ಭ್ರಷ್ಟ ಸಚಿವ ಎಂದರೆ ಅಶ್ವಥ್‌ ನಾರಾಯಣ; DK ಶಿವಕುಮಾರ್‌ ವಾಗ್ದಾಳಿ

ರಾಜ್ಯದ ಅತ್ಯಂತ ಭ್ರಷ್ಟ ಸಚಿವ ಅಶ್ವಥ್ ನಾರಾಯಣ. ಅದರಲ್ಲಿ ಯಾವುದೇ ಸಂಶಯವಿಲ್ಲ. ಅತ್ಯಂತ ನಂಬಿಕಸ್ಥ ರಾಜಕಾರಣಿ ಎಂದು ಬಣ್ಣಿಸಿಕೊಳ್ಳುವುದು ಕೇವಲ ಬ್ರಾಹ್ಮಣ ಎಂದು ಬಣ್ಣಿಸುವುದು ಮುಖ್ಯವೇ?

0
245

ಬೆಂಗಳೂರು: ‘ರಾಜ್ಯದ ಅತ್ಯಂತ ಭ್ರಷ್ಟ ಸಚಿವ ಅಶ್ವಥ್ ನಾರಾಯಣ. ಅದರಲ್ಲಿ ಯಾವುದೇ ಸಂಶಯವಿಲ್ಲ. ಅತ್ಯಂತ ನಂಬಿಕಸ್ಥ ರಾಜಕಾರಣಿ ಎಂದು ಬಣ್ಣಿಸಿಕೊಳ್ಳುವುದು ಕೇವಲ ಬ್ರಾಹ್ಮಣ ಎಂದು ಬಣ್ಣಿಸುವುದು ಮುಖ್ಯವೇ? ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ‘ಹಗರಣಗಳನ್ನು ಸರ್ಕಾರದ ಪ್ರಭಾವದಿಂದಷ್ಟೇ ಮುಚ್ಚಿಹಾಕಲು ಸಾಧ್ಯ. ಪಿಎಸ್ಐ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ನಾಲ್ಕೈದು ಜನ ಆಯ್ಕೆಯಾಗಿದ್ದಾರೆ. ಇವರು ನಮಗೆ ಬೇಕಾದ ಹುಡುಗರೇ ಆಗಿದ್ದು, ಈ ಹಗರಣದಲ್ಲಿ ಭಾಗಿಯಾಗಿ ಬಂಧನವಾಗಿದ್ದಾರೆ. ಅವರಿಗೆ ಈ ಅಕ್ರಮದಲ್ಲಿ ಮಂತ್ರಿಗಳು ಸಹಾಯ ಮಾಡಿದ್ದಾರೋ, ಅವರ ಕುಟುಂಬದವರು ಮಾಡಿದ್ದಾರೋ, ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ ಎಂದರು.

ಆ ಊರಿನ ಅಕ್ಕಪಕ್ಕದ ಗ್ರಾಮಗಳಲ್ಲಿ ಪರಿಶೀಲನೆ ಮಾಡಲಾಗಿ, ಸರ್ಕಾರ ಈ ಅಕ್ರಮ ನೇಮಕಾತಿಗೆ ಅಂಗಡಿ ತೆರೆದ ಕಾರಣಕ್ಕೆ ಇವರುಗಳು ಅಲ್ಲಿಗೆ ಹೋಗಿದ್ದಾರೆ. ಅವರು ಅಂಗಡಿ ತೆರೆಯದಿದ್ದರೆ ಯಾರಾದರೂ ಇದರಲ್ಲಿ ಭಾಗಿಯಾಗುತ್ತಿದ್ದರಾ? ಪ್ರಭಾವಿಗಳು ಇಂತಹ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಮನೆ ಮಠ, ಆಸ್ತಿ ಪಾಸ್ತಿ ಮಾರಿಕೊಂಡು, ಸಾಲ ಮಾಡಿ, ಅಕ್ರಮ ಪ್ರಯತ್ನ ಮಾಡಿ ಸಿಕ್ಕಿಬಿದ್ದಿದ್ದಾರೆ. ಲಂಚ ಕೊಟ್ಟವರಾರೂ ಲಂಚ ಕೊಟ್ಟಿದ್ದೇನೆ ಎಂದು ಹೇಳುವುದಿಲ್ಲ. ಅದನ್ನು ಪಡೆದವನು ಕೂಡ ಲಂಚ ಪಡೆದಿರುವುದಾಗಿ ಹೇಳುವುದಿಲ್ಲ. ಆದರೆ ವಿಚಾರಣೆಗೆ ನೊಟೀಸ್ ಕೊಟ್ಟು, ಮಂತ್ರಿ ಸಂಬಂಧಿ ಪ್ರಭಾವ ಬೀರಿದರು ಎಂದು ವಿಚಾರಣೆ ಮಾಡದೇ ವಾಪಸ್ ಕಳುಹಿಸಲಾಗಿದೆ. ಪೊಲೀಸರು ಯಾರನ್ನು, ಯಾವ ರೀತಿ ವಿಚಾರಣೆ ಮಾಡಿದ್ದಾರೆ? ಮೊದಲನೇ ಸ್ಥಾನ ಪಡೆದವರನ್ನು ವಶದಲ್ಲಿಟ್ಟುಕೊಂಡು, ನಾಲ್ಕನೇ ಸ್ಥಾನ ಪಡೆದವರನ್ನು ಬಿಟ್ಟು ಕಳುಹಿಸಿರುವುದೇಕೆ?’ ಎಂದು ಪ್ರಶ್ನಿಸಿದರು.

