Vijayapura News | SC-ST ಪಂಗಡಗಳ ಕಲ್ಯಾಣ ಸಮಿತಿಯಿಂದ ಜಿಲ್ಲೆಯ ಪ್ರಗತಿ ಪರಿಶೀಲನೆ | ಸಾಮಾಜಿಕ ಕಾಳಜಿಯೊಂದಿಗೆ ಕಾರ್ಯನಿರ್ವಹಿಸಿ ನೈಜ ಫಲಾನುಭವಿಗಳಿಗೆ ಲಾಭ ದೊರಕಿಸಿ

ಸರ್ಕಾರಗಳು ಜನರ ಜೀವನ ಮಟ್ಟ ಸುಧಾರಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಆ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಮಾತ್ರ ಯೋಜನೆಗಳು ಸಾರ್ಥಕವಾಗುತ್ತವೆ.

0
70
Scheduled Caste-Scheduled Tribe image

ವಿಜಯಪುರ: ಸರ್ಕಾರಗಳು ಜನರ ಜೀವನ ಮಟ್ಟ ಸುಧಾರಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಆ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಮಾತ್ರ ಯೋಜನೆಗಳು ಸಾರ್ಥಕವಾಗುತ್ತವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು Scheduled Caste-Scheduled Tribe ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಯೋಜನೆಗಳ ಅನುಷ್ಠಾನದಲ್ಲಿ ಸಾಮಾಜಿಕ ಕಾಳಜಿ-ಜವಾಬ್ದಾರಿಯೊಂದಿಗೆ ಯೋಜನೆ ಅನುಷ್ಠಾನಗೊಳಿಸಿ ಫಲಾನುಭವಿಗಳಿಗೆ ಲಾಭ ದೊರಕಿಸಲು ಕ್ರಮ ವಹಿಸಬೇಕು ಎಂದು ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಸೂಚನೆ ನೀಡಿದರು.

ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿಜಯಪುರ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಎಸ್‍ಸಿಪಿ-ಟಿಎಸ್‍ಪಿ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಸಮರ್ಪಕ ಬಳಕೆ ಎಂದರೆ ಕೇವಲ ಹಣ ಖರ್ಚು ಮಾಡದೇ, ಯೋಜನೆಯ ಅನುಷ್ಠಾನದಿಂದ ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ Scheduled Caste-Scheduled Tribe ಲಾಭ ದೊರೆತು ಅವರ ಜೀವನ ಮಟ್ಟ ಸುಧಾರಣೆಯಾಗಬೇಕು ಅಂದಾಗ ಮಾತ್ರ ಅನುದಾನದ ಸಮರ್ಪಕ ಬಳಕೆಯಾಗುತ್ತದೆ. ಈ ಕುರಿತು ಅಧಿಕಾರಿಗಳು ಜವಾಬ್ದಾರಿಯಿಂದ ಆದ್ಯತೆಯ ಮೇರೆ ಲಾಭ ದೊರಕಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: Vijayapura News | ನವೆಂಬರ್ 17 ರಂದು ಸಂಘ ದಾನ ಪುಣ್ಯ ಪೂಜಾ ಮಹೋತ್ಸವ ಧಮ್ಮ ಕಾರ್ಯಕ್ರಮ

ಎಸ್ಟಿ-ಎಸ್ಟಿ ಅನುದಾನವನ್ನು ಒಂದೇ ನಿಗದಿತ ಕಡೆ ವ್ಯಯಿಸದೇ ಎಲ್ಲಿ ಅತ್ಯಂತ ಅವಶ್ಯಕತೆ ಇದೆ ಎಂಬುದು ಪರಿಶೀಲಿಸಿಕೊಂಡು ಅನುದಾನ ಪರಿಪೂರ್ಣ ಲಾಭ ದೊರಕಿಸಲು ಕ್ರಮ ವಹಿಸಬೇಕು. ಒಂದೇ ಅನುದಾನದಲ್ಲಿ ಹಲವು ಕಡೆ ವಿನಿಯೋಗಿಸದೇ ಒಂದೇ ನಿಗದಿತ ಯೋಜನೆಯ ಲಾಭ ಪರಿಪೂರ್ಣವಾಗಿ ದೊರಕಿಸಬೇಕು ಎಂದು ಸೂಚನೆ ನೀಡಿದರು.

ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಸೌಲಭ್ಯ ದೊರಕಿಸುವಾಗ ನೈಜ ಫಲಾನುಭವಿಗಳಿಗೆ ಪರಿಪೂರ್ಣ ಲಾಭ ದೊರಕಿದೆಯೇ ಇಲ್ಲ ಎಂದು ಪರಿಶೀಲನೆ ನಡೆಸಬೇಕು. ಉದಾಹರಣೆಗೆ ಕೃಷಿ ಇಲಾಖೆಯಿಂದ ಕೃಷಿ ಹೊಂಡ ಸೌಲಭ್ಯ ದೊರಕಿಸಿದ ನಂತರ ಫಲಾನುಭವಿ ತಾನು ಪಡೆದ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಇಲ್ಲ ಎಂಬುದನ್ನು ಅಧಿಕಾರಿಗಳು ನಿರಂತರ ಅನುಪಾಲನೆ ಮಾಡಬೇಕು. ಕೃಷಿ ಹೊಂಡದ ಸಹಾಯದಿಂದ ಯಾವ ಬೆಳೆ ಬೆಳೆಯುವುದರಿಂದ ಆರ್ಥಿಕ ಮಟ್ಟ ಸುಧಾರಣೆಯಾಗಲಿರುವ ಕುರಿತು ಸೂಕ್ತ ಜಾಗೃತಿ ಹಾಗೂ ಸಲಹೆ-ಸೂಚನೆಗಳನ್ನು ನೀಡಿ ಯೋಜನೆಯ ಪರಿಪೂರ್ಣ ಲಾಭ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: Vijayapura News | ಡಿಸೆಂಬರ್ 14ರಂದು ರಾಷ್ಟ್ರೀಯ ಲೋಕ ಅದಾಲತ್ – ಶಿವಾಜಿ ಅನಂತ ನಲವಾಡೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಾಜದ ಅಭಿವೃದ್ದಿಗಾಗಿ ಅನುದಾನವನ್ನು ಸದ್ವಿನಿಯೋಗಿಸಿಕೊಳ್ಳಬೇಕು. ಶಿಕ್ಷಣಕ್ಕೆ ಪ್ರಥಮಾದ್ಯತೆ ನೀಡಿ, ವಿವಿಧ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲು ಅನುದಾನದ ಸಮರ್ಪಕ ಬಳಕೆಗೆ ಸೂಕ್ತ ಯೋಜನೆ ಸಿದ್ಧಪಡಿಸಿಟ್ಟುಕೊಂಡು ಯೋಜನೆಯನುಸಾರ ವಿನಿಯೋಗಿಸಿ ಅತಿ ಹೆಚ್ಚು ಲಾಭ ದೊರಕಿಸಲು ಕ್ರಮ ವಹಿಸಬೆಕು. ಪ್ರತಿ ವರ್ಷ ಬಿಡುಗಡೆಯಾಗುವ ಅನುದಾನದಲ್ಲಿ ಮುಂದಿನ 5 ವರ್ಷಗಳ ಕಾಲದ ಯೋಜನೆ ರೂಪಿಸಿಕೊಳ್ಳಬೇಕು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೇವಲ ವಸತಿ ನಿಲಯಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಸೀಮಿತವಾಗದೇ, ಎಲ್ಲ ಇಲಾಖೆಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಒದಗಿಸಲಾಗುತ್ತಿರುವ ಸೌಲಭ್ಯ ಕುರಿತು ಪರಿಶೀಲನೆ ನಡೆಸಿ, ನೈಜ ಫಲಾನುಭವಿಗಳಿಗೆ ಲಾಭ ದೊರಕುತ್ತಿದೆಯೇ ಇಲ್ಲ ಎಂಬುದರ ಕುರಿತು ನಿರಂತರವಾಗಿ ನಿಗಾ ವಹಿಸಬೇಕು. ಅನುದಾನದ ಲಾಭ ನೈಜ ಫಲಾನುಭವಿಗಳಿಗೆ ದೊರಕಿಸುವುದು ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿಯಾಗಿದೆ. ಇದನ್ನರಿತು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ವಿವಿಧ ಇಲಾಖೆಗಳಲ್ಲಿ ಎಸ್ಸಿ-ಎಸ್ಟಿ ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಇದನ್ನೂ ಓದಿ: Vijayapura News | ನವೆಂಬರ್ 20ರಂದು ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ

ಎಸ್ಸಿ-ಎಸ್ಟಿ ಸಮುದಾಯದವರ ಸ್ಮಶಾನ ಜಾಗದ ಬೇಡಿಕೆಗೆ ಸ್ಪಂದಿಸಿ, ಸ್ಮಶಾನ ಜಾಗ ಒದಗಿಸಲು ಆದ್ಯತೆ ಮೇಲೆ ಕ್ರಮ ವಹಿಸಬೇಕು. ಎಸ್ಸಿ-ಎಸ್ಟಿ ಜಮೀನುಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಸೂಕ್ತ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ವಸತಿ ಇಲ್ಲದೇ ಇರುವವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವಾಗಬೇಕು. ವಿವಿಧ ತಾಲೂಕಾ ತಹಶೀಲ್ದಾರಗಳು ಜಿಲ್ಲೆಯಲ್ಲಿರುವ ಮಾಜಿ ದೇವದಾಸಿಯರನ್ನು ಗುರುತಿಸಲು ಕ್ರಮ ವಹಿಸಬೇಕು. ಈ ಕಾರ್ಯವನ್ನು ಅತ್ಯಂತ ಆದ್ಯತೆ ಮೇಲೆ ಪರಿಗಣಿಸಬೇಕು. ಮುಂದಿನ 2 ತಿಂಗಳೊಳಗೆ ನಿವೇಶನ ಒದಗಿಸಲು ಸೂಚಿಸಿದ ಅವರು, ಮಹಿಳಾ ಅಭಿವೃದ್ದಿ ನಿಗಮ, ಅಂಬೇಡ್ಕರ್ ಅಭಿವೃದ್ದಿ ನಿಗಮ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಇದಕ್ಕೆ ಪೂರಕವಾಗಿ ಸಾಕಷ್ಟು ಅನುದಾನ ಮೀಸಲಿದ್ದು, ಈ ಅನುದಾನವನ್ನು ಬಳಕೆ ಮಾಡಿ ನಿವೇಶನ ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಇರುವ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಅಪೌಷ್ಠಿಕತೆ ನಿವಾರಣೆಗೆ ಕ್ರಮ ವಹಿಸಬೇಕು. ಪ್ಯಾಕೇಜ್ ಟೆಂಡರ್ ವ್ಯವಸ್ಥೆ ಆಗದೇ ಇರುವಂತೆ ನೋಡಿಕೊಳ್ಳಬೇಕು. ಈ ಕುರಿತು ಜಾಗ್ರತೆ ವಹಿಸುವಂತೆ ಅವರು ಸೂಚನೆ ನೀಡಿದರು.

