ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು: ಜಿ.ಪಂ ಸಿಇಓ ರಿಷಿ ಆನಂದ ಸೂಚನೆ

ಮಕ್ಕಳಿಗೆ ವಿತರಿಸಲು ತಯಾರಿಸಿರುವ ಆಹಾರವನ್ನು ಪರಿಶೀಲನೆ ಮಾಡಿ, ಪ್ರತಿದಿನ ಶುಚಿಯಾದ ಮತ್ತು ರುಚಿಯಾದ ಆಹಾರ ತಯಾರಿಸಿ ಮಕ್ಕಳಿಗೆ ಪೂರೈಸಲು ಅಂಗನವಾಡಿ ಮೇಲ್ವಿಚಾರಕರು ಹಾಗೂ ಸಹಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

0
75
ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು image

ವಿಜಯಪುರ: ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾ.ಪಂ ಅಧ್ಯಕ್ಷರು, ಸರ್ವಸದಸ್ಯರು ಶ್ರಮ ವಹಿಸಬೇಕು ಎಂದು ವಿಜಯಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸೂಚಿಸಿದ್ದಾರೆ.

ಕೊಲ್ಹಾರ ತಾಲ್ಲೂಕಿನ ಕೂಡಗಿ, ಗ್ರಾಮ ಪಂಚಾಯಿತಿಗೆ ಆ.28ರಂದು ಭೇಟಿ ನೀಡಿ ಎನ್‍ಟಿಪಿಸಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೂಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎನ್‍ಟಿಪಿಸಿ ಯೋಜನೆಗಳ ಸಮರ್ಪಕ ಅನುಷ್ಟಾನಗೊಳಿಸಬೇಕು. ಸರ್ಕಾರಿ ಶಾಲಾ ಕಟ್ಟಡ, ಚರಂಡಿ ನಿರ್ಮಾಣ, ಸಿ.ಸಿ.ರಸ್ತೆ, ಹೈಟೆಕ್ ಶೌಚಾಲಯ, ಆಟದ ಮೈದಾನ ಕಾಮಗಾರಿಗಳು ಸೇರಿದಂತೆ ಎಲ್ಲ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಹಾಗೂ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸರ್ವಸದಸ್ಯರು ಹೆಚ್ಚಿನ ಗಮನಹರಿಸುವಂತೆ ಅವರು ಹೇಳಿದರು.

ಇದನ್ನೂ ಓದಿ: ಗ್ರಾಮ ಆರೋಗ್ಯ: 2 ದಿನದ ತರಬೇತಿ ಕಾರ್ಯಾಗಾರ

ಕೂಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಗಿ ತಾಂಡಾದ ವಾರ್ಡ್ ನಂ 5 ರಲ್ಲಿರುವ ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳಿಗೆ ಒದಗಿಸಲಾಗುತ್ತಿರುವ ಆಹಾರ, ವಿವಿಧ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಆಹಾರ ದಾಸ್ತಾನಿನಲ್ಲಿರುವ ಪುಷ್ಟಿ ಆಹಾರವನ್ನು ವೀಕ್ಷಣೆ ಮಾಡಿದರು. ಮಕ್ಕಳಿಗೆ ವಿತರಿಸಲು ತಯಾರಿಸಿರುವ ಆಹಾರವನ್ನು ಪರಿಶೀಲನೆ ಮಾಡಿ, ಪ್ರತಿದಿನ ಶುಚಿಯಾದ ಮತ್ತು ರುಚಿಯಾದ ಆಹಾರ ತಯಾರಿಸಿ ಮಕ್ಕಳಿಗೆ ಪೂರೈಸಲು ಅಂಗನವಾಡಿ ಮೇಲ್ವಿಚಾರಕರು ಹಾಗೂ ಸಹಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೂಡಗಿ ಗ್ರಾಮದ ಕಿರಿಯ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಗೆ ಭೇಟಿ ನೀಡಿ, ಶಾಲಾ ಕಾಂಪೌಂಡ್ ಮತ್ತು ಶೌಚಾಲಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿ, ಶಾಲಾ ಆವರಣದಲ್ಲಿ ಪ್ರತಿನಿತ್ಯ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅವರು ಸೂಚನೆ ನೀಡಿದರು. ಕೂಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 3ರಲ್ಲಿರುವ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಕೊಠಡಿಗಳು, ಶಾಲಾ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡವನ್ನು ಪರಿಶೀಲನೆ ಮಾಡಿದರು. ವಾರ್ಡ್ ನಂಬರ್ 1, 2ಮತ್ತು 3 ರಲ್ಲಿ 2021 – 22ನೇ ಸಾಲಿನಲ್ಲಿ ಎನ್‍ಟಿಸಪಿ ಅನುದಾನದಡಿಯಲ್ಲಿ ಕೈಗೊಂಡ ಸಿಸಿ ರಸ್ತೆ, ಗ್ರಂಥಾಲಯ ಕಟ್ಟಡ ನಿರ್ಮಾಣ, ಸಭಾಭವನ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು.

ಕೂಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಅನುಷ್ಟಾನಗೊಂಡಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಅವರು, ಪ್ರತಿ ಮನೆ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ನೀರು ಪೂರೈಕೆ ಕುರಿತು ಪಂಪ್ ಆಪರೇಟರ್ ಗಳಿಗೆ ತರಬೇತಿ ನೀಡಬೇಕು. ಸಮಯಕ್ಕೆ ಸರಿಯಾಗಿ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಬೇಕು. ಮಾಹಿತಿ ಫಲಕ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ನೀರು ಪೂರೈಕೆ ಸಮಯದ ಅರಿವು ಮೂಡಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳನ್ನು ಹಮ್ಮಿಕೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆಯ ಎಲ್ಲ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಬೇಕು ಮತ್ತು ಘನ ತಾಜ್ಯ ಹಾಗೂ ದ್ರವ ತಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದ್ ಕೋಟ್ಯಾಳ ಅವರಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯತಿ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎನ್‍ಟಿಪಿಸಿ ತೆರಿಗೆ ವಸೂಲಾತಿ 2021-22ನೇ ಸಾಲಿನ ಕ್ರಿಯಾ ಯೋಜನೆಯ ಮೊತ್ತದ ಕಾಮಗಾರಿಗಳಾದ ಗ್ರಂಥಾಲಯ ಕಟ್ಟಡ ನಿರ್ಮಾಣ, ಡಿಜಿಟಲ್ ಪರಿಕರಗಳನ್ನು ಖರೀದಿಸುವುದು ಹಾಗೂ ಪುಸ್ತಕ ಖರೀದಿಸುವುದು, ಬಿಕ್ಷುಕರ ಉಪಕರಗಳ ಭರಣಾ ಮಾಡುವುದು, ಹೈಟೆಕ್ ಶೌಚಾಲಯ ನಿರ್ಮಾಣ, ಸಭಾಭವನ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಆಡಳಿತಾತ್ಮಕ ವೆಚ್ಚ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರ ಕಲ್ಯಾಣ, ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮಗಳಲ್ಲಿ ನೈರ್ಮಲ್ಯ, ಬೀದಿ ದೀಪ, ಶಿಕ್ಷಣ, ಕ್ರೀಡಾ ಸೌಲಭ್ಯಗಳು, ಅರಣ್ಯೀಕರಣ, ನಾಗರಿಕ ಸೇವೆಗಳ ವಿತರಣಾ ವ್ಯವಸ್ಥೆ ಸುಧಾರಣೆ ಹಾಗೂ ಇತರೆ ವಿಷಯಗಳ ಕುರಿತು ಪ್ರಗತಿಪರಿಶೀಲನೆ ನಡೆಸಿದ ಅವರು, ನಂತರ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಕೊಲ್ಹಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನಿಲ ಮದ್ದಿನ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದ ಕೋಟ್ಯಾಳ ಅವರಿಗೆ ತುರ್ತಾಗಿ ಸಮಸ್ಯೆಗಳನ್ನು ಪರಿಹರಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನಿಲ ಮದ್ದಿನ, ಜಿಲ್ಲಾ ಪಂಚಾಯತಿಯ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ್ ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವ್ಹಿ. ಬಿ. ಗೊಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಿರ್ಮಲಾ ಸುರಪುರ, ಕೂಡಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದ ಕೋಟ್ಯಾಳ, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹುಸೇನಬಿ ಮಾಶಾಳ, ಗ್ರಾಮ ಪಂಚಾಯತಿಯ ಸರ್ವಸದಸ್ಯರು, ತಾಲೂಕು ಪಂಚಾಯತಿಯ ಹಾಗೂ ಗ್ರಾಮ ಪಂಚಾಯತಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here