ಪ್ರಕರಣದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಅವರ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ರಾಜ್ಯದಲ್ಲಿ ಅತ್ಯಂತ ಹೆಚ್ಚು ಭ್ರಷ್ಟ ಸಚಿವ ಎಂದರೆ ಅದು ಅಶ್ವತ್ಥ್ ನಾರಾಯಣ್. ಅದರಲ್ಲಿ ಅನುಮಾನವಿಲ್ಲ. ಮೇಲ್ನೋಟಕ್ಕೆ ನಾನು ಬ್ರಾಹ್ಮಣರಂತೆ ಶುದ್ಧವಾಗಿದ್ದೇನೆ, ಬಹಳ ಪ್ರಾಮಾಣಿಕ ರಾಜಕಾರಣಿ ಎಂದು ಬಿಂಬಿಸಿಕೊಳ್ಳುವ ಅಗತ್ಯವೇನಿದೆ? ಅವರ ನಡೆ-ನುಡಿಗಳು, ಮಾತನಾಡುವ ರೀತಿ ನೋಡಿದರೆ ಅವರು ಏನೆಂದು ಜನರಿಗೆ ಅರ್ಥವಾಗುತ್ತದೆ’ ಎಂದರು.

ಪಿಎಸ್ಐ ಅಕ್ರಮ ಸಂಬಂಧ ಬೇರೆ ಸಚಿವರು ಮಾಹಿತಿ ನೀಡಿದ್ದಾರಾ ಎಂಬ ಪ್ರಶ್ನೆಗೆ, ‘ಯಾರು ಮಾಹಿತಿ ನೀಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಬಹಳ ಹತ್ತಿರುವಿರುವವರೇ ನಮಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ. ಯಾರಾದರೂ ಜಗಳವಾಡಿದರೆ ನೆರೆ ಮನೆಯವರ ಜತೆ ಜಗಳವಾಡಬಹುದೇ ಹೊರತು, ದೂರದಲ್ಲಿರುವ ಮನೆಯವರ ಜತೆ ಸಾಧ್ಯವಿಲ್ಲ’ ಎಂದರು.

ಅಶ್ವತ್ಥ್ ನಾರಾಯಣ ಅವರ ವಿರುದ್ಧ ಬಿಜೆಪಿಯವರೇ ಷಡ್ಯಂತ್ರ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕುಮಾರಸ್ವಾಮಿ ಅವರು ಈ ಜಿಲ್ಲೆಯ ಶಾಸಕರಾಗಿದ್ದು, ಅವರಿಗೆ ಹೆಚ್ಚಿನ ಮಾಹಿತಿ ಇರಬಹುದು’ ಎಂದರು.

ಈಶ್ವರಪ್ಪನವರ 40 % ಕಮಿಷನ್ ಪ್ರಕರಣದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಇದು ಹೊಸ ಪ್ರಕರಣವಲ್ಲ. ಬೇರೆ ಬೇರೆ ಇಲಾಖೆಗಳಲ್ಲಿ ನಡೆದಿರುವ ಅನೇಕ ಪ್ರಕರಣಗಳ ಮಾಹಿತಿ ನಮ್ಮ ಬಳಿ ಬರುತ್ತಿವೆ. ನಾವು ಒಂದೊಂದಾಗಿ ವಿಚಾರಗಳನ್ನು ತೆಗೆದುಕೊಂಡು ಹೋರಾಟ ಮಾಡುತ್ತೇವೆ. ಸಚಿವರು ಈ ಜಿಲ್ಲೆ ಉಸ್ತುವಾರಿ ವಹಿಸಿಕೊಂಡು 2-3 ವರ್ಷ ಆಗಿದೆ. ಈ ಜಿಲ್ಲೆ ಕ್ಲೀನ್ ಮಾಡುವುದಾಗಿ ಹೇಳಿದ್ದರು, ಮಾಡಲಿ. ಅವರು ಬಿಚ್ಚಿಡುತ್ತೇವೆ ಎಂದು ಹೇಳಿದ್ದು ಅವರು ಬಿಚ್ಚಿಡಲಿ. ಈ ಹಿಂದೆ ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರು ವೃಷಭಾವತಿ ಸ್ವಚ್ಛಗೊಳಿಸಲು ಹೊರಟಿದ್ದರು, ನಾವು ಕೂಡ ಕ್ಲೀನ್ ಮಾಡುವ ಪ್ರಯತ್ನ ಮಾಡಿ ಇಲ್ಲಿಗೆ ಬಂದು ನಿಂತಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ತಾಲೂಕಿನಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ದೂರಿದರು.


LEAVE A REPLY

Please enter your comment!
Please enter your name here