಿಳಾ ಧ್ವನಿ ಆಶಾಕಿರಣದಂತೆ ಕಾಣಿಸುತ್ತಿದೆ..
– ಡಾ. ಎಚ್.ಎಸ್.ಅನುಪಮಾ