ವಿಜಯಪುರ: ವಿಜಯಪುರದ ಕಲೆ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ರಾಜ್ಯಸಭಾ ಸದಸ್ಯೆ ಡಾ. ಸುಧಾಮೂರ್ತಿ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ‘ಕಲಾಧಾರಾ’ (Kaladhara Cultural Festival) ಸಾಂಸ್ಕೃತಿಕ ಉತ್ಸವ ಎರಡನೇ ವರ್ಷವೂ ವೈಭವಯುತವಾಗಿ ಆರಂಭಗೊಂಡಿತು.
ಕಳೆದ ವರ್ಷ ಗೋಳಗುಮ್ಮಟದ ಆವರಣದಲ್ಲಿ ನಡೆದಿದ್ದ ಈ ಉತ್ಸವ ಈ ಬಾರಿ ಐತಿಹಾಸಿಕ ಇಬ್ರಾಹಿಂ ರೋಜಾ ಅಂಗಳದಲ್ಲಿ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಅಭಿವೃದ್ಧಿ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವಡಾ. ಎಂ.ಬಿ. ಪಾಟೀಲ ಅವರು, ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪದ ತಾಣವಾಗಿರುವ ಜಿಲ್ಲೆಗೆ ವಿದೇಶಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ.
ಇಂಜಿನಿಯರಿಂಗ್ ಅದ್ಭುತವಾಗಿರುವ ಗೋಳಗುಮ್ಮಟ, ತಾಜ್ಮಹಲ್ ನಿರ್ಮಾಣಕ್ಕೆ ಸ್ಫೂರ್ತಿಯಾಗಿರುವ ಇಬ್ರಾಹಿಂ ರೋಜಾ, ಬಾರಾಕಮಾನ್ ಸೇರಿದಂತೆ ಹಲವು ಸ್ಮಾರಕಗಳು ವಿಶ್ವಮಟ್ಟದಲ್ಲಿ ಗಮನ ಸೆಳೆಯುವಂತಹ ಶ್ರೇಷ್ಠತೆಯನ್ನು ಹೊಂದಿವೆ.
ಈ ಹಿನ್ನೆಲೆಯಲ್ಲಿ ವಿಜಯಪುರದ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಣಾಮಕಾರಿಯಾಗಿ ಪರಿಚಯಿಸಿ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕಲಾಧಾರಾ ಉತ್ಸವ (Kaladhara Cultural Festival) ಇಂದು ನವರಸಪುರ ಉತ್ಸವವನ್ನು ನೆನಪಿಸಿದೆ. ಮುಂಬರುವ ದಿನಗಳಲ್ಲಿ ಕಲಾಧಾರಾ ತಂಡದ ಸಲಹೆಗಳನ್ನು ಸಹ ಪಡೆದುಕೊಳ್ಳಲಾಗುವುದು ಎಂದರು.
ಆದಿಲ್ ಷಾಹಿ ಅರಸರ ಕಾಲದ ಸಮಗ್ರ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಈ ಸಾಹಿತ್ಯವನ್ನು ಉತ್ತರ ಭಾರತಕ್ಕೂ ತಲುಪಿಸುವ ಉದ್ದೇಶದಿಂದ ಪರ್ಷಿಯನ್ ಭಾಷೆಯಲ್ಲಿರುವ ಸಾಹಿತ್ಯವನ್ನು ಉರ್ದು ಭಾಷೆಗೂ ಅನುವಾದಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ.ಮಾತನಾಡಿ, ವಿಜಯಪುರ ನಗರದಲ್ಲಿ ೨೫೦ಕ್ಕೂ ಹೆಚ್ಚು ಸ್ಮಾರಕಗಳಿದ್ದು, ಅವುಗಳಲ್ಲಿ ೮೨ ಸ್ಮಾರಕಗಳು ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿವೆ. ಈ ಎಲ್ಲ ಸ್ಮಾರಕಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೇಳಿದರು.
ಖ್ಯಾತ ಇತಿಹಾಸ ತಜ್ಞರು ಹಾಗೂ ಪುರಾತತ್ವ ಇಲಾಖೆಯ ನಿವೃತ್ತ ನಿರ್ದೇಶಕರಾದ ಪದ್ಮಶ್ರೀ ಡಾ. ಕೆ. ಮೊಹಮ್ಮದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ಜುಫಿಷಾನ್ ಹಕ್, ಪ್ರವಾಸೋದ್ಯಮ ಇಲಾಖೆಯ ಡಿಡಿ ಅರವಿಂದ ಹೂಗಾರ,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ವೈಭವ :
ಕಲಾಧಾರಾ ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಸುಕನ್ಯಾ ರಾಮಗೋಪಾಲ್ ಅವರು ಘಟ ವಾದನದ ಮೂಲಕ ಸಂಗೀತ ರಸದೌತಣ ನೀಡಿದರು. ವಾಣಿ ಮಂಜುನಾಥ್ ಕೊಳಲು ವಾದನ ನಡೆಸಿದರೆ, ರಂಜನಿ ವೆಂಕಟೇಶ್ ಮೃದಂಗ ಹಾಗೂ ರತ್ನಶ್ರೀ ಅಯ್ಯರ್ ತಬಲಾ ಸಾಥ್ ನೀಡಿದರು. ನಂತರ ಡಾ. ಸಂಜಯ್ ಶಾಂತಾರಾಮ್ ಮತ್ತು ತಂಡದ ನೃತ್ಯ ಕಲಾವಿದರು ಕುಚಿಪುಡಿ ನೃತ್ಯ ಪ್ರದರ್ಶಿಸಿ ಕಲಾರಸಿಕರನ್ನು ರಂಜಿಸಿದರು.





