ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ; ಆರೋಗ್ಯ ಸಚಿವ ಡಾ ಕೆ ಸುಧಾಕರ್

ರಾಜ್ಯದಲ್ಲಿ ಲಾಕ್ ಡೌನ್ ಇನ್ನು ಮುಂದೆ ಇರುವುದಿಲ್ಲ, ಇನ್ನೇನಿದ್ದರೂ ನಿರ್ಬಂಧ.

0
137

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಇನ್ನು ಮುಂದೆ ಇರುವುದಿಲ್ಲ, ಇನ್ನೇನಿದ್ದರೂ ನಿರ್ಬಂಧ, ನಿಯಮಗಳ ಕಟ್ಟುನಿಟ್ಟಿನ ಪಾಲನೆಯಷ್ಟೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ವೀಕೆಂಡ್ ಕರ್ಪ್ಯೂ ಎಂದು ಹೇರಿದ್ದ ರಾಜ್ಯ ಸರ್ಕಾರ, ಮುಂದೆ ಲಾಕ್ ಡೌನ್ ಮಾಡುತ್ತದೆಯೇ ಎಂಬ ಸಂಶಯ, ಭಯ-ಆತಂಕ ರಾಜ್ಯದ ಜನರಲ್ಲಿ ಮನೆ ಮಾಡಿತ್ತು. ಜನರ ಆತಂಕಕ್ಕೆ ಆರೋಗ್ಯ ಸಚಿವರೇ ಇಂದು ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವರು ಕೊರೋನಾ ಮೂರನೇ ಅಲೆಯ ಈ ಸಂದರ್ಭದಲ್ಲಿ ಜನರು ಸ್ವಆಸಕ್ತಿಯಿಂದ ಮುಂದೆ ಬಂದು ಕೋವಿಡ್ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬೇಕು ಎಂದರು.

ಸದ್ಯ 25 ಸಾವಿರ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲನೇ ಡೋಸ್ ನೀಡಿದ್ದು ಕೋವಿಡ್ ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ಇಡೀ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಉಡುಪಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅತಿಹೆಚ್ಚು ಕೋವಿಡ್ ಪಾಸಿಟಿವ್ ದರ ವರದಿಯಾಗುತ್ತಿದೆ. ಈ ಜಿಲ್ಲೆಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದರು.

ನಿನ್ನೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಸುಮಾರು ಒಂದು ಗಂಟೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಅದರಲ್ಲಿ ಎರಡು ಪ್ರಮುಖ ಅಂಶ ತಿಳಿಸಿದ್ದಾರೆ. ಒಂದು ರಾಜ್ಯ, ದೇಶದಲ್ಲಿ ಸಂಪೂರ್ಣ ಲಸಿಕೆ ನೀಡುವ ಮೂಲಕ ಸಾಂಕ್ರಾಮಿಕ ತಡೆಯಲು ಸಾಧ್ಯವಿಲ್ಲ. ಇಡೀ ಪ್ರಪಂಚದಲ್ಲಿ, ಎಲ್ಲಾ ದೇಶಗಳಲ್ಲಿ ಸಂಪೂರ್ಣ ಲಸಿಕೀರಣ ಆದರೆ ಮಾತ್ರ ಕೋವಿಡ್ ಸೋಂಕನ್ನು ಸಂಪೂರ್ಣ ತಡೆಯಲು ಮತ್ತು ನಿವಾರಿಸಲು ಸಾಧ್ಯ ಎಂದು ಹೇಳಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕರು ಆರು ತಿಂಗಳ ಹಿಂದೆಯೇ ಮನಗಂಡು ಅನೇಕ ಬಡ ದೇಶಗಳಿಗೆ ಭಾರತದಿಂದ ಉಚಿತವಾಗಿ ಲಸಿಕೆ ಸರಬರಾಜು ಮಾಡಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದೆ ಕೂಡ ಎಂದರು.