ಇದನ್ನೂ ಓದಿ: Bagalkote News | ನಾಲ್ಕು ದಿನ ಹಳಗನ್ನಡ ಸಾಹಿತ್ಯ ಬೋಧನಾ ತರಬೇತಿ ಶಿಬಿರಕ್ಕೆ ಚಾಲನೆ | ಹಳಗನ್ನಡ ಬಗ್ಗೆ ನೀಲಕ್ಷೇ ಬೇಡ, ಹಳಗನ್ನಡ ಜ್ಞಾನ ಅವಶ್ಯ: ಡಾ.ಜಗದೀಶ ಗುಡಗುಂಟಿ

ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನಿನ ರಿತ್ಯ ಕ್ರಮ ವಹಿಸಬೇಕು. ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಮುದಾಯ ವಿದ್ಯಾರ್ಥಿಗಳ ಪ್ರವೇಶ ನಿರಾಕರಿಸುವ ಶಿಕ್ಷಣ ಸಂಸ್ಥೆಗಳ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ವಹಿಸಬೇಕು. ಹೊಸದಾಗಿ ನಿರ್ಮಾಣವಾಗುವ ಎಸ್ಸಿ-ಎಸ್ಟಿ ಕಾಲೋನಿ-ಬಡಾವಣೆಗಳಲ್ಲಿ ಎಸ್ಸಿ-ಎಸ್ಟಿ ಅನುದಾನ ಬಳಕೆ ಮಾಡಿ ವಿದ್ಯುತ್ ಕಾಮಗಾರಿ ಕೈಗೊಳ್ಳಬೇಕು. ಕೈಗಾರಿಕೆ ಇಲಾಖೆಯಿಂದ ಹೊಸದಾಗಿ ನಿವೇಶನ ರಚನೆ ಮಾಡುವಾಗ ನಿಯಮಾನುಸಾರ ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಕ್ರಮ ವಹಿಸಬೇಕು. ಇದರಲ್ಲಿ ಏನಾದರೂ ಲೋಪಗಳಿದ್ದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಕಳೆದ 2013ರಿಂದ ಎಸ್ಸಿ-ಎಸ್ಟಿ ಕಾಯ್ದೆ ಜಾರಿಗೆ ಬಂದಿದ್ದು, ಜಿಲ್ಲೆಯಲ್ಲಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿರುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ ಅವರು, ಎಸ್ಸಿ-ಎಸ್ಟಿ ಸಮುದಾಯದ ಜನರು ಸುಂದರ ಬದುಕು ರೂಪಿಸಿಕೊಳ್ಳಲು ಸೂಕ್ತ ವಾತಾವರಣ ನಿರ್ಮಿಸುವ ಮೂಲಕ ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಿ ನೈಜ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಇದನ್ನೂ ಓದಿ: Vijayapura News | ಶಿಕ್ಷಣ ಕ್ಷೇತ್ರಕ್ಕೆ ಮೌಲಾನಾ ಅಜಾದ ಅವರ ಕೊಡುಗೆ ಅಪಾರ – ಪ್ರೊ.ಸುರೇಶ ಸಮ್ಮಸಗಿ

ಸಭೆಯಲ್ಲಿ ಸಮಿತಿ ಸದಸ್ಯ ಕಾರ್ಯದರ್ಶಿಗಳು ಸೇರಿದಂತೆ ಸದಸ್ಯರಾದ ಕೃಷ್ಣ ನಾಯ್ಕ ಕೆ, ಎನ್.ರವಿಕುಮಾರ, ದುರ್ಯೋಧನ ಐಹೊಳೆ, ಡಾ.ಎಂ.ಚಂದ್ರಪ್ಪ, ಶಾಂತಾರಮ ಬುದ್ನಿ ಸಿದ್ದಿ, ಕೆ.ಸಿ ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here