ಓಮಿಕ್ರಾನ್‌ ಸೋಂಕಿನ ತೀವ್ರತೆ ಗಂಭೀರ ಸ್ವರೂಪದಲ್ಲಿಲ್ಲ ಎಂಬುದು ನಿಜ. ಆದರೆ ಕೋವಿಡ್ ಎರಡೂ ಲಸಿಕೆ ಪಡೆಯದವರಲ್ಲಿ ಸೋಂಕು ತಗುಲಿದರೆ ತೀವ್ರತೆ ಹೆಚ್ಚಾಗುತ್ತದೆ. ಸಾವು ಕೂಡ ಸಂಭವಿಸಲು ಸಾಧ್ಯವಿದೆ. ಇನ್ನುಳಿದ ಶೇಕಡಾ 20ರಷ್ಟು ಮಂದಿ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದು ಸುರಕ್ಷಿತವಾಗಿರಿ, ಆಸ್ಪತ್ರೆಗೆ ಹೋಗುವುದು, ಐಸಿಯುಗೆ ದಾಖಲಾಗುವುದು, ಸಾವು ಸಂಭವಿಸುವುದು ತಪ್ಪುತ್ತದೆ ಎಂದರು.

ಆರೋಗ್ಯ ಸಚಿವರು ಇಂದು ಹೇಳಿರುವ ಮತ್ತೊಂದು ಪ್ರಮುಖ ವಿಚಾರ ರಾಜ್ಯದಲ್ಲಿ ಲಾಕ್ ಡೌನ್ ಇನ್ನು ಮುಂದೆ ಇಲ್ಲ, ಆದರೆ ಕೊರೋನಾ ಟಫ್ ರೂಲ್ಸ್ ಹೆಚ್ಚಾಗುತ್ತದೆ. ಕಠಿಣ ನಿಯಮಗಳಿಂದಲೇ ಕೊರೋನಾ ನಿಯಂತ್ರಿಸುತ್ತೇವೆ, ಜನರ ಸಹಕಾರ ಬೇಕು ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಓಮಿಕ್ರಾನ್ ಸೇರಿದಂತೆ ಕೊರೋನಾ ಇನ್ನಷ್ಟು ಹೆಚ್ಚಾಗುತ್ತದೆ. ಸರ್ಕಾರದ ಅಂದಾಜು ಮೀರಿ ಕೇಸುಗಳು ವರದಿಯಾಗುತ್ತಿದೆ. ಕೇಸ್ ಎಷ್ಟೇ ಆದರೂ ಲಾಕ್ ಡೌನ್ ಮಾಡುವುದಿಲ್ಲ. ಲಾಕ್ ಡೌನ್ ಅನ್ನುವಂತಹದ್ದು ಕಳೆದುಹೋಗಿರುವ ನೀತಿ, ಯಾವಾಗ ನಮಗೆ ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿರುವಾಗ ತೆಗೆದುಕೊಂಡಿದ್ದ ನೀತಿ ಅದು, ಈಗ ಎರಡು ವರ್ಷದ ಅನುಭವವಿದೆ. ಒಬ್ಬರಿಗೆ ಪಾಸಿಟಿವ್ ಬಂದರೆ ಯಾವ ರೀತಿ ಚಿಕಿತ್ಸೆ ನೀಡಬಹುದು, ವ್ಯವಹರಿಸಬೇಕೆಂಬುದು ಸರ್ಕಾರದ ಗೊತ್ತಿದೆ, ಸ್ಪಷ್ಟ ಮಾಹಿತಿಯಿದೆ. ಅಲೆ ಬರುತ್ತಿದೆ, ಹೆದರಿಕೊಂಡು ಹೋಗುವುದಿಲ್ಲ, ಸಮರ್ಥವಾಗಿ ಎದುರಿಸುತ್ತೇವೆ ಎಂದರು.


LEAVE A REPLY

Please enter your comment!
Please enter your name here